ಮೂಡಿಗೆರೆ: ಹಿಂದು ಧರ್ಮ ಹೆಣ್ಣು ಮಕ್ಕಳನ್ನು ಮಠಾಧಿಪತಿಯನ್ನಾಗಿ ಮಾಡಲಿಲ್ಲ. ಮುಸ್ಲಿಂ ಧರ್ಮ ಮಹಿಳೆಯರನ್ನು ಖಾಝಿಯನ್ನಾಗಿ ಮಾಡಲಿಲ್ಲ. ಕ್ರೈಸ್ತ ಧರ್ಮ ಮಹಿಳೆಯರನ್ನು ಚರ್ಚ್ ಫಾದರ್ ಮಾಡಲಿಲ್ಲ. ಆದರೆ ಡಾ. ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಮಹಿಳೆಯರನ್ನು ಪ್ರಧಾನಮಂತ್ರಿ, ರಾಷ್ಟ್ರಪತಿಯಂತಹ ಹುದ್ದೆಗಳಿಗೆ ಆಯ್ಕೆ ಮಾಡಿದೆ ಎಂದು ಪ್ರಗತಿಪರ ಚಿಂತಕ, ಸಂಶೋಧನಾ ಬರಹಗಾರ ವಿಠ್ಠಲ್ ವಗ್ಗನ್ ತಿಳಿಸಿದರು.
ಭೀಮ ಕೋರೆಗಾಂವ್ ವಿಜಯೋತ್ಸವ ಆಚರಣೆ ಸಂಘದಿಂದ ಶುಕ್ರವಾರ ಪಟ್ಟಣದ ಲಯನ್ಸ್ ವೃತ್ತದಲ್ಲಿ ನಡೆದ ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾದವರಿಗೆ ಮಹಾತ್ಮನ ಸ್ಥಾನ ನೀಡಲಾಗಿದೆ. ಪಿಯುಸಿಯಲ್ಲಿ ಫೇಲಾದವರಿಗೆ ಪೀತನ ಸ್ಥಾನ ನೀಡಲಾಗಿದೆ. 32 ಪದವಿ ಪಡೆದ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಜಾತಿ ವ್ಯವಸ್ಥೆ ತುಳಿಯುವ ಪ್ರಯತ್ನ ಮಾಡಿದೆ. ಪ.ಜಾತಿ, ಪಂಗಡ, ಒಬಿಸಿಗಳಿಗೆ ಶಿಕ್ಷಣ ಸಿಗದಂತೆ ಹುನ್ನಾರ ನಡೆಸಿದ್ದ ವ್ಯವಸ್ಥೆ ವಿರುದ್ಧ ಅಂಬೇಡ್ಕರ್ ವಾದಿಗಳು ಮುನ್ನುಗ್ಗಿದ್ದರಿಂದ ಎಲ್ಲರಿಗೂ ಶಿಕ್ಷಣ ಸಿಗುವಂತಾಗಿದೆ. ಆದರೂ ತುಳಿತಕ್ಕೊಳಗಾದ ಸಮುದಾಯ ಈಗಲೂ ಶಿಕ್ಷಣದಿಂದ ದೂರ ಉಳಿಯುವಂತೆ ಇಂದಿನ ವ್ಯವಸ್ಥೆ ಮಾಡುತ್ತಿದೆ. ಇಂಥ ಸಂಚುಕೋರರನ್ನು ವಿರೋಧಿಸಲು ಹೋರಾಟಗಾರರ ವೇದಿಕೆ ಸಿದ್ಧವಾಗಬೇಕು ಎಂದು ತಿಳಿಸಿದರು.
