Tuesday, 11th December 2018  

Vijayavani

Breaking News

ಮಹತ್ವಾಕಾಂಕ್ಷಿ ನಾಯಕನ ಸಮಾಜವಾದಿ ಚಿಂತನೆ

Sunday, 22.10.2017, 3:04 AM       No Comments

| ಉಮೇಶ್​ಕುಮಾರ್ ಶಿಮ್ಲಡ್ಕ

ಜಗತ್ತು ಸಹಜ ಕುತೂಹಲದಿಂದ ಗಮನಿಸುವ ಬಲಿಷ್ಠ ದೇಶಗಳ ಪೈಕಿ ಚೀನಾ ಕೂಡ ಒಂದು. ರಾಜಕೀಯ ಮಹತ್ವಾಕಾಂಕ್ಷಿ ನಾಯಕ ಕ್ಸಿ ಜಿನ್​ಪಿಂಗ್ ಅಧ್ಯಕ್ಷರಾದ ಬಳಿಕ ಅಲ್ಲಿನ ಪ್ರತಿ ರಾಜಕೀಯ ನಡೆಯನ್ನೂ ಸೂಕ್ಷ್ಮವಾಗಿ ಅವಲೋಕಿಸುವ ಕೆಲಸ ನಡೆಯುತ್ತಿದೆ. ಆಧುನಿಕ ಚೀನಾದ ಸಂಸ್ಥಾಪಕ ಕಮ್ಯೂನಿಸ್ಟ್ ನಾಯಕ ಮಾವೋ ಝೆಡಂಗ್ ನಂತರದಲ್ಲಿ ಅತಿ ಪ್ರಭಾವಿ ನಾಯಕರಾಗಿ ಜಿನ್​ಪಿಂಗ್ ಮೂಡಿರುವುದು ಅದಕ್ಕೆ ಕಾರಣ. ಜಗತ್ತನ್ನೇ ಆಳಬೇಕೆಂಬ ಇರಾದೆಯುಳ್ಳವರು ಜಿನ್​ಪಿಂಗ್. ಚೀನಾದ ಮಟ್ಟಿಗೆ ನವಯುಗ ಪ್ರವರ್ತಕರಾಗಿ ಛಾಪನ್ನು ಬೀರಿದ ಈ ನಾಯಕ ದೇಶದ ಆಡಳಿತ ವ್ಯವಸ್ಥೆ, ಪಕ್ಷದ ಮೇಲಿನ ಹಿಡಿತವನ್ನು ಬಿಗಿಗೊಳಿಸುತ್ತಲೇ ಬಂದಿದ್ದಾರೆ. ಅವರೀಗ, 138 ಕೋಟಿ ಜನಸಂಖ್ಯೆ, 16 ಲಕ್ಷ ಯೋಧರ ಬಲಿಷ್ಠ ಸೇನೆ, 11 ಲಕ್ಷ ಕೋಟಿ ಡಾಲರ್​ಗಳ ಅರ್ಥ ವ್ಯವಸ್ಥೆಯನ್ನು ತನ್ನಿಚ್ಛೆಯಂತೆ ಮುನ್ನಡೆಸುತ್ತಿದ್ದಾರೆ. ಈ ಬಿಗಿ ಹಿಡಿತದ ಎದುರು ವಿಪಕ್ಷಗಳ ಧ್ವನಿ ಅಡಗಿಯೇ ಹೋಗಿದೆ.

ಚೀನಾ ಕಮ್ಯೂನಿಸ್ಟ್ ಪಾರ್ಟಿ(ಸಿಪಿಸಿ)ಯ 19ನೇ ಮಹಾಧಿವೇಶನ ಇದೇ 18ರಂದು ಆರಂಭವಾಗಿದ್ದು, 24ಕ್ಕೆ ಸಂಪನ್ನಗೊಳ್ಳಲಿದೆ. ಐದು ವರ್ಷಕ್ಕೊಮ್ಮೆ ನಡೆಯುವ ಈ ಮಹಾಧಿವೇಶನದ ಆರಂಭದ ದಿನದ ಜಿನ್​ಪಿಂಗ್ ಮೂರೂವರೆ ಗಂಟೆ ಮಾಡಿದ ಭಾಷಣ, ಪಕ್ಷಕ್ಕಷ್ಟೇ ಅಲ್ಲ ದೇಶದ ಭವಿಷ್ಯವನ್ನೂ ಬಿಂಬಿಸಿತ್ತು. ಮಾರ್ಕ್ಸಿಸಂ-ಲೆನಿನಿಸಂ, ಮಾವೋ ಚಿಂತನೆ, ಡೆಂಗ್ ಕ್ಸಿಯೋಪಿಂಗ್ ಸಿದ್ಧಾಂತಗಳ ನೆಲೆಯಲ್ಲಿ ಕಟ್ಟಲ್ಪಟ್ಟ ಚೀನಾ ಸಾಮ್ರಾಜ್ಯದಲ್ಲಿ ಇದೀಗ ಜಿನ್​ಪಿಂಗ್ ‘ಸಮಾಜವಾದ‘ದ ಚಿಂತನೆಯ ಎರಕ ಹೊಯ್ಯತೊಡಗಿದ್ದಾರೆ. ಅವರು ಭಾಷಣದಲ್ಲಿ ಚೀನಾದ ಅಭಿವೃದ್ಧಿ ಬಗ್ಗೆ ಚೌಕಟ್ಟೊಂದನ್ನು ತೆರೆದಿರಿಸಿದರು. ಚೀನಾವನ್ನು ‘ಮಹಾ ಆಧುನಿಕ ಸಮಾಜವಾದಿ ದೇಶ’ವನ್ನಾಗಿ ರೂಪಿಸುವುದು ಅವರ ಇರಾದೆ. ಇದಕ್ಕಾಗಿ ಪಕ್ಷದ ವೇದಿಕೆಯಲ್ಲಿ ಎರಡು ಹಂತ (2020-2035, 2035-2050)ದ ಅಭಿವೃದ್ಧಿ ಯೋಜನೆಯನ್ನು ಮಂಡಿಸಿದ್ದಾರೆ.

