ಮಹಿಮಾಪುರ ಜಾನುವಾರು ಜಾತ್ರೆ ಸಂಭ್ರಮ

ತ್ಯಾಮಗೊಂಡ್ಲು: ಪಶುಗಳ ಪ್ರಸಿದ್ಧ ಗುಟ್ಟೆಜಾತ್ರೆ ಎಂದೇ ಹೆಸರಾಗಿರುವ ತ್ಯಾಮಗೊಂಡ್ಲು ಹೋಬಳಿಯ ಮಹಿಮಾಪುರ ಮಹಿಮೆ ರಂಗನಾಥಸ್ವಾಮಿ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಜಾನುವಾರುಗಳು ಗಮನ ಸೆಳೆದಿವೆ.

ಪ್ರತಿ ವರ್ಷದ ಜನವರಿಯಲ್ಲಿ ಮಾಘ ಮಾಸದ ಹುಣ್ಣಿಮೆ ಅಥವಾ ಮಕರ ನಕ್ಷತ್ರದಂದು ನಡೆಯುವ ಜಾತ್ರೆ ಗುಟ್ಟೆ ಜಾತ್ರೆ ಎಂದೇ ಪ್ರಸಿದ್ಧ.

ತುಮಕೂರು, ಕನಕಪುರ, ರಾಮನಗರ, ಮೈಸೂರು, ಮಂಡ್ಯ, ದೊಡ್ಡಬಳ್ಳಾಪುರ, ನೆಲಮಂಗಲ, ಮಧುರೆ, ದೇವನಹಳ್ಳಿ, ಚಿಕ್ಕಬಳ್ಳಾಪುರ, ಬೀದರ್, ಚಾಮರಾಜನಗರ, ಹಾವೇರಿ, ಮಾಗಡಿ ಸೇರಿ ವಿವಿಧೆಡೆಗಳಿಂದ ಸಾವಿರಾರು ಹಸುಗಳು ಆಗಮಿಸಿವೆ. ಹಳ್ಳಿಕಾರ್, ಅಮೃತ್​ವುಹಲ್, ಗಿಡ್ಡಜಾತಿ ತಳಿಗಳು ಖರೀದಿಗೆ ಲಭ್ಯವಿದೆ. ಎತ್ತುಗಳನ್ನು ವ್ಯವಸಾಯಕ್ಕಿಂತ ಪ್ರತಿಷ್ಠೆಗೆ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಕನಿಷ್ಠ 10 ಸಾವಿರದಿಂದ 3.2 ಲಕ್ಷ ರೂ. ಮೌಲ್ಯದ ಎತ್ತುಗಳು ಲಭ್ಯವಿರುವುದು ವಿಶೇಷ.

ಮೂಲಸೌಲಭ್ಯ: ಗ್ರಾಪಂ ಮೂರು ಸಿಸ್ಟನ್ ಅಳವಡಿಸಿದ್ದು, ಪಶುಗಳಿಗೆ ಕುಡಿಯುವ ನೀರಿಗೆ ನಾಲ್ಕು ತೊಟ್ಟಿಗಳನ್ನು ನಿರ್ವಿುಸಿದೆ. ಬೀದಿ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಕೃಷಿ ಪರಿಕರಗಳನ್ನು ಸ್ಥಳದಲ್ಲೇ ಸಿದ್ಧಪಡಿಸಿ,500 ರಿಂದ 1150 ರೂ. ವರೆಗೆ ಮಾರಾಟ ಮಾಡಲಾಗುತ್ತಿದೆ. ಹಗ್ಗ, ಮುಖವಾಡ, ಬಾರುಗೋಲು, ಚಿಲಕ ಇತರೆ ವಸ್ತುಗಳ ಮಾರಾಟ ಮಳಿಗೆ ತೆರೆಯಲಾಗಿದೆ. ಆದರೆ 4 ಸಾವಿರಕ್ಕೂ ಅಧಿಕ ರಾಸುಗಳು ಜಾತ್ರೆಯಲ್ಲಿ ಭಾಗವಹಿಸಿದ್ದರೂ ಪಶು ವೈದ್ಯ ಇಲಾಖೆಯಿಂದ ತಜ್ಞ ವೈದ್ಯರನ್ನು ನೇಮಿಸದೆ, ಮಹಿಳಾ ಹಿರಿಯ ಪಶು ವೀಕ್ಷಕರನ್ನು ಮಾತ್ರ ನೇಮಿಸಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

