ಕೊಪ್ಪಳ: ದೇಶಕ್ಕಾಗಿ ಸೇವೆ ಸಲ್ಲಿಸಿದ ಮಾಜಿ ಸೈನಿಕ ಪೊನ್ನಸ್ವಾಮಿ ಕುಟುಂಬಕ್ಕೆ ಜಿಲ್ಲಾಡಳಿತ ನ್ಯಾಯ ಒದಗಿಸಿಲ್ಲ. ಸರ್ಕಾರ ಹಂಚಿಕೆ ಮಾಡಿದ ಭೂಮಿ ಹಲವು ವರ್ಷಗಳಾದರೂ ಅವರ ಕುಟುಂಬದವರ ಕೈ ಸೇರಿಲ್ಲವೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಉಸ್ತುವಾರಿ ಕೆ.ಶಂಕರ್ ನಂದಿಹಾಳ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಕೊಪ್ಪಳ ತಾಲೂಕಿನ ಮುನಿರಾಬಾದ್ ಡ್ಯಾಂನ ಮಾಜಿ ಸೈನಿಕ ಪೊನ್ನಸ್ವಾಮಿ ಕುಟುಂಬಕ್ಕೆ ಸರ್ಕಾರ ನಾಲ್ಕು ದಶಕಗಳ ಹಿಂದೆ ಭೂಮಿ ನೀಡಲಾಗಿದೆ. ಪೊನ್ನಸ್ವಾಮಿ ನಿಧನರಾಗಿದ್ದು, 1978-79ರಲ್ಲಿ ಕೊಪ್ಪಳ ತಾಲೂಕಿನ ಶಿವಪುರ ಸೀಮಾದ ಸರ್ವೇ ನಂಬರ್ 284ರಲ್ಲಿ ಎರಡು ಎಕರೆ ಭೂಮಿ ನೀಡಿ ಸೈನಿಕನ ಪತ್ನಿ ಹುಲಿಗೆಮ್ಮ ಹೆಸರಿಗೆ ತಹಸೀಲ್ದಾರ್ ಆದೇಶಿಸಿದ್ದಾರೆ. ಆದರೆ, ಈವರೆಗೂ ಅವರಿಗೆ ಭೂಮಿ ಕಬ್ಜಾ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿದರು.
ಈ ಸಂಬಂಧ ತಹಸೀಲ್ದಾರ್, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಹೋರಾಟ ಮಾಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಕುಟುಂಬದವರು ಕಚೇರಿ ಅಲೆದು ಸುಸ್ತಾಗಿದ್ದಾರೆ. 2021ರಿಂದ ನಮ್ಮ ಸಂಘಟನೆಯಿಂದ ಹೋರಾಟ ಆರಂಭಿಸಿದ್ದೇವೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ಪತ್ರ ಬರೆದರೂ ನ್ಯಾಯ ಸಿಕ್ಕಿಲ್ಲ. ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಮಾಜಿ ಸೈನಿಕನ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು. ಪೊನ್ನಸ್ವಾಮಿ ಪುತ್ರ ವೆಂಕಟೇಶ, ಸಂಘಟನೆಯ ಸಂಚಾಲಕರಾದ ಯಮನೂರ ಭಟ್, ಶಂಕರ್ ಜುಮಲಾಪುರ, ಲಕ್ಷ್ಮೀಕಾಂತ ಸುಗ್ಗೇನಹಳ್ಳಿ, ಆರ್.ಚನ್ನಬಸವ ಮಾನ್ವಿ ಇತರರಿದ್ದರು.