ಮಾಡದ ಕಾಮಗಾರಿ ಪುಸ್ತಕದಲ್ಲಿ ದಾಖಲು?

ಕಾರವಾರ: ಕೇಂದ್ರ ಸಚಿವ, ಸಂಸದ ಅನಂತಕುಮಾರ ಹೆಗಡೆ ಅವರು ತಮ್ಮ ಸಾಧನೆಗಳ ಪುಸ್ತಕ ಪ್ರಕಟಿಸಿದ್ದಾರೆ. ಆದರೆ, ಅದರಲ್ಲಿ ಮಾಡದೇ ಇರುವ ಕಾಮಗಾರಿಗಳನ್ನೂ ಸೇರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅನುದಾನದಿಂದ ಆದ ಅಭಿವೃದ್ಧಿ ಕಾಮಗಾರಿಗಳ ವಿವರ ಇರುವ ‘ಪ್ರಗತಿ ಪಥ’ ಎಂಬ ಕಿರು ಹೊತ್ತಗೆಯನ್ನು ಇತ್ತೀಚೆಗೆ ಅವರು ಶಿರಸಿಯಲ್ಲಿ ಬಿಡುಗಡೆ ಮಾಡಿದ್ದರು. ಅದು ಈಗ ವಿವಾದಕ್ಕೆ ಕಾರಣವಾಗಿದೆ.

ಪುಸ್ತಕದ 10ನೇ ಪುಟದಲ್ಲಿ, ಮೀನುಗಾರಿಕೆ ಹಾಗೂ ಬಂದರುಗಳಿಗೆ ಪ್ರೋತ್ಸಾಹ ಎಂದು ವಿವರ ನೀಡಲಾಗಿದೆ. ಅದರಲ್ಲಿ ಅಮದಳ್ಳಿ ಮೀನುಗಾರಿಕೆ ಬಂದರುಗೆ 10 ಕೋಟಿ ರೂ., ಬೆಳಂಬಾರದಲ್ಲಿ ಬ್ರೇಕ್ ವಾಟರ್ (ಅಲೆ ತಡೆ ಗೋಡೆ )ಕಾಮಗಾರಿಗೆ 4.60 ಕೋಟಿ ರೂ., ಬೇಲೆಕೇರಿ ಬಂದರಿಗೆ 3 ಕೋಟಿ ರೂ., ಅಳವೆಕೋಡಿ ಹಡಗುಕಟ್ಟೆಗೆ 5 ಕೋಟಿ ರೂ., ತೆಂಗಿನಗುಂಡಿ ಫಿಶ್ ಲ್ಯಾಂಡಿಂಗ್​ಗೆ 2.62 ಕೋಟಿ ರೂ. ಎಂದು ವಿವರ ನೀಡಲಾಗಿದೆ.

ಆದರೆ, ಈ ಊರುಗಳಲ್ಲಿ ಸಂಸದರ ಅಥವಾ ಕೇಂದ್ರ ಸರ್ಕಾರದ ನಿಧಿಯಿಂದ ನಯಾ ಪೈಸೆ ಅನುದಾನ ಬಂದಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಬೆಳಂಬಾರದಲ್ಲಿ ದೋಣಿ ಇಳಿದಾಣ ಅಥವಾ ಸಣ್ಣ ಬಂದರು ನಿರ್ವಿುಸಲಾಗಿದೆ. ಆದರೂ. ಸಮುದ್ರದ ಅಲೆಗಳ ಅಬ್ಬರದ ಕಾರಣಕ್ಕೆ ಬೋಟ್​ಗಳನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಅಲ್ಲಿ 50ಕ್ಕೂ ಹೆಚ್ಚು ದೋಣಿಗಳಿದ್ದು, ಮೀನುಗಾರರು ಅವುಗಳನ್ನು ಸಮುದ್ರ ಮಧ್ಯೆ ನಿಲ್ಲಿಸುತ್ತಿದ್ದಾರೆ. ಇಲ್ಲವೇ ಮುದಗಾ ಬಂದರಿಗೆ ತಂದು ನಿಲ್ಲಿಸುತ್ತಿದ್ದಾರೆ. ಇಲ್ಲಿ ಬ್ರೇಕ್ ವಾಟರ್ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಹಲವು ದಿನಗಳಿಂದ ಇದೆ. ಈ ಸಂಬಂಧ ಅಂದಾಜು 100 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದೆ. ಆದರೆ, ಯಾವುದೇ ಬ್ರೆಕ್ ವಾಟರ್ ನಿರ್ವಣವಾಗಿಲ್ಲ. ಸಂಸದರು ಹೇಳುವ 4.6 ಕೋಟಿ ರೂ. ವೆಚ್ಚದ ಬ್ರೇಕ್ ವಾಟರ್ ಎಲ್ಲಿದೆಯೋ ಗೊತ್ತಿಲ್ಲ ಎನ್ನುತ್ತಾರೆ ಸ್ಥಳೀಯ ಮೀನುಗಾರರು.

ಇನ್ನು ಸೀಬರ್ಡ್ ನೌಕಾನೆಲೆ ನಿರಾಶ್ರಿತರ ಮೂಲಸೌಕರ್ಯಕ್ಕಾಗಿ ಮುದಗಾದಲ್ಲಿ ಬಂದರು ನಿರ್ವಿುಸಲು 1998ರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಒಪ್ಪಂದವಾಗುತ್ತದೆ. ಆದರೆ, ಬಂದರು ನಿರ್ವಣವಾಗುವುದಿಲ್ಲ. ಅಂದಾಜು 10 ವರ್ಷಗಳ ನಂತರ ಮುದಗಾದಲ್ಲಿ 13 ಕೋಟಿ ರೂ. ವೆಚ್ಚದಲ್ಲಿ ಬಂದರು ನಿರ್ವಿುಸಲಾಗಿದೆ. ಅದನ್ನು ಹೊರತುಪಡಿಸಿ ನಯಾಪೈಸೆ ಬಂದರಿಗೆ ಬಳಕೆಯಾಗಿಲ್ಲ. ಸಂಸದರು ತಮ್ಮ ಅವಧಿಯಲ್ಲಿ 10 ಕೋಟಿ ರೂ. ವಿನಿಯೋಗಿಸಿದ್ದೆಲ್ಲಿ ಎಂಬುದು ಅಲ್ಲಿನವರ ಪ್ರಶ್ನೆ.

ಬೇಲೆಕೇರಿ, ಅಳವಕೋಡಿ ಹಾಗೂ ತೆಂಗಿನಗುಂಡಿಯಲ್ಲೂ ಸಂಸದರ ಪ್ರಯತ್ನದಿಂದ ಯಾವುದೇ ಹಣ ಬಂದಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ. ಹಾಗಿದ್ದರೆ ಸಂಸದರು ಹಣ ವಿನಿಯೋಗಿಸದೇ ಕಾಮಗಾರಿಗಳ ವಿವರ ನೀಡಿದರೆ ಎಂಬ ಪ್ರಶ್ನೆ ಎದ್ದಿದೆ.

ಹಲವು ಬಾರಿ ಬೇಡಿಕೊಂಡ ನಂತರ ಮುದಗಾದ ಒಂದು ರಸ್ತೆಗೆ ಸ್ವಲ್ಪ ಅನುದಾನ ನೀಡಿದ್ದನ್ನು ಬಿಟ್ಟರೆ ಅವರು ಇನ್ನೇನೂ ಮಾಡಿಲ್ಲ. ಆದರೆ, ಈ ಅವಧಿಯಲ್ಲಿ ಬಂದರಿಗೆ 10 ಕೋಟಿ ರೂ. ಅನುದಾನ ನೀಡಿದ್ದಾರೆ ಎಂಬ ವಿಷಯ ಕೇಳಿ ನನಗೆ ಆಶ್ಚರ್ಯವಾಯಿತು.

ಉಮಾಕಾಂತ ಹರಿಕಂತ್ರ, ಮೀನುಗಾರರ ಮುಖಂಡ, ಮುದಗಾ