ಅವರು ಆರ್ಥಿಕ ಬದಲಾವಣೆ ಬಗ್ಗೆ ಮಾತನಾಡಿದರೇ ಹೊರತು, ಮಾರುಕಟ್ಟೆ ಸುಧಾರಣೆ ಬಗ್ಗೆ ಅಲ್ಲ. ಈ ಹಿಂದಿನ ನಾಯಕರೆಲ್ಲ, ಹಿಂದಿನ ಮಹಾಧಿವೇಶನಗಳಲ್ಲಿ ಚೀನಾವನ್ನು ಮಾರುಕಟ್ಟೆ ಎಂಬ ನೆಲೆಯಲ್ಲೇ ಬಿಂಬಿಸುತ್ತ ಹೋಗಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ಜಿನ್​ಪಿಂಗ್, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಬಲಿಷ್ಠಗೊಳಿಸುವ ಅದನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವ ಇರಾದೆಯನ್ನು ವ್ಯಕ್ತಪಡಿಸಿದರು. ಇನ್ನು ವಿದೇಶ ನೀತಿ ಮತ್ತು ಸೇನಾ ಆಧುನೀಕರಣದ ಬಗ್ಗೆ ಪ್ರಸ್ತಾಪಿಸುತ್ತ, ಚೀನಾವನ್ನು ‘ಮಹಾ ಶಕ್ತಿ’, ‘ಬಲಿಷ್ಠ ರಾಷ್ಟ್ರ’ ಎಂದು 25ಕ್ಕೂ ಹೆಚ್ಚು ಬಾರಿ ಹೇಳಿದ ಅವರು ‘ಒನ್ ಬೆಲ್ಟ್ ಒನ್ ರೋಡ್’ ಯೋಜನೆಯ ಪ್ರಾಮುಖ್ಯತೆ ಕಡೆಗೆ ಬೊಟ್ಟು ಮಾಡಿದರು. ಹಾಗೆಯೇ ಸೇನೆ ಇರುವುದೇ ಯುದ್ಧ ಮಾಡುವುದಕ್ಕೆ, ಅದು ತನ್ನ ಕಾರ್ಯಕ್ಷಮತೆಯನ್ನು ವೃದ್ಧಿಸಿಕೊಳ್ಳುತ್ತ ಗೆಲ್ಲುವುದು ಹೇಗೆಂಬುದರ ಕಡೆಗೆ ಗಮನಹರಿಸುತ್ತಿರಬೇಕು. ಯಾವುದೇ ದೇಶ ಸ್ವಂತದ್ದು ಎನ್ನುವಂತಹ ದ್ವೀಪವನ್ನು ಹೊಂದಿಲ್ಲ. ಎಲ್ಲ ದೇಶಗಳೂ ಭೂಮಿಯನ್ನು ಹಂಚಿಕೊಂಡಿವೆ. 2050ರ ವೇಳೆ ಜಗತ್ತನ್ನೇ ಮುನ್ನಡೆಸಬಲ್ಲ ಹೆಮ್ಮೆಯ ರಾಷ್ಟ್ರವಾಗಿ ಚೀನಾ ತಲೆ ಎತ್ತಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು, 2013ರಲ್ಲಿ ಮಾರ್ಚ್ 14ರಂದು ಚೀನಾದ ಅಧ್ಯಕ್ಷರಾಗಿ ಆಯ್ಕೆಯಾದ ವೇಳೆ ಅವರು, ‘ಚೀನಾವನ್ನು ಮತ್ತೆ ಜಾಗತಿಕ ಮಟ್ಟದಲ್ಲಿ ಶಕ್ತಿಶಾಲಿ, ಸಮೃದ್ಧ ರಾಷ್ಟ್ರವನ್ನಾಗಿಸಬೇಕು’ ಎಂಬ ಕನಸನ್ನು ಹಂಚಿಕೊಂಡಿದ್ದರು. ಇದಕ್ಕಾಗಿ 2011ರಿಂದಲೇ ಕೆಲಸ ಆರಂಭಿಸಿದ್ದ ಅವರು, ದೇಶದ ಕನಸುಗಾರ ತಾನೆಂದು ಬಿಂಬಿಸಿದ್ದಲ್ಲದೇ, ಈ ಕನಸನ್ನು ನನಸು ಮಾಡುವುದಕ್ಕೆ ಅಗತ್ಯ ಬುನಾದಿಯನ್ನು ಹಾಕಿದ್ದರು. ಜಿನ್​ಪಿಂಗ್ ಅಧಿಕಾರ ಸ್ವೀಕರಿಸುವ ವೇಳೆ ಲಂಚಬಾಕರು, ಭ್ರಷ್ಟಾಚಾರಿಗಳಿಂದಾಗಿ ಕಮ್ಯೂನಿಸ್ಟ್ ಪಕ್ಷದ ಆಂತರಿಕ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿತ್ತು. 2012ರ ನ.15ರಂದು ಪಕ್ಷದ ಪ್ರಧಾನಕಾರ್ಯದರ್ಶಿಯಾಗಿ ಆಯ್ಕೆಯಾದ ಬೆನ್ನಲ್ಲೇ, 18ನೇ ಸೆಂಟ್ರಲ್ ಕಮಿಟಿ ಸಭೆಯಲ್ಲಿ ಸೇನಾ ಚುಕ್ಕಾಣಿಯನ್ನೂ ಹಿಡಿದರು. ಹೊಸ ಆರ್ಥಿಕ ನೀತಿಗಳನ್ನು ಜಾರಿಗೆ ತಂದರು. ರಾಜಕೀಯ ಭ್ರಷ್ಟಾಚಾರ ತಡೆದು ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಂಡರು. ಈಗ ಅದನ್ನು ಮುಂದುವರಿಸಿದ್ದಾರಷ್ಟೇ..

