ಮಹಾವೀರರ ತತ್ವಾದರ್ಶ ಸಾರ್ವಕಾಲಿಕ

ಗುಡಿಬಂಡೆ: ಶಾಂತಿಧೂತ ಭಗವಾನ್ ಮಹಾವೀರರ ತತ್ವಾದರ್ಶ ಸರ್ವಕಾಲಿಕವಾಗಿದ್ದು, ಶಾಂತಿಯುತ ಸಮಾಜ ನಿರ್ವಣಕ್ಕೆ ಅವು ಮಾರ್ಗದರ್ಶಿಯಾಗಿವೆ ಎಂದು ಕನಕಗಿರಿ ಮಠದ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಜೈನರ ಬೀದಿಯ ಐತಿಹಾಸಿಕ ಬಸದಿಯಲ್ಲಿ ಭಾನುವಾರ 4ನೇ ವರ್ಷದ ಪೂಜಾ ಮಹೋತ್ಸವದಲ್ಲಿ ಮಾತನಾಡಿದರು. ಮಹಾವೀರರ ತತ್ವಗಳನ್ನು ಎಲ್ಲರೂ ತಿಳಿದುಕೊಳ್ಳುವುದು ಅವಶ್ಯವಾಗಿದೆ. ಉತ್ತಮ ವ್ಯಕ್ತಿತ್ವವನ್ನು ರೂಪಿಸುವುದೆ ಧರ್ಮ. ಧರ್ಮ, ದೇವರ ಪರಿಕಲ್ಪನೆ ಕಾಲಮಾನಕ್ಕೆ ತಕ್ಕಂತೆ ಸ್ಥಿತ್ಯಂತರಗೊಳ್ಳುತ್ತಿದ್ದರೂ ಬದುಕಿಗೆ ನೈತಿಕ ಚೌಕಟ್ಟು ಹಾಕಿಕೊಟ್ಟಿದೆ. ಮುಖ್ಯವಾಗಿ ಮಹಾವೀರರು ತನ್ನ ಎಲ್ಲ ಭೋಗಗಳನ್ನು ತೊರೆದು ಸಮಾಜದಲ್ಲಿ ಶಾಂತಿ ಸ್ಥಾಪಿಸಲು ಹೊರಟಂತಹ ಮಹಾನ್ ವ್ಯಕ್ತಿ. ಅಂಹಿಸೆಯ ಪ್ರತಿಪಾದಕರಾದ ಅವರ ಆದರ್ಶಗಳನ್ನು ನಾವೆಲ್ಲ ಅನುಸರಿಸಿ ಶಾಂತಿಯುತ ಸಮಾಜ ನಿರ್ಮಾಣ ಮಾಡಬೇಕು ಎಂದರು.

ಸುಧರ್ಮ ಗುಪ್ತಿ ಕ್ಷುಲ್ಲಕ ಮುನಿಗಳು ಮಾತನಾಡಿ, ಮಹಾವೀರರು ವಿಶ್ವದಲ್ಲಿ ಶಾಂತಿ, ಅಹಿಂಸೆ ಬಯಸಿ ತ್ಯಾಗ, ತಪಸ್ಸು ಮಾಡಿದವರು. ಈ ಆಧುನಿಕ ಯುಗದಲ್ಲಿ ನಾವೆಲ್ಲ ಮಹಾವೀರರ ತತ್ವಗಳನ್ನು ಅಳವಡಿಸಿಕೊಂಡು ಅಹಿಂಸೆ ಮಾರ್ಗದಲ್ಲಿ ನಡೆಯಬೇಕಾಗಿದೆ. ಮನುಷ್ಯನ ಆಸೆ, ಆಕಾಂಕ್ಷೆಗಳಿಗೆ ಮಿತಿ ಇಲ್ಲ. ನಿರಂತರ ಆಪೇಕ್ಷೆಯಿಂದ ಮಾನಸಿಕ ಅಸಮತೋಲನವಾಗುತ್ತಿದೆ. ಎಲ್ಲದಕ್ಕೂ ಮಿತಿಯಿರಬೇಕು. ಬಾಹ್ಯ ಹಾಗೂ ಮಾನಸಿಕ ಹಿಂಸೆ ಮಹಾಪಾಪದ ಎರಡು ಮುಖವಿದ್ದಂತೆ. ಭಗವಂತನ ಸೃಷ್ಟಿಯಲ್ಲಿ ಪ್ರತಿ ಜೀವಿಗೂ ಬದುಕುವ ಹಕ್ಕಿದೆ. ಹಾಗಾಗಿ ಯಾರೊಬ್ಬರಿಗೂ ತೊಂದರೆ ಕೊಡಬೇಡಿ ಎಂದರು.

ಜೈನ ಧರ್ಮದ ಕುರಿತು ತುಮಕೂರಿನ ನಿವೃತ್ತ ಪ್ರಾಚಾರ್ಯ ಡಾ.ಎಸ್.ವಿ.ಪದ್ಮಪ್ರಸಾದ್ ಉಪನ್ಯಾಸ ನೀಡಿದರು. ಚಂದ್ರನಾಥ, ಪಾರ್ಶ್ವನಾಥ ದೇವಾಲಯದಲ್ಲಿ ನಿತ್ಯ ವಿಶೇಷ ಪೂಜೆ, ಅಗ್ರೋದಕ ಮೆರವಣಿಗೆ, 108 ಕಲಶಗಳ ಮಹಾಭಿಷೇಕ, ಎಳನೀರು ಅಭಿಷೇಕ, ಕಬ್ಬಿನಹಾಲು ಅಭಿಷೇಕ, ಗಂಧಾಭಿಷೇಕ, ಕಲ್ಪಛೂರ್ಣ ಅಭಿಷೇಕ, ಕಷಾಯಾ ಅಭಿಷೇಕ, ಪುಷ್ಪವೃಷ್ಟಿ, ಪೂರ್ಣಕುಂಭ ಕಲಶ ಬಳಿಕ ಮಹಾಮಂಗಳಾರತಿಯನ್ನು ಪುರೋಹಿತರಾದ ಕಿರಣ್ ಪಂಡಿತ್, ಸಂತೋಷ್ ಪಂಡಿತ್ ನೆರವೇರಿಸಿದರು.

ತಹಸೀಲ್ದಾರ್ ಹನುಮಂತರಾಯಪ್ಪ, ಪಪಂ ಮಾಜಿ ಅಧ್ಯಕ್ಷ ದ್ವಾರಕನಾಥ ನಾಯ್ಡು, ಜೈನ ಮುಖಂಡರಾದ ಬೆಂಗಳೂರಿನ ಬಿ.ಪ್ರಸನ್ನಯ್ಯ, ಕೆ.ವಿ.ನೇಮರಾಜಯ್ಯ, ಕುಮುದಾ, ಗುಡಿಬಂಡೆ ಜೈನ ದಿಗಂಬರ ದೇವಾಲಯ ಟ್ರಸ್ಟ್ ಅಧ್ಯಕ್ಷ ಡಾ.ಜಿ.ಬಿ.ಪುಟ್ಟಣಯ್ಯ, ಉಪಾಧ್ಯಕ್ಷ ಅಜೀತ್ ಪ್ರಸಾದ್, ಕಾರ್ಯದರ್ಶಿ ಆಶಾಪ್ರಭು, ಖಜಾಂಜಿ ಬಿ.ಧರಣೇಂದ್ರಯ್ಯ, ಮುಖಂಡರಾದ ಪ್ರಭು ಜೈನ್, ಸರಳಕುಮಾರಿ, ಸುರೇಶ್ ಜೈನ್, ಸರೋಜಾ ಪ್ರಭು, ಎಸ್.ಜೆ.ಶುಭಚಂದ್ರ, ಬಿ.ಜೆ ಚಂದ್ರಕಲಾ, ಎ.ಸಿ.ಧರಣೇಂದ್ರಯ್ಯ, ಗುಂಪುಮರದ ಆನಂದ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *