More

  ಮಹದಾಯಿ ನೀರಿಗಾಗಿ ಮುಖ್ಯಮಂತ್ರಿಗೆ ಮನವಿ

  ಹುಬ್ಬಳ್ಳಿ: ಮಹದಾಯಿ ನದಿ ನೀರು ಹಂಚಿಕೆಗೆ ಕೇಂದ್ರದ ಮೇಲೆ ಒತ್ತಡ ಹೇರುವುದು ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು. ಮಹದಾಯಿ ನೀರು ಹಂಚಿಕೆ ಗೆಜೆಟ್ ನೋಟಿಫಿಕೇಷನ್​ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ರೈತರ ಸಾಲ ಮನ್ನಾ ಮಾಡಬೇಕು. ನರಗುಂದ, ಗದಗ, ನವಲಗುಂದ ಮತ್ತಿತರ ತಾಲೂಕುಗಳಲ್ಲಿ ರೈತರ ಮೇಲಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ಆಗ್ರಹಿಸಿದರು. ಅತಿವೃಷ್ಟಿಯಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ ವಿತರಣೆ ವಿಳಂಬವಾಗುತ್ತಿದೆ. ಕೃಷಿ ಜಮೀನುಗಳಿಗೆ ಹೋಗುವ ರಸ್ತೆ ದುರಸ್ತಿ ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಸಿಎಂ ಯಡಿಯೂರಪ್ಪ, ಶೀಘ್ರ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಬಾಬಾಜಾನ ಮುಧೋಳ, ಸಿದ್ದು ತೇಜಿ, ರಮೇಶ ಭೋಸ್ಲೆ, ಎನ್.ಎ. ಖಾಜಿ, ಶಿವು ಪಡೆಸೂರ, ಬಿ.ಎ. ಮುಧೋಳ, ಆಂಜನೇಯ ಪೂಜಾರಿ ಇನ್ನಿತರರಿದ್ದರು.

  ಮಹದಾಯಿ ವಿಚಾರ ಸುಪ್ರೀಂ ಕೋರ್ಟ್​ನಲ್ಲಿದ್ದು, ಮೇಲ್ಮನವಿ ಸಲ್ಲಿಸಲು ರಾಜ್ಯದ ಅಡ್ವೋಕೇಟ್ ಜನರಲ್ ಅವರಿಗೆ ಸೂಚಿಸಲಾಗಿದೆ. | ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ

  ಪ್ರಧಾನಮಂತ್ರಿ ಭೇಟಿಗೆ ಇಂಗಿತ: ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಗೆಜೆಟ್ ನೋಟಿಫಿಕೇಷನ್ ಹೊರಡಿಸುವಂತೆ ಪ್ರಧಾನಿಯವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕೂ ಮೊದಲು ಕೇಂದ್ರ ಜಲಸಂಪನ್ಮೂಲ ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಲಾಗುವುದು ಎಂದರು. ನಂತರ ಪ್ರಧಾನಿಯವರನ್ನು ಭೇಟಿ ಮಾಡಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ದಿನ ನಿಗದಿಗೊಳಿಸಲಿದ್ದಾರೆ. ಈ ಬಜೆಟ್ ಅಧಿವೇಶನದಲ್ಲಿಯೂ ಮಹದಾಯಿ ವಿಷಯ ಪ್ರಸ್ತಾಪಿಸಲಾಗುವುದು ಎಂದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಜಗದೀಶ ಶೆಟ್ಟರ್, ಮಾಜಿ ಸಚಿವ ಎಸ್.ಆರ್. ಪಾಟೀಲ ಅವರೊಂದಿಗೆ ಈಗಾಗಲೇ ಮಹದಾಯಿ ನದಿ ನೀರಿನ ವಿಷಯದ ಬಗ್ಗೆ ಒಂದು ಸುತ್ತು ನಗರದಲ್ಲಿ ಸಭೆ ನಡೆಸಲಾಗಿದೆ ಎಂದರು.

  ರಾಜಕೀಯ ನಿವೃತ್ತಿ: ರಾಜಕೀಯ ನಿವೃತ್ತಿಯ ಬಗ್ಗೆಯೂ ಬಸವರಾಜ ಹೊರಟ್ಟಿ ಇಂಗಿತ ವ್ಯಕ್ತಪಡಿಸಿದರು. ಮುಂದಿನ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಬೇಕೊ ಅಥವಾ ಬೇಡವೊ ಎಂಬುದರ ಬಗ್ಗೆ ಯೋಚಿಸುತ್ತಿದ್ದೇನೆ. ಚುನಾವಣೆ ರಾಜಕೀಯ ಸಾಕೆಂಬ ಭಾವನೆಯೂ ಮೂಡುತ್ತಿದೆ. ಆದರೆ, ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದರು.

