ಮಾಂಸದಂಗಡಿ ತೆರವಿಗೆ ಮಾಲೀಕರ ಪ್ರತಿರೋಧ

ರಾಣೆಬೆನ್ನೂರ: ನಗರದ ಮೇಡ್ಲೇರಿ ವೃತ್ತದ ಬಸ್ ನಿಲ್ದಾಣ ರಸ್ತೆಯ ಈಶ್ವರ ದೇವಸ್ಥಾನದ ಎದುರು ಅನಧಿಕೃತವಾಗಿ ಹಾಕಿಕೊಂಡಿರುವ ಕೋಳಿ ಮಾಂಸದಂಗಡಿಗಳನ್ನು ತೆರವುಗೊಳಿಸಲು ಬಂದ ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಂಗಡಿಗಳ ಮಾಲೀಕರು ವಾಪಸ್ ಕಳುಹಿಸಿದ ಘಟನೆ ಮಂಗಳವಾರ ನಡೆಯಿತು.

ಅನಧಿಕೃತ ಕೋಳಿ ಮಾಂಸದಂಗಡಿಗಳಿಂದ ಈ ಭಾಗದಲ್ಲಿ ತೊಂದರೆ ಉಂಟಾಗುತ್ತಿದೆ. ಸ್ವಚ್ಛತೆ ಕಾಪಾಡದ ಹಿನ್ನೆಲೆಯಲ್ಲಿ ಗಬ್ಬು ನಾರುತ್ತಿದೆ. ಇದರಿಂದ ಅಕ್ಕಪಕ್ಕದ ಅಂಗಡಿಯವರಿಗೆ, ಶಾಲಾ-ಕಾಲೇಜ್ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ಆದ್ದರಿಂದ ಮಾಂಸದಂಗಡಿಗಳನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಜು. 29ರಂದು ನಗರಸಭೆ ಆಯುಕ್ತರಿಗೆ ಸಾರ್ವಜನಿಕರು ಮನವಿ ಸಲ್ಲಿಸಿದ್ದರು.

ನಗರಸಭೆ ಆಯುಕ್ತರು ಅಂಗಡಿಗಳನ್ನು ತೆರವುಗೊಳಿಸುವಂತೆ ಕೋಳಿ ಮಾಂಸದಂಗಡಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದರು. ಆದರೆ, ಮಾಲೀಕರು ಒಪ್ಪಿರಲಿಲ್ಲ. ಆದ್ದರಿಂದ ಮಂಗಳವಾರ ಅಂಗಡಿಗಳನ್ನು ತೆರವುಗೊಳಿಸುವಂತೆ ನಗರಸಭೆ ಆಯುಕ್ತರು ಆದೇಶಿಸಿದ್ದರು. ಆದರೆ, ಅಂಗಡಿ ತೆರವುಗೊಳಿಸುವ ವಿಷಯ ತಿಳಿದ ಮಾಲೀಕರು ಬೆಳ್ಳಂಬೆಳಗ್ಗೆ ಸ್ಥಳಕ್ಕೆ ಬಂದು ಅಂಗಡಿ ತೆರವಿಗೆ ವಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ ನಗರಸಭೆ ಸಿಬ್ಬಂದಿ ವಾಪಸ್ ತೆರಳಿದರು.

ಸಾರ್ವಜನಿಕರಿಂದ ಪ್ರತಿಭಟನೆ: ನಗರಸಭೆಯವರು ಅಂಗಡಿ ತೆರವುಗೊಳಿಸದೆ ವಾಪಸ್ ಆಗಿರುವುದನ್ನು ಖಂಡಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಕೋಳಿ ಮಾಂಸದಂಗಡಿಗಳನ್ನು ಶಾಶ್ವತವಾಗಿ ಬಂದ್ ಮಾಡಿಸಲೇಬೇಕು ಎಂದು ಆಗ್ರಹಿಸಿದರು.