ಅವರ ಬಾಲ್ಯ, ಯೌವನ ಹೂವಿನ ಹಾಸಿಗೆಯೇನಾಗಿರಲಿಲ್ಲ. 1953ರ ಜೂನ್ 15ರಂದು ಬೀಜಿಂಗ್​ನಲ್ಲಿ ಕ್ಸಿ ಜಿನ್​ಪಿಂಗ್ ಹುಟ್ಟಿದ್ದು. ತಂದೆ ಕಮ್ಯೂನಿಸ್ಟ್ ಪಕ್ಷದ ಕ್ರಾಂತಿಕಾರಿ ನಾಯಕ ಕ್ಸಿ ಝೋಂಗ್​ಕ್ಸನ್. 1949ರಲ್ಲಿ ಕಮ್ಯೂನಿಸ್ಟ್ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾದ ಝೋಂಗ್​ಕ್ಸನ್ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್​ನಲ್ಲಿ ಉಪ ಪ್ರಧಾನಿ, ಉಪಾಧ್ಯಕ್ಷರಾಗಿದ್ದವರು. ತಾಯಿ ಕಿ ಕ್ಸಿನ್. ಹತ್ತು ವರ್ಷದ ಬಾಲಕ ಜಿನ್​ಪಿಂಗ್ ಹೆನನ್​ನ ಲಯೋಂಗ್​ನ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯ ಸ್ಥಿತಿ ನಿರ್ವಣವಾಗಿತ್ತು. 1966ರ ಮೇ ತಿಂಗಳಲ್ಲಿ ಮಾವೋ ಸಾಂಸ್ಕೃತಿಕ ಕ್ರಾಂತಿಯ ಫಲವಾಗಿ ಶಿಕ್ಷಣ ಅರ್ಧಕ್ಕೇ ಮೊಟಕುಗೊಂಡಿತು. ಮಾವೋ ವಿರುದ್ಧದ ಚಳವಳಿಯಲ್ಲಿ ಸೆರೆವಾಸ ಅನುಭವಿಸಿ ಹೊರಬಂದ ಬಳಿಕ 1969ರಲ್ಲಿ ಕಮ್ಯೂನಿಸ್ಟ್ ಪಕ್ಷದ ಪ್ರೊಡಕ್ಷನ್ ತಂಡದ ಶಾಖಾ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದರು.

5 ಅಡಿ 11 ಇಂಚು ಎತ್ತರ ಇರುವ ಜಿನ್​ಪಿಂಗ್ 1980ರ ದಶಕದ ಆರಂಭದಲ್ಲಿ ಬ್ರಿಟನ್​ನಲ್ಲಿ ಚೀನಾ ರಾಯಭಾರಿ ಆಗಿದ್ದ ಕೆ ಹುವಾ ಅವರ ಪುತ್ರಿಯನ್ನು ವಿವಾಹವಾಗಿದ್ದರು. ಕೆಲವೇ ವರ್ಷಗಳಲ್ಲಿ ಈ ದಾಂಪತ್ಯ ಮುರಿದುಬಿತ್ತು. 1987ರಲ್ಲಿ ಚೀನಾದ ಖ್ಯಾತ ಜಾನಪದ ಗಾಯಕಿ ಪೆಂಗ್ ಲಿಯುವಾನ್​ರನ್ನು ಮದುವೆಯಾದರು. ಈ ದಾಂಪತ್ಯದಲ್ಲಿ ಅವರಿಗೆ ಕ್ಸಿ ಮಿಂಗ್​ರೆೆ ಎಂಬ ಒಬ್ಬ ಪುತ್ರಿ ಇದ್ದಾಳೆ.

ಈ ಮಹತ್ವಾಕಾಂಕ್ಷಿ ನಾಯಕ ರಾಜಕೀಯವಾಗಿ (ಸರ್ವಾಧಿಕಾರಿಯಾಗಿ?) ಬೆಳೆಯುವುದಕ್ಕೆ ಪ್ರೇರಣೆ ನೀಡಿದ ಘಟನೆಯನ್ನು ಅವರದೇ ಮಾತುಗಳಲ್ಲಿ ದಾಖಲಿಸುವುದು ಸೂಕ್ತ- ‘ಅದು ಅರವತ್ತರ ದಶಕದ ಕೊನೆಯ ಭಾಗ. ಚೀನಾದಲ್ಲಿ ಅಂದಿನ ಅಧ್ಯಕ್ಷ ಮಾವೋ ಝೆಡಂಗ್ ಸಾಂಸ್ಕೃತಿಕ ಕ್ರಾಂತಿಯನ್ನು ಹೇರಿದ್ದರು. ತಪ್ಪು ಮಾಡಿದವರನ್ನು ಚೀನಾದ ಸೀಕ್ರೆಟ್ ಪೊಲೀಸರು (ರೆಡ್ ಗಾರ್ಡ್

