ಮಾನವೀಯ ಮೌಲ್ಯ ಕುಸಿಯದಿರಲಿ

ಗುಬ್ಬಿ: ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ಕೇವಲ ಜಾತ್ರೆಯಂತೆ ನಡೆಯದೆ, ಅವರ ಅವರ ವಿಚಾರ ತಿಳಿಯುವ ವೇದಿಕೆಯಾಗಬೇಕು ಎಂದು ತರಳಬಾಳು ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಿಟ್ಟೂರು ಹೋಬಳಿ ಬೆಟ್ಟದಹಳ್ಳಿ ಮಠದಲ್ಲಿ ಮಂಗಳವಾರ ಶ್ರೀ ಸಿದ್ಧರಾಮ ಶಿವಯೋಗಿಗಳ 846ನೇ ಜಯಂತಿ ಸಮಾರೋಪದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ಜತೆಗೆ ಸ್ವಾಮೀಜಿಗಳೂ ದಿಕ್ಕು ತಪ್ಪುತ್ತಿದ್ದಾರೆ. ಸ್ವಾಮೀಜಿಯೊಬ್ಬರು ಪ್ರಸಾದದಲ್ಲಿ ವಿಷ ಬೆರೆಸುವ ಕೀಳುಮಟ್ಟಕ್ಕೆ ಹೋಗಿದ್ದಾರೆಂದರೆ ಸಮಾಜ ಎತ್ತಕಡೆ ಸಾಗಿದೆ ಎಂಬ ಬಗ್ಗೆ ಚಿಂತಿಸಬೇಕು ಎಂದು ಬೇಸರಿಸಿದರು.

ಶರಣರು ತಿಳಿಸಿದ ಜ್ಞಾನದ ಅರಿವಿನ ಕೊರತೆಯಿಂದ ಕೆಟ್ಟ ಸಂಗತಿಗಳು ಹೆಚ್ಚಾಗುತ್ತಿವೆ. ಸಿದ್ಧರಾಮೇಶ್ವರರ ಜಯಂತಿಯಲ್ಲಿ 35ಕ್ಕೂ ಹೆಚ್ಚು ಪುಸ್ತಕಗಳು ಬಿಡುಗಡೆಯಾಗಿದ್ದು, ಪ್ರತಿಯೊಬ್ಬರೂ ಮರೆಯದೆ ಓದಬೇಕು ಎಂದು ಕರೆ ನೀಡಿದರು.

ಮಾನವೀಯ ಮೌಲ್ಯಗಳು ಕುಸಿಯದಂತೆ ಯುವಕರು ಜಾಗೃತರಾಗಬೇಕಿದೆ. ಸಂಸ್ಕೃತಿ ಉಳಿಸಿ ಬೆಳೆಸುವುದರ ಜತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಚಿಂತಿಸಬೇಕು ಎಂದರು.

ಶ್ರೀ ಸಿದ್ಧರಾಮೇಶ್ವರರ ಚಿಂತನೆಯಂತೆ ಕೆರೆಗಳ ಅಭಿವೃದ್ಧಿ ಜತೆಗೆ ಕೆರೆಗಳಿಗೆ ನೀರು ತುಂಬಿಸುವುದರ ಜತೆಗೆ ರೈತರಿಗೆ ಅಗತ್ಯವಿರುವ ನೀರು, ವಿದ್ಯುತ್, ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ನಿಗದಿಗೊಳಿಸುವ ಮೂಲಕ ರೈತರ ಹಿತ ಕಾಪಾಡಬೇಕು ಎಂದರು.

ಸಚಿವ ಎಸ್.ಆರ್.ಶ್ರೀನಿವಾಸ್ ಮಾತನಾಡಿ, 12ನೇ ಶತಮಾನದಲ್ಲಿ ಶ್ರೀ ಸಿದ್ಧರಾಮೇಶ್ವರರು ಅನುಭವ ಮಂಟಪ ಮೂಲಕ ಹಲವು ಸಮಾಜ ಸೇವೆ ಮಾಡಿದ್ದಾರೆ. ಅವರು ತೋರಿಸಿದ ಮಾರ್ಗದಲ್ಲಿ ನಾವು ನಡೆದರೆ ಸಾಕು ಎಂದು ತಿಳಿಸಿದರು.

ತ್ಯಾಗಟೂರು ಗ್ರಾಮದವರಾದ ತಮಿಳುನಾಡಿನ ದಿಂಡಿಗಲ್ ಜಿಲ್ಲಾಧಿಕಾರಿ ಟಿ.ಜಿ.ವಿನಯ್ ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ತಮ್ಮಡಿಹಳ್ಳಿ ಶ್ರೀ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ನೊಳಂಬ ವೀರಶೈವ ಸಂಘದ ಅಧ್ಯಕ್ಷ ಎಸ್.ಎಂ.ನಾಗರಾಜು ಇತರರು ಉಪಸ್ಥಿತರಿದ್ದರು.

ಐತಿಹಾಸಿಕ ಕಾರ್ಯಕ್ರಮ: ಶ್ರೀಗುರುಸಿದ್ಧರಾಮ ಶಿವಯೋಗಿಗಳ 846ನೇ ಜಯಂತಿಯಲ್ಲಿ ಲಕ್ಷಾಂತರ ಜನರು ಸಾಕ್ಷಿಯಾಗುವ ಮೂಲಕ ಕಾರ್ಯಕ್ರಮವನ್ನು ಐತಿಹಾಸಿಕವಾಗಿಸಿದರು. ಎರಡೂ ದಿನ ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜನರು ಭಾಗವಹಿಸಿ ಸಿದ್ಧರಾಮೇಶ್ವರರನ್ನು ಸ್ಮರಿಸಿದರು.