ಮಹಾವಂಚಕರು…

ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ವಂಚನೆ ಮಾಡಿ, ದೇಶಬಿಟ್ಟು ವಿದೇಶದಲ್ಲಿ ಆರಾಮಾಗಿರುವ ವಿಜಯ್ ಮಲ್ಯ ಪ್ರಕರಣ ಇನ್ನೂ ಅಂತ್ಯ ಕಂಡಿಲ್ಲ. ಇದಕ್ಕೂ ಮುನ್ನವೇ ಈ ಸಾಲಿನಲ್ಲಿ ಇನ್ನೋರ್ವ ಬ್ಯಾಂಕ್ ವಂಚಕ ಸೇರ್ಪಡೆಯಾಗಿದ್ದಾರೆ. ಅವರೇ ನೀರವ್ ಮೋದಿ. ವಜ್ರಾಭರಣ ವ್ಯಾಪಾರದಲ್ಲಿ ಖ್ಯಾತಿ ಗಳಿಸಿದ್ದ ಮೋದಿ ದೇಶದ ಬ್ಯಾಂಕ್​ಗೆ ಸಾವಿರಾರು ಕೋಟಿ ರೂ.ಗಳನ್ನು ವಂಚಿಸಿ ವಿದೇಶಕ್ಕೆ ಪಲಾಯನಗೈದ ಈ ಪ್ರಕರಣ, ಮಗದೊಮ್ಮೆ ಬ್ಯಾಂಕಿಂಗ್ ಕ್ಷೇತ್ರದ ಹುಳುಕುಗಳತ್ತ ಬೆಟ್ಟು ಮಾಡಿ ತೋರುತ್ತಿದೆ.

| ಆರ್. ಹರಿಶಂಕರ್ ಬೆಂಗಳೂರು

ಇಷ್ಟು ದಿನ ವಜ್ರಾಭರಣಗಳ ವ್ಯಾಪಾರ ವಹಿವಾಟಿನಲ್ಲಿ ಜಗದ್ವಿಖ್ಯಾತಿ ಪಡೆದಿದ್ದ, ಪೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ರಾರಾಜಿಸುತ್ತಿದ್ದ ನೀರವ್ ಮೋದಿ ಹೆಸರು ಈಗ ಭಾರತದ ಆರ್ಥಿಕ ಕ್ಷೇತ್ರದ ಖಳನಾಯಕನ ಸ್ಥಾನದಲ್ಲಿ ನಿಂತಿದೆ. ಸದ್ಯದ ಅಂದಾಜಿನಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ (ಪಿಎನ್​ಬಿ) 11,300 ಕೋಟಿ ರೂ.ಗಳನ್ನು ವಂಚಿಸಿ, ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ಜನರಿಗಿದ್ದ ನಂಬಿಕೆಗೆ ಧಕ್ಕೆ ತಂದಿರುವ ನೀರವ್ ಮೋದಿ ಈಗ ನಾಪತ್ತೆಯಾಗಿದ್ದಾರೆ. ಬ್ಯಾಂಕ್​ಗಳನ್ನೇ ಬಳಸಿಕೊಂಡು ಬ್ಯಾಂಕ್​ಗಳಿಗೇ ವಂಚಿಸಿರುವ ನೀರವ್ ಮೋದಿ, ಇದಕ್ಕೆ ತಾವು ಆಯ್ದುಕೊಂಡಿರುವುದು ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್​ಅನ್ನು(ಪಿಎನ್​ಬಿ). ನೀರವ್ ಮೋದಿ ಮತ್ತು ಅವರ ಸಂಬಂಧಿ ಮೆಹುಲ್ ಚೌಕ್ಸಿ ಗೀತಾಂಜಲಿ ಜೆಮ್್ಸ, ನಕ್ಷತ್ರ, ಗಿಲಿ ಇಂಡಿಯಾ, ಸೋಲಾರ್ ಎಕ್ಸ್​ಪೋರ್ಟ್ಸ್, ಸ್ಟೆಲ್ಲಾರ್ ಡೈಮಂಡ್, ಡೈಮಂಡ್ ಆರ್ ಯು ಕಂಪನಿಗಳ ಹೆಸರಲ್ಲಿ ವಿದೇಶದಲ್ಲಿ ಕಚ್ಚಾ ವಜ್ರಗಳನ್ನು ಖರೀದಿಸಿ ಮಾರಾಟ ಮಾಡುವ ಉದ್ದಿಮೆ ನಡೆಸುತ್ತಿದ್ದಾರೆ. ಕಚ್ಚಾ ವಜ್ರಗಳನ್ನು ಖರೀದಿಸಿದ ನಂತರ ಕಂಪನಿಗಳಿಗೆ ಪಿಎನ್​ಬಿಯ ಒಪ್ಪಂದ ಪತ್ರದ (ಲೆಟರ್ ಆಫ್ ಅಂಡರ್​ಟೇಕಿಂಗ್) ಮೂಲಕ ಭಾರತ ಮೂಲದ ವಿದೇಶಿ ಬ್ಯಾಂಕ್​ಗಳಲ್ಲಿ ತಾತ್ಕಾಲಿಕ ಸಾಲ ಪಡೆದು ಹಣ ಪಾವತಿ ಮಾಡುತ್ತಾರೆ. ಒಪ್ಪಂದ ಪತ್ರದ ಆಧಾರದಲ್ಲಿ ವಿದೇಶಿ ಬ್ಯಾಂಕ್​ಗಳು 2011ರಿಂದಲೂ ನೀರವ್ ಮೋದಿ ಒಡೆತನದ ಕಂಪನಿಗಳಿಗೆ ಸಾಲ ನೀಡುತ್ತ ಬಂದಿವೆ.

