ಕಡೂರು: ಸಮಾಜದಲ್ಲಿ ವಿಜ್ಞಾನ ಮತ್ತು ಸಂಸ್ಕೃತಿ ಎರಡೂ ಸಮಾನವಾಗಿ ಉಳಿಯಬೇಕಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ. ಎ.ಎಸ್.ಕಿರಣ್ಕುಮಾರ್ ಹೇಳಿದರು.
ಶಿವಮೊಗ್ಗದಲ್ಲಿ ನಡೆಯುವ ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸಲು ಮಂಗಳವಾರ ಬೆಂಗಳೂರಿನಿಂದ ತೆರಳುತ್ತಿದ್ದ ಅವರು ಮಾರ್ಗಮಧ್ಯೆ ಕಡೂರಿನ ಮೆಸ್ಕಾಂ ಕಚೇರಿ ಆವರಣದಲ್ಲಿ ವಿವಿಧ ಸಂಘ-ಸಂಸ್ಥೆಗಳ ಅಭಿನಂದನೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಧರ್ಮ ಮತ್ತು ಸಂಸ್ಕೃತಿ ಮುಂದಿನ ಪೀಳಿಗೆಗೆ ಉಳಿಯಬೇಕಿದೆ. ಮಾನವತಾವಾದದಲ್ಲಿ ವಿಜ್ಞಾನಕ್ಕೆ ಪ್ರಾಮುಖ್ಯತೆ ದೊರೆಯಬೇಕು. ಹುಲಿಕಲ್ ನಟರಾಜ್ ನೇತೃತ್ವದಲ್ಲಿ ನಡೆಯುವ ವಿಜ್ಞಾನ ಗ್ರಾಮವು ಕನ್ನಡದ ಜನತೆಗೆ ಅನುಭವ ಮಂಟಪದ ರೀತಿಯ ಕಲ್ಪನೆ ಮೂಡಿಸುತ್ತದೆ ಎಂದು ಶ್ಲಾಘಿಸಿದರು.
ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, ಆಸ್ತಿಕ, ನಾಸ್ತಿಕಕ್ಕಿಂತ ಮಾನವತಾವಾದ ಉಳಿಯಬೇಕಿದೆ. ವಿಜ್ಞಾನ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಮೂಲಕ ರಾಜ್ಯದಲ್ಲಿ ಪ್ರಥಮ ಬಾರಿಗೆ ವೈಜ್ಞಾನಿಕ ನೆಲೆಗಟ್ಟಿನ ವಿಭಿನ್ನತೆಯ ವಿಜ್ಞಾನ ಸಮ್ಮೇಳನ ಆಯೋಜಿಸಲಾಗಿದೆ ಎಂದರು.
ರಾಜ್ಯ ಉಪಾಧ್ಯಕ್ಷ ಅರುಣ್ಕುಮಾರ್, ತುಮಕೂರು ಜಿಲ್ಲಾಧ್ಯಕ್ಷ ಮೋಹನ್ಕುಮಾರ್, ಸುಹಾಸಿನಿ, ಕಡೂರು ಮೆಸ್ಕಾಂ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್, ಸಿಬ್ಬಂದಿ ಮಲ್ಲಿಕಾರ್ಜುನ್, ಗೋವಿಂದರಾಜು, ಜಗದೀಶ್, ಯೋಗೀಶ್, ಮಂಜುನಾಥ್, ಜೆಸಿಐ ಅಧ್ಯಕ್ಷ ಎಂ.ಸೋಮಶೇಖರ್, ಲಯನ್ಸ್ ಅಧ್ಯಕ್ಷ ಬಿ.ಎಂ.ಗಿರೀಶ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಟಿ.ಎನ್.ಎ.ಮೊದಲಿಯಾರ್, ಆರ್ಯವೈಶ್ಯ ಸಮಾಜದ ಅಧ್ಯಕ್ಷ ಉಪೇಂದ್ರನಾಥ್, ಸೋಮೇಶ್, ಮಮತಾ, ಸತೀಶ್ ಮತ್ತಿತರರಿದ್ದರು.