ಮಾಜಿ ಶಾಸಕ ಸೈಲ್ ಜಾಗದ ಸಾಲ ಮನ್ನಾ!

ವಿಜಯವಾಣಿ ಸುದ್ದಿಜಾಲ ಕಾರವಾರ: ಮಾಜಿ ಶಾಸಕ ಸತೀಶ ಸೈಲ್ ಅವರ ಹೆಸರಿನ ಜಾಗದ ಮೇಲಿನ ಸಾಲವನ್ನೂ ಮನ್ನಾ ಮಾಡಲು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದು, ವಿವಾದಕ್ಕೆ ಕಾರಣವಾಗಿದೆ.

ನಗರದ ರಾಜೇಶ ನಾಯ್ಕ ಎಂಬುವವರು ದಾಖಲೆ ಪಡೆದುಕೊಂಡು ಈ ಸಂಬಂಧ ಜಿಲ್ಲಾಧಿಕಾರಿಗೆ ಹಾಗೂ ಖಾದಿ ಮಂಡಳಿ ಕೇಂದ್ರ ಕಚೇರಿಗೆ ದೂರು ನೀಡಿದ್ದಾರೆ. ಕೋಟ್ಯಧೀಶರಾಗಿರುವ ಸತೀಶ ಸೈಲ್ ಅವರ ಹೆಸರಿಗಿರುವ ಜಮೀನಿನ ಮೇಲಿನ ಸಾಲವನ್ನು ಮನ್ನಾ ಮಾಡುವ ಮೂಲಕ ಮಂಡಳಿ ಲೋಪವೆಸಗುತ್ತಿದೆ ಎಂದು ಆರೋಪಿಸಿದ್ದಾರೆ.

ಪ್ರಕರಣವೇನು?: ಸದಾಶಿವಗಡದ ಲಕ್ಷ್ಮೀಬಾಯಿ ವಿಶ್ರಾಮ ರೇವಣಕರ್ ಎಂಬುವವರು ಆಭರಣ ತಯಾರಿಕಾ ಉದ್ದಿಮೆ ಮಾಡುವ ಸಲುವಾಗಿ ಸದಾಶಿವಗಡದಲ್ಲಿರುವ ಸರ್ವೆ ನಂಬರ್ 650(1ಅ) ಜಾಗವನ್ನು ಆಧಾರವಾಗಿಟ್ಟು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ 1997-98 ರಲ್ಲಿ 5,01,500 ರೂ. ಸಾಲ ಪಡೆಯುತ್ತಾರೆ. ಆದರೆ, ಅದನ್ನು ಮರುಪಾವತಿ ಮಾಡದೇ 2005ರಲ್ಲಿ ಸತೀಶ ಸೈಲ್ ಅವರಿಗೆ 3.50 ಲಕ್ಷ ರೂ.ಗೆ ಮಾರಾಟ ಮಾಡುತ್ತಾರೆ. ಸತೀಶ ಸೈಲ್ ಹಾಗೂ ಹಿಂದಿನ ಮಾಲೀಕರು ಸಾಲ ತೀರಿಸಲಿಲ್ಲ. ಈಗ ಸಾಲದ ಅಸಲು, ಬಡ್ಡಿ ಎಲ್ಲ ಸೇರಿ ಮೊತ್ತ 15 ಲಕ್ಷ ರೂ. ದಾಟಿದೆ.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಧನ ಸಹಾಯ ಸ್ವರೂಪದ ಯೊಜನೆ (ಬಿಪಿಎಸ್)ಯಿಂದ ಪಡೆದ ಸಾಲ ಬಾಕಿಯಾಗಿದ್ದಲ್ಲಿ ಅದನ್ನು ಮನ್ನಾ ಮಾಡುವುದಾಗಿ 2018ರ ಬಜೆಟ್​ನಲ್ಲಿ ಘೊಷಿಸಲಾಯಿತು. ಸಾಲಗಾರರು ಬಿಪಿಎಲ್ ಕಾರ್ಡ್​ದಾರರಾಗಿರಬೇಕು ಎಂಬ ನಿಬಂಧನೆ ವಿಧಿಸಲಾಗಿತ್ತು. ಅದರಂತೆ ಖಾದಿ ಗ್ರಾಮೋದ್ಯೋಗ ಮಂಡಳಿಯು ಲಕ್ಷ್ಮೀಬಾಯಿ ವಿಶ್ರಾಮ ರೇವರಣಕರ್ ಅವರ ಹೆಸರಿಗಿದ್ದ ಸಾಲ ಮನ್ನಾ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದೆ.

ಹುಟ್ಟುವ ಹಲವು ಪ್ರಶ್ನೆಗಳು?: ಈ ಪ್ರಕರಣದಲ್ಲಿ ಮಾಜಿ ಶಾಸಕ ಸತೀಶ ಸೈಲ್ ನೇರವಾಗಿ ಭಾಗಿದಾರರಲ್ಲ. ಆದರೆ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಜಮೀನಿನ ಮೇಲೆ ಭೋಜಾ (ಸಾಲ) ಇದ್ದಾಗಲೇ ಅದರ ಮಾರಾಟಕ್ಕೆ ಖಾದಿ ಗ್ರಾಮೋದ್ಯೋಗ ಮಂಡಳಿ ನಿರಾಕ್ಷೇಪಣಾ ಪತ್ರ ನೀಡಿದ್ದು ಹೇಗೆ? ಹಾಗೊಮ್ಮೆ ಮಂಡಳಿಯ ಗಮನಕ್ಕೆ ಬಾರದೆಯೇ ಜಮೀನು ಮಾರಾಟವಾಗಿದ್ದರೂ ಈಗಿನ ಜಮೀನಿನ ಮಾಲೀಕರಿಗೆ ಮಂಡಳಿ ನೋಟಿಸ್ ಏಕೆ ನೀಡಲಿಲ್ಲ ಎಂಬ ಪ್ರಶ್ನೆ ತಲೆದೋರಿದೆ.

ಮಂಡಳಿ ಹೇಳುವುದೇನು?: ಸರ್ಕಾರ ಸಾಲ ಮನ್ನಾ ಯೋಜನೆ ಘೊಷಿಸಿದೆ. ನಮ್ಮಲ್ಲಿ ಸಾಲ ಪಡೆದು ಕಟ್ ಬಾಕಿದಾರರಾಗಿರುವ ಲಕ್ಷ್ಮೀಬಾಯಿ ಅವರು ಸರ್ಕಾರದ ನಿಯಮಾವಳಿಯಂತೆ ಬಿಪಿಎಲ್ ಕಾರ್ಡ್​ದಾರರಾಗಿದ್ದಾರೆ. ಈ ಕುರಿತು ದಾಖಲೆಯನ್ನೂ ಸಲ್ಲಿಸಿದ್ದಾರೆ. ಇದರಿಂದ ನಾವು ಸಾಲ ಮನ್ನಾಕ್ಕೆ ಪ್ರಸ್ತಾವನೆ ಕಳಿಸಿದ್ದೇವೆ ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಹಾಗೂ ದೂರು ನೀಡಿದ ರಾಜೇಶ ನಾಯ್ಕ ಅವರಿಗೆ ಸ್ಪಷ್ಟನೆ ನೀಡಿದ್ದಾರೆ.

ನಾನು ಜಮೀನು ಖರೀದಿಸುವಾಗ ಯಾವುದೇ ಸಾಲ ಇದ್ದುದು ಗಮನಕ್ಕೆ ಬಂದಿಲ್ಲ. ಈಗ ಅವರು ಏನಾದರೂ ದಾಖಲೆ ಸೃಷ್ಟಿ ಮಾಡಿದ್ದರೆ ನನಗೆ ಅದು ತಿಳಿದಿಲ್ಲ. ನಾನು ಜಮೀನು ಖರೀದಿಸಿದ ನಂತರ ಯಾವುದೇ ನೋಟಿಸ್ ಸಹ ಬಂದಿಲ್ಲ. ಇದರಿಂದ ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. | ಸತೀಶ ಸೈಲ್ ಮಾಜಿ ಶಾಸಕ

Leave a Reply

Your email address will not be published. Required fields are marked *