ಮಹಾಗಣಪತಿ ಜಾತ್ರೆಗೆ ಸಕಲ ಸಿದ್ಧತೆ

ಸಾಗರ: ನಗರದ ಶ್ರೀ ಮಹಾಗಣಪತಿ ರಥೋತ್ಸವ ಮತ್ತು ಜಾತ್ರೆಯ ಅಂಗವಾಗಿ ಸಿದ್ಧತೆಗಳು ನಡೆದಿವೆ ಎಂದು ತಹಸೀಲ್ದಾರ್ ಎಚ್.ಎಂ.ನಾಗರಾಜ್ ಹೇಳಿದರು. ಶುಕ್ರವಾರ ಜಾತ್ರಾ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿ, ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಸರ್ಕಾರದ ವತಿಯಿಂದ ಸಾರ್ವಜನಿಕರ ಸಹಕಾರದೊಂದಿಗೆ ಜಾತ್ರೆಯ ಎಲ್ಲ ಕಾರ್ಯಕ್ರಮಗಳೂ ನಡೆಯಲಿವೆ ಎಂದರು. ಸ್ವಚ್ಛತೆಗೆ ಸಾಗರ ನಗರಸಭೆಗೆ ತಿಳಿಸಲಾಗಿದ್ದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಏಪ್ರಿಲ್ 9ರಂದು ಬೆಳಗ್ಗೆ 8 ಗಂಟೆಗೆ ಶ್ರೀಮಹಾಗಣಪತಿ ದೇವರ ರಥೋತ್ಸವ ನಡೆಯಲಿದ್ದು ಏ. 9ರಿಂದ 14ರವರೆಗೆ ಭಕ್ತರ ಸಹಕಾರದೊಂದಿಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಏಪ್ರಿಲ್ 10ರಿಂದ 14ರವರೆಗೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈಗಾಗಲೆ ಅಧಿಕಾರಿಗಳ ಉಸ್ತುವಾರಿಯಲ್ಲಿ ಸಮಿತಿಗಳನ್ನು ರಚಿಸಲಾಗಿದ್ದು ಆಯಾ ಸಮಿತಿಗಳು ತಮ್ಮ ಕೆಲಸಕ್ಕೆ ಚಾಲನೆ ನೀಡಿವೆ ಎಂದರು. ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಆನಂದ ನಾಯ್ಕ, ಪುರುಷೋತ್ತಮ, ಶಿವಣ್ಣ, ಮಂಜು, ಬಸವರಾಜ್, ಗಜೇಂದ್ರ, ಸುಧಿಂದ್ರ ಜೋಯ್್ಸ ಇತರರಿದ್ದರು.