ಮಹಿಳಾ ಸಮಾನತೆಗಾಗಿ ವಿಶೇಷ ಅಭಿಯಾನ ಇಂದು

ಹುಬ್ಬಳ್ಳಿ: ಮಹಿಳಾ ಸ್ವಾತಂತ್ರ್ಯ, ಸ್ವಾಭಿಮಾನ, ಹಕ್ಕುಗಳು, ಸಮಾನತೆ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ವಿಶ್ವ ಮಹಿಳಾ ದಿನಾಚರಣೆಯಾದ ಮಾ. 8ರಂದು ಕನ್ನಡ ನಂ. 1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ 24/7 ಸುದ್ದಿ ವಾಹಿನಿಯಿಂದ ‘ವಾಕಥಾನ್ ಮತ್ತು ಸೈಕ್ಲೋಥಾನ್’ ವಿಶೇಷ ಅಭಿಯಾನ ಸಂಯೋಜಿಸಲಾಗಿದೆ.

ಇಲ್ಲಿನ ಚೆನ್ನಮ್ಮ ವೃತ್ತದಿಂದ ಬೆಳಗ್ಗೆ 7 ಗಂಟೆಗೆ ಪ್ರಾರಂಭಗೊಳ್ಳುವ ‘ಮಹಿಳೆಯರ ಸಮಾನತೆಗಾಗಿ ನಡಿಗೆ’ ಎಂಬ ಘೋಷವಾಕ್ಯದ ಈ ವಿಶೇಷ ಅಭಿಯಾನದಲ್ಲಿ ಮಹಿಳಾ ಉದ್ಯೋಗಿಗಳು, ಗೃಹಿಣಿಯರು, ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಕಿಮ್್ಸ ನರ್ಸಿಂಗ್ ಸ್ಕೂಲ್ ಸೇರಿದಂತೆ ವಿವಿಧ ಕಾಲೇಜ್​ಗಳ ವಿದ್ಯಾರ್ಥಿನಿಯರು ಪಾಲ್ಗೊಳ್ಳಲಿದ್ದಾರೆ.

ಇಎಂಐ ಹಾಲಿಡೇಸ್, ಪತಂಜಲಿ ಉತ್ಪನ್ನಗಳ ಉತ್ತರ ಕರ್ನಾಟಕದ ಸೂಪರ್ ಡಿಸ್ಟ್ರಿಬ್ಯುಟರ್ ಸುಮನ್ ಎಂಟರ್​ಪ್ರೖೆಸಿಸ್, ಸ್ಪೂರ್ತಿ ಹರ್ಬಲ್ಸ್​ನ ಆಲೊಗ್ರಾಮಫ್ಲೋರ್ ಸೋಪ್, ತನಿಷ್ಕಾ ಚಿನ್ನಾಭರಣಗಳ ಮಳಿಗೆ, ‘ಸ್ಕೋಡಾ’ ಕಾರ್​ನ ವಿತರಕರಾದ ಪ್ರೀತಿ ಕಾರ್ಸ್ ಪ್ರೖೆ.ಲಿ., ಇಸ್ಕಾನ್, ಮಮ್ಮಾಸ್ ಲಂಚ ಬಾಕ್ಸ್, ಆದಿತ್ಯ ಮಿಲ್ಕ್ ಸಹ ಪ್ರಾಯೋಜಕತ್ವದಲ್ಲಿ ಈ ಅಭಿಯಾನವನ್ನು ವಿಆರ್​ಎಲ್ ಮೀಡಿಯಾ ಆಯೋಜಿಸಿದೆ. ಚೆನ್ನಮ್ಮ ವೃತ್ತದಿಂದ ಪ್ರಾರಂಭಗೊಳ್ಳುವ ವಾಕಥಾನ್ ಮತ್ತು ಸೈಕ್ಲೋಥಾನ್, ಹಳೇ ಬಸ್ ನಿಲ್ದಾಣ, ಐಟಿ ಪಾರ್ಕ್, ಹೊಸೂರು ವೃತ್ತದ ಮೂಲಕ ತೆರಳಿ ಮಹಿಳಾ ವಿದ್ಯಾಪೀಠದಲ್ಲಿ ಅಂತ್ಯಗೊಳ್ಳಲಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕಿ ಅಹಿಲ್ಯಾ ಕಾಕೋಡಿಕರ್ ಅಭಿಯಾನಕ್ಕೆ ಚಾಲನೆ ನೀಡುವರು. ಮಹಿಳಾ ಉದ್ಯಮಿ ಉಷಾ ಹೆಗಡೆ, ಹುಬ್ಬಳ್ಳಿ ಬೈಸಿಕಲ್ ಕ್ಲಬ್​ನ ಡಾ. ರೂಪಾಲಿ ಒಡೆಯರ್, ಸುಲೇಖಾ ಶೇಖ್ ಸೇರಿದಂತೆ ಹಲವಾರು ಉದ್ಯಮಿಗಳು, ಗಣ್ಯರು ಸಹ ಭಾಗವಹಿಸಲಿದ್ದಾರೆ. ಹುಬ್ಬಳ್ಳಿ ಬೈಸಿಕಲ್ ಕ್ಲಬ್​ನ 50ಕ್ಕೂ ಹೆಚ್ಚು ಮಹಿಳಾ ಸೈಕಲ್ ಸವಾರರು ಸೈಕ್ಲೋಥಾನ್​ನಲ್ಲಿ ಪಾಲ್ಗೊಳ್ಳುವರು.

ಅಭಿಯಾನದಲ್ಲಿ ಪಾಲ್ಗೊಳ್ಳಬಯಸುವವರಿಗೆ ಪ್ರವೇಶ ಉಚಿತವಾಗಿದೆ. ಮಹಿಳೆಯರು ಹಾಗೂ ಮಹಿಳಾಪರ ಮನಸ್ಸುಗಳುಳ್ಳವರು ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಸಮಾನತೆಯ ನಾಡು ಕಟ್ಟಲು ಮುಂದಾಗಬೇಕು. ಇದೇ ಸಂದರ್ಭದಲ್ಲಿ ಮಹಿಳಾ ಜಾಗೃತಿಗೆ ಸಂಬಂಧಿಸಿದಂತೆ ಮಹಿಳಾ ವಿದ್ಯಾಪೀಠದಲ್ಲಿ ವಿಶೇಷ ಕಾರ್ಯಕ್ರಮ ಹಾಗೂ ಕಲ್ಪವೃಕ್ಷ ಟ್ರಸ್ಟ್ ಸಾಂಸ್ಕೃತಿಕ ಪಠದಿಂದ ‘ಹೆಣ್ಣು ಬ್ರೂಣ ಹತ್ಯೆ’ಗೆ ಸಂಬಂಧಿಸಿದಂತೆ ಬೀದಿ ನಾಟಕ ಏರ್ಪಡಿಸಲಾಗಿದೆ.

ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಭವರಲಾಲ ಆರ್ಯ, ಹುಬ್ಬಳ್ಳಿ ಬೈಸಿಕಲ್ ಕ್ಲಬ್​ನ ಚೇರ್ಮನ್ ಶ್ರೀಕಾಂತ ದೇಶಪಾಂಡೆ, ಕಾರ್ಯದರ್ಶಿ ಆನಂದ ಬೇದ್, ಮಹಿಳಾ ವಿದ್ಯಾಪೀಠದ ಕಾರ್ಯದರ್ಶಿ ಕೆ.ಟಿ. ಪಾಟೀಲ ಮತ್ತಿತರರು ಪಾಲ್ಗೊಳ್ಳುವರು.