ವ್ಯಾಪಾರ ವಹಿವಾಟಿನಲ್ಲಿ ಹಣ ಪಾವತಿಸಲು ಪಿಎನ್​ಬಿ ಹೆಸರು ಹೇಳಿಕೊಂಡು ವಿದೇಶಿ ಬ್ಯಾಂಕ್​ಗಳಲ್ಲಿ ಸಾಲ ಮಾಡಿರುವ ನೀರವ್ ಮೋದಿ ಸಾಲ ಮರುಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕ್​ಗಳು ತಾವು ನೀರವ್ ಕಂಪನಿಗಳಿಗೆ ನೀಡಿದ ಸಾಲದ ಬಾಧ್ಯತೆ ಹೊರಲು ಪಿಎನ್​ಬಿಗೆ ಸೂಚಿಸುವಂತೆ ಆರ್​ಬಿಐಗೆ(ಭಾರತೀಯ ರಿಸರ್ವ್ ಬ್ಯಾಂಕ್) ಮನವಿ ಮಾಡಿಕೊಂಡಿವೆ. ಇದೇ ವಿಚಾರವಾಗಿ, ಸಾಲ ಮರುಪಾವತಿ ಮಾಡುವಂತೆ ಪಿಎನ್​ಬಿಗೆ ಆರ್​ಬಿಐ ನಿರ್ದೇಶನವನ್ನೂ ನೀಡಿದೆ. ಆಗಲೇ ಈ ಭಾರಿ ವಂಚನೆ ಬೆಳಕಿಗೆ ಬಂದಿದ್ದು. ಆರ್​ಬಿಐನಿಂದ ಇಂಥ ನಿರ್ದೇಶನ ಬರುತ್ತಲೇ ಪಿಎನ್​ಬಿ ಜ.29ರಂದು ಗೀತಾಂಜಲಿ ಜೆಮ್್ಸ ಸೇರಿ ನೀರವ್ ಮೋದಿ ಮತ್ತು ಸಂಬಂಧಿ ಮೆಹುಲ್ ಚೌಕ್ಸಿ ಒಡೆತನದ ವಜ್ರಾಭರಣ ಕಂಪನಿಗಳ ವಿರುದ್ಧ ಸಿಬಿಐಗೆ ದೂರು ನೀಡಿದೆ. ಆದರೆ, ಅಷ್ಟು ಹೊತ್ತಿಗಾಗಲೇ ನೀರವ್ ದೇಶ ಬಿಟ್ಟಾಗಿತ್ತು. ಸದ್ಯ ನೀರವ್ ನ್ಯೂಯಾರ್ಕ್​ನಲ್ಲಿರುವುದಾಗಿ ತನಿಖಾ ಸಂಸ್ಥೆಗಳಿಗೆ ಮಾಹಿತಿ ಲಭ್ಯವಾಗಿದೆ. ಆದರೆ, ನೀರವ್ ಭಾರತೀಯ ಬ್ಯಾಂಕಿಂಗ್ ವಲಯ, ಷೇರು, ಹೂಡಿಕೆ ವಲಯಲ್ಲಿ ನೀರವ ಮೌನ ಉಂಟಾಗುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.

