ಮಾಗಡಿ, ರಾಮನಗರಕ್ಕೆ ಬಂಪರ್ ಕೊಡುಗೆ

ರಾಮನಗರ: ಕುಮಾರ ಕೃಪೆ ಗಳಿಸಲು ಮುಖ್ಯಮಂತ್ರಿ ಸ್ವಕ್ಷೇತ್ರ ಚನ್ನಪಟ್ಟಣ ಮತ್ತೊಮ್ಮೆ ವಿಫಲವಾಗಿದ್ದು, ಈ ಬಾರಿಯ ಬಂಪರ್ ಕೊಡುಗೆ ಮಾಗಡಿ ಮತ್ತು ರಾಮನಗರ ಕ್ಷೇತ್ರಗಳಿಗೆ ಸಿಕ್ಕಿದೆ.

ಮಹತ್ವದ ಘೊಷಣೆಗಳ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಜನತೆ ಪಾಲಿಗೆ ಮಾವು ಸಂಸ್ಕರಣ ಘಟಕ ಸ್ಥಾಪನೆ ಕೊಂಚ ನೆಮ್ಮದಿ ತಂದಿದ್ದರೂ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಗೆ ಹೆಚ್ಚಿನ ಯೋಜನೆಗಳನ್ನು ನೀಡುವಲ್ಲಿ ಕುಮಾರಸ್ವಾಮಿ ಕೃಪೆ ತೋರಿಲ್ಲ ಎನ್ನುವುದು ಅಂಕಿ ಅಂಶದಿಂದಲೇ ವ್ಯಕ್ತವಾಗಿದೆ.

ಕಳೆದ ಬಜೆಟ್​ನಲ್ಲಿ ಮಾಗಡಿಯನ್ನು ಸಂಪೂರ್ಣವಾಗಿ ಕಡೆಗಣಿಸಿ, ಚನ್ನಪಟ್ಟಣಕ್ಕೆ ಕೇವಲ 5 ಕೋಟಿ ರೂಪಾಯಿ ನೀಡಿ ಕೈ ತೊಳೆದುಕೊಂಡಿದ್ದರು. ಆದರೆ, ಈ ಬಾರಿ ಮಾಗಡಿಗೆ ನೀರಾವರಿ ಯೋಜನೆ ನೀಡುವ ಜತೆಗೆ, ಸಿದ್ಧಗಂಗಾ ಶ್ರೀಗಳ ಹುಟ್ಟೂರು ವೀರಾಪುರ ಮತ್ತು ಆದಿಚುಂಚನಗಿರಿ ಕ್ಷೇತ್ರದ ಹಿಂದಿನ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ಹುಟ್ಟೂರು ಬಾನಂದೂರು ಅಭಿವೃದ್ಧಿಗೆ ತಲಾ 25 ಕೋಟಿ ರೂಪಾಯಿ ನೀಡಿದ್ದಾರೆ. ಈ ಮೂಲಕ ಮಾಗಡಿ ಹೆಚ್ಚಿನ ಅನುದಾನ ಪಡೆದುಕೊಂಡಿದೆ. ಉಳಿದಂತೆ ರಾಮನಗರಕ್ಕೆ ಮಾವು ಸಂಸ್ಕರಣ ಘಟಕ ಮತ್ತು ರೇಷ್ಮೆ ಮಾರುಕಟ್ಟೆ ಬಲವರ್ಧನೆಗೆ 10 ಕೋಟಿ ರೂಪಾಯಿ ನೀಡಿದ್ದಾರೆ. ಆದರೆ, ಕೃಷಿ ಮಾರುಕಟ್ಟೆ ಬಲವರ್ಧನೆಗಾಗಿ ಬೃಹತ್ ಮಾರುಕಟ್ಟೆ ಟರ್ವಿುನಲ್, ಮೆಗಾ ಮಾರುಕಟ್ಟೆಗಳನ್ನು ನಿರ್ಮಾಣ ಮಾಡಬೇಕು ಎನ್ನುವ ಬೇಡಿಕೆ ಜಿಲ್ಲೆಯ ರೈತ ಸಮುದಾಯದಲ್ಲಿ ಇತ್ತು. ಆದರೆ ಈ ಬೇಡಿಕೆ ಈಡೇರಲೇ ಇಲ್ಲ. ಇದರ ಜತೆಗೆ ನೀರಾ ಸಂಸ್ಕರಣಾ ಘಟಕ ಸ್ಥಾಪನೆ ಸಂಬಂಧವೂ ಎಚ್​ಡಿಕೆ ಮಾತನಾಡದೇ ಇರುವುದು ಬೇಸರ ಮೂಡಿಸಿದೆ. ರಾಜೀವ್ ಗಾಂಧಿ ಆರೋಗ್ಯ ವಿವಿ ನಿರ್ಮಾಣ ವಿಷಯ ಬಜೆಟ್​ನಲ್ಲಿ ಪ್ರಸ್ತಾಪವೂ ಆಗಿಲ್ಲ. ಮಾಗಡಿಯಲ್ಲಿ ಕೈಗಾರಿಕೆ ಪ್ರದೇಶ ಸ್ಥಾಪನೆ ಮನವಿಗೂ ಸ್ಪಂದನೆ ಸಿಕ್ಕಿಲ್ಲ. ರಾಮನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕನಕಪುರ ತಾಲೂಕಿನ ಹಾರೋಹಳ್ಳಿಯನ್ನು ತಾಲೂಕು ಕೇಂದ್ರವಾಗಿಸುವ ಮೂಲಕ ಜಿಲ್ಲೆಗೆ ಹೊಸ ತಾಲೂಕು ಸೇರ್ಪಡೆ ಗರಿ ನೀಡಿದ್ದಾರೆ.

