ಮಹಾಭಾರತ ಸೃಷ್ಟಿಕರ್ತ ವೇದವ್ಯಾಸರೇ ರಾಷ್ಟ್ರಪಿತ

ಧಾರವಾಡ: ಮಹಾಭಾರತ ರಚಿಸಿರುವ ವೇದವ್ಯಾಸರೊಬ್ಬರೇ ರಾಷ್ಟ್ರಪಿತರು. ಉಳಿದವರೆಲ್ಲರೂ ರಾಷ್ಟ್ರ ಪುತ್ರರು ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ನಡೆದ ಶ್ರೀಮನ್ಮಹಾಭಾರತ ಮಂಗಳೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಮಹಾಭಾರತದಲ್ಲಿ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ತತ್ತ್ವಶಾಸ್ತ್ರ, ವೇದಾಂತ, ರಾಜಕಾರಣ ಹೀಗೆ ಎಲ್ಲ ಕ್ಷೇತ್ರಗಳ ವಿಷಯಗಳೂ ಅಡಕವಾಗಿವೆ. ಅದನ್ನು ಬರೆದ ವೇದವ್ಯಾಸರು ಮಹಾನ್ ಜ್ಞಾನಿಗಳು. ಹೀಗಾಗಿ ಈ ಎಲ್ಲ ವಿಷಯಗಳನ್ನು ನಮಗೆ ತಿಳಿಸಿಕೊಟ್ಟ ವೇದವ್ಯಾಸರನ್ನು ರಾಷ್ಟ್ರಪಿತ ಎಂದು ಕರೆಯಬೇಕು ಎಂದರು.

ವೇದಕ್ಕಿಂತ ಮಿಗಿಲಾದದ್ದು ಮಹಾಭಾರತ. ವೇದದಲ್ಲಿರದ ವಿಚಾರಧಾರೆಗಳು ಮಹಾಭಾರತದಲ್ಲಿವೆ. ಪ್ರಾರಂಭದಿಂದ ಕೊನೆವರೆಗೆ ಕೃಷ್ಣನ ಕಥೆ ಇದೆ. ಮಹಾಭಾರತ ಯುದ್ಧವು ಕುರುಕ್ಷೇತ್ರದಲ್ಲಿ ನಡೆದಿದ್ದರೂ ಮಹಾಭಾರತ ಕಥೆ ನಮ್ಮ ಜೀವನದಲ್ಲೇ ಇದೆ. ಕೌರವರು ದುರ್ಜನರು, ಅಸತ್ಯವಂತರು, ಅಧರ್ಮನಿಷ್ಠರೂ ಆಗಿದ್ದರೆ, ಪಾಂಡವರು ಸದ್ಗುಣಶೀಲರು, ಸತ್ಯವಂತರು, ಧರ್ಮನಿಷ್ಠರೂ ಆಗಿದ್ದಾರೆ ಎಂದರು.

ನಗರದ ಮನೆ ಮನೆಗಳಲ್ಲಿ ಮಹಾಭಾರತದ ಜ್ಞಾನ ಧಾರೆ ಹರಿಸಿದ ಪಂ. ಕಂಠಪಲ್ಲೀ ಸಮೀರಾಚಾರ್ಯರ ಕಾರ್ಯ ಶ್ಲಾಘನೀಯ. ಇಂತಹ ಕಾರ್ಯಗಳು ಇನ್ನೂ ಹೆಚ್ಚಾಗಬೇಕು. ಧ್ಯಾನ, ಪ್ರವಚನಗಳು ಭಕ್ತಿ ಮಾರ್ಗಗಳಾಗಿವೆ. ಪ್ರವಚನ ಮಾಡುವುದರಿಂದ ಮತ್ತು ಕೇಳುವುದರಿಂದ ಪುಣ್ಯ ಲಭಿಸುತ್ತದೆ ಎಂದರು.

ಪಂ. ಕಂಠಪಲ್ಲೀ ಸಮೀರಾಚಾರ್ಯ ಮಾತನಾಡಿ, ಸೂರ್ಯನು ಜಗತ್ತಿನ ಹೊರಗಿನ ಕತ್ತಲೆ ಹೋಗಲಾಡಿಸಿದರೆ ವೇದ ಪುರಾಣಗಳು ನಮ್ಮ ಮನದಲ್ಲಿನ ಕತ್ತಲೆ ಹೋಗಲಾಡಿಸುತ್ತವೆ. ವಿಶ್ವನಾಯಕ ವೇದವ್ಯಾಸರು ಬರೆದ ಮಹಾಭಾರತವು ವಿಶ್ವ ವಿಸ್ಮಯವಾದ ಗ್ರಂಥವಾಗಿದೆ. ಅದರ ಸತತ ಅಧ್ಯಯನ ಅವಶ್ಯ ಎಂದರು.

ಡಾ. ವಿನೋದ ಕುಲಕರ್ಣಿ ಮಾತನಾಡಿದರು. ಇದಕ್ಕೂ ಪೂರ್ವದಲ್ಲಿ ಮಹಿಳಾ ಮಂಡಳಗಳಿಂದ ಭಜನೆ ನಡೆಯಿತು. ಡಾ. ಕೆ.ಎಚ್. ರವಿ, ಕೃಷ್ಣ ಜೋಶಿ, ಜಿ.ಆರ್. ಪುರೋಹಿತ, ಎಸ್.ಬಿ. ಗುತ್ತಲ, ಡಾ. ಅಶೋಕ ಚಚಡಿ, ಡಾ. ಆರ್.ಜಿ. ಜೋಶಿ, ವಿಠಲ್ ಮಾನ್ವಿ, ದಾಮೋದರ ಪಾಮಡಿ, ಎಸ್.ಬಿ. ದ್ವಾರಪಾಲಕ, ಶ್ರೀಧರರಾವ್ ಗಾಜನೂರ, ಮನೋಜ ಪಾಟೀಲ, ಎಸ್.ಎನ್. ಪರಾಂಡೆ, ಬಾಪು ಜೋಶಿ, ಪ್ರಾಣೇಶ ಪಾಶ್ಚಾಪುರ, ಇತರರು ಇದ್ದರು.

ಧರ್ಮ-ಅಧರ್ಮ ಎಂಬ ಪ್ರವೃತ್ತಿಗಳ ನಡುವೆ ಘರ್ಷಣೆಯು ನಮ್ಮಲ್ಲೇ ನಡೆದಿದೆ. ಅಧರ್ಮದವರ ಸಂಖ್ಯೆ ಹೆಚ್ಚಾಗಿದೆ ಎಂಬುದಕ್ಕೆ ನೂರು ಸಂಖ್ಯೆಯಲ್ಲಿರುವ ಕೌರವರೇ ಸಾಕ್ಷಿ. ಧರ್ಮದವರ ಸಂಖ್ಯೆ ಕಡಿಮೆ ಎಂಬುದಕ್ಕೆ ಪಾಂಡವರೇ ಸಾಕ್ಷಿ. ಕಡಿಮೆ ಪ್ರಮಾಣದಲ್ಲಿದ್ದರೂ ಧರ್ಮಕ್ಕೆ ಎಂದಿಗೂ ಜಯ ಸಿಗುತ್ತದೆ.

| ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ

Leave a Reply

Your email address will not be published. Required fields are marked *