ಮಾಗಿ ಚಳಿಗೆ ಬೆಚ್ಚನೆಯ ಹೊದಿಕೆ ಹೊದಿಸಿದ ಜಾನಪದ ಸಂಭ್ರಮ

ಕೋಲಾರ: ಜನರನ್ನು ಸೆಳೆಯದ ಸರ್ಕಾರಿ ಪ್ರಾಯೋಜಿತ ಜಾನಪದ ಉತ್ಸವಗಳಿಂದ ನಿರಾಸೆಗೊಂಡಿದ್ದ ಜಿಲ್ಲೆಯ ಜನತೆಗೆ ಶನಿವಾರ ರಾತ್ರಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಂಕ್ರಾಂತಿ ಜಾನಪದ ಸಂಭ್ರಮ ಮುದ ನೀಡಿತು.

ಪ್ರತಿ ವರ್ಷ ಸಂಕ್ರಾಂತಿ ಪ್ರಯುಕ್ತ ವಿಜಯವಾಣಿ ಮತ್ತು ದಿಗ್ವಿಜಯ ವಾಹಿನಿ ಮಾಧ್ಯಮ ಸಹಯೋಗದಲ್ಲಿ ಕೋಲಾರ ಕ್ರೀಡಾ ಅಭಿವೃದ್ಧಿ ಅಕಾಡೆಮಿ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದು, ಈ ಬಾರಿ ನಾಡಿನ ಜಾನಪದ ದಿಗ್ಗಜರನ್ನು ವಿಶೇಷವಾಗಿ ಸ್ಥಳೀಯ ಪ್ರತಿಭೆ ಉಮಾ ಅವರನ್ನು ಕರೆಸಿ ಜಾನಪದದ ರಸದೌತಣ ನೀಡುವ ಮೂಲಕ ಸಾವಿರಾರು ಪ್ರೇಕ್ಷಕರ ಮನಗೆದ್ದಿತು.

ಮಲೆಮಹದೇಶ್ವರನ ಮೇಲೆ ರಚಿಸಿರುವ ಜಾನಪದ ಹಾಡಿನೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಮೈ ಕೊರೆಯುವ ಚಳಿಯಲ್ಲಿ ಕುಳಿತಿದ್ದವರನ್ನು ರೋಮಾಂಚನಗೊಳಿಸಿತು. ಹಿರಿಯ ಜನಪದ ಗಾಯಕ ಗುರುರಾಜ್ ಹೊಸಕೋಟೆ ಪ್ರಸಕ್ತ ರಾಜಕೀಯ ವ್ಯವಸ್ಥೆ ಕುರಿತ ಹಾಡಿಗೆ ಮನಸೋತ ಪ್ರೇಕ್ಷಕರು ಚಪ್ಪಾಳೆಯೊಂದಿಗೆ ಸಂಭ್ರಮಿಸಿದರು. ಕೋಲಾರದ ಪ್ರತಿಭೆ ಉಮಾ ಮತ್ತು ಸಂಗಡಿಗರು ಹಾಡಿದ ಮಹದೇಶ್ವರನ ಕುರಿತ ಹಾಡು ಮಂತ್ರಮುಗ್ಧರನ್ನಾಗಿಸಿತು.

ಹಿರಿಯ ಗಾಯಕಿ ಬಿ.ಕೆ.ಸುಮಿತ್ರಾ, ಚಂದ್ರಿಕಾ ಗುರುರಾಜ್, ಶಿವಮೊಗ್ಗದ ಕೆ.ಯುವರಾಜ್, ದೀಪಿಕಾ ಶ್ರೀಕಾಂತ್, ಅನಿತಾ ಕೆ.ಆರ್.ಪೇಟೆ,ಶಿಡ್ಲಘಟ್ಟದ ಮಹೇಶ್, ಶಿವು, ಕುಮಾರ್ ಮೇಲುಕೋಟೆ ಇನ್ನಿತರರು ತಮ್ಮದೇ ಶೈಲಿಯಲ್ಲಿ ಜನಪದ ಗೀತೆ ಹಾಡಿ ರಂಜಿಸಿದರು.

ಮಿಮಿಕ್ರಿ ಕಲಾವಿದ ಗೋಪಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡ, ಪ್ರಧಾನಿ ಮೋದಿ, ನಿತ್ಯಾನಂದ ಸ್ವಾಮಿ, ವಾಟಾಳ್​ನಾಗರಾಜ್, ಮಲ್ಲಿಕಾರ್ಜುನಖರ್ಗೆ, ಧರಂಸಿಂಗ್ ಅವರ ಧ್ವನಿ ಅನುಕರಣೆ ಮಾಡಿದಾಗ ಪ್ರೇಕ್ಷಕರು ನಗೆಗಡಲಲ್ಲಿ ತೇಲಾಡಿದರು.

ನಾಡಿನ ಖ್ಯಾತ ಜಾನಪದ ಕಲಾವಿದರಲ್ಲಿ ಒಬ್ಬರಾದ ಗೋ.ನಾ.ಸ್ವಾಮಿ ಮಾರ್ಗದರ್ಶನದಲ್ಲಿ ಮೂಡಿಬಂದ ಕಾರ್ಯಕ್ರಮಕ್ಕೆ ಮಂಡ್ಯದ ಅನುಷಾಗೌಡ ನಿರೂಪಣೆ ಮೆಚ್ಚುಗೆಗೆ ಪಾತ್ರವಾಯಿತು.

ಕಳೆದ ವರ್ಷ ಎಸ್.ಪಿ.ಬಾಲಸುಬ್ರಮಣ್ಯಂ ಸಂಗೀತ ರಸಮಂಜರಿ ಏರ್ಪಡಿಸಿ ಜಿಲ್ಲೆಯ ಜನತೆಯ ವಿಶ್ವಾಸಕ್ಕೆ ಪಾತ್ರರಾಗಿದ್ದ ಕುರುಬರಪೇಟೆ ವೆಂಕಟೇಶ್ , ಶ್ರೀನಾಥ್, ಚಿನ್ನಿ ನಾಗೇಶ್, ನಟರಾಜ್,ದೇವರಾಜ್, ಅರವಿಂದ್ ಸಂಗಡಿಗು ಈ ಬಾರಿ ಜಾನಪದ ಲೋಕವನ್ನು ಧರೆಗಿಳಿಸಿ ಗ್ರಾಮೀಣ ಸೊಗಡಿನಿಂದ ವಿನ್ಯಾಸಗೊಳಿಸಿದ ವೇದಿಕೆಯಲ್ಲಿ ಕಲಾವಿದರುಗಳಿಂದ ಹಾಡು, ನೃತ್ಯ ಹಾಗೂ ಆಸ್ಯ ಚಟಾಕಿಗಳ ಮೂಲಕ ಜಾನಪದ ಸೊಗಡು ಉಣಬಡಿಸಿದರು.

ರಾಜ್ಯ ಸರ್ಕಾರ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವ ವಿಚಾರದಲ್ಲಿ ಆತುರ ತೋರಿದಲ್ಲಿ ಕನ್ನಡ ಮಾಧ್ಯಮಕ್ಕೆ ದಕ್ಕೆ ಉಂಟಾಗಲಿದೆ ಎಂದು ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.

ನಮ್ಮದು ಒಕ್ಕೂಟ ವ್ಯವಸ್ಥೆಯ ರಾಷ್ಟ್ರ. ಇಂಗ್ಲಿಷ್, ಹಿಂದಿ ಇನ್ನಿತರ ಭಾಷೆಗಳನ್ನು ಕಲಿಯುವುದು ತಪ್ಪೇನಲ್ಲ. ಗಣತಂತ್ರ ವ್ಯವಸ್ಥೆಯಲ್ಲಿ ಆಯಾ ರಾಜ್ಯ ಭಾಷೆಗಳಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು. ರಾಜ್ಯದಲ್ಲಿ ಒಂದು ವಾರದಿಂದ ನಡೆಯುತ್ತಿರುವ ರಾಜಕೀಯ ಚಟುವಟಿಕೆ ನೋಡಿದರೆ ಯಾರು ಮುಖ್ಯಮಂತ್ರಿಯಾಗುತ್ತಾರೋ, ಯಾರು ಮಾಜಿ ಆಗುತ್ತಾರೋ ಎಂಬ ಚರ್ಚೆಗೆ ಗ್ರಾಸವಾಗಿದೆ. ಯಾವುದೇ ಸರ್ಕಾರ ಇರಲಿ ಹೋಗಲಿ ನಾನಂತೂ ಕಾಯಂ ಮುಖ್ಯಮಂತ್ರಿ, ನನ್ನ ವಿರುದ್ದ ಅವಿಶ್ವಾಸ ಮಂಡನೆ ಸಾಧ್ಯವಿಲ್ಲ ಎಂದಾಗ ನೆರೆದಿದ್ದ ಪ್ರೇಕ್ಷಕರು ಕರಡಾತನ ವ್ಯಕ್ತಪಡಿಸಿದರು. ಗಡಿಭಾಗದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ನಡೆಯುತ್ತಿರುವುದು ಸ್ವಾಗತಾರ್ಹ. ಜಾನಪದ ಕಲೆ ಮತ್ತು ಸಾಹಿತ್ಯ ಉಳಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.

ಸಾಹಿತಿ ದೊಡ್ಡರಂಗೇಗೌಡ, ವಕೀಲ ಕೆ.ವಿ. ಶಂಕರಪ್ಪ ಇತರರು ಪಾಲ್ಗೊಂಡಿದ್ದರು.