ಮಹದಾಯಿ ನಿರ್ಲಕ್ಷಿಸಿದ್ದು ರೈತರನ್ನು ಅವಮಾನಿಸಿದಂತೆ

ನರಗುಂದ: ಮಹದಾಯಿ ನದಿ ಜೋಡಣೆಗೆ ಆಗ್ರಹಿಸಿ ಬಂಡಾಯದ ನಾಡು ನರಗುಂದದಲ್ಲಿ ರೈತರು ನಾಲ್ಕು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆ ನಿರ್ಲಕ್ಷಿಸುವ ಮೂಲಕ ದೇಶದ ರೈತರನ್ನು ಅವಮಾನಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ಹರಿಹಾಯ್ದರು.

ಪಟ್ಟಣದ ಗಾಂಧಿ ವರ್ತಲದಲ್ಲಿ ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ಶನಿವಾರ ನಡೆದ ಚುನಾವಣೆ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಧಾನಿ ಮೋದಿ, ಸಂಸದ ಪಿ.ಸಿ. ಗದ್ದಿಗೌಡ್ರ ಐದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ 1200 ಕೋಟಿ ರೂ.ಗಳನ್ನು ಮಲಪ್ರಭಾ ಕಾಲುವೆಗಳ ನವೀಕರಣಕ್ಕೆ, 150 ಕೋಟಿ ರೂ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಕಟ್ಟಡ ನಿರ್ವಣಕ್ಕೆ, 1048 ಕೋಟಿ ರೂ. ಸಮಗ್ರ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ನೀಡಿದ್ದೇನೆ. ಕ್ಷೇತ್ರದಲ್ಲಿ 5 ಸಾವಿರಕ್ಕೂ ಹೆಚ್ಚು ಕೃಷಿ ಹೊಂಡಗಳನ್ನು ನಿರ್ವಿುಸಲಾಗಿದೆ. 50 ಸಾವಿರ ರೂ. ವರೆಗಿನ ರಾಜ್ಯದ ಎಲ್ಲ ರೈತರ ಸಾಲ ಮನ್ನಾ ಮಾಡಿದ್ದೇನೆ. ಉತ್ತರ ಕರ್ನಾಟಕದ ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದೇನೆ. ಆದರೆ, ಬಿಜೆಪಿ ಗಿರಾಕಿಗಳು ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.

ಸಾಲಮನ್ನಾ ಮಾಡಿ ಎಂದರೆ ಯಡಿಯೂರಪ್ಪ ಅವರು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ನಾವೇನು ನೋಟ್ ಪ್ರಿಂಟ್ ಮಾಡೋ ಮಶಿನ್ ಇಟ್ಕೊಂಡಿಲ್ಲ ಎಂದು ಹೇಳಿ ರೈತರನ್ನು ಅವಮಾನಿಸಿದ್ದಾರೆ. ಬಿಜೆಪಿಯ ಈಶ್ವರಪ್ಪ ಒಬ್ಬ ನಾಲಾಯಕ್. ಅವರಿಗೆ ಮಾನ ಮರ್ಯಾದೆ ಅಂತ ಏನಾದ್ರೂ ಇದ್ರೆ ಮೊದಲು ರಾಜೀನಾಮೆ ನೀಡಬೇಕು. ಮಹದಾಯಿ ಯೋಜನೆ ಅನುಷ್ಟಾನಕ್ಕೆ ಈ ಬಾರಿಯ ಚುನಾವಣೆಯಲ್ಲಿ ವೀಣಾ ಕಾಶಪ್ಪನವರ ಅವರಿಗೆ ಮತ ನೀಡಬೇಕು ಎಂದು ತಿಳಿಸಿದರು.

ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಮಾತನಾಡಿ, ನನ್ನ ಎರಡು ಚಿಕ್ಕ ಮಕ್ಕಳನ್ನು ಬಿಟ್ಟು ತಿಂಗಳು ಕಾಲ ಕ್ಷೇತ್ರ ಸುತ್ತಿದ್ದೇನೆ. ನನಗೂ ಒಂದು ಅವಕಾಶ ನೀಡಿ. ಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿಪಡಿಸುತ್ತೇನೆ. ಮಹದಾಯಿ ಯೋಜನೆಗೆ ಪ್ರಯತ್ನಿಸುತ್ತೇನೆ. ಯುವಕರಿಗೆ, ಬಡವರಿಗೆ ಕೆಲಸ ಕೊಡಿಸುತ್ತೇನೆ. ನನ್ನ ಸೆರಗೊಡ್ಡಿ ಕೇಳಿಕೊಳ್ಳುತ್ತೇನೆ ಎಂದು ಕಣ್ಣೀರಿಟ್ಟರು.

ಸಿ.ಎಂ. ಇಬ್ರಾಹಿಂ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಮಾಜಿ ಶಾಸಕ ಬಿ.ಆರ್. ಯಾವಗಲ್, ರಾಜು ಕಲಾಲ, ಇತರರಿದ್ದರು.

ಬಾಗಲಕೋಟೆ ಕ್ಷೇತ್ರಕ್ಕೆ ಗದ್ದಿಗೌಡ್ರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಮಹದಾಯಿ ಯೋಜನೆಗೆ ಸ್ಪಂದಿಸಿಲ್ಲ. ನನ್ನ ನೋಡಬೇಡಿ ಮೋದಿ ನೋಡಿ ಮತ ಕೊಡಿ ಎನ್ನುತ್ತಿದ್ದಾರೆ. ವಧು ನೋಡಿ ಮದುವೆ ಆಗ್ಬೇಕೋ ಅಥವಾ ಅವರ ತಾಯಿ ನೋಡಿ ಮದುವೆ ಆಗ್ಬೇಕೋ, ವರ ನೋಡಿ ಹುಡುಗಿ ಮದುವೆ ಆಗ್ಬೇಕೋ, ಅವರಪ್ಪನ್ನ ನೋಡಿ ಮದುವೆ ಆಗ್ಬೇಕೋ ಅನ್ನೋ ಥರಾ ಇದೆ ಇವರ ಮಾತಿನ ಅರ್ಥ.
| ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