ನೀರವ್ ಹಗರಣದಲ್ಲಿ ಬ್ಯಾಂಕಿನ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಮಧ್ಯವರ್ತಿಗಳೂ ಶಾಮೀಲಾಗಿರುವುದು ಮೇಲ್ನೋಟಕ್ಕೆ ಗೋಚರವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ಮುಂಬೈ ಮೂಲದ ಗೋಕುಲ್​ನಾಥ್ ಶೆಟ್ಟಿ ಮತ್ತು ಮನೋಜ್ ಕಾರಟ್ ಎಂಬುವವರನ್ನು ಮತ್ತು ನೀರವ್ ಮೋದಿ ಕಂಪನಿಯ ಸಿಬ್ಬಂದಿಯೊಬ್ಬರನ್ನು ಸಿಬಿಐ ಬಂಧಿಸಿದೆ. ಇನ್ನೊಂದೆಡೆ ಇಂಥ ಪ್ರಕರಣಕ್ಕೆ ನೆರವು ನೀಡಿದ 18ಕ್ಕೂ ಹೆಚ್ಚು ಸಿಬ್ಬಂದಿಯನ್ನು ಬ್ಯಾಂಕ್ ಅಮಾನತು ಮಾಡಿದೆ. ಸಿಬ್ಬಂದಿಯೇ ಅವ್ಯವಹಾರದಲ್ಲಿ ತೊಡಿಗಿರುವ ಈ ಬೆಳವಣಿಗೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹಾಸು ಹೊಕ್ಕಿರುವ ಆಂತರಿಕ ಭ್ರಷ್ಟಾಚಾರವನ್ನು ಸಾಬೀತುಪಡಿಸುತ್ತಿರುವಂತಿದೆ. ಈ ಪ್ರಕರಣ ಒತ್ತಟ್ಟಿಗಿರಲಿ. ಭಾರತದಲ್ಲಿ ನಡೆದಿರುವ ಬ್ಯಾಂಕಿಂಗ್ ಹಗರಣಗಳ ಕುರಿತು ರಿಸರ್ವ್ ಬ್ಯಾಂಕ್ ನೀಡಿರುವ ಅಂಕಿ-ಅಂಶಗಳು ಗಾಬರಿ ಹುಟ್ಟಿಸುವಂತಿವೆ. ಕಳೆದ 5 ವರ್ಷಗಳಲ್ಲಿ ಇಂಥ 8670 ಪ್ರಕರಣಗಳನ್ನು ಅದು ಪಟ್ಟಿ ಮಾಡಿದೆ. ಈ ಹಗರಣಗಳ ಒಟ್ಟಾರೆ ಮೊತ್ತ 62270 ಕೋಟಿ ರೂ.ಗಳು. ಇವು, ಸಾಲ ಪಡೆದೂ ಉದ್ದೇಶಪೂರ್ವಕವಾಗಿ ಮರು ಪಾವತಿ ಮಾಡದೆ ಇರುವ ಹಗರಣ ಗಳಾಗಿವೆ. ಈ ಹಗರಣಗಳಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೊದಲ ಸ್ಥಾನದಲ್ಲಿದ್ದು, ಅದು ಸಾಲವಾಗಿ ನೀಡಿರುವ ಮೊತ್ತ 6562 ಕೋಟಿ ರೂ. ಇದರ ನಂತರದ ಸ್ಥಾನದಲ್ಲಿರುವ ಬ್ಯಾಂಕ್ ಆಫ್ ಬರೋಡಾ 4473 ಕೋಟಿ ರೂ.ಗಳನ್ನು ಕಳೆದುಕೊಂಡಿದೆ. ಒಟ್ಟಾರೆ, ಬ್ಯಾಂಕ್​ಗಳ ವಸೂಲಾಗದ ಸಾಲದ (ಎನ್​ಪಿಎ) ಮೊತ್ತ 9 ಲಕ್ಷ ಕೋಟಿ ರೂಪಾಯಿಗಳಿಗೂ ಮಿಗಿಲು ಎಂದಿವೆ ಅಂಕಿಅಂಶಗಳು. ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿರುವ ಎನ್​ಪಿಎ ಒತ್ತಡ ಎಂಥದ್ದು ಎಂಬುದಕ್ಕೆ ಈ ಅಂಕಿಸಂಖ್ಯೆಗಳೇ ಸಾಕ್ಷಿ ಒದಗಿಸುತ್ತಿವೆ.

ಬ್ಯಾಂಕಿಂಗ್ ವಿಶ್ವಾಸಕ್ಕೆ ಧಕ್ಕೆ: ನೀರವ್ ಮೋದಿ ಹಗರಣಕ್ಕೂ ಮೊದಲು ಭಾರತದಲ್ಲಿ ಕೇಳಿ ಬರುತ್ತಿದ್ದ ಬಹುಮುಖ್ಯ ಬ್ಯಾಂಕಿಂಗ್ ಹಗರಣ ವಿಜಯ್ ಮಲ್ಯರದ್ದು. ಬ್ಯಾಂಕುಗಳಿಂದ 9500 ಕೋಟಿ ರೂ. ಪಡೆದಿದ್ದ ಮಲ್ಯ ಉದ್ದೇಶಪೂರ್ವಕ ಸುಸ್ತಿದಾರರಾಗಿ ವಿದೇಶಕ್ಕೆ ಪಲಾಯನಗೊಂಡಿದ್ದು, ಕಾನೂನಿನಲ್ಲಿದ್ದ ನ್ಯೂನತೆಗಳ ಲಾಭ ಪಡೆದು ವಿದೇಶದಲ್ಲಿ ರಕ್ಷಣೆ ಪಡೆದಿದ್ದು, ಅಲ್ಲಿ ಐಷಾರಾಮ ಜೀವನವನ್ನೇ ಮುಂದುವರಿಸಿದ್ದು; ಇವೆಲ್ಲವೂ ಭಾರತದ ನಾಗರಿಕರಲ್ಲಿ ಬ್ಯಾಂಕಿಂಗ್ ಮತ್ತು ಕಾನೂನು ವ್ಯವಸ್ಥೆ ಮೇಲೆ ಕೊಂಚ ಮಟ್ಟಿಗೆ ರೇಜಿಗೆ ಹುಟ್ಟಿಸಿತ್ತು. ಹೀಗಿರುವಾಗಲೇ ಬಯಲಾಗಿರುವ ನೀರವ್ ಮೋದಿ ಹಗರಣ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ನಾಗರಿಕರಿಗಿದ್ದ ವಿಶ್ವಾಸಕ್ಕೆ ಧಕ್ಕೆಯುಂಟು ಮಾಡಿದೆ.

ದೇಶದ ಬ್ಯಾಂಕಿಂಗ್ ಹಗರಣಗಳಿವು:

2011: ಬ್ಯಾಂಕ್ ಆಫ್ ಮಹಾರಾಷ್ಟ್ರ, ಐಡಿಬಿಐ, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಬ್ಯಾಂಕ್​ಗಳ ವಿವಿಧ ಶಾಖೆಗಳಲ್ಲಿ ಅಧಿಕಾರಿಗಳೇ ನಕಲಿ ಖಾತೆ ತೆರೆದು 1500 ಕೋಟಿ ರೂ.ಗಳಷ್ಟು ಸಾಲ ಪಡೆದಿರುವ ಹಗರಣವನ್ನು ಸಿಬಿಐ ಬಯಲು ಮಾಡಿತ್ತು.

2014: ಸ್ಥಿರ ಠೇವಣಿ ಖಾತೆಗಳ ವಂಚನೆಗೆ ಸಂಬಂಧಿಸಿದಂತೆ ಹಲವು ಸಂಸ್ಥೆಗಳ ವಿರುದ್ಧ ಮುಂಬೈ ಪೊಲೀಸರು 9 ಎಫ್​ಐಆರ್​ಗಳನ್ನು ದಾಖಲಿಸಿದ್ದರು. ವಂಚನೆ ಮೊತ್ತ 700 ಕೋಟಿ ರೂ.ಗಳಾಗಿದ್ದವು. ಕೋಲ್ಕತದ ಬಿಪಿನ್ ಓರಾ ಎಂಬುವರು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದಿಂದ 1700 ಕೋಟಿ ರೂ. ಸಾಲ ಪಡೆದೂ ಪಾವತಿಸದೆ ಸುಸ್ತಿದಾರರಾದ ಸುದ್ದಿ ಹೊರಬಿದ್ದಿತ್ತು. ಸಾಲ ನೀಡಲು ಲಂಚ ಪ್ರಕರಣದಲ್ಲಿ ಸಿಂಡಿಕೇಟ್ ಬ್ಯಾಂಕ್​ನ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್​ಕೆ ಜೈನ್ ಸಿಕ್ಕಿಬಿದ್ದರು. 8000 ಕೋಟಿ ರೂ.ಗಳಷ್ಟು ಸಾಲವನ್ನು ಬ್ಯಾಂಕ್​ನಿಂದ ಅವರು ವ್ಯವಸ್ಥಿತವಾಗಿ ಬಿಡುಗಡೆ ಮಾಡಿಸಿದ್ದರು.

2015: ವಿವಿಧ ಬ್ಯಾಂಕ್​ಗಳಲ್ಲಿ ಸಿಬ್ಬಂದಿಯೇ ವಿದೇಶಿ ವಿನಿಮಯದಲ್ಲಿ ಅಕ್ರಮ ಎಸಗಿದ ಹಗರಣ ಹೊರಬಿತ್ತು. ಒಟ್ಟಾರೆ ಮೊತ್ತ 6000 ಕೋಟಿಗಳು ರೂ.ಗಳ ವಿನಿಮಯದಲ್ಲಿ ಅಕ್ರಮ ನಡೆದಿದ್ದು ಬಯಲಾಗಿತ್ತು.

2016: ಸಿಂಡಿಕೇಟ್ ಬ್ಯಾಂಕ್​ನ ಮತ್ತೊಂದು ಹಗರಣವಿದು. 380 ನಕಲಿ ಖಾತೆಗಳನ್ನು ತೆರದಿದ್ದ ನಾಲ್ವರು, ಒಪ್ಪಂದ ಪತ್ರ, ಚೆಕ್​ಗಳ ಮೂಲಕ 1000 ಕೋಟಿ ರೂ.ಗಳ ಅಕ್ರಮ ಎಸಗಿದ್ದರು.

2017: ಕಿಂಗ್​ಫಿಷರ್ ಏರ್​ಲೈನ್ಸ್​ಗಾಗಿ ಐಡಿಬಿಐ, ಸಿಬಿಐ ಮುಂತಾದ ಬ್ಯಾಂಕ್​ಗಳಲ್ಲಿ 9500 ಕೋಟಿ ಸಾಲ ಮಾಡಿದ್ದ ವಿಜಯ್ ಮಲ್ಯ ಉದ್ದೇಶಪೂರ್ವಕ ಸುಸ್ತಿದಾರರಾಗಿ ಘೋಷಿಸಲ್ಪಟ್ಟರು. ಇದಾದ ಕೆಲವೇ ದಿನಗಳಲ್ಲಿ ಎಸ್​ಬಿಐ ಪ್ರಕರಣ ದಾಖಲಿಸಿತಾದರೂ, 2016ರಲ್ಲೇ ಮಲ್ಯ ದೇಶ ಬಿಟ್ಟಿದ್ದರು. ಬ್ಯಾಂಕ್ ಒಪ್ಪಂದ ಪತ್ರ ಪಡೆದು ಸಾಲ ಪಡೆದ ಹಗರಣದಲ್ಲಿ ಜತಿನ್ ಮೆಹ್ತಾ ವಿನ್​ಸೋಮ್ ಡೈಮಂಡ್ಸ್ ಕಂಪನಿಯ ವಿರುದ್ಧ ಸಿಬಿಐ 6 ಪ್ರಕರಣಗಳನ್ನು ದಾಖಲಿಸಿತ್ತು. ಇದು ನೀರವ್ ಮೋದಿ ಹಗರಣವನ್ನೇ ಹೋಲುವ ಪ್ರಕರಣ. ಇದರ ಒಟ್ಟಾರೆ ವಂಚನೆ 7000 ಕೋಟಿ ರೂಪಾಯಿಗಳಾಗಿದ್ದವು.

ಸಾಲಕ್ಕೆ ಯಾರು ಹೊಣೆ?

ನೀರವ್ ಮೋದಿ ಮಾಡಿದ ವಂಚನೆ ಗೊತ್ತಾಗುತ್ತಲೇ, ಅವರು ಸಾಲ ಮಾಡಿದ್ದ ಬ್ಯಾಂಕ್​ಗಳಿಗೆ ಫೆ.12ರಂದು ಪಿಎನ್​ಬಿ ಗೌಪ್ಯ ಪತ್ರ ಬರೆದಿದೆ. ಸಾಲ ನೀಡಿದ ಬ್ಯಾಂಕ್​ಗಳೂ ಈ ವಂಚನೆಗೆ ಪರೋಕ್ಷವಾಗಿ ಕಾರಣವಾಗಿವೆ. ಬ್ಯಾಂಕುಗಳು ತನ್ನ ಗ್ರಾಹಕನಿಗೆ ನೀಡುವ ಒಪ್ಪಂದ ಪತ್ರಕ್ಕೆ 90 ದಿನಗಳ ಮಾನ್ಯತೆಯಷ್ಟೇ ಇರುತ್ತದೆ. ಆದರೆ, ಹಲವು ವರ್ಷಗಳ ನಂತರವೂ ಒಪ್ಪಂದ ಪತ್ರಗಳ ಆಧಾರದಲ್ಲಿ ನೀರವ್​ಗೆ ಸಾಲ ನೀಡಲಾಗಿದೆ. ‘ಸಾಲ ನೀಡುವುದಕ್ಕೂ ಮೊದಲು ಒಪ್ಪಂದ ಪತ್ರದ ಮಾನ್ಯತೆ ಅವಧಿಯನ್ನು ಬ್ಯಾಂಕ್​ಗಳು ಒಮ್ಮೆ ಪರಿಶೀಲಿಸಬೇಕಿತ್ತು. ಇಲ್ಲವೆ ಸಾಲ ನೀಡುವ ಮೊದಲು ನಮ್ಮನ್ನು ಸಂರ್ಪಸಬೇಕಿತ್ತು. ಸಾಲ ನೀಡಿರುವ ಬ್ಯಾಂಕ್​ಗಳು ಆರ್​ಬಿಐನ ಮಾರ್ಗಸೂಚಿಗಳನ್ನು ಉಲ್ಲಂಘಿಸಿವೆ. ಹೀಗಾಗಿ ಸಾಲದ ಬಾಧ್ಯತೆಯನ್ನು ಇತರ ಬ್ಯಾಂಕ್​ಗಳೂ ವಹಿಸಿಕೊಳ್ಳಬೇಕು’ ಎಂದು ಪಿಎನ್​ಬಿ ಪತ್ರದಲ್ಲಿ ಉಲ್ಲೇಖಿಸಿದೆ. ಆದರೆ, ಸಾಲವನ್ನು ಪಾವತಿಸುವುದು, ನಷ್ಟ ತುಂಬಿಕೊಳ್ಳುವ ವಿಚಾರದಲ್ಲಿ ಬ್ಯಾಂಕ್​ಗಳು ಇನ್ನಷ್ಟೇ ಸ್ಪಷ್ಟತೆಗೆ ಬರಬೇಕಿವೆ. ಈ ನಡುವೆ, ದೇಶದ 11 ರಾಜ್ಯಗಳ 35 ಕಡೆಗಳಲ್ಲಿ ನೀರವ್ ಮತ್ತು ಚೋಕ್ಸಿ ಆಸ್ತಿಗಳ ಮೇಲೆ ದಾಳಿ ಮಾಡಿರುವ ಜಾರಿ ನಿರ್ದೇಶನಾಲಯ 5,700 ಕೋಟಿ ರೂ. ಮೊತ್ತದ ಹಣ, ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.

ಷೇರುಪೇಟೆ ತಲ್ಲಣ

ಯಾವಾಗ ನೀರವ್ ಮೋದಿ ಹಗರಣ ಬಯಲಿಗೆ ಬಂತೋ, ಅದರ ಪರಿಣಾಮ ನೇರವಾಗಿ ಷೇರು ಮಾರುಕಟ್ಟೆಯಲ್ಲಿ ಪ್ರತಿಫಲನಗೊಂಡಿತು. ಪಂಜಾಬ್ ನ್ಯಾಷನಲ್ ಬ್ಯಾಂಕ್, ಗೀತಾಂಜಲಿ ಜೆಮ್್ಸ ಷೇರು ಪಾತಾಳ ಕಂಡವು. ಪಿಎನ್​ಬಿಯ ಷೇರುಗಳು ಈವರೆಗೆ ಶೇ.26 ಕುಸಿದಿದ್ದರೆ, ಗೀತಾಂಜಲಿ ಷೇರುಗಳು ಶೇ.60 ಕುಸಿದಿವೆ. ಈ ಮಧ್ಯೆ, ಇತರ ವಜ್ರಾಭರಣ ಕಂಪನಿಗಳ ಷೇರುಗಳಲ್ಲಿಯೂ ಗಣನೀಯ ಕುಸಿತ ಉಂಟಾಗಿದೆ.

ಇಂಥ ಅಕ್ರಮಗಳಿಗೆ ಕಡಿವಾಣ ಹಾಕಬೇಕಿರುವುದು ಆರ್​ಬಿಐನ ಕರ್ತವ್ಯ. ಮಲ್ಯ, ನೀರವ್ ಮೋದಿ ಅವರಂಥ ಇನ್ನು ಎಷ್ಟು ವಂಚಕರು ನಮ್ಮ ನಡುವೆ ಇದ್ದಾರೋ? ನಮ್ಮ ಕಾನೂನು ಬಿಗಿ ಇಲ್ಲದೆ ಹೋದರೆ ಇಂಥ ಹಲವರು ಹುಟ್ಟಿಕೊಳ್ಳುತ್ತಾರೆ. ರಾಷ್ಟ್ರೀಕೃತ ಬ್ಯಾಂಕ್​ಗಳು ಹೀಗೆ ಸಾಲ ಕೊಟ್ಟು, ಅನುತ್ಪಾದಕ ಸಾಲದ ಮೊತ್ತವನ್ನು ಹೆಚ್ಚಿಸಿಕೊಂಡು, ಸರ್ಕಾರದ ಎದುರು ಕೈಕಟ್ಟಿ ನಿಲ್ಲುವ ಇಂಥ ಘಟನೆಗಳು ನಿಲ್ಲಬೇಕು. ದೇಶದ ಜನರಿಂದ ಸಂಗ್ರಹಿಸಿದ ಹಣ ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕೇ ವಿನಾ ಈ ರೀತಿ ವಂಚನೆಗೆ ವಿನಿಯೋಗವಾಗಬಾರದು.

| ಶ್ರೀಕಾಂತ್ ಕೆ.ಆರ್. ಬ್ಯಾಂಕ್ ಉದ್ಯೋಗಿ

Leave a Reply

Your email address will not be published. Required fields are marked *