ಅಂಗಡಿ ಮಾಲೀಕರು ಮಾಂಸ ಮಾರಾಟದ ಸಾಮಗ್ರಿಗಳನ್ನು ಅಂಗಡಿಯೊಳಗೆ ಇಟ್ಟು ಕೀಲಿ ಹಾಕಿಕೊಂಡು ಹೋಗಿದ್ದಾರೆ. ಇದನ್ನು ನೋಡಿದರೆ ಮುಂದಿನ ದಿನದಲ್ಲಿ ಮತ್ತೆ ಮಾಂಸ ಮಾರಾಟ ಮಾಡುವ ಲಕ್ಷಣಗಳಿವೆ. ಆದ್ದರಿಂದ ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಅಂಗಡಿಗಳನ್ನು ತೆರವುಗೊಳಿಸಬೇಕು. ಬೇರೆಯವರಿಗೆ ತರಕಾರಿ ಸೇರಿ ಇತರ ಸಾಮಗ್ರಿ ಮಾರಾಟಕ್ಕೆ ಅನುಕೂಲ ಮಾಡಿಕೊಡಬೇಕು. ಅಲ್ಲಿಯವರೆಗೆ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದರು.

ಬಿಜೆಪಿ ತಾಲೂಕು ಅಧ್ಯಕ್ಷ ವಿಶ್ವನಾಥ ಪಾಟೀಲ, ಪ್ರಮುಖರಾದ ಭಾರತಿ ಜಂಬಗಿ, ರಾಯಣ್ಣ ಮಾಕನೂರ, ಮಂಜುನಾಥ ಗೌಡಶಿವಣ್ಣನವರ, ಗಿರೀಶ ಮಾಗನೂರ, ರಮೇಶ ಕರ್ಜಗಿ, ಹನುಮಂತಪ್ಪ ಕಬ್ಬಾರ, ವೀರೇಶ ಅಂಗಡಿ, ರಾಜು ಬಣಕಾರ, ರಮೇಶ ಕೂಸಗೂರ, ಡಿ.ಕೆ. ರಾಜನಹಳ್ಳಿ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

ಮಾತಿನ ಜಟಾಪಟಿ: ಮಾಂಸದಂಗಡಿ ತೆರವುಗೊಳಿಸುವ ಕುರಿತು ಸಾರ್ವಜನಿಕರ ಹಾಗೂ ಅಂಗಡಿ ಮಾಲೀಕರ ನಡುವೆ ಮಾತಿನ ಜಟಾಪಟಿ ನಡೆಯಿತು. ‘ನಾವು ಮತ್ತೆ ಅಂಗಡಿ ತೆರೆಯುತ್ತೇವೆ’ ಎಂದು ಮಾಲೀಕರು ಸವಾಲು ಹಾಕಿದರೆ, ‘ಅದು ಹೇಗೆ ತೆರೆಯುತ್ತೀರಿ ನಾವು ನೋಡುತ್ತೇವೆ’ ಎಂದು ಸಾರ್ವಜನಿಕರು ಮರು ಸವಾಲು ಹಾಕಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ವಣವಾಯಿತು. ಕೂಡಲೆ ಸ್ಥಳಕ್ಕೆ ಬಂದ ಡಿವೈಎಸ್ಪಿ ಬಿ. ಸುರೇಶ ಎರಡೂ ಗುಂಪಿನವರನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಬಂದ್ ಮಾಡಿರುವ ಮಾಂಸದಂಗಡಿಗಳನ್ನು ಪುನಃ ತೆರೆದರೆ, ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿ ಸಾರ್ವಜನಿಕರು ಪ್ರತಿಭಟನೆ ಹಿಂಪಡೆದರು.

ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಕೋಳಿ ಮಾಂಸದಂಗಡಿಗಳನ್ನು ಬಂದ್ ಮಾಡುವಂತೆ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದೇವು. ಆದರೆ, ಅವರು ತೆರವು ಮಾಡಿರಲಿಲ್ಲ. ಆದ್ದರಿಂದ ತೆರವುಗೊಳಿಸಲು ಮುಂದಾಗಿದ್ದೇವು. ಅದಕ್ಕೂ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹಿರಿಯ ಅಧಿಕಾರಿಗಳ ಸಲಹೆ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು.
| ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತ

Leave a Reply

Your email address will not be published. Required fields are marked *