ಮಹಿಳೆ ಆವಾಜ್​ಗೆ ತಣ್ಣಗಾದ ಪೊಲೀಸ್ ಖದರ್ !

ಹುಬ್ಬಳ್ಳಿ: ಇನ್ನೋವಾ ಕಾರಿನ ಮೇಲೆ ಪೊಲೀಸ್ ಹಾಗೂ ಪ್ರೆಸ್ ಎಂಬ ಸ್ಟಿಕ್ಕರ್ ಅಂಟಿಸಿಕೊಂಡಿದ್ದ ಮಹಿಳೆ ಆವಾಜ್​ಗೆ ಪೊಲೀಸ್ ಅಧಿಕಾರಿಗಳೇ ತಣ್ಣಗಾದ ಪ್ರಸಂಗ ಹಳೇ ಹುಬ್ಬಳ್ಳಿಯ ಚನ್ನಪೇಟ ರಸ್ತೆಯ ದರ್ಗಾ ಎದುರು ಶನಿವಾರ ನಡೆಯಿತು.

ದರ್ಗಾ ಉರುಸು ವೇಳೆ ಮೊದಲು ಪೂಜೆ, ಪ್ರಾರ್ಥನೆ ಸಲ್ಲಿಸುವ ಸಂಬಂಧ ಸಂಬಂಧಿಕರ ನಡುವೆ ಜಗಳ ಏರ್ಪಟ್ಟಿತ್ತು. ಆ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜಗಳ ನಿಯಂತ್ರಿಸಿದರು. ಇದೇ ವೇಳೆ ಮಹಾರಾಷ್ಟ್ರದ ಪುಣೆಯಿಂದ ಬಂದಿದ್ದ ಮಹಿಳೆಯೊಬ್ಬರ ಇನ್ನೋವಾ ಕಾರಿನ (ಎಂಎಚ್14 ಬಿಕೆ 4020) ಮೇಲೆ ಅಂಟಿಸಿದ್ದ ಪೊಲೀಸ್ ಹಾಗೂ ಪ್ರೆಸ್ ಎಂಬ ಎರಡೂ ಸ್ಟಿಕರ್ ಗಮನಿಸಿದ್ದಾರೆ. ಆ ಬಗ್ಗೆ ಪ್ರಶ್ನಿಸಿದ ಪೊಲೀಸರಿಗೇ ಮಹಿಳೆ ಆವಾಜ್ ಹಾಕಿದರು.

‘ನಾನು ಪೊಲೀಸ್ ಕಮಿಷನರ್​ಗೆ ಹೇಳ್ತೀನಿ, 10 ಲಕ್ಷ ರೂ. ಕೊಟ್ಟು ಕಾರು ತಂದಿದ್ದೇನೆ. 10 ಪೈಸೆ ಅಲ್ಲ’ ಎಂದು ಆ ಮಹಿಳೆ ಪೊಲೀಸರಿಗೇ ಧಮ್ಕಿ ಹಾಕಿದ್ದಳು. ಇಷ್ಟೆಲ್ಲ ಮಾತನಾಡುತ್ತಿದ್ದರೂ ಪೊಲೀಸರು ಮಾತ್ರ ಕಥೆ ಕೇಳುತ್ತ ನಿಂತಿದ್ದು ಸಾರ್ವಜನಿಕರಿಗೆ ಹಾಸ್ಯಾಸ್ಪದವಾಗಿ ಕಾಣುತ್ತಿತ್ತು.

ಯಾವುದೇ ದಾಖಲೆ ಇಲ್ಲದೇ ಪೊಲೀಸ್ ಹಾಗೂ ಪ್ರೆಸ್ ಎಂದು ನಿಯಮ ಉಲ್ಲಂಘಿಸಿ ಸ್ಟಿಕರ್ ಅಂಟಿಸಿಕೊಂಡಿದ್ದರೂ ಆಕೆಯನ್ನು ಪೊಲೀಸರು ಬಿಟ್ಟು ಕಳುಹಿಸಿದರು. ಪ್ರೆಸ್ ಎಂದು ಬರೆದಿದ್ದ ಮತ್ತೊಂದು ಕಾರಿನಲ್ಲಿ ಮಹಿಳೆ ಹೊರಟು ಹೋದರೂ ಆ ಕಾರಿನ ದಾಖಲೆಯನ್ನೂ ಪರಿಶೀಲಿಸುವ ಗೋಜಿಗೆ ಪೊಲೀಸರು ಹೋಗಲಿಲ್ಲ.

ಇನ್ನೋವಾ ಕಾರನ್ನು ವಶಪಡಿಸಿಕೊಂಡಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಇನ್ನೂ ಪ್ರಕರಣ ದಾಖಲಾಗಿಲ್ಲ ಎಂದು ಕಸಬಾಪೇಟ ಠಾಣೆ ಪೊಲೀಸರು ತಿಳಿಸಿದರು.

ಎಲ್ಲಿಂದಲೋ ಬಂದ ಮಹಿಳೆ ಧಮ್ಕಿ ಹಾಕುವ ಧಾಟಿಯಲ್ಲಿ ಮಾತನಾಡಿದರೂ, ಖಾಸಗಿ ವಾಹನದ ಮೇಲೆ ‘ಪೊಲೀಸ್’ ಎಂದು ಬರೆದುಕೊಂಡಿದ್ದರೂ, ವಾಹನ ದಾಖಲೆ ತೋರಿಸದಿದ್ದರೂ ಪೊಲೀಸರೇಕೆ ಖದರ್ ತೋರಿಸಲಿಲ್ಲ ? ದಾಖಲೆ, ನೋಂದಣಿ ಇಲ್ಲದ ಮತ್ತೊಂದು ವಾಹನ ಏಕೆ ವಶಕ್ಕೆ ಪಡೆಯಲಿಲ್ಲ ಎಂಬುದು ಸಾರ್ವಜನಿಕರಿಗಂತೂ ಅರ್ಥವಾಗಲಿಲ್ಲ !