ಮಹಾನ್ ನಾಯಕರ ಆದರ್ಶ ಕಣ್ಮರೆ

ಶಿವಮೊಗ್ಗ: ಮಹಾನ್ ನಾಯಕರು ಕಣ್ಮರೆಯಾದಂತೆ ಅವರ ಆದರ್ಶಗಳೂ ಮರೆಯಾಗುತ್ತಿವೆ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಬೇಸರ ವ್ಯಕ್ತಪಡಿಸಿದರು.

ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಶಾಖೆಯಿಂದ ಬುಧವಾರ ಆಯೋಜಿಸಿದ್ದ ಗಾಂಧೀಜಿ ಒಂದು ನೆನಪು ಹಾಗೂ ಜಿಲ್ಲಾ ಮಟ್ಟದ ಪ್ರೌಢಶಾಲಾ ಸಹ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮಾತನಾಡಿ, ಮಹಾತ್ಮ ಗಾಂಧೀಜಿ ಸೇರಿ ಮಹಾನ್ ನಾಯಕರ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.

ಸುಶಿಕ್ಷಿತ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯ. ಮಕ್ಕಳಲ್ಲಿ ಮಾನವೀಯತೆ, ಸಂಸ್ಕೃತಿ ಸೇರಿ ಮೌಲ್ಯಯುತ ಗುಣಗಳನ್ನು ಶಿಕ್ಷಕರು ಕಲಿಸಲು ಮುಂದಾಗಬೇಕು. ಜೀವನದಲ್ಲಿ ಸಾಧನೆ ಮಾಡಲು ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ಹಾಕಿಕೊಡುವ ಭದ್ರಬುನಾದಿ ಮಹತ್ತರ ಪಾತ್ರ ವಹಿಸುತ್ತದೆ ಎಂದರು.

ಶಿಕ್ಷಕರನ್ನು ಪಾಠ ಮಾಡುವ ಕೆಲಸಕ್ಕಿಂತ ಹೆಚ್ಚಾಗಿ ಬೇರೆ ಕೆಲಸಗಳಿಗೆ ನಿಯೋಜನೆ ಮಾಡಲಾಗುತ್ತಿದೆ. ಸರ್ಕಾರಗಳು ರೂಪಿಸುವ ಯೋಜನೆಗಳಿಂದ ಶಿಕ್ಷಕರು ಪೂರ್ಣ ಪ್ರಮಾಣದಲ್ಲಿ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಶಿಕ್ಷಕರಿಗೆ ಹೆಚ್ಚುವರಿ ಹೊರೆ ಕಡಿಮೆ ಮಾಡಲು ಸರ್ಕಾರಗಳು ಚಿಂತನೆ ನಡೆಸಬೇಕು ಎಂದು ಹೇಳಿದರು.

ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯ ಅಸ್ತಿತ್ವ ಉಳಿಸುವ ಕಾರ್ಯ ಮೊದಲು ಆಗಬೇಕು. ಏಕಾಏಕಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಸರಿಯಲ್ಲ. ಆಂಗ್ಲ ಭಾಷೆ ಕಲಿಕೆಗೆ ಅಡ್ಡಿಯಿಲ್ಲ. ಆದರೆ ಕನ್ನಡ ಭಾಷೆಯ ಅಸ್ತಿತ್ವ ಕೂಡ ಮುಖ್ಯ. ಮಾತೃಭಾಷೆಯಲ್ಲಿ ಶಿಕ್ಷಣ ಮಾಡಿದರೆ ಬೌದ್ಧಿಕ ವಿಕಸನ ಸಾಧ್ಯವೆಂದು ಮಹಾತ್ಮ ಗಾಂಧಿ ಹೇಳಿದ್ದರು. ಆದರೆ ಮಾತೃಭಾಷೆ ಶಿಕ್ಷಣ ಸಿಗದಂತಹ ವಾತವರಣ ರೂಪುಗೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಶಾಸಕ ಕೆ.ಎಸ್.ಈಶ್ವರಪ್ಪ, ಎಂಎಲ್​ಸಿಗಳಾದ ಎಸ್.ಎಲ್.ಭೋಜೇಗೌಡ, ಆಯನೂರು ಮಂಜುನಾಥ್, ಜಿಪಂ ಅಧ್ಯಕ್ಷೆ ಜ್ಯೋತಿ ಕುಮಾರ್, ಸಿಇಒ ಕೆ.ಶಿವರಾಮೇಗೌಡ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಸಿದ್ದಬಸಪ್ಪ, ರಾಜ್ಯಾಧ್ಯಕ್ಷ ಎಚ್.ಕೆ.ಮಂಜುನಾಥ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್.ಷಡಕ್ಷರಿ, ಡಿಡಿಪಿಐ ಸುಮಂಗಳಾ ಕುಚಿನಾಡ, ಡಯಟ್ ಉಪನಿರ್ದೇಶಕ ಸಿ.ನಂಜಯ್ಯ. ಮ.ಸ.ನಂಜುಂಡಸ್ವಾಮಿ ಇದ್ದರು.