ಮಹಾವೀರರ ತತ್ತ್ವ ಸಿದ್ಧಾಂತ ವಿಶ್ವಕ್ಕೆ ದಾರಿದೀಪ

ಬೆಂಗಳೂರು: ಜೈನ್ ಯುವ ಸಂಘಟನೆ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ಶ್ರಮಣ ಭಗವಾನ್ ಮಹಾವೀರರ 2,618ನೇ ಜನ್ಮ ಕಲ್ಯಾಣಮಹೋತ್ಸವನ್ನು ಜೈನ ಸಮುದಾಯದವರು ಬುಧವಾರ ಶ್ರದ್ಧೆ, ಭಕ್ತಿಯಿಂದ ಆಚರಿಸಿದರು.

ಸಂಸದ ಪಿ.ಸಿ. ಮೋಹನ್, ಶಾಸಕ ಉದಯ್ ಗರುಡಾಚಾರ್, ಅದಮ್ಯ ಚೇತನ ಟ್ರಸ್ಟ್ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಸೇರಿ ವಿವಿಧ ಗಣ್ಯರು ಭಗವಾನ್ ಮಹಾವೀರ ಪ್ರತಿಮೆಗೆ ಮಾರ್ಲಾಪಣೆ ಮಾಡಿದರು. ಸಂಜೆ ‘ನವಕಾರ ಕರೇ- ಭವಪಾರ್’ ಸಾಂಸ್ಕೃತಿಕ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಇದಕ್ಕೂ ಮುನ್ನ ಟೌನ್​ಹಾಲ್​ನಲ್ಲಿ ‘ಶಾಂತಿ ಜಾಥಾ’ಕ್ಕೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಚಾಲನೆ ನೀಡಿದರು. ನಗರ್ತಪೇಟೆ, ಚಿಕ್ಕಪೇಟೆ ಮತ್ತು ಬಿ.ವಿ.ಕೆ. ಅಯ್ಯಂಗಾರ್ ರಸ್ತೆಯಲ್ಲಿ ಸಂಚರಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಸಮಾಪ್ತಿಗೊಂಡಿತು. 152 ಸಂಸ್ಥೆಯ ಪದಾಧಿಕಾರಿಗಳು ಮತ್ತು ಜೈನಮುನಿಗಳು ಸೇರಿ 20 ಸಾವಿರ ಮಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು. ಮಹಾವೀರರ ಶಾಂತಿಸಂದೇಶ ಮತ್ತು ಆರೋಗ್ಯದ ಬಗ್ಗೆ ಕಾಳಜಿಯ ಫಲಕಗಳನ್ನು ಪ್ರದರ್ಶಿಸಲಾಯಿತು.

ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವರ್ಧಮಾನ್ ಪ್ರಸಿದ್ಧಿ ಲಭಾರ್ಥಿ ಪ್ರಕಾಶ್​ಚಂದಜೀ ಕೊಠಾರಿ ಮಾತನಾಡಿ, ಅಹಿಂಸೆಯೇ ಶ್ರೇಷ್ಠವೆಂದು ಜಗತ್ತಿಗೆ ಸಾರಿದ ಭಗವಾನ್ ಮಹಾವೀರರ ಆದರ್ಶ ಅಳವಡಿಸಿಕೊಳ್ಳಬೇಕು ಎಂದರು. ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರಜೀ ಜೈನ್ ಮಾತನಾಡಿ, ಅತಿ ಆಸೆ ಮತ್ತು ಅಧಿಕಾರದ ಮೇಲಿನ ಮೋಹ ಮನುಷ್ಯನ ನೆಮ್ಮದಿ ಹಾಳು ಮಾಡುತ್ತದೆ. ಹೀಗಾಗಿ, ಸರಳತೆಯೊಂದಿಗೆ ದುಡಿದು ತಿನ್ನುವ ಹವ್ಯಾಸ ಬೆಳೆಸಿಕೊಂಡು ಸುಂದರ ಭವಿಷ್ಯ ಕಟ್ಟಿಕೊಳ್ಳಬೇಕು ಎಂದರು.

24ನೇ ತೀರ್ಥಂಕರ ಭಗವಾನ್ ಮಹಾವೀರರ ಪಂಚತತ್ವಗಳ ಪ್ರತಿಪಾದಕ ರಾಗಿದ್ದರು. ಸತ್ಯ, ಅಹಿಂಸೆ, ಅಚೌರ್ಯ, ಅಪರಿಗ್ರಹಣ ಮತ್ತು ಬ್ರಹ್ಮಚರ್ಯ ತತ್ವಗಳ ಬಗ್ಗೆ ತಿಳಿಸಿದ್ದರು. ಅಂತಹ ಮಹನೀಯನ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು.

| ಮೂಲ್​ಚಂದಜೀ, ನಹರ್

Leave a Reply

Your email address will not be published. Required fields are marked *