‘ಮಹಾ’ ಹೋರಾಟಕ್ಕೆ ಮೂರು ವರ್ಷ

ನರಗುಂದ: ಉಪವಾಸ ಸತ್ಯಾಗ್ರಹ ನಡೆಸಿದ್ದಾಯ್ತು. ಲಾಠಿ ಏಟು ತಿಂದಿದ್ದಾಯ್ತು. ರಸ್ತೆ ಸಂಚಾರ ಸ್ಥಗಿತ, ಬಂದ್ ಮಾಡಲಾಯಿತು… ಕಳೆದ ಮೂರು ವರ್ಷಗಳಿಂದ ತಾಳ್ಮೆಯಿಂದ ನಿರಂತರ ಪ್ರತಿಭಟನೆ ಮಾಡಿದ್ದಾಯ್ತು. ಆದರೂ ಉತ್ತರ ಕರ್ನಾಟಕದ 4 ಜಿಲ್ಲೆಯ ಜನರಿಗೆ ತುರ್ತು ಪರಿಹಾರ ದೊರೆತಿಲ್ಲ. ಈಗ ಎಲ್ಲರ ಚಿತ್ತ ನ್ಯಾಯಾಧಿಕರಣದತ್ತ ನೆಟ್ಟಿದೆ.

ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ನರಗುಂದದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಜು.16ಕ್ಕೆ ಭರ್ತಿ ಮೂರು ವರ್ಷ. ಇಷ್ಟಾದರೂ ಯೋಜನೆ ಅನುಷ್ಠಾನದಲ್ಲಿ ಮಾತ್ರ ಯಾವುದೇ ಪ್ರಗತಿ ಕಾಣದಿರುವುದು ರೈತರಲ್ಲಿ ನೋವು ತಂದಿದೆ. ಯೋಜನೆಗಾಗಿ ದಶಕಗಳಿಂದ ಸಾಲು ಸಾಲು ಹೋರಾಟ ನಡೆದು ರೈತರು ಪ್ರಾಣ ತೆತ್ತರೂ ಪ್ರಯೋಜನ ಮಾತ್ರ ಶೂನ್ಯ. ಮಹದಾಯಿ ಹೋರಾಟಕ್ಕೆ ದೊಡ್ಡ ಇತಿಹಾಸವೇ ಇದೆ. ಉತ್ತರ ಕರ್ನಾಟಕ ಭಾಗದ ರೈತರ ಜಮೀನುಗಳಿಗೆ ನೀರೊದಗಿಸುವ ಉದ್ದೇಶದಿಂದ 1971-72ರಲ್ಲಿ ಸವದತ್ತಿಯಲ್ಲಿ ನವೀಲು ತೀರ್ಥ ಆಣೆಕಟ್ಟನ್ನು ನಿರ್ವಿುಸಲಾಯಿತು. ಅರೆ ನೀರಾವರಿಗಾಗಿ ನಿರ್ವಣವಾಗಿದ್ದ ಆಣೆಕಟ್ಟೆ ನೀರು ಹುಬ್ಬಳ್ಳಿ, ಧಾರವಾಡ ಇತರ ಪ್ರದೇಶಗಳಿಗೆ ಕುಡಿಯಲು ಪೊರೈಕೆಯಾಗುತ್ತಿದೆ. ರೈತರ ಕೃಷಿ ಜಮೀನುಗಳಿಗೆ ದೊರೆಯುವ ನೀರು ಕುಡಿಯುವ ನೀರಿಗಾಗಿ ಪರಿವರ್ತನೆಯಾಯಿತು. ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದರಿಂದ ನೀರಿನ ಸಮಸ್ಯೆ ಎದುರಾಯಿತು. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮಲಪ್ರಭೆಗೆ-ಮಹದಾಯಿ ಜೋಡಿಸಬೇಕೆಂಬ ಕೂಗು ಹೆಚ್ಚಾಯಿತು. ಹಲವು ಹೋರಾಟ ಸಮಿತಿಗಳು ಹುಟ್ಟಿಕೊಂಡು ಪ್ರತಿಭಟನೆ ನಡೆಸುತ್ತ ಬಂದವು. ಯೋಜನೆ ವಿಳಂಬದಿಂದ ರೈತರಲ್ಲಿ ಆಕ್ರೋಶವು ಹೆಚ್ಚಿತು. ಹೋರಾಟವು ತೀವ್ರಗೊಂಡಿತು. 2015 ಜು. 16ರಂದು ರೈತ ಸೇನಾ ಕರ್ನಾಟಕ, ಮಹದಾಯಿ-ಮಲಪ್ರಭೆ ನದಿ ಜೋಡಣಾ ಹೋರಾಟ, ಕಳಸಾ-ಬಂಡೂರಿ ನಾಲಾ ಜೋಡಣೆ ಹೋರಾಟ ಸಮಿತಿ ನೇತೃತ್ವದಲ್ಲಿ ಪಟ್ಟಣದಲ್ಲಿ ರೈತರು ನಿರಂತರ ಧರಣಿ ಸತ್ಯಾಗ್ರಹ ಕೈಗೊಂಡರು. ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ 11 ತಾಲೂಕುಗಳಿಗೆ ಈ ಮಹದಾಯಿ ನೀರಿನ ಪ್ರಯೋಜನವಾಗಲಿದೆ. ಆದ್ದರಿಂದ 11 ತಾಲೂಕುಗಳಲ್ಲಿಯೂ ಆಗ ಧರಣಿ ನಡೆದು ಬಳಿಕ ಅಂತ್ಯಗೊಂಡಿತು. ಆದರೆ, ನರಗುಂದದಲ್ಲಿ ನಡೆಯುತ್ತಿರುವ ಧರಣಿ ಹೋರಾಟ ಇಂದಿಗೂ ಮುಂದುವರಿದಿದೆ. ಬಂಡಾಯ ನಗರಿಯಲ್ಲಿ ನಡೆಯುತ್ತಿರುವ ಈ ಹೋರಾಟ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿ ಇತಿಹಾಸದ ಪುಟ ಸೇರುತ್ತಿದ್ದರೂ ಯೋಜನೆ ಮಾತ್ರ ಸಾಫಲ್ಯಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಇದಕ್ಕೆ ರಾಜಕಾರಣಿಗಳ ಇಚ್ಚಾಶಕ್ತಿಯ ಕೊರತೆ ಪ್ರಮುಖ ಕಾರಣ.

ತೀರ್ಪು ವ್ಯತಿರಿಕ್ತವಾದರೆ ಮತ್ತೊಂದು ಬಂಡಾಯ ಖಚಿತ

ನ್ಯಾಯಮಂಡಳಿಯಲ್ಲಿನ ಹಿರಿಯ ನ್ಯಾಯಮೂರ್ತಿಗಳಾದ ಪಾಂಚಾಲ್ ಅವರು 2014ರಲ್ಲಿ ಮಲಪ್ರಭೆ ನದಿ ವೀಕ್ಷಣೆಗೆ ಸವದತ್ತಿಗೆ ಬಂದ ವೇಳೆ ಮಹದಾಯಿ ಸಮಸ್ಯೆ ಇತ್ಯರ್ಥಕ್ಕಾಗಿ ರೈತರು ಭಿನ್ನವಿಸಿಕೊಂಡರು. ಹೀಗೆ ಹಲವು ಬಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ, ಶಾಸಕ, ಸಚಿವರುಗಳಿಗೆ ರೈತರು ಮನವಿ ನೀಡುತ್ತ ಬಂದಿದ್ದಾರೆ. ನ್ಯಾಯ ಮಂಡಳಿ 2018ರ ಫೆಬ್ರವರಿಯಲ್ಲಿ ವಿಚಾರಣೆ ಮುಕ್ತಾಯಗೊಳಿಸಿದೆ. ಆದರೆ, ಆಗಸ್ಟ್ ಒಳಗೆ ತೀರ್ಪು ಬರುವ ನಿರೀಕ್ಷೆಯಿದ್ದು ರೈತರು ಆದೇಶಕ್ಕಾಗಿ ಕಾಯುತ್ತ ಧರಣಿ ಮುಂದುವರಿಸಿದ್ದಾರೆ. ನ್ಯಾಯಮಂಡಳಿ ತೀರ್ಪಿನಲ್ಲಿ ಹಿನ್ನಡೆಯಾಗುವ ಆತಂಕದಿಂದ ರೈತಸೇನಾ ಹೋರಾಟದ ವತಿಯಿಂದ ಸುಪ್ರೀಂಕೋರ್ಟ್​ಗೆ ಪಿಐಎಲ್ ಸಲ್ಲಿಸಲಾಗಿದೆ. ರಾಷ್ಟ್ರಪತಿಗೆ ದಯಾಮರಣಕ್ಕೆ ಕೋರಿದ್ದಾರೆ. ಕರ್ನಾಟಕದ ಪರ ಆದೇಶ ಬಂದಲ್ಲಿ ರೈತರು ಸಂತಸಗೊಳ್ಳಲಿದ್ದಾರೆ. ಆದರೆ, ಆದೇಶ ವ್ಯತಿರಿಕ್ತವಾದರೆ ಉತ್ತರ ಕರ್ನಾಟಕದ ರೈತರಿಂದ ಧರಣಿ ತೀವ್ರಗೊಂಡು ಮತ್ತೊಂದು ಬಂಡಾಯವಾದರೂ ಅಚ್ಚರಿಪಡಬೇಕಾಗಿಲ್ಲ.

ಹೋರಾಟದಲ್ಲಿ ಅಪಸ್ವರ

ಮಹದಾಯಿ ಹೋರಾಟದಲ್ಲಿನ ರೈತರು ಹಾಗೂ ರೈತ ಮುಖಂಡರ ಮಧ್ಯೆಯೇ ಭಿನ್ನಾಭಿಪ್ರಾಯ ಮೂಡಿದೆ. ಒಗ್ಗಟ್ಟಿನಿಂದ ಹೋರಾಡುತ್ತಿದ್ದವರು ಈಗ ಬೇರೆ ಬೇರೆ ಸಂಘಟನೆಗಳನ್ನು ಮಾಡಿಕೊಂಡು ಹೋರಾಟ ಮುಂದುವರಿಸಿದ್ದಾರೆ. ಸರ್ಕಾರಗಳು ಮಾತ್ರ ನ್ಯಾಯಮಂಡಳಿಯಲ್ಲಿ ಈ ವಿವಾದವಿದೆ ಎಂದು ಹೇಳುತ್ತ ತೆಪ್ಪಗೆ ಕುಳಿತಿವೆ. ರೈತರು ಮಾತ್ರ ಯೋಜನೆ ಅನುಷ್ಠಾನವಾಗುವವರೆಗೂ ಹೋರಾಟ ಮುಂದುವರಿಸುವುದಾಗಿ ಪಟ್ಟುಹಿಡಿದು ಕುಳಿತಿದ್ದಾರೆ. ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ರೈತ ಹೋರಾಟದ ಪ್ರಮುಖ ಘಟನಾವಳಿ

ರೈತ ಹೋರಾಟ ಸಮಿತಿಯಿಂದ 2012ರಲ್ಲಿ ಮಹದಾಯಿಗಾಗಿ ರಥಯಾತ್ರೆ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ನಂತರ 2015 ಆಗಸ್ಟ್​ದಲ್ಲಿ ಬೆಂಗಳೂರಿನಲ್ಲಿ ಆಗಿನ ರಾಜ್ಯ ಸರ್ಕಾರದ ಸಚಿವ, ಶಾಸಕರು ಮತ್ತು ರೈತ ಮುಖಂಡರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಯಿತು. 2015 ಆಗಸ್ಟ್ 24ರಂದು ಪ್ರಧಾನಿ ಮೋದಿಯವರ ಬಳಿ ಸರ್ವ ಪಕ್ಷ ನಿಯೋಗ ತೆರಳಿ ಮಹದಾಯಿ ನೀರಿನ ವಿವಾದ ಇತ್ಯರ್ಥಪಡಿಸಲು ಕೋರಲಾಯಿತು. ವಿವಾದ ಇತ್ಯರ್ಥವಾಗದ ಕಾರಣ ರೈತರ ಹೋರಾಟ ತೀವ್ರಗೊಂಡಿತು. 2015ರ ಸೆಪ್ಟೆಂಬರ್ 29ರಿಂದ ಕೂಡಲಸಂಗಮದಿಂದ ಕಣಕುಂಬಿಯವರೆಗೆ 750 ಕಿಮೀವರೆಗೆ ರೈತರು ಪಾದಯಾತ್ರೆ ನಡೆಸಿದರು. ಇದಕ್ಕೂ ಪೂರ್ವ ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ವಿಧಾನಸಭೆ ಅಧಿವೇಶನ ವೇಳೆ ರೈತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ರೈತ ಧರ್ಮಣ್ಣ ತಹಸೀಲ್ದಾರ ಮೃತಪಟ್ಟ. ಮಹದಾಯಿಗಾಗಿ ಒಬ್ಬ ರೈತ ಜೀವ ತೆತ್ತ ಬಳಿಕ ರೈತರ ಧರಣಿ, ಹೋರಾಟ ಹೆಚ್ಚುತ್ತಲೇ ಸಾಗಿದವು. ಬೆಂಗಳೂರಿನ ಪ್ರೀಡ್ಂ ಪಾರ್ಕ್​ನಲ್ಲಿ ಉಪವಾಸ ಸತ್ಯಾಗ್ರಹ, ಹುಬ್ಬಳ್ಳಿಯಲ್ಲಿ ರೈಲ್ ರೋಖೋ, ರಸ್ತೆ ತಡೆ, ಆಮರಣಾಂತ ಉಪವಾಸ ಹೋರಾಟ ಜರುಗಿದವು. ವೀರೇಶ ಸೊಬರದಮಠ ಅವರಿಂದ ಸರ್ವಧರ್ಮ ಗುರುಗಳ ನೇತೃತ್ವದಲ್ಲಿ 2016 ಅಕ್ಟೋಬರ್ 17ರಂದು ಹೋರಾಟದ ಸನ್ಯಾಸ ದೀಕ್ಷೆ ಸ್ವೀಕಾರ. ಜಯ ಮೃತ್ಯುಂಜಯ ಶ್ರೀಗಳಿಗೆ ಹೋರಾಟ ವೇದಿಕೆಯಲ್ಲಿ ದಿಗ್ಬಂಧನ. ರೈತ ಮುಖಂಡರ ಮೇಲೆ ಹಲ್ಲೆ. ನಂದೀಶ ಮಠದ ಎಂಬುವರಿಂದ ಹೋರಾಟ ವೇದಿಕೆಯಲ್ಲಿ ವಿಷ ಸೇವನೆ. ಮತಕ್ಷೇತ್ರದ ಕರಕೀಕಟ್ಟಿಯ ರೈತರೊಬ್ಬರು ಚೂರಿ ಚುಚ್ಚಿಕೊಂಡರು. ಹೀಗೆ ಹತ್ತಾರು ಘಟನೆಗಳು ಮಹದಾಯಿ ಹೋರಾಟದಲ್ಲಿ ಎದ್ದು ಕಾಣುತ್ತವೆ. ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಕೆಲ ರೈತರು ತಮ್ಮ ಪ್ರಾಣ ಕಳೆದುಕೊಂಡರೂ ಅಂತಹ ರೈತ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಿ ಕೈತೊಳೆದುಕೊಂಡಿದೆ.

