ಮಾನವ ಕುಲಕ್ಕೆ ಆದರ್ಶ ಶ್ರೀರಾಮ

ಬ್ಯಾಡಗಿ: ಮಾನವ ಕುಲಕ್ಕೆ ಶ್ರೀರಾಮನ ಆದರ್ಶಗಳು ಮಾದರಿಯಾಗಿವೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಛತ್ರದ ಹೇಳಿದರು.

ಪಟ್ಟಣದ ಚಾವಡಿ ಓಣಿಯ ದೊಡ್ಡ ಹನುಮಂತ ದೇವಮಂದಿರ ಬಳಿ ಶ್ರೀರಾಮ ಭಾವಚಿತ್ರ ಮೆರವಣಿಗೆಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಹಿಂದು ಧರ್ಮದಲ್ಲಿ ರಾಮಾಯಣ ಹಾಗೂ ಮಹಾಭಾರತಗಳು ಶ್ರೇಷ್ಠ ಧರ್ಮ ಗ್ರಂಥಗಳಾಗಿದ್ದು, ಪ್ರತಿಯೊಬ್ಬರು ಅಧ್ಯಯನ ಮಾಡುವ ಮೂಲಕ ಬದುಕಿನ ನೈಜಮೌಲ್ಯಗಳನ್ನು ಕಲಿಯಬೇಕಿದೆ. ಧರ್ಮ ಸಂಪ್ರದಾಯದಲ್ಲಿ ರಾಮನನ್ನು ವಿಷ್ಣುವಿನ ಅವತಾರವಾಗಿ ಪೂಜಿಸಲಾಗುತ್ತಿದೆ. ಚೈತ್ರ ಮಾಸದ ಶುಕ್ಲಪಕ್ಷದ ನವಮಿ ದಿನವಾದ ಇಂದು ಶ್ರೀರಾಮನವಮಿ ಎಂದು ಆಚರಿಸುತ್ತೇವೆ. ಶ್ರೀರಾಮನ ಆದರ್ಶ ಜೀವನ ಯಾವುದೊಂದು ಧರ್ಮ, ಜಾತಿಗೆ ಮೀಸಲಾಗಿದ್ದಲ್ಲ, ಸರ್ವರೂ ರಾಮನನ್ನು ಸ್ಮರಿಸಬೇಕಿದೆ ಎಂದರು.

ಇದಕ್ಕೂ ಮುನ್ನ ಶ್ರೀ ಆಂಜನೇಯ ದೇವರಿಗೆ ವಿಶೇಷ ಪೂಜೆ, ಅಲಂಕಾರ, ಹೋಮ-ಹವನ ನಡೆದವು. ಶ್ರೀರಾಮ ಕಲ್ಯಾಣೋತ್ಸವದಲ್ಲಿ ಭಕ್ತರು ಪಾಲ್ಗೊಂಡಿದ್ದರು. ಎಲ್ಲೆಡೆ ಜೈರಾಮ ಶ್ರೀರಾಮ ಜಯ ಜಯ ರಾಮ ಎಂಬ ಘೊಷಣೆಗಳು ಕೇಳಿಬಂದವು.

ಶ್ರೀರಾಮನವಮಿ ಅಂಗವಾಗಿ ಮಕ್ಕಳು, ಯುವಕರು ಶ್ರೀರಾಮನ ವಿವಿಧ ವೇಷಭೂಷಣ, ಸೀತಾಮಾತೆ, ಲಕ್ಷ್ಮಣ, ಆಂಜನೇಯನ ರೂಪದಲ್ಲಿ ಕಾಣಿಸಿಕೊಂಡರು. ಮೆರವಣಿಗೆ ನೋಡಲು ಜನ ಮುಗಿಬಿದ್ದರು. ಮುಖ್ಯರಸ್ತೆ ಸೇರಿ ಹಳೆಮೆಣಸಿನಕಾಯಿ ಪೇಟೆ, ಬಸ್ ನಿಲ್ದಾಣ ಹಾಗೂ ಇತರೆಡೆ ಶ್ರೀರಾಮನ 20 ಅಡಿ ಎತ್ತರದ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಪುರಸಭೆ ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ಶ್ರೀರಾಮ ಸೇನೆ ಮುಖಂಡ ಸಂಜೀವ ಮಡಿವಾಳರ, ವಿಷ್ಣುಕಾಂತ ಬೆನ್ನೂರ ಮುಖಂಡರಾದ ಬಸವರಾಜ ಹಂಜಿ, ಶಿವಯೋಗಿ ಶಿರೂರ, ಅರುಣ ಪಾಟೀಲ, ಪ್ರಶಾಂತ ಯಾದವಾಡ, ಕರಬಸಯ್ಯ ಹಿರೇಮಠ, ಗಂಗಣ್ಣ ಎಲಿ, ವೀರೇಂದ್ರ ಶೆಟ್ಟರ ಇತರರಿದ್ದರು.