ಮಹಾತ್ಮರನ್ನು ಜಾತಿಗೆ ಸೀಮಿತಗೊಳಿಸದಿರಿ

ಧಾರವಾಡ: ಸಮಾಜದ ಶಾಂತಿ, ಧರ್ಮ, ಸಂಸ್ಕೃತಿ, ಭಾವೈಕ್ಯತೆ, ಸಮಾನತೆ ಮತ್ತು ಸಾಮರಸ್ಯಗಳಿಗೆ ಶ್ರಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಸೇರಿದಂತೆ ಯಾವುದೇ ಮಹಾತ್ಮರನ್ನು ಜಾತಿಗೆ ಸೀಮಿತಗೊಳಿಸಿ, ಅವರ ವ್ಯಕ್ತಿತ್ವವನ್ನು ಸಂಕುಚಿತಗೊಳಿಸಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಜಿಲ್ಲಾಡಳಿತ, ಜಿ.ಪಂ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾರಾಯಣ ಗುರುಗಳು ಕೇರಳದ ಪುಟ್ಟ ಗ್ರಾಮದಿಂದ ಬಂದು ನಾಡಿಗೆ ಶಾಂತಿ, ಸಾಮರಸ್ಯ, ಸಹಬಾಳ್ವೆಯ ಶಾಶ್ವತ ಸಂದೇಶ ನೀಡಿದರು. ಅವರಂತೆ ಬಸವಣ್ಣ, ವಾಲ್ಮೀಕಿ, ಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ಅನೇಕರು ಜೀವನ ಮೌಲ್ಯಗಳನ್ನು ಸಾರಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಸಣ್ಣ ಜಾತಿ ಸಮುದಾಯದವರಿಗೂ ಸಮಾನ ಅವಕಾಶಗಳು ಸಿಗಬೇಕು ಎಂದರು.

ಒಳ್ಳೆಯದನ್ನು ಗುರುತಿಸುವ, ಪರೋಪಕಾರ, ಸಹಿಷ್ಣುತೆ ಗುಣಗಳು ಮೂಡಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕುವಂತೆ ಆಗಬೇಕು. ಅಂದಾಗ ಮಾತ್ರ ಮಹಾತ್ಮರ ಜಯಂತಿಗಳ ಆಚರಣೆಗೆ ಒಂದು ರೀತಿಯಲ್ಲಿ ಅರ್ಥ ಬರುತ್ತದೆ ಎಂದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಮತ್ತು ಸಾಧನೆ ವಿಷಯ ಕುರಿತು ಉದಯ ನಾಯ್್ಕ ವಿಶೇಷ ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಮಾಜದ ಸಾಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಾರ್ವಜನಿಕ ಸಾರ್ವಜನಿಕ ಶಿಕ್ಷಣ ಇಲಾಖೆಯ ಬಸವರಾಜ ದುಬ್ಬನಮರಡಿ, ವಿವಿಧ ಸಮಾಜಗಳ ಮುಖಂಡರಾದ ಸಿ.ಆರ್. ಢವಳಗಿ, ಶಂಕರ ಕೋಟ್ಯಾನ್, ಟಿ.ಡಿ. ನಾಯಕ, ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು.

Leave a Reply

Your email address will not be published. Required fields are marked *