ಚಿತ್ರದುರ್ಗ: ಪ್ರಸ್ತುತ ಮಹಿಳೆಯ ದೈಹಿಕ ಶ್ರಮ ಕಡಿಮೆಯಾಗಿ, ಮಾನಸಿಕ ಒತ್ತಡ ಹೆಚ್ಚಾಗಿದೆ ಎಂದು ಹೆರಿಗೆ ಮತ್ತು ಸ್ತ್ರೀರೋಗ ತಜ್ಞೆ ಡಾ.ಜ್ಯೋತಿ ಶರತ್‌ಕುಮಾರ್ ಹೇಳಿದರು.
ನಗರದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಸಂಜೆ ಜಿಲ್ಲಾ ಲಿಂಗಾಯತ ಶಿವಸಿಂಪಿ ಮಹಿಳಾ ಘಟಕ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ‘ಶಿವಸಿಂಪಿ ಮಹಿಳಾ ಸಂಭ್ರಮ’ ಕಾರ‌್ಯಕ್ರಮದಲ್ಲಿ ಆಧುನಿಕ ಬದುಕಿನಲ್ಲಿ ಮಹಿಳೆಯ ಆರೋಗ್ಯ ಕುರಿತು ಉಪನ್ಯಾಸ ನೀಡಿದರು.
ಇಂದು ಎಲ್ಲರ ಬದುಕಿನಲ್ಲಿ ಒತ್ತಡ ಹೆಚ್ಚಾಗಿದ್ದು, ಆರೋಗ್ಯದೆಡೆ ಗಮನ ನೀಡುವುದು ಕಡಿಮೆಯಾಗಿದೆ. ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕಿದೆ. ರಾಮಾಯಣ, ಭಗವದ್ಗೀತೆ ಓದಬೇಕಿದೆ. ಶ್ಲೋಕಗಳನ್ನು ಕಲಿಯುವುದರೊಂದಿಗೆ ಧ್ಯಾನ ಹಾಗೂ ಯೋಗದ ಮೂಲಕ ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕಿದೆ. ಮಕ್ಕಳ ಕೈಗೆ ಮೊಬೈಲ್ ಕೊಡುವುದನ್ನು ಕಡಿಮೆ ಮಾಡಿ, ಪುಸ್ತಕಗಳನ್ನು ಓದಲು ಪ್ರೇರೇಪಿಸುವಂತೆ ತಾಯಂದಿರಿಗೆ ಸಲಹೆ ನೀಡಿದರು.
ಭರಮಸಾಗರದ ಶಿಕ್ಷಕಿ ಗೀತಾ ಪ್ರಸ್ತುತ ಸಮಾಜದಲ್ಲಿ ಆಡಂಬರದ ವಿವಾಹ ಅಗತ್ಯವೇ ವಿಷಯದ ಕುರಿತು ಮಾತನಾಡಿ, ಹಿಂದಿನ ಕಾಲದಲ್ಲಿ ಮದುವೆ ಎಂದರೆ ಎರಡು ಮನಸ್ಸುಗಳನ್ನು ಒಗ್ಗೂಡಿಸುವ ಕಾರ‌್ಯಕ್ರಮವಾಗಿತ್ತು. ಆದರೆ ಇಂದು ಮದುವೆ ಎನ್ನುವುದು ಪ್ರತಿಷ್ಠೆಯ ವಿಷಯವಾಗಿದೆ ಎಂದರು.
ಜಿಲ್ಲಾ ಲಿಂಗಾಯತ ಶಿವಸಿಂಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಮುರುಗೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ‌್ಯದರ್ಶಿ ಕವಿತಾ ಪಂಪಾಪತಿ ವಾರ್ಷಿಕ ವರದಿ ವಾಚಿಸಿದರು. ನಿರ್ಮಲಾ ಬಸವರಾಜು ಲಕ್ಕಿ ಲೇಡಿ ಕಾರ‌್ಯಕ್ರಮ ನಡೆಸಿಕೊಟ್ಟರು. ಅನ್ನಪೂರ್ಣ ವಿಜಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಲಾ ವಿಜಯಕುಮಾರ್ ಪ್ರಾರ್ಥಿಸಿದರು.
ಇಂದಿರಾ ಜಯದೇವಮೂರ್ತಿ ಸ್ವಾಗತಿಸಿ, ಉಷಾ ವೇದಮೂರ್ತಿ ವಂದಿಸಿದರು. ಕುಸುಮಾ ರಾಜಣ್ಣ ಹಾಗೂ ಗೌರಮ್ಮ ಬಸವರಾಜ್ ನಿರೂಪಿಸಿದರು. ಕಾರ‌್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
*ಕೋಟ್*
ಮಾತೃ ಶಕ್ತಿ, ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ, ಆರೈಕೆ, ಸತ್ಕಾರ, ಸಾಂತ್ವಾನ ಗುಣಗಳನ್ನು ಹುಟ್ಟಿನಿಂದಲೇ ಮೈಗೂಡಿಸಿಕೊಂಡ ಸ್ತ್ರೀಯರು ಜೀವನದಲ್ಲಿ ಅನೇಕ ಪಾತ್ರ ನಿರ್ವಹಿಸುತ್ತಿದ್ದಾರೆ. ಶೈಕ್ಷಣಿಕ, ವಿಜ್ಞಾನ, ಆರ್ಥಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ ಇನ್ನಿತರೆ ಕ್ಷೇತ್ರಗಳಲ್ಲೂ ಮಂಚೂಣಿಯಲ್ಲಿದ್ದು, ಬದುಕಿಗೊಂದು ರೂಪ ನೀಡುವ ಶಕ್ತಿ ಹೊಂದಿದ್ದಾಳೆ.
ಅನಿತಾ ಮುರುಗೇಶ್, ಘಟಕದ ಜಿಲ್ಲಾಧ್ಯಕ್ಷೆ
—
