More

  ಮಹದಾಯಿ ಮಹಾಸಂಭ್ರಮ

  ಹುಬ್ಬಳ್ಳಿ: ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ಹಿನ್ನೆಲೆಯಲ್ಲಿ ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರರು, ರೈತರು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಗರದ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ವಿಜಯೋತ್ಸವ ಆಚರಿಸಿದರು.

  ಪರಸ್ಪರ ಸಿಹಿ ಹಂಚಿ, ಗುಲಾಲ ಎರಚಿ ಸಂಭ್ರಮಿಸಿ, ಪಟಾಕಿ ಸಿಡಿಸಿದರು. ಕೇಂದ್ರ ಸರ್ಕಾರ ಹಾಗೂ ಸವೋಚ್ಚ ನ್ಯಾಯಾಲಯದ ಪರ ಘೊಷಣೆ ಕೂಗಿದರು.

  ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಸವೋಚ್ಚ ನ್ಯಾಯಾಲಯದ ತೀರ್ಪಿನ ಬಳಿಕ ವಾರದೊಳಗೆ ಕೇಂದ್ರ ಸರ್ಕಾರ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿರುವುದನ್ನು ಸ್ವಾಗತಿಸುತ್ತೇವೆ. ರಾಜ್ಯ ಸರ್ಕಾರ ಕಳಸಾ ಬಂಡೂರಿ ನಾಲಾ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಬೇಕು. ಅದಕ್ಕೆ ಬಜೆಟ್​ನಲ್ಲಿ ಹಣ ಮೀಸಲಿಡಬೇಕು ಎಂದು ಒತ್ತಾಯಿಸಿದರು.

  ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅಮೃತ ಇಜಾರಿ ಮಾತನಾಡಿ, ಮಹದಾಯಿ ಹೋರಾಟದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ಘೊಷಿಸಬೇಕು. ರಾಜ್ಯ ಸರ್ಕಾರ, ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದರು. ಮಹೇಶ ಪತ್ತಾರ, ವಿಕಾಸ ಸೊಪ್ಪಿನ, ಸಂಜೀವ ದುಮ್ಮಕನಾಳ, ಸಿದ್ದು ತೇಜಿ, ಶೇಖರಯ್ಯ ಮಠಪತಿ, ರಾಜಣ್ಣ ಕೊರವಿ, ಇತರರು ಇದ್ದರು.

  ರೈತ ಪರ ನಿರ್ಧಾರಕ್ಕೆ ಹೋರಾಟಗಾರರ ಸಂತಸ
  ನವಲಗುಂದ: ಸುಪ್ರೀಂಕೋರ್ಟ್ ಆದೇಶದಂತೆ ಮಹದಾಯಿ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಹಾಗೂ ಮಲಪ್ರಭಾ ನದಿ ಜೋಡಣೆ ಕಾಮಗಾರಿ ಶೀಘ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಮಹದಾಯಿ, ಕಳಸಾ- ಬಂಡೂರಿ ರೈತ ಹೋರಾಟ ಪದಾಧಿಕಾರಿಗಳು ಉಪತಸೀಲ್ದಾರ್ ಮಂಜುನಾಥ ಅಮವಾಸೆ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.

  ಬಳಿಕ ಮಾತನಾಡಿದ ರೈತ ಹೋರಾಟ ಸಮಿತಿ ಅಧ್ಯಕ್ಷ ಬಸಪ್ಪ ಬೀರಣ್ಣವರ, ಸುಪ್ರೀಂಕೋರ್ಟ್ ರೈತರ ಘನತೆ ಎತ್ತಿ ಹಿಡಿದಂತೆ ಕೇಂದ್ರ ಸರ್ಕಾರವೂ ರೈತಪರ ಚಿಂತನೆಯತ್ತ ಕಾಳಜಿ ವಹಿಸಿದ್ದು ಸ್ವಾಗತಾರ್ಹ. ಅದಕ್ಕೆ ಉತ್ತರ ಕರ್ನಾಟಕದ ಇಡೀ ರೈತರು ಖುಷಿಯಾಗಿದ್ದಾರೆ. ನವಲಗುಂದದಲ್ಲಿ 1,678ನೇ ದಿನದ ಧರಣಿ ಸತ್ಯಾಗ್ರಹಕ್ಕೆ ಸಂಪೂರ್ಣ ಜಯ ಸಿಕ್ಕಿದೆ. ಈ ದಿನವನ್ನು ರೈತರು ಎಂದೂ ಮರೆಯುವುದಿಲ್ಲ ಎಂದರು.

  ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ 1,350 ಸಂಘಟನೆಗಳು ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದವು. ಎಲ್ಲದರ ಫಲದಿಂದಾಗಿ ರೈತರಿಗಿಂದು ಸಿಹಿ ಸುದ್ದಿ ಸಿಕ್ಕಿದೆ. ಮಾಧ್ಯಮಗಳು ಕೂಡ ರೈತರಿಗೆ ಸದಾಕಾಲ ಸ್ಪಂದನೆ ಮತ್ತು ಬೆಂಬಲ ನೀಡಿದ್ದರಿಂದ ರೈತ ಹೋರಾಟಕ್ಕೆ ಜಯ ಸಿಗುವಂತೆ ಮಾಡಿವೆ ಎಂದರá-. ಅಧಿಸೂಚನೆ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾಮಗಾರಿಯನ್ನು ಶೀಘ್ರ ಕೈಗೆತ್ತಿಕೊಂಡು ರೈತರ ಬಹುದಿನದ ಬೇಡಿಕೆ ಈಡೇರಿಸಬೇಕು ಎಂದು ರೈತರು ಒತ್ತಾಯಿಸಿದರು.

  ಮುಖಂಡ ದ್ಯಾಮಣ್ಣ ಸಾಮೋಜಿ, ಶಿವಪ್ಪ ಸಂಗಟಿ, ಬಸಯ್ಯ ಮಠಪತಿ, ಡಿ.ವಿ. ಕುರಹಟ್ಟಿ, ಶಿವಪ್ಪ ಸಂಗಳದ, ನಿಂಗಪ್ಪ ಬಾಡಗಂಡಿ, ಬಸಪ್ಪ ಡಾಲಿನ್, ಯಲ್ಲಪ್ಪ ದಾಡಿಬಾವಿ, ಬಸಪ್ಪ ಬಳ್ಳೊಳ್ಳಿ, ಹುಸೇನ್​ಸಾಬ ನದಾಫ್, ಗುರಪ್ಪ ಗಡ್ಡಿ, ವಿಠ್ಠಲ್ ಒಕ್ಕುಂದ, ಮಲ್ಲಪ್ಪ ಕುಂಬಾರ, ಸಂಗಪ್ಪ ನಿಡವಣಿ, ಸಿದ್ಧಲಿಂಗಪ್ಪ ಹಳ್ಳದ, ಇತರರು ಇದ್ದರು.

  ಸಚಿವ ಜೋಶಿ ಮುಖದಲ್ಲಿ ಸಾಧನೆಯ ತೃಪ್ತಿ
  ಹುಬ್ಬಳ್ಳಿ:
  ಕೇಂದ್ರ ಸಂಸದೀಯ ವ್ಯವ ಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರ ಹಾವ ಭಾವ, ನಡೆ ನುಡಿಯಲ್ಲಿ ಶುಕ್ರವಾರ ಏನೋ ಮಹತ್ಸಾಧನೆಗೈದ ಅಭಿಮಾನ ಮೂಡಿತ್ತು. ಮುಖದಲ್ಲಿ ಬಿಗು ಅಭಿಮಾನ ಹಾಗೂ ತೃಪ್ತಿಯ ಛಾಯೆ ಕಾಣುತ್ತಿತ್ತು.

  ಕಳೆದ ರಾತ್ರಿ ಕೇಂದ್ರ ಸರ್ಕಾರ ಮಹದಾಯಿ ನದಿ ನೀರು ಹಂಚಿಕೆಯ ನ್ಯಾಯಾಧಿಕರಣದ ಐತೀರ್ಪನ್ನು ಗೆಜೆಟ್ ಪ್ರಕಟಣೆ ಹೊರಡಿಸಿದ್ದರ ಪರಿಣಾಮ ಇದು.

