ಮಹಿಳೆ ಅಸ್ತಿತ್ವ ನಾಶಕ್ಕೆ ಹುನ್ನಾರ

ಕೋಲಾರ: ಜಾತಿಯ ಕಾರಣಕ್ಕಾಗಿಯೇ ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮಹಿಳೆ ಅಸ್ತಿತ್ವ ನಾಶಮಾಡುವ ಹುನ್ನಾರ ನಡೆಯುತ್ತಿದೆ ಎಂದು ಬೆಂಗಳೂರು ವಿವಿ ಉಪನ್ಯಾಸಕಿ ಡಾ. ಸುಮಿತ್ರಾ ಹೇಳಿದರು.

ಕೋಲಾರ ತಾಲೂಕಿನ ಮಂಗಸಂದ್ರದಲ್ಲಿರುವ ಕೋಲಾರ ಸ್ನಾತಕೋತ್ತರ ಕೇಂದ್ರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಸ್ನಾತಕೋತ್ತರ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ್ದ ದಲಿತ ಮಹಿಳಾ ಸಾಹಿತ್ಯ ಕಮ್ಮಟದಲ್ಲಿ ಎರಡನೇ ದಿನವಾದ ಭಾನುವಾರ ದಲಿತ ಮಹಿಳೆ ಜನಪರ ಚಳವಳಿ ಕುರಿತು ಮಾತನಾಡಿ, ಚಳವಳಿ ನಾಯಕರನ್ನು ರಾಜಕೀಯ ಪಕ್ಷಗಳು ಹಿಡಿದಲ್ಲಿಟ್ಟುಕೊಂಡು ಛಿದ್ರಗೊಳಿಸಿವೆ ಎಂದರು.

ಪುರುಷ ಪ್ರಧಾನ ಸಮಾಜ ಮತ್ತ ಮನು ಸಿದ್ಧಾಂತದ ಕನ್ನಡಿ ಇಟ್ಟುಕೊಂಡು ಬೇರೆ ಕನ್ನಡಿಯಲ್ಲಿ ಮುಖ ನೋಡುವ ಪ್ರಯತ್ನ ಮಾಡದಿರುವುದರಿಂದ ಮಹಿಳೆ ತನ್ನನ್ನು ತಾನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.

40 ವರ್ಷದ ದಲಿತ ಚಳವಳಿಯಿಂದ ಅನೇಕ ಬದಲಾವಣೆಯಾಗಿದೆ ಎಂದು ಬೊಬ್ಬೆ ಹೊಡೆಯುವವರು ದಲಿತ ಚಳವಳಿ ಬದಲಿಸಿದ ಮಾರ್ಗ, ತಿರಸ್ಕರಿಸಿದ ವಿಷಯ ಯಾವುದು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಹೋರಾಟದಲ್ಲಿ ದಲಿತ ಮಹಿಳೆ ಪಾತ್ರದ ಯಾವುದೇ ಚಾರಿತ್ರಿಕವಾದ ದಾಖಲೆಯನ್ನು ಪುರುಷ ಸಮಾಜ ದಾಖಲಿಸಿಲ್ಲ ಎಂದರು.

ದಲಿತ ಚಳವಳಿ ಕೆಲ ಕಾರಣಗಳಿಂದ ಒಡೆದುಹೋಯಿತು. ಹೆಣ್ಣಿಗೆ ದಲಿತ ಸಂಘಟನೆಯಲ್ಲಿ ಯಾವ ಸ್ಥಾನವನ್ನೂ ನೀಡದೆ ಕೇವಲ ಸಂಖ್ಯೆಗಾಗಿ ಕರೆದು ಕೂರಿಸಿದ್ದರಿಂದ ಸಮರ್ಥ ಮಹಿಳಾ ನಾಯಕತ್ವ ಕಟ್ಟಲು ಸಾಧ್ಯವಾಗಿಲ್ಲ. 1970ರಲ್ಲಿ ಹುಣಸಿಕೋಟೆ ಅನಸೂಯಮ್ಮ ಅತ್ಯಾಚಾರ ಪ್ರಕರಣ, ಶ್ರೀನಿವಾಸಪುರದ ಮರಸನಪಲ್ಲಿ ಭೂ ಹೋರಾಟ, ನಾಗಸಂದ್ರ ಭೂ ಹೋರಾಟದಲ್ಲಿ ದಲಿತ ಮಹಿಳೆಯರು ಹೆಚ್ಚು ಪಾಲ್ಗೊಂಡು ನ್ಯಾಯ ಪಡೆಯಲು ಸಾಧ್ಯವಾಗಿತ್ತು ಎಂದು ಸ್ಮರಿಸಿದರು.