ಗಳು) ಬಂಧಿಸಿ ಶಿಕ್ಷೆಗೊಳಪಡಿಸುತ್ತಿದ್ದರು. ನನ್ನ ತಂದೆಯೂ ಬಂಧನಕ್ಕೆ ಒಳಗಾಗಿದ್ದರು. ಅಧ್ಯಕ್ಷ ಮಾವೋ ಝೆಡಂಗ್ ಪದಚ್ಯುತಿ ಆಗ್ರಹಿಸಿ ಪ್ರತಿಭಟಿಸಿದವರ ಜತೆ 14 ವರ್ಷದವನಾದ ನಾನೂ ಬಂಧಿತನಾಗಿದ್ದೆ. ‘ನೀನು ಮಾಡಿರುವ ಅಪರಾಧ ಎಷ್ಟು ಗಂಭೀರವಾದುದು ಎಂಬ ಅರಿವು ನಿನಗಿದೆಯೇ?’ ಎಂದು ರೆಡ್ ಗಾರ್ಡ್​ಗಳು ನನ್ನನ್ನು ಪ್ರಶ್ನಿಸಿದ್ದರು. ‘ಅದರ ಲೆಕ್ಕಾಚಾರ ನಿಮಗೇ ಇರಲಿ, ಶಿಕ್ಷೆಗೆ ಗುರಿಪಡಿಸಲು ಅಷ್ಟು ಸಾಕಾದೀತೇ?’ ಎಂದು ಮರುಪ್ರಶ್ನೆ ಎಸೆದಿದ್ದೆ. ‘ನಿನ್ನನ್ನು ನೂರು ಸಲ ಶಿಕ್ಷೆಗೆ ಗುರಿಪಡಿಸುವಷ್ಟು ದೊಡ್ಡ ತಪ್ಪೆಸಗಿದ್ದೀಯಾ..’ ಎಂದಿದ್ದರು ಅವರು. ಅವರು ನನ್ನಲ್ಲಿ ಭೀತಿ ಹುಟ್ಟಿಸಲೆಂದೇ ಆ ರೀತಿ ಹೇಳಿದ್ದರು. ಪ್ರಜಾಪ್ರಭುತ್ವದ ಹೆಸರಿನಲ್ಲಿ ಜನರ ಮೇಲೆ ಸರ್ವಾಧಿಕಾರ ಸಾಧಿಸುವ ಪ್ರಯತ್ನ ಅದಾಗಿತ್ತು. ನಾನು ರಾಜಕೀಯವಾಗಿ ಮುನ್ನಡೆಯುವುದಕ್ಕೆ ಪ್ರೇರೇಪಿಸಿದ ಘಟನೆಗಳಲ್ಲಿ ಇದೂ ಒಂದು’. ಇನ್ನು, ಬದಲಾದ ರಾಜಕೀಯ ಮತ್ತು ಭೌಗೋಳಿಕ ವಿದ್ಯಮಾನಗಳನ್ನು ಪರಿಗಣಿಸಿದಾಗ ಜಿನ್​ಪಿಂಗ್ ಮಹತ್ವಾಕಾಂಕ್ಷೆಗೆ ಹಲವು ಸವಾಲುಗಳಿವೆ. ವಿಶೇಷವಾಗಿ ಭಾರತವೂ ‘ವಿಶ್ವ ಗುರು’ ಆಗಬೇಕು ಎಂದು ಹೊರಟಿದ್ದು, ಪ್ರಧಾನಿ ನರೇಂದ್ರಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗಿದೆ. ಹೀಗಿರುವಾಗ ಜಿನ್​ಪಿಂಗ್ ಮಹತ್ವಾಕಾಂಕ್ಷೆ ಈಡೇರಲು ಸಾಧ್ಯವೇ ಎಂಬ ಕುತೂಹಲವಿದ್ದು, ಫಲಿತಾಂಶ ಏನೆಂಬುದನ್ನು ಕಾದುನೋಡಬೇಕಷ್ಟೆ.

Leave a Reply

Your email address will not be published. Required fields are marked *

Back To Top