ಮಾಜಿ ಶಾಸಕ ಭಕ್ತವತ್ಸಲಂಗೆ ಭಾವಪೂರ್ಣ ವಿದಾಯ

 ಕೆಜಿಎಫ್ : ತೀವ್ರ ಹೃದಯಾಘಾತದಿಂದ ಬುಧವಾರ ರಾತ್ರಿ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಮಾಜಿ ಶಾಸಕ, ಜೆಡಿಎಸ್ ಮುಖಂಡ ಎಂ.ಭಕ್ತವತ್ಸಲಂ (70) ಅವರ ಅಂತ್ಯಕ್ರಿಯೆ ಗುರುವಾರ ಸಂಜೆ ಕೆಜಿಎಫ್​ನ ಚಾಂಪಿಯನ್ ರೀಫ್​ನಲ್ಲಿರುವ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.

ಸಂತಾಪ ಸೂಚಿಸುವ ಸಲುವಾಗಿ ಕೆಜಿಎಫ್​ನಲ್ಲಿ ಸ್ವಯಂ ಘೊಷಿತ ಬಂದ್ ಆಚರಿಸಲಾಯಿತು. ವಿವಿಧ ಪಕ್ಷಗಳ ಮುಖಂಡರು ಅಂತಿಮ ದರ್ಶನ ಪಡೆದರು. ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ನೂರಾರು ಬೆಂಬಲಿಗರು ಕಂಬನಿ ಮಿಡಿದರು.

ಚಿಕಿತ್ಸೆ ಫಲಿಸಲಿಲ್ಲ: ಭಕ್ತವತ್ಸಲಂಗೆ ಬುಧವಾರ ರಾತ್ರಿ 8 ಗಂಟೆ ಸಮಯದಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ 11 ಗಂಟೆಗೆ ಕೊನೆಯುಸಿರೆಳೆದರು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮೃತರ ಮನೆ ಮುಂದೆ ಜಮಾಯಿಸಿದ ಅಭಿಮಾನಿಗಳು ತಲೈವಾರ್ ನಮಗೆ ಇನ್ನು ಯಾರು ಗತಿ ಎಂದು ಕಣ್ಣೀರು ಹಾಕಿದರು. ಪತ್ನಿ ಚಿತ್ರಾ, ಪುತ್ರ ಕಾರ್ತಿಕ್, ಪುತ್ರಿಯರಾದ ಜನನಿ ಮತ್ತು ಶಂಕರಿ ಸೇರಿ ಅಪಾರ ಬೆಂಬಲಿಗರು, ಆಪ್ತರು ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಚಿತ್ರ ಮಂದಿರದಿಂದ ರಾಜಕೀಯಕ್ಕೆ: ಕೆಜಿಎಫ್​ನ ಲಕ್ಷ್ಮೀ ಚಿತ್ರ ಮಂದಿರದಲ್ಲಿ ಕೆಲಸ ಮಾಡುತ್ತಿದ್ದ ಭಕ್ತವತ್ಸಲಂ ತಮಿಳುನಾಡಿನ ಮಾಜಿ ಸಿಎಂ ದಿ.ಎಂಜಿಆರ್ ಪ್ರಭಾವಕ್ಕೆ ಒಳಗಾಗಿ 1982ರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿ ಕೆಜಿಎಫ್ ನಗರಸಭೆ ಸದಸ್ಯರಾದರಲ್ಲದೆ ಎಐಡಿಎಂಕೆಯನ್ನೂ ಬಲಪಡಿಸಿದರು.

1983, 1989 ಮತ್ತು 1999ರಲ್ಲಿ ಶಾಸಕರಾಗಿದ್ದ ಭಕ್ತವತ್ಸಲಂ ಕೆಜಿಎಫ್ ಕ್ಷೇತ್ರ ವಿಂಗಡಣೆ ಹಿನ್ನೆಲೆಯಲ್ಲಿ 2008ರಲ್ಲಿ ಎಐಡಿಎಂಕೆ ತೊರೆದು ಜೆಡಿಎಸ್ ಸೇರಿದರು. 2008, 2013 ಮತ್ತು 2018ರ ಚುನಾವಣೆಯಲ್ಲಿ ಸತತವಾಗಿ ಸೋಲು ಅನುಭವಿಸಿದರು.

ಕನ್ನಡ ಕಲಿತರು: ತಮಿಳು ಆರಾಧಿಸುತ್ತಿದ್ದ ಇವರು ಗೋಕಾಕ್ ಚಳವಳಿ ಮತ್ತು ಕೆಜಿಎಫ್ ಕ್ಷೇತ್ರ ವಿಂಗಡಣೆ ಬಳಿಕ ಗ್ರಾಮೀಣರ ವಿಶ್ವಾಸ ಗಳಿಸುವ ಸಲುವಾಗಿ ಕನ್ನಡ ಭಾಷೆ ಕಲಿತು ಮಾತನಾಡುವ ಮೂಲಕ ಕನ್ನಡಿಗರಲ್ಲಿದ್ದ ಅಸಮಾಧಾನ ಹೋಗಲಾಡಿಸಿದ್ದರು. ಕೆಜಿಎಫ್ ನಗರದ ಪ್ರಮುಖ ರಸ್ತೆಗಳಲ್ಲಿನ ಅಂಗಡಿ ಮುಂಗಟ್ಟುಗಳ ಮೇಲಿನ ನಾಮಫಲಕಗಳಲ್ಲಿ ಕನ್ನಡ ಕಾಣುವಂತೆ ಮಾಡಿದ್ದರು.

