ಮಹಿಳೆಯರ ಶಿಕ್ಷಣಕ್ಕೆ ಆದ್ಯತೆ

ಹುಬ್ಬಳ್ಳಿ: ಸಾಹಿತ್ಯ, ಸಾಂಸ್ಕೃತಿಕ, ಧಾರ್ವಿುಕ ಯಾವುದೇ ಚಟುವಟಿಕೆಗಳನ್ನು ಸಂಘಟಿಸುವಲ್ಲಿ ಮೂರುಸಾವಿರ ಮಠದ ಹಿಂದಿನ ಸ್ವಾಮೀಜಿ ಶ್ರೀ ಗಂಗಾಧರ ರಾಜಯೋಗೀಂದ್ರರು ಅಗ್ರಗಣ್ಯರಾಗಿದ್ದರು, ಅವರ ಸಾಹಿತ್ಯಿಕ ಕಾರ್ಯಗಳು ಇತರರಿಗೆ ಮಾದರಿಯಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು.

ಇಲ್ಲಿಯ ಮೂರುಸಾವಿರಮಠ ಶಾಲೆ ಆವರಣದ ಸಭಾಭವನದಲ್ಲಿ ಭಾನುವಾರ ಲಿಂ. ಡಾ. ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳ 16ನೇ ಪುಣ್ಯಸ್ಮರಣೋತ್ಸವ ಹಾಗೂ ಡಾ. ಮೂಜಗಂ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳೆಯರ ಶಿಕ್ಷಣಕ್ಕೆ ಆದ್ಯತೆ ನೀಡಿದ್ದ ಅವರು, ನಗರದಲ್ಲಿ ಮಹಿಳಾ ಕಾಲೇಜನ್ನು ಅಚ್ಚುಕಟ್ಟಾಗಿ ಬೆಳೆಸಿದರು. ರಾಜ್ಯದಲ್ಲಿ ಮಹಿಳಾ ವಿವಿ ಸ್ಥಾಪನೆಗೂ ಅವರು ಒತ್ತಾಯಿಸುತ್ತ ಬಂದಿದ್ದರು. ಸಮಾಜದಲ್ಲಿ ಸೌಹಾರ್ದತೆ ಬೆಳೆಸುವುದರೊಂದಿಗೆ ಸಮಾಜ ಮುನ್ನಡೆಸುವ ಶಕ್ತಿ, ಸಂಘಟನೆ ಅವರಲ್ಲಿತ್ತು ಎಂದರು.

ವಿದೇಶದಲ್ಲಿ ಧರ್ಮ ಜಾಗೃತಿ ಹೆಚ್ಚು ಬೆಳೆಯುತ್ತಿದೆ. ಅಮೆರಿಕೆಗೆ ಇಲ್ಲಿಂದ ಹೋದವರು ವಾರಕ್ಕೊಮ್ಮೆ ಒಟ್ಟಾಗಿ ಸೇರಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಾರೆ. ಆದರೆ, ಅಂತಹ ಜಾಗೃತಿ ಇಲ್ಲಿ ಕಂಡು ಬರುತ್ತಿಲ್ಲ. ಮೂಜಗಂ ಸಾಹಿತ್ಯ ಪ್ರಶಸ್ತಿ ಪ್ರದಾನ, ಸ್ಮರಣೆ ಕಾರ್ಯಕ್ರಮಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಬೇಕಿತ್ತು. ಬಸವ ತತ್ತ್ವ, ಸಂದೇಶಗಳು ಹೆಚ್ಚು ಪ್ರಚಾರಗೊಳ್ಳಬೇಕಾಗಿದೆ. ಬಸವ ಸಂದೇಶಗಳು ಚರ್ಚೆಯಾಗಬೇಕು ಎಂದು ಹೇಳಿದರು.

ಮಾಜಿ ಸಚಿವ ಬಸವರಾಜ ಹೊರಟ್ಟಿ ಮಾತನಾಡಿ, ಮೂಜಗಂ ಅವರ ಸಾಹಿತ್ಯ ಕೃಷಿ ಮೆಚ್ಚುವಂತಹದು. ಅವರು ಮಠ ಹಾಗೂ ಹೊರಗಿನ ವಿರೋಧ, ಕಿರಿಕಿರಿಗಳನ್ನು ಮೆಟ್ಟಿ ನಿಂತರು. ಅವರಿಗೂ ಸಾಕಷ್ಟು ಹಿತಶತ್ರುಗಳಿದ್ದರು. ಅದರಲ್ಲೇ ಅವರು ಬದ್ಧತೆಯಿಂದ ಮಠವನ್ನು ಚೆನ್ನಾಗಿ ಕಟ್ಟಿ ಬೆಳೆಸಿದರು ಎಂದರು.

ಜಾತಿ, ಧರ್ಮಗಳನ್ನು ಮೀರಿ ಮಠ ಕಟ್ಟಬೇಕಾಗಿದೆ. ಮೂರುಸಾವಿರ ಮಠದಲ್ಲಿ ಮತ್ತೆ ಹಿಂದಿನ ಮೆರುಗು ಬರಬೇಕು ಎಂದರು.

ಮೂಜಗಂ ಪ್ರಶಸ್ತಿ ನನ್ನ ಭಾಗ್ಯ: ಶ್ರೀಮಠದಿಂದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಬಿ.ವಿ. ಶಿರೂರ, ಎಲೆಮರೆ ಕಾಯಿಯಂತೆ ಸಾಹಿತ್ಯ ಸೇವೆಯಲ್ಲಿ ತೊಡಗಿದ್ದ ನನ್ನನ್ನು ಗುರುತಿಸಿ ಈ ಪ್ರಶಸ್ತಿ ನೀಡಿರುವುದು ನನ್ನ ಭಾಗ್ಯ ಎಂದರು.

ಮೂಜಗಂ ಅವರು ಸಾಹಿತಿಗಳಿಗೆ ಪ್ರೇರಣಾದಾಯಿ, ಅವರ ಸಂಪರ್ಕ ಅಪಾರವಾಗಿತ್ತು. ಧಾರ್ವಿುಕ, ಸಾಮಾಜಿಕ ಯಾವುದೇ ಸಮಸ್ಯೆ ಇದ್ದರೂ ಸುಲಭದಲ್ಲಿ ಅದನ್ನು ಪರಿಹರಿಸುತ್ತಿದ್ದರು. ಅವರೊಂದಿಗಿನ ಒಡನಾಟದಿಂದ ಬಹಳಷ್ಟನ್ನು ಅರಿತುಕೊಂಡಿದ್ದೇನೆ ಎಂದು ಸ್ಮರಿಸಿದರು.

ಶ್ರವಣಬೆಳಗೋಳ ಕುರಿತು ಜೈನ ಸಾಹಿತ್ಯ, ಲಿಂಗಾಯತ ಧರ್ಮಕ್ಕೆ ಸಂಬಂಧಿತ ಲೇಖನ ಹೀಗೆ ತಮ್ಮ ಹಲವು ಬರಹಗಳ ಬಗ್ಗೆ ಪ್ರಸ್ತಾಪಿಸಿದ ಶಿರೂರ, ವಚನ ಸಾಹಿತ್ಯದಲ್ಲಿ ಬರುವ ನುಲಿಯ ಚಂದಯ್ಯ ಕೂಡ ಮೂಲತಃ ಅರಸನಾಗಿದ್ದ, ಇದು ದಾಖಲೆಗಳಲ್ಲಿ ಇದೆ ಎಂದರು.