ಮೇಕೆದಾಟು ಪ್ರಸ್ತಾಪ ಮಾಡಿದ ಸಿಎಂ: ಮೇಕೆದಾಟು ಯೋಜನೆ ಜಾರಿಗೊಳಿಸಲು ಬದ್ಧ ಎನ್ನುವ ಸಂದೇಶವನ್ನು ಘೊಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಪ್ರಾಥಮಿಕ ಹಂತದ ಒಪ್ಪಿಗೆ ಮೇರೆಗೆ ಕಾರ್ಯಸಾಧ್ಯತಾ ವರದಿ ಸಲ್ಲಿಸಲಾಗಿದೆ ಮತ್ತು ಯೋಜನೆ ಜಾರಿಗೆ ಸಿದ್ಧ ಎನ್ನುವ ಮಾತುಗಳನ್ನಾಡಿರುವುದು ಜಿಲ್ಲೆಯ ರೈತರಿಗೆ ಸಂತಸ ತಂದಿದೆ.

ರೇಷ್ಮೆಗೆ ಇಲ್ಲ ಬೆಲೆ: ರೇಷ್ಮೆ ಮಾರುಕಟ್ಟೆ ಬಲವರ್ಧನೆಗೆ 10 ಕೋಟಿ ರೂ. ಮತ್ತು ಚನ್ನಪಟ್ಟಣದ ಕೆಎಸ್​ಐಸಿ ಮಿಲ್ ಆವರಣದಲ್ಲಿ ಪ್ರದರ್ಶನ ಮಳಿಗೆ ಉತ್ಪನ್ನ ಮಾರಾಟ ಉತ್ತೇಜನಕ್ಕೆ 10 ಕೋಟಿ ರೂ.ನೀಡಿರುವುದು ಬಿಟ್ಟರೆ, ರೇಷ್ಮೆ ಕೃಷಿ ಮತ್ತು ಉದ್ಯಮಕ್ಕೆ ಪೂರಕವಾಗುವ ಯೋಜನೆಗಳನ್ನು ಎಚ್​ಡಿಕೆ ಘೊಷಣೆ ಮಾಡಿಲ್ಲ. ರೇಷ್ಮೆ ಉತ್ಪಾದನೆಯಲ್ಲಿ ಮುಂದಿರುವ ಚೀನಾ ತಂತ್ರಜ್ಞಾನವನ್ನು ರಾಮನಗರದ ಪಿಲೇಛರ್ ಘಟಕಗಳಿಗೂ ಅಳವಡಿಸಬೇಕು. ಈ ತಂತ್ರಜ್ಞಾನ ಲಾಭದಾಯಕ. ಎಲ್ಲ ಘಟಕಗಳಿಗೆ ಸುಧಾರಿತ ಚೀನಾ ತಂತ್ರಜ್ಞಾನ ಅಳವಡಿಕೆ ಮಾಡುವುದರಿಂದ ಅನುಕೂಲವಾಗಲಿದೆ ಎನ್ನುವ ಬೇಡಿಕೆ ರೇಷ್ಮೆ ಕೃಷಿ ವಲಯದಿಂದ ಕೇಳಿ ಬಂದಿತ್ತು. ಆದರೆ, ಇದರ ಬಗ್ಗೆ ಪ್ರಸ್ತಾಪವಾಗಲಿಲ್ಲ. ಜತೆಗೆ ರೇಷ್ಮೆ ಆಧಾರಿತ ಉತ್ಪನ್ನಗಳ ತಯಾರಿಕೆ ಸಂಬಂಧಿಸಿದಂತೆಯೂ ಪ್ರಸ್ತಾಪವಾಗದಿರುವುದು ರೈತರಲ್ಲಿ ಬೇಸರ ಮೂಡಿಸಿದೆ.

ಮಾವು ಬೆಳೆಗಾರರಿಗೆ ನೆಮ್ಮದಿ: ಪ್ರಸ್ತುತ ರಾಮನಗರದ ಹರೀಸಂದ್ರ ಬಳಿ ಮಾವು ಅಭಿವೃದ್ಧಿ ಕೇಂದ್ರ ನಿರ್ಮಾಣ ಸಂಬಂಧ ಚಟುವಟಿಕೆಗಳು ನಡೆಯುತ್ತಿವೆ. ಜಾಗದ ಸಮಸ್ಯೆಯಿಂದ ಯೋಜನೆ ಕಾರ್ಯರೂಪಗೊಂಡಿಲ್ಲ. ಈ ನಡುವೆಯೇ ರಾಮನಗರದಲ್ಲಿ ಮಾವು ಸಂಸ್ಕರಣಾ ಘಟಕ ಹಾಗೂ ಕೋಲಾರದಲ್ಲಿ ಟೊಮ್ಯಾಟೊ ಸಂಸ್ಕರಣಾ ಘಟಕಗಳಿಗೆ 20 ಕೋಟಿ ರೂಪಾಯಿ ಮೀಸಲಿಟ್ಟುರುವುದು, ಘಟಕ ಆಗಿಯೇ ತೀರುತ್ತದೆ ಎನ್ನುವ ಖಾತ್ರಿಯನ್ನು ಜಿಲ್ಲೆಯ ಮಾವು ಬೆಳೆಗಾರರಿಗೆ ನೀಡಿದೆ.

ಕೆಎಸ್​ಐಸಿ ಪುನಶ್ಚೇತನ: ಸ್ವ ಕ್ಷೇತ್ರ ಚನ್ನಪಟ್ಟಣಕ್ಕೆ ಪ್ರಮುಖ ಯೋಜನೆ ಘೊಷಣೆ ಮಾಡಿಲ್ಲ. ಕ್ಷೇತ್ರದ ಜನತೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದರು. ಆದರೆ, ಚನ್ನಪಟ್ಟಣದ ಕೆಎಸ್​ಐಸಿ ಮಿಲ್ ಆವರಣದಲ್ಲಿ ಪ್ರದರ್ಶನ ಮಳಿಗೆ ಉತ್ಪನ್ನ ಮಾರಾಟ ಉತ್ತೇಜನಕ್ಕೆ 10 ಕೋಟಿ ರೂಪಾಯಿ ನೀಡಿರುವುದು ಬಿಟ್ಟರೆ ಬೇರೆ ಏನೂ ನೀಡಿಲ್ಲ. ಕಳೆದ ಬಜೆಟ್​ನಲ್ಲಿ ಕೆಎಸ್​ಐಸಿ ಘಟಕ ಪುನಶ್ಚೇತನಕ್ಕೆ 5 ಕೋಟಿ ರೂಪಾಯಿಯನ್ನು ಎಚ್​ಡಿಕೆ ನೀಡಿದ್ದರು.

ರೇಷ್ಮೆಗೆ ಬೆಂಬಲ ಬೆಲೆ ಘೊಷಣೆ ಮಾಡಿಲ್ಲ: ಜಿಲ್ಲೆಯ ರೇಷ್ಮೆ ಬೆಳೆಗಾರರ ಬಹುದಿನಗಳ ಬೇಡಿಕೆಗೆ ಕುಮಾರಸ್ವಾಮಿ ಸ್ಪಂದಿಸಲೇ ಇಲ್ಲ. ಬಜೆಟ್ ಮೂಲಕ ರೇಷ್ಮೆಗೆ ಬೆಂಬಲ ಬೆಲೆ ಘೊಷಣೆ ಮಾಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಬೆಳೆಗಾರರು ಇದ್ದರು. ಆದರೆ, ಮಾರುಕಟ್ಟೆ ಬಲವರ್ಧನೆಗೆ ಹಣ ನೀಡಿರುವ ಸಿಎಂ, ಬೆಲೆ ಕುಸಿತಕ್ಕೊಳಗಾಗಿ ನಷ್ಟಕ್ಕೆ ಒಳಗಾಗುವ ರೈತರ ಸಂಕಷ್ಟಕ್ಕೆ ಬಂದಿಲ್ಲ. ಈ ಹಿಂದೆ ಹಲವಾರು ಬಾರಿ ರೇಷ್ಮೆ ಬೆಳೆಗಾರರೊಂದಿಗೆ ಮುಖ್ಯಮಂತ್ರಿ ಮಾತನಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ರೇಷ್ಮೆ ಬೆಳಗಾರರ ಸಂಘದ ಅಧ್ಯಕ್ಷ ಗೌತಮ್ ಗೌಡ ಮತ್ತು ರವಿ ಕಿಡಿಕಾರಿದ್ದಾರೆ.