  ಬಿಜೆಪಿಗೆ ಸಚಿವ ಜಗದೀಶ ಶೆಟ್ಟರ್ ಆಹ್ವಾನಿಸಿದ ವಿಚಾರ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ಅವರಿಗೆ ತಿಳಿದರೆ ನನಗೆ ಫೋನ್ ಮಾಡುವುದು ಖಚಿತ. | ಬಸವರಾಜ ಹೊರಟ್ಟಿ ವಿಧಾನ ಪರಿಷತ್ ಸದಸ್ಯ

  ದುರ್ಬಲರು ಯಾರೆಂದು ಆತ್ಮಾವಲೋಕನ ಮಾಡಿಕೊಳ್ಳಲಿ: ಕಾಂಗ್ರೆಸ್ ನಾಯಕತ್ವ ದುರ್ಬಲವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ದುರ್ಬಲ ನಾಯಕ. ಯಾರು ದುರ್ಬಲರು ಎಂಬುದರ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ಪ್ರತಿಪಕ್ಷ ನಾಯಕರಾಗಬೇಕೊ, ಶಾಸಕಾಂಗ ಪಕ್ಷದ ನಾಯಕರಾಗಬೇಕೊ ಎಂಬ ಗೊಂದಲದಿಂದ ಸಿದ್ದರಾಮಯ್ಯ ಹೊರಗೆ ಬಂದಿಲ್ಲ ಎಂದು ಸಚಿವ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು. ಯಡಿಯೂರಪ್ಪ ದುರ್ಬಲ ಮುಖ್ಯಮಂತ್ರಿ ಎಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ ಗುಂಡೂರಾವ್ ರಾಜೀನಾಮೆ ನೀಡಿ ಹಲವು ತಿಂಗಳು ಕಳೆದಿದ್ದರೂ ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ಶಕ್ತಿ ಕಾಂಗ್ರೆಸ್ ಹೈಕಮಾಂಡ್​ಗೆ ಇಲ್ಲ. ಎಲ್ಲಿಯೂ ಅಧಿಕಾರ ಇಲ್ಲದ ಕಾಂಗ್ರೆಸ್ ದುರ್ಬಲ ಪಕ್ಷವಾಗಿದೆ ಎಂದು ಟೀಕಿಸಿದರು. ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಎಲ್ಲವೂ ಮುಖ್ಯಮಂತ್ರಿಗೆ ಬಿಟ್ಟ ವಿಚಾರ. ಬಜೆಟ್​ನಲ್ಲಿ ಈ ಭಾಗದ ಅಗತ್ಯಗಳ ಬಗ್ಗೆ, ಇಲಾಖೆಯಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ರ್ಚಚಿಸಿದ್ದೇನೆ. ಉ.ಕ. ಭಾಗಕ್ಕೆ ಹಾಗೂ ಇಲಾಖೆಗೆ ಸಾಕಷ್ಟು ಅನುದಾನ ಮಂಜೂರಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿ ನಡೆಯಲಿರುವ ಬೃಹತ್ ಬಂಡವಾಳ ಹೂಡಿಕೆದಾರರ ಸಭೆಗೆ 1 ಸಾವಿರಕ್ಕೂ ಹೆಚ್ಚು ಬಂಡವಾಳ ಹೂಡಿಕೆದಾರರನ್ನು ಆಹ್ವಾನಿಸಿದ್ದು, 500ಕ್ಕೂ ಹೆಚ್ಚು ಉದ್ಯಮಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

  ಸಿಸಿ ರಸ್ತೆ ಕಾಮಗಾರಿ ಚುರುಕುಗೊಳಿಸಲು ಸೂಚನೆ: ಸಿಆರ್​ಎಫ್ ಅನುದಾನದಡಿ ಹುಬ್ಬಳ್ಳಿ ನಗರದ ನೀಲಿಜಿನ್ ರೋಡ್​ನಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಭಾನುವಾರ ಪರಿಶೀಲಿಸಿದರು. ರಸ್ತೆಯ ಒಂದು ಬದಿ ಮಹಾನಗರ ಪಾಲಿಕೆ ನಿರ್ವಿುಸುತ್ತಿರುವ ನಿಧಾನಗತಿಯ ಯುಜಿಡಿ ಕಾಮಗಾರಿಯಿಂದಾಗಿ ಸಿಸಿ ರಸ್ತೆ ನಿರ್ವಣಕ್ಕೆ ಅಡ್ಡಿಯಾಗಿದೆ. ಈ ಕುರಿತು ‘ವಿಜಯವಾಣಿ’ ಫೆ. 7ರಂದು ‘ಸಿಸಿ ರಸ್ತೆ ಕೆಲಸಕ್ಕೆ ಯುಜಿಡಿ ಅಡ್ಡಿ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಯುಜಿಡಿ ಕಾಮಗಾರಿಗೆ ವೇಗ ನೀಡುವ ಮೂಲಕ ಸಿಸಿ ರಸ್ತೆ ನಿರ್ವಣಕ್ಕೆ ಸಹಕರಿಸುವಂತೆ ಸಚಿವ ಜಗದೀಶ ಶೆಟ್ಟರ್ ಅವರು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಮತ್ತಿತರರಿದ್ದರು.

  ಮರಿಮೊಮ್ಮಗಳ ಮುದ್ದಾಡಿದ ಬಿಎಸ್​ವೈ: ಮರಿಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಭಾನುವಾರದಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹುಬ್ಬಳ್ಳಿಗೆ ಆಗಮಿಸಿದ್ದರು.

  ಬಿಎಸ್​ವೈ ಅವರ ಪುತ್ರಿ ಪದ್ಮಾವತಿ ಹಾಗೂ ಅಳಿಯ ವಿರೂಪಾಕ್ಷ ಯಮಕನಮರಡಿ ಅವರ ಪುತ್ರ ಶಶಿಧರನ ಪುತ್ರಿಗೆ ನಾಮಕರಣ ಮಾಡುವ ಸಮಾರಂಭವನ್ನು ಇಲ್ಲಿನ ಖಾಸಗಿ ಹೋಟೆಲ್​ನಲ್ಲಿ ಆಯೋಜಿಸಲಾಗಿತ್ತು.

  ಮಧ್ಯಾಹ್ನ 1.30ರ ಮುಹೂರ್ತದಲ್ಲಿ ಸಿಎಂ ಯಡಿಯೂರಪ್ಪ ಅವರು ಮೊಮ್ಮಗಳಿಗೆ ನಾಮಕರಣ ಮಾಡಬೇಕೆಂದು ನಿರ್ಧರಿಸಲಾಗಿತ್ತು. ಆದರೆ ಸಿಎಂ ನಗರಕ್ಕೆ ಬರುವುದು ತಡವಾಗುವುದು ತಿಳಿದ ನಂತರ ಪುರೋಹಿತರ ಮಾರ್ಗದರ್ಶನದಲ್ಲಿ ಕುಟುಂಬದವರೇ ಮಗುವಿಗೆ ‘ನೈರಾ’ ಎಂದು ನಾಮಕರಣ ಮಾಡಿದರು. ಮಧ್ಯಾಹ್ನ 3 ಗಂಟೆಗೆ ಖಾಸಗಿ ಹೋಟೆಲ್​ಗೆ ಆಗಮಿಸಿದ ಸಿಎಂ ಯಡಿಯೂರಪ್ಪ, ಮರಿ ಮೊಮ್ಮಗಳನ್ನು ಎತ್ತಿಕೊಂಡು ಮುದ್ದಾಡಿದರು. ಮಗುವನ್ನು ತೊಡೆ ಮೇಲೆ ಕೂರಿಸಿಕೊಂಡು ಮೊಮ್ಮಗ ಶಶಿಧರ ದಂಪತಿ, ಮಗಳು-ಅಳಿಯ, ಸಂಬಂಧಿಗಳೊಂದಿಗೆ ಕೆಲ ಕಾಲ ಕಳೆದರು. ನಂತರ ಕುಟುಂಬದೊಂದಿಗೆ ಫೋಟೋ ತೆಗೆಸಿಕೊಂಡರು. ಸಿಎಂ ಮುಖದಲ್ಲಿ ಕಿರುನಗೆ ಲಾಸ್ಯವಾಡುತ್ತಿತ್ತು. ಬಂಧು ಮಿತ್ರರೊಂದಿಗೆ ಪುಷ್ಕಳ ಭೋಜನ ಸವಿದರು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್, ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಸಿ.ಎಂ. ನಿಂಬಣ್ಣವರ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರದೀಪ ಶೆಟ್ಟರ್, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಮತ್ತಿತರರು ಹಾಜರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts