ಮಹಿಳಾ ಶಕ್ತಿಗೆ ಮೋದಿ ಭಕ್ತಿಯ ದೀಕ್ಷೆ

ಧಾರವಾಡ/ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ಇನ್ನೂ ಪೂರ್ಣಗೊಳ್ಳುವ ಮೊದಲೇ ರಾಜ್ಯ ಮಟ್ಟದ ನಾಯಕರನ್ನು ಕರೆಸಿ ಕಾರ್ಯಕರ್ತರನ್ನು ಹುರಿದುಂಬಿಸಲು ಮುಂದಾಗಿರುವ ಬಿಜೆಪಿ, ಭಾನುವಾರ ಹುಬ್ಬಳ್ಳಿ-ಧಾರವಾಡದಲ್ಲಿ ಮಹಿಳಾ ಸಮಾವೇಶ ನಡೆಸಿತು. ಗಣ್ಯರಿಂದ ಸ್ತ್ರೀ ಶಕ್ತಿಗೆ ಮೋದಿ ಭಕ್ತಿಯ ದೀಕ್ಷೆ ಕೊಡಿಸಿತು.

ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಪ್ರಚಾರ್ಥವಾಗಿ ಧಾರವಾಡದ ಮಯೂರ ಅದಿತ್ಯ ರೆಸಾರ್ಟ್​ನಲ್ಲಿ ಸಂಜೆ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿದ ಚಿತ್ರನಟಿ ಶೃತಿ ಮಾತನಾಡಿ, ಮಹಿಳೆಯರೂ ಸಮರ್ಥವಾಗಿ ಜವಾಬ್ದಾರಿ ನಿಭಾಯಿಸಬಲ್ಲರು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸರಿಯಾಗಿ ಅರಿತಿದ್ದರಿಂದಲೇ ರಕ್ಷಣಾ ಖಾತೆ, ವಿದೇಶಾಂಗ ಖಾತೆ ಸೇರಿ ಪ್ರಮುಖ ಹುದ್ದೆಗಳನ್ನು ನೀಡಿದ್ದಾರೆ. ಮಹಿಳಾ ಶಕ್ತಿಗೆ ನಿಜವಾದ ಬೆಂಬಲ ಬಿಜೆಪಿಯಿಂದ ಮಾತ್ರ ಸಿಗಲು ಸಾಧ್ಯ. ಇಂತಹ ಪಕ್ಷಕ್ಕೆ ಮತ್ತೊಮ್ಮೆ ಅವಕಾಶ ನೀಡಬೇಕು. ಉಳಿದ ಪಕ್ಷಗಳಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ಲದಂತಾಗಿದೆ. ಅಂತಹ ಪಕ್ಷಗಳನ್ನು ಗೆಲ್ಲಿಸಿದರೆ ದೇಶದಲ್ಲಿ ಅಸ್ಥಿರತೆ ಉಂಟಾಗಲಿದೆ ಎಂದು ಎಚ್ಚರಿಸಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಮಹಿಳಾ ಸಮಾವೇಶ ಬಿಜೆಪಿಗೆ ಶಕ್ತಿ ತುಂಬಿದೆ. 2ನೇ ಬಾರಿಗೆ ಬಿಜೆಪಿ ಸರ್ಕಾರ ರಚಿಸುವ ಮೂಲಕ ದೇಶವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಪ್ರಧಾನಿ ಮೋದಿಯವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಸಂಸದ ಪ್ರಲ್ಹಾದ ಜೋಶಿ, ಮಾಜಿ ಶಾಸಕಿ ಸೀಮಾ ಮಸೂತಿ, ಪ್ರಮುಖರಾದ ಪೂರ್ಣಾ ಪಾಟೀಲ, ನಿರ್ಮಲಾ ಜವಳಿ, ಸವಿತಾ ಅಮರಶೆಟ್ಟಿ, ಪ್ರೇಮಾ ಕೋಮಾರ ದೇಸಾಯಿ, ರೂಪಾ ಈರೇಶನವರ, ಸಂಜಯ ಕಪಟಕರ, ವಿಜಯಾನಂದ ಶೆಟ್ಟಿ, ಬಸವರಾಜ ಮುತ್ತಳ್ಳಿ, ಶಿವಣ್ಣ ಬಡವಣ್ಣವರ, ಮಲ್ಲಿಕಾರ್ಜುನ ಹೊರಕೇರಿ, ಮಲ್ಲಿಕಾರ್ಜುನ ಸಾವುಕಾರ, ಮಾ. ನಾಗರಾಜ, ಜಯತೀರ್ಥ ಕಟ್ಟಿ, ನಾಗೇಶ ಕಲಬುರ್ಗಿ, ಮೋಹನ ರಾಮದುರ್ಗ, ದೇವರಾಜ ಶಹಪುರ, ಇತರರು ಇದ್ದರು.

ಮೋದಿ ಜೊತೆ ಸಂವಾದಕ್ಕೆ ಮಳೆ ಅಡ್ಡಿ :ಪ್ರಧಾನಿ ನರೇಂದ್ರ ಮೋದಿ ಅವರ ‘ಮೈ ಭೀ ಚೌಕಿದಾರ್’ ವೀಡಿಯೋ ಸಂವಾದಕ್ಕೂ ಪೂರ್ವದಲ್ಲೇ ಮಳೆ ಸುರಿದ ಕಾರಣ ಮಯೂರ ರೆಸಾರ್ಟ್​ನಲ್ಲಿ ಹಾಕಿದ್ದ ವಿಡಿಯೋ ಸಂವಾದದ ಸ್ಕ್ರೀನ್ ಬಂದ್ ಮಾಡಲಾಗಿತ್ತು. ಹೀಗಾಗಿ ನಗರದ ಜನರಿಗೆ ಮೋದಿ ಅವರೊಂದಿಗೆ ನೇರವಾಗಿ ಸಂವಾದ ನಡೆಸುವ ಅವಕಾಶ ತಪ್ಪಿತು. ಮಳೆ ನಿಂತ ಬಳಿಕ ಮತ್ತೆ ಸಂವಾದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಅಷ್ಟೊತ್ತಿಗಾಗಲೇ ಸಂವಾದ ಮುಕ್ತಾಯಕ್ಕೆ ಬಂದಿತ್ತು. ನಂತರ ಸಂಸದ ಪ್ರಲ್ಹಾದ ಜೋಶಿ ಅವರು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ವೀಡಿಯೋ ಪ್ರದರ್ಶಿಸಲಾಯಿತು.

ಅಭೂತಪೂರ್ವ ನಿರ್ಧಾರ:ಪುಲ್ವಾಮ ದಾಳಿ ವಿರುದ್ಧ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಕೈಗೊಂಡ ನಿರ್ಧಾರಗಳು ಅಭೂತಪೂರ್ವ. ನರೇಂದ್ರ ಮೋದಿಯವರು ಮಹಿಳೆಯರಿಗೆ ಅವಕಾಶ ನೀಡಿದ್ದರಿಂದ ಇದು ಸಾಧ್ಯವಾಯಿತು ಎಂದು ಹುಬ್ಬಳ್ಳಿ ಗೋಕುಲ ಗಾರ್ಡನ್​ನಲ್ಲಿ ಆಯೋಜಿಸಿದ್ದ ಬಿಜೆಪಿ ಹು-ಧಾ ಪೂರ್ವ, ಸೆಂಟ್ರಲ್, ನವಲಗುಂದ, ಕಲಘಟಗಿ, ಕುಂದಗೋಳ ಕ್ಷೇತ್ರ ವ್ಯಾಪ್ತಿಯ ಮಹಿಳಾ ಸಮಾವೇಶದಲ್ಲಿ ನಟಿ ಶೃತಿ ಹೇಳಿದರು.

