More

  ಮಹೇಶ ಕೈಹಿಡಿದ ಟೊಮ್ಯಾಟೊ

  20 ಗುಂಟೆ ಭೂಮಿಯಲ್ಲಿ 12.5 ಲಕ್ಷ ರೂ. ವೌಲ್ಯದ ಇಳುವರಿ
  ಉಳ್ಳಾಗಡ್ಡಿ-ಖಾನಾಪುರ: ಪ್ರಸ್ತುತ ಮಾರುಕಟ್ಟೆಯಲ್ಲಿ ದರ ದೃಷಿಯಿಂದ ಬಿರುಗಾಳಿ ಎಬ್ಬಿಸಿರುವ ಕೆಂಪು ರತ್ನ ಟೊಮ್ಯಾಟೊ ಬೆಳೆದು ಹೆಬ್ಬಾಳ ಗ್ರಾಮದ ಯುವ ರೈತನೋರ್ವ ಲಕ್ಷ ಲಕ್ಷ ಆದಾಯ ಗಳಿಸಿದ್ದಾರೆ. ಮಹೇಶ ಗುರುಲಿಂಗಯ್ಯ ಹಿರೇಮಠ 20 ಗುಂಟೆ ಭೂಮಿಯಲ್ಲಿ ಬೆಳೆದ ಟೊಮ್ಯಾಟೊ ಸುಮಾರು 12.5 ಲಕ್ಷ ರೂ.ಆದಾಯ ತಂದುಕೊಟ್ಟಿದ್ದು, ಬರ ವಾತಾವರಣ ಸೃಷ್ಟಿಯಾಗಿರುವ ಕಾಲದಲ್ಲಿ ರೈತನನ್ನು ಆರ್ಥಿಕವಾಗಿ ಗೆಲ್ಲಿಸಿದೆ.
  4 ವರ್ಷಗಳಿಂದ ಟೊಮೆಟೊ ಬೆಳೆದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂಥ ಪರಿಸ್ಥಿತಿ ಇತ್ತು. ಉತ್ತಮ ಬೆಲೆ ಸಿಗದೆ ಹಾಕಿದ ಬಂಡವಾಳವೂ ವಾಪಸ್ ಬಾರದ ಪರಿಸ್ಥಿತಿ ಬಂದೊದಗಿದರೂ ರೈತ ಮಹೇಶ ಎದೆಗುಂದಲಿಲ್ಲ. ನಂಬಿದ ಭೂಮಿತಾಯಿ ಕೈಬಿಡುವುದಿಲ್ಲ ಎಂಬ ವಿಶ್ವಾಸದಲ್ಲಿ ಈ ಬಾರಿಯೂ 20 ಗುಂಟೆ ಭೂಮಿಯಲ್ಲಿ ಟೊಮ್ಯಾಟೊ ಬೆಳೆದರು. ಮಾರ್ಚ್ ತಿಂಗಳ ಆರಂಭದಲ್ಲಿ 3,700 ಟೊಮ್ಯಾಟೊ ಸಸಿ ನಾಟಿ ಮಾಡಿದರು. ಕೊಳವೆ ಬಾವಿ ಮೂಲಕ ಹನಿ ನೀರಾವರಿ ಪದ್ಧತಿಯಡಿ ನೀರುಣಿಸಿದರು. ಸಮಯಕ್ಕೆ ಸರಿಯಾಗಿ ಸಗಣಿ ಗೊಬ್ಬರ, ಅಗತ್ಯ ಇದ್ದಾಗ ರಸಗೊಬ್ಬರ, ಕೀಟನಾಶಕ ಸಿಂಪಡಿಸಿ ಸುಮಾರು 45 ದಿನ ಜತನ ಮಾಡಿದರು. ಮಾರುಕಟ್ಟೆಯಲ್ಲಿ ಬೆಲೆ ಏರುವುದಕ್ಕೂ ಮಹೇಶ ಬೆಳೆದ ಟೊಮ್ಯಾಟೊ ಕಟಾವಿಗೆ ಬರುವುದಕ್ಕೂ ಸಾಟಿಯಾಯಿತು. ನಿರೀಕ್ಷೆಗೂ ಮೀರಿ ಬೆಲೆ ದಕ್ಕಿದ್ದರಿಂದ ಮಹೇಶ ಕೈತುಂಬ ಆದಾಯ ಗಳಿಸಿದ್ದು, ಕಳೆದುಕೊಂಡಲ್ಲೇ ಶ್ರದ್ಧೆಯಿಂದ ಹುಡುಕಿದರೆ ಏನನ್ನಾದರೂ ಪಡೆಯಬಹುದು ಎಂಬುದಕ್ಕೆ ಮಹೇಶ ಕೃಷಿ ಪ್ರೇಮವೇ ಸಾಕ್ಷಿ.
  ಆರಂಭದಲ್ಲಿ 20 ಕೆಜಿಗೆ 700 ರಿಂದ 800 ರೂ.ದರ ಇತ್ತು. ನಂತರ 1,700 ರೂ.ಗಳಿಂದ 1,880 ರೂ. ದರ ಸಿಗುತ್ತಿದೆ. ಪ್ರತಿ ಕೆಜಿಗೆ 85 ರಿಂದ 90 ರೂ. ದರ ಸಿಗುತ್ತಿದ್ದು, ಈವರೆಗೆ ಸುಮಾರು 20.5 ಟನ್ ಇಳುವರಿ ಬಂದಿದೆ. ಜುಲೈ ತಿಂಗಳಾಂತ್ಯದವರೆಗೆ 2 ಟನ್ ಇಳುವರಿ ಬರುವ ಸಾಧ್ಯತೆ ಇದೆ. ಇನ್ನೂ ಸುಮಾರು 2 ಲಕ್ಷ ರೂ.ಲಾಭಾಂಶ ಬರುವ ಸಾಧ್ಯತೆ ಇದೆ ಎಂದು ಮಹೇಶ ತಿಳಿಸಿದ್ದಾರೆ.
  ಮುಂಜಾಗ್ರತೆಯೇ ಯಶಸ್ಸಿನ ಗುಟ್ಟು: ಸುಮಾರು 4 ಎಕರೆ ಭೂಮಿಯಲ್ಲಿ ಕುಟುಂಬ ಸದಸ್ಯರ ಸಹಕಾರದ ಮೇರೆಗೆ ಕೃಷಿ ಕಾಯಕದಲ್ಲಿ ತೊಡಗಿದ್ದು 2 ಎಕರೆ ಭೂಮಿಯಲ್ಲಿ ಕಬ್ಬು, 1 ಎಕರೆಯಲ್ಲಿ ಮೆಣಸಿನಕಾಯಿ, ಅರ್ಧ ಎಕರೆಯಲ್ಲಿ ಹಾಗಲಕಾಯಿ ಮತ್ತು ಟೊಮ್ಯಾಟೊ ಬೆಳೆದಿದ್ದಾರೆ. ಟೊಮ್ಯಾಟೊ ಬೆಳೆಯಲು 2 ಲಕ್ಷ ರೂ. ಖರ್ಚು ಮಾಡಿರುವುದಾಗಿ ಮಹೇಶ ವಿವರಿಸಿದ್ದಾರೆ. ಬಿಎ ಪದವೀಧರರಾದ ಮಹೇಶಗೆ ಕೃಷಿಯಲ್ಲಿ ಉತ್ತಮ ಲಾಭ ಪಡೆಯಲು ಗೋಟೂರ ಗ್ರಾಮದ ಕೃಷಿ ಸಲಹೆಗಾರ ಸುರೇಶ ಆಸೋದೆ ಅವರು ನಿರಂತರ ಮಾರ್ಗದರ್ಶನ ಮಾಡಿದ್ದಾಗಿ ಮಹೇಶ ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts