ಬೆಂಗಳೂರು: ಹಸಿರು ಮಾರ್ಗದ ಮಾದಾವರ ಮೆಟ್ರೋ ನಿಲ್ದಾಣಕ್ಕೆ ಹಿಡಿದಿದ್ದ ಗ್ರಹಣ ಕೊನೆಗೂ ಬಿಟ್ಟಿದ್ದು, ಗುರುವಾರದಿಂದ ಸಾರ್ವಜನಿಕರ ಸೇವೆಗೆ ಮುಕ್ತವಾಗಿದೆ.
ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನೆಯ ಭಾಗ್ಯವಿಲ್ಲದೇ ಮತ್ತು ಪ್ರಯಾಣಿಕರ ಬಳಕೆಗೆ ಸಿಗದೇ ಇದ್ದ ಮಾದಾವರ ಮೆಟ್ರೋ ನಿಲ್ದಾಣದಿಂದ ‘ನಮ್ಮ ಮೆಟ್ರೋ’ ರೈಲು ಗುರುವಾರ ಬೆಳಗ್ಗೆ ೫ ಗಂಟೆಯಿಂದ ಕಾರ್ಯಾಚರಣೆ ಆರಂಭಿಸಿತ್ತು. ಮೊದಲ ದಿನ ಈ ಭಾಗದ ಪ್ರಯಾಣಿಕರು ಬಹಳ ಸಂತಸದಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಪ್ರಯಾಣದ ವೇಳೆ ಪ್ರಯಾಣಿಕರು ೆಟೋ ಮತ್ತು ಸೆಲ್ಫಿಯನ್ನು ತೆಗೆದುಕೊಂಡು ಸಾಮಾಜಿಕ ಜಾಲದಲ್ಲಿ ಹಂಚಿಕೊಂಡರು. ಮಾದಾವರದಿಂದ ಹಿಡಿದು ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೂ ಒಟ್ಟು ೩೩.೪೬ ಕಿ.ಮೀ ಅಂತರವಿದ್ದು, ಇದಕ್ಕೆ ೬೦ ರೂ. ದರ ನಿಗದಿ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
೧ ಕಿ.ಮೀ ಉದ್ದದ ಸರತಿ ಸಾಲು ಇತ್ತು:
ದೀಪಾವಳಿ ಹಬ್ಬಕ್ಕೆ ಊರುಗಳಿಗೆ ಹೋಗಿದ್ದ ಜನರು ಸೋಮವಾರ ನಗರಕ್ಕೆ ಹಿಂತಿರುಗಿದ್ದಾಗ ಟ್ರಾಫಿಕ್ ಜಾಮ್‌ನಿಂದ ಪಾರಾಗಲು ನಮ್ಮ ಮೆಟ್ರೋ ಮೊರೆ ಹೋಗಿದ್ದರು. ಇದರಿಂದ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಸುಮಾರು ೧ ಕಿ.ಮೀ ಉದ್ದದ ಸರತಿ ಸಾಲುಗಳಲ್ಲಿ ಪ್ರಯಾಣಿಕರು ನಿಂತಿರುವುದು ಕಂಡುಬಂದಿತ್ತು. ಮತ್ತೊಂದೆಡೆ ಮೆಟ್ರೋ ಮಾರ್ಗ ವಿಸ್ತರಣೆ ಮಾಡದ ರಾಜಕಾರಣಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತ ಜನಪ್ರತಿನಿಧಿಗಳು ಬುಧವಾರ ಮಾದಾವರದಿಂದ ನಮ್ಮ ಮೆಟ್ರೋ ರೈಲು ಚಾಲನೆಗೆ ಹಸಿರು ನಿಶಾನೆ ತೋರಿದ್ದರು.