ಜ್ಯೋತಿ ಜೋಶಿ ಮಾತನಾಡಿ, ಪ್ರಧಾನಿಯವರು ಕೈಗೊಂಡ ಅಭಿವೃದ್ಧಿಯ ಓಘವನ್ನು ಕಾಂಗ್ರೆಸ್​ನವರಿಗೆ ತಡೆಯಲಾಗುತ್ತಿಲ್ಲ. ರಾಹುಲ್ ಗಾಂಧಿ ಹೇಗೆಂದರೆ ಐದನೇ ತರಗತಿಯಿಂದ ಪಿಯುಸಿಗೆ ಸೇರಿಸಿದ ವಿದ್ಯಾರ್ಥಿ ಇದ್ದಂತೆ ಎಂದು ಟೀಕಿಸಿದರು.

ಶಿಲ್ಪಾ ಶೆಟ್ಟರ್ ಮಾತನಾಡಿ, ಪಕ್ಷ ಹಾಗೂ ದೇಶಕ್ಕೆ ದಿ. ಅನಂತಕುಮಾರ ಅವರ ಕೊಡುಗೆ ಅಪಾರವಿತ್ತು. ತೇಜಸ್ವಿನಿ ಅವರಿಗೆ ಟಿಕೆಟ್ ಸಿಗದೇ ಇರುವುದಕ್ಕೆ ಬೇಸರವಿದೆ. ಆದರೂ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ ಎಂದಿರುವುದು ಅವರ ಪಕ್ಷ ನಿಷ್ಠೆಗೆ ಸಾಕ್ಷಿ. ಅವರು ಉಳಿದ ಮಹಿಳೆಯರಿಗೂ ಮಾದರಿ ಎಂದರು.

ಮಾಜಿ ಶಾಸಕಿ ಸೀಮಾ ಮಸೂತಿ ಮಾತನಾಡಿ, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಎಲ್ಲ ಮಹಿಳೆಯರೂ ಪಣ ತೊಡಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದ ಪ್ರಲ್ಹಾದ ಜೋಶಿ ಅವರ ಕುರಿತು ಆಕಾಶ ಹಾಡಿರುವ ಸಿಡಿ ಬಿಡುಗಡೆ ಮಾಡಲಾಯಿತು.

ಕಮಲಾ ಜೋಶಿ, ಸ್ನೇಹಾ ಶೆಟ್ಟರ್, ಅನಸೂಯಾ ಹಿರೇಮಠ, ಅಶ್ವಿನಿ ಮಜ್ಜಗಿ, ಮೇನಕಾ ಹುರುಳಿ, ಇತರರು ಉಪಸ್ಥಿತರಿದ್ದರು.

ಮನೆ-ಸಮಾಜ ತಿದ್ದುವಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಮೋದಿಯವರು ಮಹಿಳೆಯರಿಗೆ ಉನ್ನತ ಅಧಿಕಾರ ನೀಡಿ, ಅವರ ಸಾಮರ್ಥ್ಯ ಸಾಬೀತುಪಡಿಸಿದರು.

| ಜಗದೀಶ ಶೆಟ್ಟರ್, ಮಾಜಿ ಸಿಎಂ

ಪಾಕಿಸ್ತಾನ ಹಾಗೂ ಚೀನಾಕ್ಕೆ ಉತ್ತರ ಕೊಡಲು ಮೋದಿಯವರಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಸ್ಥಿತಿ ಏನಾಗಿದರೆ ಎಂದರೆ ದಾವಣಗೆರೆ ಅಭ್ಯರ್ಥಿ ಟಿಕೆಟ್ ಬೇಡ ಎನ್ನುತ್ತಿದ್ದಾರೆ. ಧಾರವಾಡಕ್ಕೆ ಇನ್ನೂ ಅಭ್ಯರ್ಥಿಯೇ ಸಿಕ್ಕಿಲ್ಲ.

| ಪ್ರಲ್ಹಾದ ಜೋಶಿ, ಧಾರವಾಡ ಸಂಸದ