Tuesday, 11th December 2018  

Vijayavani

Breaking News

ಮಾಜಿ ಗುಪ್ತಚರ ಅಧಿಕಾರಿ ಹಾಲಿ ಸಂಧಾನ ಸೂತ್ರಧಾರ

Sunday, 29.10.2017, 3:02 AM       No Comments

| ಉಮೇಶ್​ಕುಮಾರ್ ಶಿಮ್ಲಡ್ಕ

ಜಮ್ಮು-ಕಾಶ್ಮೀರದ ಬಿಕ್ಕಟ್ಟು ಇಂದು ನಿನ್ನೆಯದಲ್ಲ. ಭೌಗೋಳಿಕ ಆಯಕಟ್ಟಿನ ಆ ರಾಜ್ಯದಲ್ಲಿ ಪ್ರತ್ಯೇಕತಾವಾದ ಬಲಗೊಳ್ಳುವುದಕ್ಕೆ ಕಾರಣವಾಗಿದ್ದು ಈ ಹಿಂದಿನ ಕೇಂದ್ರ ಸರ್ಕಾರಗಳ ನೀತಿ ಮತ್ತು ಸನ್ನಿವೇಶಗಳು. ರಾಜಾ ಹರಿಸಿಂಗ್ ಆ ರಾಜ್ಯವನ್ನು ನಮ್ಮ ದೇಶಕ್ಕೆ ಸೇರ್ಪಡೆಗೊಳಿಸಿದ ಆ ಪ್ರಕ್ರಿಯೆಯಿಂದ ಆರಂಭವಾದ ಗೊಂದಲಗಳು ಇಂದಿಗೂ ಬಗೆಹರಿದಿಲ್ಲ. ಸದ್ಯ ಅಲ್ಲಿ ಪ್ರತ್ಯೇಕತಾವಾದಿಗಳ ಹಿಂಸಾಚಾರ ಹೆಚ್ಚಾಗಿದ್ದು, ಪಾಕಿಸ್ತಾನದ ಕುಮ್ಮಕ್ಕೂ ಬಯಲಾಗಿದೆ. ಕಾಶ್ಮೀರ ಬಿಕ್ಕಟ್ಟು ಪರಿಹರಿಸುವುದಕ್ಕಾಗಿ ಕೇಂದ್ರ ಸರ್ಕಾರ ಕಾಲಕಾಲಕ್ಕೆ ಮಧ್ಯಸ್ಥಿಕೆದಾರರನ್ನು ನೇಮಕ ಮಾಡುತ್ತ ಬಂದಿದೆ. ಇದೀಗ ಜಮ್ಮು-ಕಾಶ್ಮೀರದಲ್ಲಿ ಒಂದೆಡೆ ಎನ್​ಐಎ (ರಾಷ್ಟ್ರೀಯ ತನಿಖಾ ದಳ) ಕಾರ್ಯಾಚರಣೆ ಮುಂದುವರಿದಿರುವಂತೆಯೇ, ಪ್ರತ್ಯೇಕತಾವಾದಿಗಳ ಜತೆಗಿನ ಮಾತುಕತೆಗೆ ಗುಪ್ತಚರ ದಳದ ಮಾಜಿ ನಿರ್ದೇಶಕ ದಿನೇಶ್ವರ ಶರ್ಮಾ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.

ದಿನೇಶ್ವರ ಶರ್ಮಾ ಬಗ್ಗೆ ಹೇಳುವ ಮುನ್ನ ಜಮ್ಮು-ಕಾಶ್ಮೀರದಲ್ಲಿ ಹಿಂದಿನ ಮಧ್ಯಸ್ಥಿಕೆದಾರರು, ಮಾತುಕತೆಗಳ ಕಡೆಗೊಮ್ಮೆ ಕಣ್ಣು ಹಾಯಿಸುವುದು ಒಳಿತು. 1953ರಲ್ಲಿ ಪ್ರತ್ಯೇಕ ರಾಷ್ಟ್ರದ ಬೇಡಿಕೆಯೊಂದಿಗೆ ಶೇಖ್ ಮುಹಮ್ಮದ್ ಅಬ್ದುಲ್ಲಾ ಬಂಡಾಯದ ಬಾವುಟ ಹಾರಿಸಿದಾಗ ಮೌಲಾನಾ ಅಬುಲ್ ಕಲಾಂ ಆಜಾದ್ ಅವರನ್ನು ಮಧ್ಯಸ್ಥಿಕೆದಾರನನ್ನಾಗಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಕಳುಹಿಸಿದ್ದರು. ಆದರೆ, ಮಾತುಕತೆ ವಿಫಲವಾಗಿ ಶೇಖ್ ಸರ್ಕಾರ ವಜಾಗೊಂಡಿತ್ತು. 1974ರಲ್ಲಿ ಮತ್ತೆ ಪ್ರತ್ಯೇಕತೆಯ ಕೂಗು ಹೆಚ್ಚಾದಾಗ ಶೇಖ್ ಮುಹಮ್ಮದ್ ಅಬ್ದುಲ್ಲಾರ ಆಪ್ತ ಮಿರ್ಜಾ ಅಫ್ಜಲ್ ಬೇಗ್ ಜತೆಗೆ ಗೋಪಾಲಸ್ವಾಮಿ ಪಾರ್ಥಸಾರಥಿ ನಡೆಸಿದ ಯಶಸ್ವಿ ಮಾತುಕತೆ ಪರಿಣಾಮ ಇಂದಿರಾ ಹಾಗೂ ಶೇಖ್ ಒಪ್ಪಂದಕ್ಕೆ ಸಹಿಹಾಕಿದ್ದರು. ಇಂಥದ್ದೇ ಒಪ್ಪಂದ ತರುವಾಯ 1986ರಲ್ಲಿ ಪ್ರೊ.ಜೆ.ಡಿ.ಸೇಥಿ ಮೂಲಕ ನಡೆದಿದ್ದು, ರಾಜೀವ್ ಗಾಂಧಿ – ಫಾರೂಕ್ ಅಬ್ದುಲ್ಲಾ ಸಹಿ ಹಾಕಿದ್ದರು. ಫಾರೂಕ್ ಮತ್ತೆ ಮುಖ್ಯಮಂತ್ರಿಯಾದರು. 1990ರ ದಶಕದಲ್ಲಿ ಕಾಶ್ಮೀರ ಕಣಿವೆಯಲ್ಲಿ ಪ್ರತ್ಯೇಕತಾವಾದ, ಭಯೋತ್ಪಾದನೆ ಚಟುವಟಿಕೆ ಆರಂಭವಾದ ಹಿನ್ನೆಲೆಯಲ್ಲಿ ಬಹುತೇಕ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರದ ಪರವಾಗಿ ಜಾರ್ಜ್ ಫರ್ನಾಂಡಿಸ್ ಮತ್ತು ರಾಜೇಶ್ ಪೈಲಟ್ ಮಹತ್ವದ ಪಾತ್ರ ನಿಭಾಯಿಸಿದ್ದರು. ನಂತರ, 2000ನೇ ಇಸವಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಗುಂಪಿನ ಜತೆ ಮಾತುಕತೆಗೆ ಅಬ್ದುಲ್ ಮಜೀದ್ ದರ್ ನೇತೃತ್ವದಲ್ಲಿ ಗೃಹ ಸಚಿವಾಲಯದ ಅಧಿಕಾರಿಗಳ ತಂಡವನ್ನು ಕಳುಹಿಸಿಕೊಟ್ಟಿತ್ತು. ಆದರೆ, ಈ ಪ್ರಯತ್ನ ವಿಫಲ ವಾಗಿತ್ತು. ಮರುವರ್ಷವೇ ಯೋಜನಾ ಆಯೋಗದ ಉಪಾಧ್ಯಕ್ಷ ಕೆ.ಸಿ.ಪಂತ್ ಮಧ್ಯಸ್ಥಿಕೆದಾರರಾಗಿ ನೇಮಕವಾದರು 2003ರಲ್ಲಿ ಪಂತ್ ಸ್ಥಾನಕ್ಕೆ ಆ ರಾಜ್ಯದ ಅಂದಿನ ರಾಜ್ಯಪಾಲ ನರೀಂದರ್ ನಾಥ್ ವೋಹ್ರಾ ನಿಯೋಜಿಸಲ್ಪಟ್ಟರು. ಮರುವರ್ಷ ಉಪಪ್ರಧಾನಿ ಎಲ್.ಕೆ.ಆಡ್ವಾಣಿಯವರಿಗೆ ಹುರಿಯತ್ ನಾಯಕರ ಜತೆಗಿನ ಮಾತುಕತೆ ಹೊಣೆಗಾರಿಕೆ ವಹಿಸಲಾಯಿತು. ಕೇಂದ್ರ ಸರ್ಕಾರ ಮತ್ತು ಹುರಿಯತ್ ಜತೆಗಿನ ಅತ್ಯುನ್ನತ ಮಟ್ಟದ ಮೊದಲ ಮಾತುಕತೆ ಇದಾಗಿತ್ತು. ಎರಡು ಹಂತದ ಮಾತುಕತೆ ನಡೆದರೂ, ಅಂತಿಮ ನಿರ್ಣಯಕ್ಕೆ ಬರುವುದು ಸಾಧ್ಯವಾಗಿರಲಿಲ್ಲ.

ಇದಾಗಿ, 2010ರಲ್ಲಿ ಯುಪಿಎ ಸರ್ಕಾರ ಪ್ರಸಿದ್ಧ ಪತ್ರಕರ್ತ ದಿಲೀಪ್ ಪಡಗಾಂವ್ಕರ್, ಮಾಹಿತಿ ಆಯುಕ್ತ ಪ್ರೊ.ಎಂ.ಎಂ.ಅನ್ಸಾರಿ, ದೆಹಲಿ ಪಾಲಿಸಿ ಗ್ರೂಪ್​ನ ಟ್ರಸ್ಟಿ ಪ್ರೊ.ರಾಧಾ ಕುಮಾರ್ ಅವರನ್ನು ಮಧ್ಯಸ್ಥಿಕೆದಾರರನ್ನಾಗಿ ನೇಮಿಸಿತ್ತು. ಇವರು ಸಿದ್ಧಪಡಿಸಿದ ವರದಿಯೂ ಧೂಳು ತಿನ್ನುತ್ತಿದೆಯೇ ಹೊರತು, ಅಲ್ಲಿನ ಬಿಕ್ಕಟ್ಟಿಗೆ ಪರಿಹಾರ ಒದಗಿಸುವಲ್ಲಿ ಸಫಲವಾಗಿಲ್ಲ.

ಪ್ರಸ್ತುತ ಕಾಶ್ಮೀರ ಕಣಿವೆಯಲ್ಲಿ ಪಾಕ್ ಪ್ರಾಯೋಜಿತ ಲಷ್ಕರ್ ಏ ತೊಯ್ಬಾ, ಜೈಷ್ ಏ ಮೊಹಮ್ಮದ್, ಸ್ಥಳೀಯ ಹಿಜ್ಬುಲ್ ಮುಜಾಹಿದ್ದೀನ್ ವಿರುದ್ಧ ಸೇನೆ ಕಾರ್ಯಾಚರಣೆ ಆರಂಭಿಸಿದ್ದು, ಇದುವರೆಗೆ 160ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿದೆ. ಇಲ್ಲಿನ ಉಗ್ರರ ಬಲ 250-300 ಇರಬಹುದೆಂದು ಅಂದಾಜಿಸಲಾಗಿದೆ. ಇದರ ಜತೆಗೆ ಪ್ರತ್ಯೇಕತಾವಾದಿ ಹುರಿಯತ್ ನಾಯಕರ ವಿರುದ್ಧ ಭಯೋತ್ಪಾದನಾ ಕೃತ್ಯಕ್ಕೆ ಹಣಕಾಸು ನೆರವು ನೀಡಿದ ವಿಚಾರವಾಗಿ ಎನ್​ಐಎ ತನಿಖೆ ನಡೆಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಶರ್ಮಾ ನೇಮಕವೂ ಆಗಿದೆ. ಗುಪ್ತಚರ ದಳದ ಅಧಿಕಾರಿಗೆ ಇಂಥ ಹೊಣೆಗಾರಿಕೆಯೇ? ಎಂದು ಕೆಲವರು ಅಪಸ್ವರ ಎತ್ತಿದ್ದಾರಾದರೂ, ಅವರಿಗೆ ಪ್ರಧಾನಿ ಕಚೇರಿಯಿಂದಲೇ ಪೂರ್ಣ ಪ್ರಮಾಣದ ರಾಜಕೀಯ ಬೆಂಬಲ ಲಭ್ಯವಿದೆ. ಹಿಂದಿನ ಸರ್ಕಾರ ಹಾಗೂ ಮಧ್ಯಸ್ಥಿಕೆದಾರರೆಲ್ಲ ಪ್ರತ್ಯೇಕತಾವಾದಿಗಳ ಬೇಡಿಕೆಗಳ ಕಡೆಗಷ್ಟೇ ಗಮನಹರಿಸಿದರೆ, ಈ ಸರ್ಕಾರ ಪ್ರತ್ಯೇಕತಾವಾದಿಗಳ ಬೇಡಿಕೆ ಜತೆಗೆ ಅದರ ಹಿನ್ನೆಲೆ ಮುನ್ನೆಲೆಗಳನ್ನೆಲ್ಲ ಜಾಲಾಡಿ ಜಾಡಿಸುತ್ತಿರುವ ಕಾರಣ ಈ ಮಾದರಿಯ ಮಾತುಕತೆ ಅವರಿಗೆ ಹೊಸದು. ಇದನ್ನು ಮೋದಿಯವರ ದಿಟ್ಟ ರಾಜಕೀಯ ನಡೆ ಹಾಗೂ ಕಾಶ್ಮೀರದಲ್ಲಿ ಕೇಂದ್ರ ಸರ್ಕಾರದ ಉಸ್ತುವಾರಿಯಲ್ಲಿ ನಡೆಯುತ್ತಿರುವ ಯೋಜನಾಬದ್ಧ ತಂತ್ರಗಾರಿಕೆಯ ಭಾಗ ಎಂಬುದನ್ನು ಅಲ್ಲಗಳೆಯುವಂತಿಲ್ಲ. ದಿನೇಶ್ವರ ಶರ್ಮಾ ಮೃದು ಮಾತುಗಾರ. ಗುಪ್ತಚರ ಅಧಿಕಾರಿಯಾಗಿದ್ದವರು ಏನು ಮಾಡಿಯಾರು ಎಂಬ ಪ್ರಶ್ನೆ. ರಾಜಕಾರಣಿಗಳನ್ನೋ ಅಥವಾ ಪ್ರಸಿದ್ಧರನ್ನೋ ಮಧ್ಯಸ್ಥಿಕೆದಾರರನ್ನಾಗಿ ನೇಮಕ ಮಾಡಿದರೆ ಅಂಥವರ ಪ್ರತಿ ನಡೆಯೂ ಸುದ್ದಿ ಜಗತ್ತಿನ ಗಮನಸೆಳೆಯುತ್ತದೆ. ಇಂತಹ ಸಾಧಾರಣ ಅಧಿಕಾರಿಗಳಾದರೆ ಅವರನ್ನು ಯಾರೂ ಗಮನಿಸರು ಎಂಬ ನಿಲುವು ಸರ್ಕಾರದ್ದು ಎನ್ನುತ್ತಿವೆ ಮೂಲಗಳು.

ಇದರ ಅರ್ಥ ಶರ್ಮಾ ಕೈಲಾಗದವರು ಎಂದಲ್ಲ. ಐಸಿಸ್ ಉಗ್ರರಂತಹ ಮೂಲಭೂತವಾದಿ ಗಳನ್ನು ಮಟ್ಟಹಾಕುವಲ್ಲಿ ಅವರ ನೀತಿ ಗಮನಾರ್ಹವಾದುದು. ಶಂಕಿತರನ್ನು ಮೂಲದಲ್ಲೇ ಗುರುತಿಸಿ ಅವರನ್ನು ತಡೆಯುವ ನಿಟ್ಟಿನಲ್ಲಿ ಶರ್ಮಾ ಕೈಗೊಂಡ ಕ್ರಮ ಗಮನಸೆಳೆದಿತ್ತು, ಅಲ್ಲದೆ ಅವರಿಗೆ ವಿನೀತ ತಾರಾಸಾಧಕನ ಪಟ್ಟವನ್ನೂ ಒದಗಿಸಿತ್ತು. ಶರ್ಮಾ 1979ರ ಕೇರಳ ಕೇಡರ್​ನ ಐಪಿಎಸ್ ಅಧಿಕಾರಿ. ದೇಶಾದ್ಯಂತ ಹಲವೆಡೆ ಕರ್ತವ್ಯ ನಿರ್ವಹಿಸಿ 1991ರಲ್ಲಿ ಗುಪ್ತಚರ ದಳ ಸೇರ್ಪಡೆಗೊಂಡರು. ಅಂದ ಹಾಗೆ ಅವರಿಗೆ ಕಾಶ್ಮೀರ ಹೊಸದಲ್ಲ. 1990ರ ದಶಕದಲ್ಲಿ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ಆರಂಭವಾಗಿ ತೀವ್ರವಾಗಿದ್ದಾಗಲೇ ಅಲ್ಲಿ ನಿಯೋಜಿಸಲ್ಪಟ್ಟಿದ್ದರು. 2014ರ ಡಿ.31ರಿಂದ 2016ರ ಡಿ.31 ರ ತನಕ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದರು. ಈ ಅವಧಿಯಲ್ಲೇ ಹಿಜ್ಬುಲ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ನಡೆದುದು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಆಪ್ತರ ಪಟ್ಟಿಯಲ್ಲಿ ಶರ್ಮಾ ಅವರಿದ್ದಾರೆ. ಬಿಹಾರದ ಗಯಾ ಕೊಂಚ್ ಬ್ಲಾಕ್​ನ ಪಾಲಿ ಗ್ರಾಮದಲ್ಲಿ 1954ರ ಮಾ.23ರಂದು ಜನಿಸಿದರು. ಗಯಾ ಕಾಲೇಜಿನಲ್ಲಿ ಪದವಿ ಪಡೆದ ಅವರು, ನಂತರ ಐಪಿಎಸ್ ಮಾಡಿದರು.ಮಧ್ಯಸ್ಥಿಕೆದಾರರಾಗಿ ಕೆಲಸ ಮಾಡುವುದು ಶರ್ಮಾ ಅವರಿಗೆ ಹೊಸದಲ್ಲ. ಈ ವರ್ಷ ಜುಲೈನಲ್ಲಿ ಅವರಿಗೆ ಅಸ್ಸಾಂನ ಬಂಡುಕೋರ ಗುಂಪು ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ(ಉಲ್ಪಾ), ಬೋಡೋ ಮತ್ತು ಮಣಿಪುರದ ಕುಕಿ ನಾಯಕರೊಂದಿಗೆ ಮಾತುಕತೆ ನಡೆಸುವ ಹೊಣೆಗಾರಿಕೆ ವಹಿಸಲಾಗಿತ್ತು. ಈಗ ಆ ಹೊಣೆಗಾರಿಕೆಯಿಂದ ಮುಕ್ತರಾಗಿದ್ದಾರೋ ಇಲ್ಲವೋ ತಿಳಿಯದು. ಆದರೆ, ಅಲ್ಲಿನ ಉಗ್ರರು ಸಂಧಾನಕ್ಕೆ ಸಿದ್ಧರಾದ ಸುದ್ದಿ ಪ್ರಕಟವಾಗಿತ್ತು. ಈಗ ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳ ಸರದಿ. ಫಲಿತಾಂಶಕ್ಕೆ ಎದುರುನೋಡಬೇಕಾಗಿದೆ.

(ಲೇಖಕರು ವಿಜಯವಾಣಿ ಸಹಾಯಕ ಸುದ್ದಿಸಂಪಾದಕರು)

ಘಪ್ರತಿಕ್ರಿಯಿಸಿ: [email protected], [email protected]]

Leave a Reply

Your email address will not be published. Required fields are marked *

Back To Top