ಮಾದಕ ದ್ರವ್ಯ ವಿರೋಧಿ ಅಭಿಯಾನ

ಬೀದರ್: ಜಿಲ್ಲಾ ಪೊಲೀಸ್ ಮತ್ತು ಭಾರತೀಯ ಅಂಚೆ ಇಲಾಖೆಯಿಂದ ಶುಕ್ರವಾರ ನಗರದಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನ ಹಾಗೂ ವಿಶೇಷ ಅಂಚೆ ಲಕೋಟೆ ಬಿಡುಗಡೆ ನಡೆಯಿತು.

ನಗರದ ಡಾ. ಅಂಬೇಡ್ಕರ್ ವೃತ್ತದ ಹತ್ತಿರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅಭಿಯಾನಕ್ಕೆ ಚಾಲನೆ ನೀಡಿದರು. ಇಲ್ಲಿಂದ ಆರಂಭಗೊಂಡ ಜನಜಾಗೃತಿ ಜಾಥಾ ಮುಖ್ಯ ರಸ್ತೆಗಳ ಮೂಲಕ ನಗರದ ಗುರುದ್ವಾರ ಹತ್ತಿರದ ಝಿರಾ ಪಂಕ್ಷನ್ ಹಾಲ್ಗೆ ಬಂದು ಮುಕ್ತಾಯಗೊಂಡಿತು.

ವಾಹನಗಳಲ್ಲಿ ಅಧಿಕ ಭಾರ, ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯಬಾರದು. ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿ. ಅತಿ ವೇಗದ ಪ್ರಯಾಣ ಅಪಘಾತಕ್ಕೆ ಆಹ್ವಾನ. ವಾಹನ ಚಲಾಯಿಸುವಾಗ ಮೊಬೈಲ್ ಬಳಸಬೇಡಿ ಎಂಬಿತ್ಯಾದಿ ವಿವಿಧ ಸಂದೇಶಗಳ ನಾಮ ಫಲಕಗಳನ್ನು ಹಿಡಿದು ಪೊಲೀಸ್ ಸಿಬ್ಬಂದಿ ಹಾಗೂ ಅಂಚೆ ನೌಕರರು ಹೆಜ್ಜೆ ಹಾಕಿ ಜನರ ಗಮನ ಸೆಳೆದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಡಿವೈಎಸ್ಪಿ ಎಸ್.ವೈ. ಹುಣಸಿಕಟ್ಟಿ, ಪೊಲೀಸ್ ನಿರೀಕ್ಷಕ ಸತೀಶ ಕಾಂಬ್ಳೆ, ಉತ್ತರ ಕರ್ನಾಟಕ ವಲಯ ಧಾರವಾಡ ಪೋಸ್ಟ್ ಮಾಸ್ಟರ್ ಜನರಲ್ ವೀಣಾ ಶ್ರೀನಿವಾಸ, ಬೀದರ್ ಅಂಚೆ ಕಚೇರಿ ಅಧೀಕ್ಷಕ ವಿ.ಎಸ್.ಎಲ್.ನರಸಿಂಹರಾವ್, ಪಾಸ್​ಪಾರ್ಟ್​​ ಸೇವಾ ಕೇಂದ್ರದ ಅಧಿಕಾರಿ ಮಂಗಲಾ ಭಾಗವತ್, ಅಂಚೆ ನಿರೀಕ್ಷಕರು, ಪೊಲೀಸ್ ಹಾಗೂ ಅಂಚೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.