25ಕ್ಕೆ ಮೆರವಣಿಗೆ: ಈಗ ಸೇರಿರುವ ರಾಸುಗಳಲ್ಲಿ ಅತ್ಯುತ್ತಮ ರಾಸುಗಳ ಮೆರವಣಿಗೆ ಜ.25 ರಂದು ನಡೆಯಲಿದೆ. ಪಶು ವೈದ್ಯಕೀಯ ಇಲಾಖೆ ಮತ್ತು ಎಪಿಎಂಸಿ ದೊಡ್ಡಬಳ್ಳಾಪುರದಿಂದ ನೇಮಕವಾಗಿರುವ ತೀರ್ಪಗಾರರು ಗುರುತಿಸುವ ರಾಸುಗಳಿಗೆ ರಥೋತ್ಸವದ ದಿನ ಬಹುಮಾನ ನೀಡಲಾಗುವುದು. ಫೆ.19ರಂದು ರಥೋತ್ಸವ ಮುಖ್ಯ ಅರ್ಚಕ ಕುಲಶೇಖರನ್ ನೇತೃತ್ವದಲ್ಲಿ ನಡೆಯಲಿದೆ ಎಂದು ಪಾರುಪತ್ತೇಗಾರ ಪುಟ್ಟೇಗೌಡ ತಿಳಿಸಿದರು.

ಈ ಬಾರಿ ಹೆಚ್ಚುವರಿಯಾಗಿ 4 ಶೌಚಗೃಹ ಮತ್ತು ಎರಡು ಸ್ನಾನಗೃಹ ನಿರ್ವಿುಸಲಾಗಿದೆ. ಕುಡಿಯುವ ನೀರು ಮತ್ತು ಬೀದಿ ದೀಪಗಳ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ.

| ಸಿ.ಆರ್.ಕೈಲಾಸ್, ಗ್ರಾಪಂ ಅಧ್ಯಕ್ಷ

25 ವರ್ಷಗಳಿಂದ ಸತತವಾಗಿ ಈ ಜಾತ್ರೆಯಲ್ಲಿ ಭಾಗವಹಿಸುತ್ತಿದ್ದೇನೆ. ಬೇರೆ ಎಲ್ಲ ಜಾತ್ರೆಗಳಿಗಿಂತ ಉತ್ತಮ ಎತ್ತುಗಳು ಇಲ್ಲಿ ಮಾರಾಟಕ್ಕೆ ಬರುವುದರಿಂದ ಅವುಗಳನ್ನು ಖರೀದಿಸುತ್ತೇನೆ.

| ವೀರತಿಪ್ಪಯ್ಯ, ರೈತ, ಸಾಸಲು, ದೊಡ್ಡಬಳ್ಳಾಪುರ ತಾಲೂಕು

 ಸುಳ್ವಾಡಿ ದುರಂತದಿಂದ ಎಚ್ಚೆತ್ತಿರುವ ಸರ್ಕಾರ ತಿನ್ನುವ ಪದಾರ್ಥಗಳ ಮೇಲೆ ಹೆಚ್ಚಿನ ನಿಗಾ ಇರಿಸಲು ಆರೋಗ್ಯ ಇಲಾಖೆಗೆ ಸೂಚಿಸಿದೆ. ಹಾಗಾಗಿ ಹೋಟೆಲ್​ಗಳ ತಿಂಡಿ ತಿನಿಸುಗಳ ಗುಣಮಟ್ಟ ಪರೀಕ್ಷಿಸಲಾಗುತ್ತಿದೆ. ಉತ್ತಮ ಪದಾರ್ಥಗಳನ್ನು ಉಪಯೋಗಿಸಿ ತಿಂಡಿ ಸಿದ್ಧಪಡಿಸುವಂತೆ ಸೂಚಿಸಲಾಗಿದೆ.

| ವೀರೇಶ್, ಹಿರಿಯ ಆರೋಗ್ಯ ಪರಿವೀಕ್ಷಕ

Leave a Reply

Your email address will not be published. Required fields are marked *