ಸಾರ್ಥಕವಾಗಿದೆ: ಡಾ. ಬಿ.ವಿ. ಶಿರೂರ 300ಕ್ಕೂ ಹೆಚ್ಚು ಸಂಶೋಧನಾ ಲೇಖನ, 11 ಅಭಿನಂದನಾ ಗ್ರಂಥ, 11 ಎಂಫಿಲ್, 18 ಪಿಎಚ್​ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಅಲ್ಲದೆ ಸಾಹಿತ್ಯ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಮೂಜಗಂ ಅವರೊಂದಿಗೆ ಒಡನಾಟ ಹೊಂದಿದ್ದವರು. ಅವರಿಗೆ ಮೂಜಗಂ ಪ್ರಶಸ್ತಿ ನೀಡಿರುವುದು ಸಾರ್ಥಕ ವಾದಂತಾಗಿದೆ ಎಂದು ಮೂರುಸಾವಿರ ಮಠದ ಶ್ರೀ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಗುರುಗಳಾದ ಮೂಜಗಂ ಅವರು ಲಿಂಗೈಕ್ಯರಾದ ಮರು ವರ್ಷದಿಂದಲೇ ಈ ಪ್ರಶಸ್ತಿ ನೀಡುತ್ತ ಬರಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದವರನ್ನೇ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿದೆ. ಡಾ. ಶಿರೂರ ಅವರನ್ನು ಡಾ. ಸಂಗಮೇಶ ಹಂಡಿಗಿ, ವೀರಣ್ಣ ರಾಜೂರ ಅವರಿದ್ದ ಹಿರಿಯರ ಸಮಿತಿ ಆಯ್ಕೆ ಮಾಡಿದೆ ಎಂದು ಮಾಹಿತಿ ನೀಡಿದರು. ಎರಡೆತ್ತಿನಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ವಿಧಾನ ಪರಿಷತ್ ಮಾಜಿ ಸದಸ್ಯರಾದ ಮೋಹನ ಲಿಂಬಿಕಾಯಿ, ವೀರಣ್ಣ ಮತ್ತಿಕಟ್ಟಿ, ಕೆಎಲ್​ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಹಾಗೂ ಸಮಾಜದ ಮುಖಂಡರು, ಶ್ರೀಮಠದ ಭಕ್ತರು, ವಿವಿಧ ಸೇವಾ ಸಮಿತಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಬೇಸರ ವ್ಯಕ್ತಪಡಿಸಿದ ಶ್ರೀಗಳು:ಮೂರುಸಾವಿರ ಮಠದಿಂದ ಇನ್ನೂ ಅನೇಕ ಕೆಲಸ ಆಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಮೂಜಗಂ ಪ್ರಶಸ್ತಿ ಪ್ರದಾನದಂತಹ ಸಾಹಿತ್ಯಿಕ, ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೆಚ್ಚು ಜನರನ್ನು ಕರೆದು ಮಾಡಬೇಕೆನ್ನುವುದನ್ನೂ ಒಪ್ಪುತ್ತೇನೆ. ಮಠದ ಈಗಿರುವ ಇತಿಮಿತಿಯಲ್ಲೇ ಸಾಕಷ್ಟು ಕೆಲಸಗಳನ್ನು ಮಾಡಿರುವೆ. ಈ ಕಾರ್ಯಕ್ರಮಕ್ಕೆ ಎಲ್ಲ ಮುಖಂಡರು, ಭಕ್ತರಿಗೆ ಆಹ್ವಾನ ಪತ್ರಿಕೆ ನೀಡಲಾಗಿತ್ತು. ಮೂರುಸಾವಿರ ಮಠದ ವಿವಿಧ ಸೇವಾ ಸಮಿತಿ ಪದಾಧಿಕಾರಿಗಳಿಗೆ ಫೋನ್ ಮಾಡಿ ಬರುವಂತೆ ಹೇಳಲಾಗಿತ್ತು. ಆಹ್ವಾನ ಪತ್ರಿಕೆ ತಲುಪದವರಿಗೆ ಗೊತ್ತಾಗಲಿ ಎಂದು ಪತ್ರಿಕೆಗಳಿಗೆ ಜಾಹೀರಾತು ನೀಡಲಾಗಿತ್ತು. ಇಷ್ಟಾದರೂ ಹೆಚ್ಚು ಜನ ಬಂದಿಲ್ಲ, ಏನಾದರೂ ದೋಷವಾದರೆ ಅದಕ್ಕೆ ನಾನೇ ಗುರಿಯಾಗುತ್ತಿದ್ದೇನೆ ಎಂದು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ಶ್ರೀಮಠದಿಂದ ಅಭಿವೃದ್ಧಿ ಆಗಿದೆ, ಆಗಿಲ್ಲ ಎಂಬ ಯಾವುದೇ ಮಾತುಗಳಿದ್ದರೂ ಅವುಗಳನ್ನು ಆ ಗುರುಸಿದ್ಧೇಶ್ವರನಿಗೇ ಅರ್ಪಿಸುವೆ. ನಾನು ಸಂಕಷ್ಟಕ್ಕೆ ಸಿಲುಕಿದ್ದೇನೆ. ಭಾವನಾತ್ಮಕವಾಗಿ ಏನಾದರೂ ಮಾತನಾಡಿದರೆ ಮಾಧ್ಯಮಗಳಿಗೆ ಆಹಾರವಾಗಿ ಬಿಡುತ್ತೇನೆ. ಮೌನವೇ ಲೇಸೆಂದು ಸುಮ್ಮನಿದ್ದೇನೆ. ಮುಂದೇನಾಗಬೇಕೆಂಬ ಬಗ್ಗೆ ಮುಂಬರುವ ದಿನಗಳಲ್ಲಿ ನಮ್ಮ ನಾಯಕರೊಂದಿಗೆ ರ್ಚಚಿಸುವೆ ಎಂದು ಸ್ವಾಮೀಜಿ ಹೇಳಿದರು.

Leave a Reply

Your email address will not be published. Required fields are marked *