ನೀರಾ ಸಂಸ್ಕರಣಾ ಘಟಕ: ನೆರೆ ಜಿಲ್ಲೆ ತುಮಕೂರಿನಲ್ಲಿ ನೀರಾ ಸಂಸ್ಕರಣಾ ಘಟಕಕ್ಕೆ 3.5 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಜಿಲ್ಲೆಯ ರೈತರಿಗೂ ಅನುಕೂಲವಾಗಲಿದೆ. ತೋಟಗಾರಿಕೆ ಇಲಾಖೆ ರಾಮನಗರದಲ್ಲೂ ಘಟಕ ತೆರೆಯುವಂತೆ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸಿ, ಘಟಕ ನಿರ್ವಣಕ್ಕೆ ಅನುದಾನ ಮೀಸಲಿಡಬೇಕು ಎನ್ನುವ ಬೇಡಿಕೆ ಇತ್ತು. ಆದರೆ ಸಿಎಂ ಇತ್ತ ಗಮನಹರಿಸಲೇ ಇಲ್ಲ.

ಮೆಗಾ ಮಾರುಕಟ್ಟೆ ಇಲ್ಲ: ಜಿಲ್ಲೆಯಲ್ಲಿ ಭತ್ತ, ಮಾವು, ತೆಂಗು, ರಾಗಿ ಬೆಳೆಯುತ್ತಿದ್ದು, ಮಾರಾಟಕ್ಕೆ ತಾಲೂಕು ಕೇಂದ್ರಗಳಲ್ಲಿ ಸಣ್ಣ ಮಾರುಕಟ್ಟೆಗಳಿದ್ದು, ಅಗತ್ಯ ಬೆಲೆ ಸಿಗುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಮೆಗಾ ಮಾರುಕಟ್ಟೆ ಮತ್ತು ಮಾರುಕಟ್ಟೆ ಟರ್ವಿುನಲ್ ನಿರ್ಮಾಣ ನಿಟ್ಟಿನಲ್ಲಿ ಘೊಷಣೆ ಮಾಡಬೇಕು ಎನ್ನುವ ಬೇಡಿಕೆ ಇಲ್ಲಿನ ರೈತ ವಲಯದ್ದು.

ರೈತರು, ಬಡವರ ಪರವಾದ ಬಜೆಟ್ ಮಂಡಿಸಿದ್ದಾರೆ. ಚನ್ನಪಟ್ಟಣದ ಕೆರೆ ತುಂಬಿಸುವ ಯೋಜನೆ ಮಾದರಿಯಾಗಿ ಇಟ್ಟುಕೊಂಡು ರಾಜ್ಯಕ್ಕೆ ವಿಸ್ತರಣೆ ಮಾಡುವ ಯೋಜನೆ ಘೊಷಿಸಿದ್ದಾರೆ. ಆದರೆ, ಚನ್ನಪಟ್ಟಣಕ್ಕೆಂದೇ ಯಾವುದೇ ಬೃಹತ್ ಯೋಜನೆ ನೀಡಿಲ್ಲವಾದರೂ ಇದರ ಹೊರತಾಗಿಯೂ ಕ್ಷೇತ್ರಕ್ಕೆ ಸಾಕಷ್ಟು ಯೋಜನೆ ತಂದಿದ್ದಾರೆ.

| ಎಸ್. ಗಂಗಾಧರ್ ಜಿಲಾ ್ಲಾಂಗ್ರೆಸ್ ಅಧ್ಯಕ್ಷ, ರಾಮನಗರ

ಇದು ದೇವೇಗೌಡರು ಮತ್ತು ಡಿ.ಕೆ.ಶಿವಕುಮಾರ್ ಅವರ ಕುಟುಂಬದ ಅಭಿವೃದ್ಧಿಗಾಗಿ ಪ್ರಕಟ ಮಾಡಿದ ಬಜೆಟ್. ಬಜೆಟ್ ಎಂದರೆ ಕೇವಲ ಘೊಷಣೆಯಲ್ಲ, ಅನುಷ್ಠಾನಕ್ಕೆ ತರಬೇಕು. ಕಳೆದ ಬಾರಿ ಜಿಲ್ಲೆಗೆ ಫಿಲಂ ಸಿಟಿ, ಚಿಣ್ಣರ ಪಾರ್ಕ್ ತರುವುದಾಗಿ ಘೊಷಣೆ ಮಾಡಿದ್ದರು. ಅವು ಎಲ್ಲಿ ಹೋಗಿವೆ. ಸಾಲಮನ್ನಾ ಆಗಿಯೇ ಹೋಯಿತು ಎಂದರೆ, ಎಷ್ಟು ರೈತರ ಸಾಲ ತೀರಿಸಿದ್ದಾರೆ.

| ಎಂ.ರುದ್ರೇಶ್ ಬಿಜೆಪಿ ಜಿಲ್ಲಾಧ್ಯಕ್ಷ

ಎಲ್ಲ ವರ್ಗಕ್ಕೂ ಅನುಕೂಲವಾಗುವ ಬಜೆಟ್ ಇದು. ವಿಶೇಷವಾಗಿ ಜಿಲ್ಲೆಗೆ ಒತ್ತು ಕೊಡಲಾಗಿದೆ. ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನ, ಮಂಚನಬೆಲೆ ಮತ್ತು ವೈಜಿ ಗುಡ್ಡ ಜಲಾಶಯಕ್ಕೆ ನೀರು ತುಂಬಿಸಿ 400 ಎಕರೆಗೆ ನೀರೊದಗಿಸುವದು, ಮಂಚನಬೆಲೆ ಜಲಾಶಯ ಕೆಳಭಾಗದಲ್ಲಿ ಉದ್ಯಾನವನ ಅಭಿವೃದ್ಧಿ, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗಿದೆ.

| ಎ.ಮಂಜುನಾಥ್ ಶಾಸಕ

ಡಾ.ಶಿವಕುಮಾರಶ್ರೀ ಹುಟ್ಟೂರಾದ ವೀರಾಪುರ ಅಭಿವೃದ್ಧಿಗೆ 25 ಕೋಟಿ ರೂ. ಬಿಡುಗಡೆ ಮಾಡಿದ್ದು, ಸಾಂಸ್ಕೃತಿಕ ಪಾರಂಪರಿಕ ಕೇಂದ್ರ ಮಾಡಲು ಹೊರಟ್ಟಿದ್ದಾರೆ. ಯಾವ ರೀತಿ ಅಭಿವೃದ್ಧಿ ಪಡಿಸುತ್ತಾರೆ ನೋಡೋಣ. ಅದರ ಬದಲು ಮಾಗಡಿ ತಾಲೂಕಿನಲ್ಲೇ ಸ್ಥಾಪಿಸಲು ಉದ್ದೇಶಿಸಿರುವ ಸಂಸ್ಕೃತ ವಿವಿ ಕಾರ್ಯಾರಂಭಕ್ಕೆ ಕ್ರಮ ಕೈಗೊಂಡು ಡಾ.ಶಿವಕುಮಾರ ಸ್ವಾಮೀಜಿ ಹೆಸರಿಟ್ಟಿದ್ದರೆ ಗೌರವ ಸಿಗುತ್ತಿತ್ತು.

| ಬಾಲಕೃಷ್ಣ ಮಾಜಿ ಶಾಸಕ

ಶಿವಕುಮಾರ ಸ್ವಾಮೀಜಿ ಹುಟ್ಟೂರು ವೀರಾಪುರ ಗ್ರಾಮದ ಅಭಿವೃದ್ಧಿಗೆ 25 ಕೋಟಿ ರೂ. ಘೋಷಿಸಿರುವುದು ಗ್ರಾಮಸ್ಥರಲ್ಲಿ ಇಂದಿನ ಬಜೆಟ್ ಸಂತಸ ತಂದಿದೆ. ಸರ್ಕಾರ ಶೀಘ್ರವಾಗಿ ಕಾರ್ಯೋನ್ಮುಖವಾಗಿ ಘೋಷನೆಯನ್ನು ಜಾರಿಮಾಡಿ ಸಿದ್ಧಗಂಗಾ ಮಠದಂತೆ ಅಭಿವೃದ್ಧಿಪಡಿಸಲಿ.

| ಶ್ರೀ ಮಹಂತ ಸ್ವಾಮೀಜಿ, ಪೀಠಾಧ್ಯಕ್ಷರು ಗದ್ದುಗೆಮಠ, ಸೋಲೂರು ಹೋಬಳಿ.