ಚಿಂತಕ ಡಾ.ಆರ್. ಚಲಪತಿ ಮಾತನಾಡಿ, ಮೇಲು, ಕೀಳುಗಳ ಕುರಿತು ಸಾಹಿತ್ಯ, ಸಂಸ್ಕೃತಿಯಲ್ಲಿ ಚರ್ಚೆಯಾಗದಿದ್ದರೆ ಅಂತಹ ಸಾಹಿತ್ಯ, ಸಂಸ್ಕೃತಿಯೂ ದಬ್ಬಾಳಿಕೆಯೇ. ಶೋಷಿತ ವರ್ಗಗಳನ್ನು ಮೇಲ್ವರ್ಗಗಳಿಗೆ ಸರಿಸಮನಾಗಿಸುವುದು, ಅವಮಾನ ಕಳೆಯುವುದು ಡಾ.ಬಿ.ಆರ್. ಅಂಬೇಡ್ಕರ್ ನೀಡಿದ ಮೀಸಲಾತಿ ಉದ್ದೇಶ. ಆದರೆ ಇಂದು ಸಂವಿಧಾನವನ್ನೇ ಅಪಮಾನಿಸುವ, ಬದಲಾಯಿಸುವ ಹುನ್ನಾರ ನಡೆಯುತ್ತಿದೆ ಎಂದು ಟೀಕಿಸಿದರು.

ಜಾತಿಯಲ್ಲಿದೆ ಸಮಸ್ಯೆ: ದಲಿತ ಮಹಿಳೆ ಸಮಸ್ಯೆ ಇರುವುದು ಜಾತಿಯಲ್ಲಿ. ಚಳವಳಿಗಳು ಮಹಿಳೆಗೆ ಎಷ್ಟರ ಮಟ್ಟಿಗೆ ನ್ಯಾಯ ನೀಡಿದೆ ಎಂದರೆ ಶೂನ್ಯ ಸಂಪಾದನೆ. ಪುರುಷರಿಗೆ ನೀಡಿದ ಆದ್ಯತೆಯನ್ನು ಮಹಿಳೆಗೆ ನೀಡಿಲ್ಲ. ಒಳಗೆ ಬೇರು ಕತ್ತರಿಸಿ ಮೇಲೆ ನೀರು ಚಿಮುಕಿಸುವ ಕೆಲಸ ಆಗುತ್ತಿದೆ. ದಲಿತ ಮಹಿಳೆ ಮನು ಸಂಸ್ಕೃತಿ ಮತ್ತು ಪುರುಷ ಪ್ರಧಾನ ಆಲೋಚನೆಗಳ ಇಬ್ಬಗೆಯ ಅಲುಗಿನಿಂದ ಹೊರಬಂದು ತಮ್ಮನ್ನು ತಾವು ನಾವು ಉಳಿಸಿಕೊಳ್ಳಬೇಕು. ದಲಿತರು ಹೆಚ್ಚಾಗಿರುವ ಕೋಲಾರ ಜಿಲ್ಲೆಯಲ್ಲಿ ನಿರಂತರ ಹಲ್ಲೆ ನಡೆಯುತ್ತಿದ್ದರೂ ದಲಿತ ಪ್ರಜ್ಞೆ ಪ್ರತಿಕ್ರಿಯಿಸುತ್ತಿಲ್ಲ. ರಾಜಕೀಯ ಕಾರಣಕ್ಕೆ ಒಂದಾಗುವ ದಲಿತರು ವೈಯಕ್ತಿಕ ಕಾರಣ ಪ್ರಧಾನವಾಗಿಟ್ಟುಕೊಂಡು ಸಮುದಾಯದ ಒಳಿತು ಮರೆಯುತ್ತಾ ಹೋದರೆ ಮುಂದೆ ಬಹುದೊಡ್ಡ ಸಮಸ್ಯೆ ಎದುರಿಸಬೇಕಾದೀತು ಎಂದು ಸುಮಿತ್ರಾ ಎಚ್ಚರಿಸಿದರು.

Leave a Reply

Your email address will not be published. Required fields are marked *