ಹೆಣ್ಣಿಗಾಗಿ ನಡೆದ ರಾಮಾಯಣ, ಮಣ್ಣಿಗಾಗಿ ನಡೆದ ಮಹಾಭಾರತ, ಹೊನ್ನಿಗಾಗಿ ಡಚ್ಚರು, ಫ್ರೆಂಚರು ನಡೆಸಿದ್ದ ಆಡಳಿತ, ಈಗಿನ ರಾಜಕಾರಣದ ವ್ಯವಸ್ಥೆಯಲ್ಲಿ ಅಧಿಕಾರ ಮತ್ತು ಹಣಕ್ಕಾಗಿ ನಡೆಸುತ್ತಿರುವ ಆರ್ಭಟ, ಇದಕ್ಕೂ ಮಿಗಿಲಾಗಿ ದೇಶದ ಅಸ್ಮಿತೆಗೇ ಕೊಳ್ಳಿ ಇಡುವಂತಹ ಜಾತಿ ಪದ್ಧತಿಯೆಂಬ ವ್ಯವಸ್ಥೆ ಜನರನ್ನು ಇನ್ನಿಲ್ಲದಂತೆ ಹಿಂಡುತ್ತಿದೆ. 1818ರಲ್ಲಿ ದೇಶದ ಅಸ್ಮಿತೆಗಾಗಿ ನಡೆದಿರುವುದೇ ಭೀಮ ಕೋರೆಗಾಂವ್ ಯುದ್ಧ. ಪೇಶ್ವೆಗಳನ್ನು ಸಿದ್ಧನಾಕ ಮರಾಠ ನೇತೃತ್ವದ ಮಹರ್ ಸೈನಿಕರು ಸೋಲಿಸಿದ್ದರು. ಯುದ್ಧವನ್ನು ಗೆದ್ದಿದ್ದ ಮಹರ್ ಸೈನಿಕರು ಭೀಮಾ ನದಿಯಲ್ಲಿ ಮಿಂದು ಜೈ ಭೀಮ್ ಘೋಷಣೆ ಕೂಗಿ ದೇಶದ ಅಸ್ಮಿತೆಯನ್ನು ಕಾಪಾಡಿದ್ದರು ಎಂದು ತಿಳಿಸಿದರು.
ಪಟ್ಟಣದ ಪ್ರಮುಖ ಬೀದಿಯಲ್ಲಿ ಅಂಬೇಡ್ಕರ್ ಭಾವಚಿತ್ರದೊಂದಿಗೆ ವೀರಗಾಸೆ, ಡೊಳ್ಳುಕುಣಿತ ಸೇರಿದಂತೆ ಹಲವು ಆಕರ್ಷಣೆಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ಭೀಮ ಕೋರೆಗಾಂವ್ ವಿಜಯೋತ್ಸವ ಆಚರಣೆ ಸಂಘದ ಅಧ್ಯಕ್ಷ ಸುಂದರೇಶ್, ನಟ ಸಾಧುಕೋಕಿಲ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಚಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ರಘು, ಎಸ್‌ಡಿಪಿಐ ಕಾರ್ಯದರ್ಶಿ ಅಂಗಡಿ ಚಂದ್ರು, ಮುಖಂಡರಾದ ಸ್ವಾಭಿಮಾನಿ ಮಂಜುನಾಥ್, ದೀಪಕ್ ದೊಡ್ಡಯ್ಯ, ಕೆ.ಪಿ.ವೆಂಕಟೇಶ್, ವಸಂತಕುಮಾರಿ, ಎಂ.ಎಸ್.ಅನಂತ್, ವಿಜಯ್ಕುಮಾರ್, ಹಾಲಯ್ಯ, ಹರೀಶ್ ಕೆಲ್ಲೂರು, ಮರ್ಲೆ ಅಣ್ಣಯ್ಯ, ಮುತ್ತಪ್ಪ, ರಮೇಶ್ ಕೆಳಗೂರು, ಜ್ಯೋತಿ ವಿಠಲ, ನಿಖಿಲ್ ಚಕ್ರವರ್ತಿ, ಬೆಟ್ಟಗೆರೆ ಮಂಜುನಾಥ್, ಭಾನುಪ್ರಕಾಶ್, ಕೆ.ಸಿ.ಚಂದ್ರಶೇಖರ್ ಇತರರಿದ್ದರು.