  ತುಂಬ ಅಭಿಮಾನ ಮತ್ತು ಹೆಮ್ಮೆ ಅನಿಸುತ್ತದೆ. ಏನೋ ಸಂತೃಪ್ತಿ ಮತ್ತು ಸಮಾಧಾನ ಉಂಟಾಗಿದೆ. ಮಹದಾಯಿ ವಿವಾದದಲ್ಲಿ ಈವರೆಗಿದ್ದ ಅಳಕು ಹಾಗೂ ಒತ್ತಡ ನಿವಾರಣೆಯಾದಂತಾಗಿದೆ. ಜನಪರವಾದ, ಜನರಿಗೆ ಭರವಸೆ ನೀಡಿದ, ಜನ ಅಪೇಕ್ಷಿಸಿದ ಕೆಲಸವನ್ನು ನಮ್ಮ ಸರ್ಕಾರ ಮಾಡಿರುವುದರ ಹಿಂದೆ ಸಾಕಷ್ಟು ಹೋರಾಟ, ಟೀಕೆ-ಟಿಪ್ಪಣೆ ಎಲ್ಲವೂ ನೆನಪಾದವು. ಈಗ ನಿರುಮ್ಮಳ ಎಂದು ಜೋಶಿ ನಿಟ್ಟುಸಿರು ಬಿಟ್ಟರು.

  ಅಧಿಸೂಚನೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ನಂತರವೂ ಕೇಂದ್ರ ಸರ್ಕಾರದ ಮೇಲೆ ಸಂಶಯ ಪಟ್ಟವರು ಅನೇಕರು. ಆದರೆ, ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸುವ ಮೂಲಕ ಕೇಂದ್ರ ಸರ್ಕಾರ ಈ ಭಾಗದ ಬಹುದಿನಗಳ ಬೇಡಿಕೆಯೊಂದನ್ನು ಈಡೇರಿಸಲು ಪ್ರಮುಖ ಹೆಜ್ಜೆ ಇಟ್ಟಿತು.

  ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುವ ಹಿಂದೆ ಸಚಿವ ಪ್ರಲ್ಹಾದ ಜೋಶಿ ಅವರು ನಡೆಸಿದ ಪ್ರಯತ್ನ ಪ್ರಮುಖವಾದದ್ದು. ಮಹಾರಾಷ್ಟ್ರ ಹಾಗೂ ಗೋವಾ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರೊಂದಿಗೆ ಸಚಿವ ಪ್ರಲ್ಹಾದ ಜೋಶಿ ಹಲವಾರು ಬಾರಿ ಸಭೆ ನಡೆಸಿದ್ದರು.

  ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಹುಬ್ಬಳ್ಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಹದಾಯಿ ವಿಷಯ ಬಗೆಹರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂಬ ಹೇಳಿಕೆ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಈ ವಿಷಯಕ್ಕೆ ಶೀಘ್ರ ರ್ತಾಕ ಅಂತ್ಯ ನೀಡುವ ಭರವಸೆ ನೀಡಿದ್ದರು.

  ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಜ್ಯದ ಜನತೆಗೆ ಶೀಘ್ರ ಸಿಹಿ ಸುದ್ದಿಯೊಂದನ್ನು ನೀಡಲಿದೆ ಎಂದು ಸಚಿವ ಜೋಶಿ ಸಹ ಮೂರ್ನಾಲ್ಕು ತಿಂಗಳ ಹಿಂದೆಯೇ ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದ್ದರು.

  ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ವಿರುದ್ಧ ಗೋವಾ ಸರ್ಕಾರ ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆಯಾದರೂ, ಇದರಿಂದ ನೀರು ಹಂಚಿಕೆ ಮೇಲೆ ಯಾವುದೇ ಪ್ರಭಾವ ಬೀರುವ ಸಾಧ್ಯತೆ ಕಡಿಮೆ ಎಂದು ಲೆಕ್ಕಾಚಾರ ಮಾಡಲಾಗುತ್ತಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts