ಮಾನವೀಯತೆಯಿಂದ ಪರಿಹಾರ ಕಾರ್ಯ ಮಾಡಿ

ಮುಧೋಳ: ಕಾನೂನು ಜತೆ ಮಾನವೀಯತೆ ತಳಹದಿ ಮೇಲೆ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಈಗಾಗಲೇ ತಾಲೂಕಿಗೆ 8 ಕೋಟಿ ರೂ. ನೀಡಲಾಗಿದೆ. ಮುಂದಿನ ಕಾರ್ಯ ತ್ವರಿತವಾಗಿ ನಡೆಯಲಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

ನಗರದ ತಾಪಂ ಕಚೇರಿ ಸಭಾ ಭವನದಲ್ಲಿ ಗುರುವಾರ ಜರುಗಿದ ಪ್ರವಾಹ ನಿರ್ವಹಣೆ ಕುರಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿಯಲ್ಲಿ ಅವಿರತವಾಗಿ ಶ್ರಮಿಸಿದ ಎಲ್ಲ ಅಧಿಕಾರಿಗಳಿಗೂ ಕೃತಜ್ಞತೆ ಸಲ್ಲಿಸಿದರು. ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಗೋವಿಂದ ರಾಠೋಡ ಅವರನ್ನು ತರಾಟೆಗೆ ತೆಗೆದುಕೊಂಡ ಕಾರಜೋಳ, ನೀನೊಬ್ಬನೆ ಯಾವುದೇ ಕಾರ್ಯಮಾಡದೆ ಮೊಬೈಲ್ ಸ್ವಿಚ್ಡ್‌ಆಫ್ ಮಾಡಿಕೊಂಡು ಕುಳಿತ ಅಧಿಕಾರಿ. ನನಗೂ ತಪ್ಪು ಮಾಹಿತಿ ನೀಡಿದ್ದೀಯಾ, ಮೈಗಳ್ಳ ಎಂದು ಜರಿದರು. ತಾಲೂಕಿನಲ್ಲಿ 57 ಜಾನುವಾರುಗಳ ಜೀವ ಹಾನಿಯಾದರೂ ಪರಿಹಾರ ಏಕೆ ನೀಡಿಲ್ಲ ಎಂದು ಪ್ರಶ್ನಿಸಿ, 3 ದಿನಗಳಲ್ಲಿ ಪರಿಹಾರ ನೀಡುವಂತೆ ಸೂಚಿಸಿದರು.

ತಹಸೀಲ್ದಾರ್ ಸಂಜಯ ಇಂಗಳೆ ಮಾತನಾಡಿ, ಶೇ.80ರಷ್ಟು ಜನರಿಗೆ ತುರ್ತು ಪರಿಹಾರ ಹಣ ತಲಾ 10 ಸಾವಿರದಂತೆ 8 ಕೋಟಿ ರೂ. ಲಾನುಭವಿಗಳ ಖಾತೆಗಳಿಗೆ ಆರ್‌ಟಿಜಿಎಸ್ ಮೂಲಕ ಜಮಾ ಮಾಡಲಾಗಿದೆ. ಪ್ರತಿ ಕುಟುಂಬಕ್ಕೆ 10 ಕೆ.ಜಿ. ಅಕ್ಕಿ, 1 ಕೆ.ಜಿ. ತೊಗರಿಬೇಳೆ, 1 ಕೆ.ಜಿ. ಸಕ್ಕರೆ, 1 ಕೆ.ಜಿ. ಉಪ್ಪು, 1 ಲೀಟರ್ ತಾಳೆ ಎಣ್ಣೆ, 5 ಲೀಟರ್ ಸೀಮೆ ಎಣ್ಣೆ ಪೂರೈಸಲು 5500 ಕಿಟ್ ತಯಾರಿಸಿದ್ದು, ಎಲ್ಲ ಸಂತ್ರಸ್ತರಿಗೆ ಎರಡು ದಿನದಲ್ಲಿ ವಿತರಿಸಲಾಗುವುದು. 1089.3 ಮ್ಯಾಟ್ರಿಕ್ ಟನ್ ಹಸಿ ಮೇವು ನೀಡಲಾಗಿದೆ ಎಂದು ಹೇಳಿದರು.

ಸಚಿವ ಕಾರಜೋಳ ಮಾತನಾಡಿ, ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಜಾನುವಾರುಗಳ ಪಂಚನಾಮೆ ಆಗದೆ ಪರಿಹಾರ ನೀಡಲು ಬರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಸ್ಥಾನಿಕ ಪರಿಶೀಲನೆ ಮಾಡುವ ಮೂಲಕ ಅವರಿಗೂ ಪರಿಹಾರ ನೀಡಬೇಕು. ಮುಳುಗಡೆ ಪ್ರದೇಶದಿಂದ 30 ಅಡಿಗಳಷ್ಟು ದೂರದ ಪ್ರದೇಶವನ್ನೂ ಬಾಧಿತ ಪ್ರದೇಶವೆಂದು ಪರಿಗಣಿಸಿ ಮನೆ ಹಾನಿ ಹೊಂದಿದವರಿಗೂ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಭಯ ಬೇಡ: ವರ್ಗಾವಣೆ ಬಗ್ಗೆ ಯಾರೂ ಆತಂಕ ಪಡಬೇಡಿ. ಸರಿಯಾಗಿ ಕೆಲಸ ಮಾಡುವುವರನ್ನು ಬದಲಾಯಿಸುವುದಿಲ್ಲ. ಮೈಗಳ್ಳರನ್ನು ಇಟ್ಟುಕೊಳ್ಳುವುದಿಲ್ಲ. ಸಾರ್ವಜನಿಕರಿಂದ ದೂರು ಬರದಂತೆ ಕಾರ್ಯ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ಹೇಳಿದರು.

ವಿಧಾನ ಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪುರ ಮಾತನಾಡಿ, ಸಂತ್ರಸ್ತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ದೊರೆಯಬೇಕು. ಈ ನಿಟ್ಟಿನಲ್ಲಿ ತಾಲೂಕಾಡಳಿತ ಮುಂದಾಗಬೇಕು ಎಂದು ಹೇಳಿದರು.

ಉಪವಿಭಾಗಾಧಿಕಾರಿ ಇಕ್ರಮ್, ಜಿಪಂ ಸದಸ್ಯ ಭೀಮನಗೌಡ ಪಾಟೀಲ, ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಹಸೀಲ್ದಾರ್ ಸಂಜಯ ಇಂಗಳೆ, ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ ಇತರರಿದ್ದರು.

ಹಾರ ಸನ್ಮಾನ ಬೇಡ
ಸಚಿವರಾಗಿ ಪ್ರಥಮ ಬಾರಿ ನಗರಕ್ಕೆ ಆಗಮಿಸಿದ ಗೋವಿಂದ ಕಾರಜೋಳ ಅವರನ್ನು ಸನ್ಮಾನಿಸಲು ಕಾರ್ಯಕರ್ತರು ಮುಂದಾದಾಗ ಪ್ರವಾಹದಿಂದ ನೋವಾಗಿದೆ. ಇಂಥ ಸಂದರ್ಭದಲ್ಲಿ ಸನ್ಮಾನ ಬೇಡ. ಇದೇ ಹಣದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ನೀಡಿ ಎಂದು ಮನವಿ ಮಾಡಿದರು.

ಮುಧೋಳ, ಕಾನೂನು, ನೆರೆ ಸಂತ್ರಸ್ತರಿ, ಸಚಿವ, ಗೋವಿಂದ ಕಾರಜೋಳ, ಪ್ರವಾಹ, ಸಭೆ, ಪಶು ಸಂಗೋಪನಾ ಇಲಾಖೆ ಸಹಾಯಕ, Minister of Law, Neighborhoods, Minister, Govinda Karajola, Flood, Congregation, Animal Husbandry Department Assistant,

Leave a Reply

Your email address will not be published. Required fields are marked *