 

ರಾಜಕಾರಣಿಗಳ ಇಚ್ಚಾಶಕ್ತಿ ಕೊರತೆಯಿಂದ 3 ವರ್ಷ ನಿರಂತರ ಹೋರಾಟ ಮಾಡುವಂತಾಗಿದೆ. ಕಳೆದ 15 ದಿನಗಳ ಹಿಂದೆ ರೈತ ಸೇನಾ ಕರ್ನಾಟಕದಿಂದ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಗುರುವಾರ ಸ್ವೀಕೃತಗೊಂಡಿದೆ. ಆದರೆ, ರಾಷ್ಟ್ರಪತಿಗಳ ಕಾರ್ಯಾಲಯದಿಂದ ಸೂಕ್ತ ಉತ್ತರ ದೊರೆಯದ್ದರಿಂದ ಜು. 16ರಂದು ಉತ್ತರ ಕರ್ನಾಟಕ ಭಾಗದ ರೈತರು ಹಾಗೂ ಮಠಾಧೀಶರು, ವಿವಿಧ ಸಂಘಟನೆಗಳ ಅಂದಾಜು 500 ಜನರಿಂದ ರಾಷ್ಟ್ರಪತಿಗಳಿಗೆ ದಯಾಮರಣಕ್ಕಾಗಿ ಪತ್ರ ಚಳವಳಿ ಹಮ್ಮಿಕೊಂಡಿದ್ದೇವೆ.

| ವೀರೇಶಸ್ವಾಮಿ ಸೊಬರದಮಠ ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ

 

ಮೂರ್ನಾಲ್ಕು ದಶಕಗಳಿಂದ ಮಹದಾಯಿ ಕಳಸಾ-ಬಂಡೂರಿಗಾಗಿ ನಾವು ಹೋರಾಟ ಆರಂಭಿಸಿದ್ದೆವು. ಆದರೆ, ರಾಜಕೀಯ ವ್ಯಕ್ತಿಗಳು ಇದನ್ನು ರಾಜಕೀಯ ದಾಳವಾಗಿ ಬಳಸಿಕೊಂಡು ಉತ್ತರ ಕರ್ನಾಟಕ ರೈತರ ಕಣ್ಣಿಗೆ ಮಣ್ಣೆರೆಚಿದ್ದಾರೆ. ಏನೇ ಆಗಲಿ ನಮ್ಮ ಪಾಲಿನ ನೀರನ್ನು ಒದಗಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನೊಂದು ರೈತ ಬಂಡಾಯ ನರಗುಂದದಲ್ಲಿ ನಡೆಯುವುದು ಖಂಡಿತ.

| ವಿಜಯ ಕುಲಕರ್ಣಿ ಕಳಸಾ ಬಂಡೂರಿ ಕೇಂದ್ರ ಯುವ ಹೋರಾಟ ಸಮಿತಿ ಅಧ್ಯಕ್ಷ

 

ಮಹದಾಯಿ ಹೋರಾಟ ಮೂರು ವರ್ಷ ಪೂರೈಸಿದರೂ ಯಾವುದೇ ಬೆಳವಣಿಗೆ ಕಾಣದಿರುವುದು ಅಸಮಾಧಾನ ತಂದಿದೆ. ನ್ಯಾಯಾಧಿಕರಣದ ಅಂತಿಮ ವಿಚಾರಣೆ ಮುಗಿದಿದ್ದು, ಕೋರ್ಟ್​ನ ಅಂತಿಮ ತೀರ್ಪಿನ ಆದೇಶವನ್ನು ಕಾಯುತ್ತಿದ್ದೇವೆ. ಮಹದಾಯಿಯಲ್ಲಿ ನಮ್ಮ ಪಾಲಿನ ನೀರಿನ ಹಕ್ಕನ್ನು ನಾವು ಪಡೆಯಲು ಕಾನೂನು ಹೋರಾಟ ಮುಂದುವರಿಸುತ್ತೇವೆ.

| ಶಂಕ್ರಪ್ಪ ಅಂಬಲಿ ಮಹದಾಯಿ ಮಹಾವೇದಿಕೆ ಮುಖಂಡ