ಮಹಿಳಾ ಸಾಂಸ್ಕೃತಿಕ ಉತ್ಸವ ಸಂಭ್ರಮ

ದಾವಣಗೆರೆ: ನಗರದ ವಿಶ್ವವಿದ್ಯಾಲಯದ ದೃಶ್ಯಕಲಾ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವದ ಅಂಗವಾಗಿ ವಿವಿಧ ಕಲಾ ಮೇಳಗಳ ಮೆರವಣಿಗೆ ನಡೆಯಿತು.

ವೀರಗಾಸೆ, ಲಂಬಾಣಿ, ಡೊಳ್ಳು ಸೇರಿ ವಿವಿಧ ಕಲಾತಂಡಗಳು ಗಮನಸೆಳೆದವು. ಮಹಿಳಾ ಕರಕುಶಲ ವಸ್ತುಗಳ ಪ್ರದರ್ಶನವಿತ್ತು. ಶೋಬಾನೆ, ಜನಪದ ವಿವಿಧ ಗೀತೆಗಳನ್ನು ಹಾಡಲಾಯಿತು.

ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಈ ಹಿಂದೆ ಮಹಿಳೆಯರು ವೇದಿಕೆ ಮೇಲೆ ಬರಲು ಹಿಂಜರಿಯುತ್ತಿದ್ದರು. ಈಗ ಕಾಲ ಬದಲಾಗಿದ್ದು, ಗ್ರಾಪಂ, ತಾಪಂ, ಜಿಪಂ ಸೇರಿ ವಿವಿಧ ರಂಗಗಳಲ್ಲಿ ಶೇ.50ರಷ್ಟು ಮಹಿಳೆಯರೇ ಕಾಣಿಸಿಕೊಳ್ಳುತ್ತಿದ್ದಾರೆ ಎಂದರು.

ಮಹಿಳೆಯರ ಪ್ರತಿಭೆ ಅನಾವರಣಕ್ಕೆ ಇದು ಸುಸಂದರ್ಭ. ತಾಲೂಕು, ಜಿಲ್ಲೆ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಬೇಕು. ಯಾವುದಕ್ಕೂ ಹಿಂದೇಟು ಹಾಕದೇ ಉತ್ತಮ ಕೆಲಸ ಮಾಡಬೇಕು ಎಂದು ಹೇಳಿದರು.

ಆಸನಗಳು ಖಾಲಿ ಖಾಲಿ, ಜಿಪಂ ಅಧ್ಯಕ್ಷೆ ಬೇಸರ

ಮಹಿಳಾ ಸಾಂಸ್ಕೃತಿಕ ಉತ್ಸವ ಆಯೋಜಿಸಿರುವುದಕ್ಕೆ ಸಂತಸದ ಜತೆಗೆ ಬೇಸರವೂ ಮೂಡಿದೆ. ಕಲೆ, ಸಂಸ್ಕೃತಿ ಎಷ್ಟು ಬಡವಾಗಿದೆ ಎಂಬುದನ್ನು ಖಾಲಿ ಆಸನಗಳೇ ಹೇಳುತ್ತವೆ ಎಂದು ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನು ಕೇವಲ ಮಾಧ್ಯಮಗಳಿಗಾಗಿಯೇ ಆಯೋಜಿಸದಂತೆ ಕಾಣುತ್ತದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ, ಸಂಪರ್ಕ ಕೊರತೆ ಕಾರಣವಾಗಿದೆ. ವಿವಿಧ ಮಹಿಳಾ ಸಂಘ, ಸಂಸ್ಥೆಗಳಿಗೆ ಆಹ್ವಾನ ಏಕೆ ನೀಡಿಲ್ಲ ಎದು ಪ್ರಶ್ನೀಸಿದರು.

ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಇಲಾಖೆಯಿಂದ ಮೊದಲ ಬಾರಿಗೆ ಮಹಿಳಾ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ. ಮುಂಬರುವ ದಿನಗಳಲ್ಲಿ ಮಹಿಳಾ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಮಹಿಳಾ ಉತ್ಸವ ಹಮ್ಮಿಕೊಳ್ಳಲಾಗುವುದು. ಇಂದು ಆಯೋಜಿಸಿರುವ ಉತ್ಸವ ರಾತ್ರಿ 9ರ ವರೆಗೂ ನಡೆಯುತ್ತದೆ. ಇನ್ನಷ್ಟು ಕಲಾವಿದರು ಆಗಮಿಸಲಿದ್ದಾರೆ ಎಂದು ತಿಳಿಸಿದರು.