ಕುವೆಂಪು ಬಗ್ಗೆ ಗೌರವ: ವಿಧಾನಸಭೆ ಕಲಾಪಗಳಲ್ಲಿ ತಮಿಳು ಭಾಷೆಯಲ್ಲಿ ಮಾತನಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಇವರು ನಂತರ ಕನ್ನಡಕ್ಕೆ ಗೌರವ ನೀಡಬೇಕೆಂಬ ಪ್ರಜ್ಞೆ ಬೆಳೆಸಿಕೊಂಡರು. ಭಕ್ತವತ್ಸಲಂಗೆ ರಾಷ್ಟ್ರಕವಿ ಡಾ.ಕುವೆಂಪು ಮೇಲೆ ಗೌರವವಿತ್ತು. ಈ ಕಾರಣಕ್ಕಾಗಿಯೇ ಕೆಜಿಎಫ್ ನಗರಸಭೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮುನ್ಸಿಪಲ್ ಬಸ್ ನಿಲ್ದಾಣಕ್ಕೆ ಕುವೆಂಪು ಹೆಸರು ನಾಮಕರಣ ಮಾಡಿ ಕನ್ನಡಿಗರ ಮನಗೆದ್ದರು.

6 ಬಾರಿ ನಗರಸಭೆ ಅಧ್ಯಕ್ಷ : ಕೆಜಿಎಫ್ ನಗರಸಭೆಗೆ ಆರು ಬಾರಿ ಅಧ್ಯಕ್ಷರಾಗಿ ಒಂದು ಬಾರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿದ್ದರು. ಚಿನ್ನದ ಗಣಿ ಮುಚ್ಚಿದ ನಂತರ ಗಣಿ ಪುನರಾಂಭ ಮತ್ತು ಕಾರ್ವಿುಕರಿಗೆ ಪರ್ಯಾಯ ಉದ್ಯೋಗ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ಹಲವು ಹೋರಾಟ ನಡೆಸಿದ್ದಾರೆ.

ಕಾವೇರಿ ವಿಚಾರಕ್ಕೆ ಸಂಬಂಧಿಸಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಆದೇಶದ ಮೇರೆಗೆ ತಮಿಳುನಾಡು ಸಿಎಂ ಜಯಲಲಿತಾ ಬಳಿ ಸಂಧಾನಕಾರರಾಗಿ ತೆರಳಿದ್ದರು. ಚಿನ್ನದ ಗಣಿ ಕಾರ್ವಿುಕರಿಗೆ ಎಐಎಡಿಎಂಕೆ ಪಕ್ಷದಿಂದ ಉಚಿತ ಅಕ್ಕಿ ವಿತರಿಸಿದರು. ಮೇರುನಟ ಡಾ.ರಾಜಕುಮಾರ್ ಅಪಹರಣ ಸಂದರ್ಭದಲ್ಲಿ ಅವರ ಬಿಡುಗಡೆಗೆ ಪ್ರಯತ್ನಿಸಿದ್ದರು.

ಗಣ್ಯರಿಂದ ಅಂತಿಮ ದರ್ಶನ : ಸಂಸದ ಕೆ.ಎಚ್.ಮುನಿಯಪ್ಪ, ಶಾಸಕಿ ರೂಪಕಲಾ, ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ, ಎಂಎಲ್​ಸಿ ನಜೀರ್ ಅಹಮದ್, ಮಾಜಿ ಶಾಸಕರಾದ ವೆಂಕಟಶಿವಾರೆಡ್ಡಿ, ವೆಂಕಟೇಶಪ್ಪ, ಎಂ.ನಾರಾಯಣಸ್ವಾಮಿ, ಕೆಜಿಎಫ್ ಮಾಜಿ ಶಾಸಕರಾದ ಎಸ್..ರಾಜೇಂದ್ರನ್, ವೈ.ಸಂಪಂಗಿ, ಕರ್ನಾಟಕ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಪುಗಲೇಂಧಿ, ಮುಖಂಡರಾದ ಕೆ.ರಾಜೇಂದ್ರನ್, ಸುರೇಶ್ ನಾರಾಯಣಕುಟ್ಟಿ, ಡಿ.ಜಯಪಾಲ್, ವೆಂಕಟರಾಮರೆಡ್ಡಿ, ಅ.ಮು.ಲಕ್ಷ್ಮೀನಾರಾಯಣ, ವಿಜಯಶಂಕರ್, ನಗರ ಘಟಕ ಎಐಎಡಿಎಂಕೆ ಅಧ್ಯಕ್ಷ ಅನ್ಬು, ಗೋಪಾಲ್, ನಗರಸಭೆ ಅಧ್ಯಕ್ಷ ರಮೇಶ್​ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಲೋಕೇಶ್ ಕುಮಾರ್, ತಹಸೀಲ್ದಾರ್ ಅನಿತಲಕ್ಷ್ಮೀ, ಪೌರಾಯುಕ್ತ ಶ್ರೀಕಾಂತ್ ಸೇರಿದಂತೆ ಇತರೆ ರಾಜಕೀಯ ಮುಖಂಡರು ವಿವಿಧ ಸಂಘಟನೆ ಮುಖ್ಯಸ್ಥರು ಹಾಗೂ ಸರ್ಕಾರಿ ಇಲಾಖೆ ಅಧಿಕಾರಿಗಳು ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ನಗರಸಭೆ ಮೈದಾನದಲ್ಲಿ ಇಟ್ಟಿದ್ದ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.