ಬಾಗೇಪಲ್ಲಿ : ಶೂನ್ಯ ಬಡ್ಡಿ ಯೋಜನೆಯಲ್ಲಿ ಸಾಲ ವಿತರಣೆ ಮಾಡುತ್ತಿರುವ ಡಿಸಿಸಿ ಬ್ಯಾಂಕ್ ಮಹಿಳೆಯರ ಪಾಲಿಗೆ ಕಲ್ಪವೃಕ್ಷವಿದ್ದಂತೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನುಡಿದರು.
ತಾಲೂಕಿನ ನಲ್ಲಪರೆಡ್ಡಿಪಲ್ಲಿ ಗ್ರಾಮದ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಆವರಣದಲ್ಲಿ ಡಿಸಿಸಿ ಬ್ಯಾಂಕ್ ಮಂಗಳವಾರ ಆಯೋಜಿಸಿದ್ದ ಸ್ತ್ರೀ ಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿ ಯೋಜನೆ ಸಾಲದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಲ್ಲಪರೆಡ್ಡಿಪಲ್ಲಿ ಕೃಷಿ ಪತ್ತಿನ ಸೇವಾ ಸಹಕಾರ ಸಂಘವನ್ನು ಆರ್ಥಿಕ ಸಮಸ್ಯೆಗಳಿಂದ ಹಲವು ವರ್ಷಗಳಿಂದ ಮುಚ್ಚಲಾಗಿತ್ತು. ಸಂಘದ ಅಧ್ಯಕ್ಷ ಶ್ರೀನಿವಾಸರೆಡ್ಡಿ ಪರಿಶ್ರಮದಿಂದ ಮರುಜೀವ ಪಡೆದಿದೆ. ಹಲವು ಬ್ಯಾಂಕ್‌ಗಳಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆದ ರೈತರು ಸಾಲಕ್ಕಿಂತ ಬಡ್ಡಿ ಹಣವೇ ಹೆಚ್ಚಾಗಿ ಚಿನ್ನವನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಡಿಸಿಸಿ ಬ್ಯಾಂಕ್ ಸ್ತ್ರೀಶಕ್ತಿ ಸಂಘಗಳಿಗೆ ಬಡ್ಡಿರಹಿತ ಸಾಲ ನೀಡಿ ಮಹಿಳೆಯರ ಆರ್ಥಿಕಾಭಿವೃದ್ಧಿಗೆ ಶ್ರಮಿಸುತ್ತಿದೆ. ಮಹಿಳೆಯರು ಪಡೆದ ಸಾಲವನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ವಿ.ವೆಂಕಟಶಿವಾರೆಡ್ಡಿ ಮಾತನಾಡಿ, ಸಾಲ ಪಡೆದಾಗ ಇರುವ ಉತ್ಸಾಹ ಮರುಪಾವತಿ ಮಾಡುವಾಗ ಇರಬೇಕು. ಖಾಸಗಿ ವ್ಯಕ್ತಿಗಳು ನೀಡುವ ಮೀಟರ್ ಬಡ್ಡಿ ದಂಧೆಗೆ ಬಲಿಯಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಸ್ತ್ರೀ ಶಕ್ತಿ ಸಂಘಗಳನ್ನು ರಚನೆ ಮಾಡಿಕೊಂಡು ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ಸಾಲ ಪಡೆಯಿರಿ. ಅದಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದರು.
ನಲ್ಲಪರೆಡ್ಡಿಪಲ್ಲಿ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಸ್ತ್ರೀಶಕ್ತಿ ಸಂಘಗಳ 120 ಸದಸ್ಯರಿಗೆ 49 ಲಕ್ಷ ರೂ. ಹಾಗೂ 124 ಕೃಷಿ ರೈತರಿಗೆ 1.8 ಕೋಟಿ ರೂ.ಗಳ ಕೆಸಿಸಿ ಸಾಲದ ಚೆಕ್ ಅನ್ನು ವಿತರಿಸಲಾಯಿತು.
ನಲ್ಲಪರೆಡ್ಡಿಪಲ್ಲಿ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಅಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಜಿಪಂ ಸದಸ್ಯ ಲಕ್ಷ್ಮೀನರಸಿಂಹಪ್ಪ, ತಾಪಂ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಮಾಜಿ ಅಧ್ಯಕ್ಷ ಎಸ್.ಎಸ್.ರಮೇಶ್‌ಬಾಬು, ಪುರಸಭೆ ಸದಸ್ಯರಾದ ಆ.ನಾ.ಮೂರ್ತಿ, ಶ್ರೀನಿವಾಸ್, ಕೆಡಿಪಿ ಸದಸ್ಯ ಅಮರನಾಥರೆಡ್ಡಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಸಿ.ಎನ್.ಚೇತನ್, ಮೇಲ್ವಿಚಾರಕ ಲಿಂಗರಾಜು, ಎಪಿಎಂಸಿ ಉಪಾಧ್ಯಕ್ಷ ಟಿ.ನರಸಿಂಹಪ್ಪ, ಸಿಇಒ ಎ.ಕವಿತಾ ಇತರರಿದ್ದರು.