ಮಸ್ತ್ ಮಸ್ತ್ ರವೀನಾ ಜಬರ್​ದಸ್ತ್ ಮಾತು

 1990ರ ದಶಕದಲ್ಲಿ ತಮ್ಮ ಮಾದಕತೆ ಮೂಲಕವೇ ಬಾಲಿವುಡ್ನ ಟಾಪ್ ನಟಿಯಾಗಿ ಮಿಂಚಿದ್ದವರು ನಟಿ ರವೀನಾ ಟಂಡನ್. ಕನ್ನಡದ ‘ಉಪೇಂದ್ರ’ ಚಿತ್ರದಲ್ಲಿ ನಟಿಸಿದ್ದ ಅವರು ತಮಿಳು, ತೆಲುಗು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇದುವರೆಗೆ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಈ ರಾಷ್ಟ್ರಪ್ರಶಸ್ತಿ ವಿಜೇತ ನಟಿ, ಇತ್ತೀಚೆಗಷ್ಟೇ ನಗರಕ್ಕೆ ಬಂದಿದ್ದರು. ಆಗ ತಮ್ಮ ಮುಂದಿನ ಸಿನಿಮಾ, ನೋಟ್ ಬ್ಯಾನ್ ಸೇರಿ ಹಲವು ವಿಷಯಗಳ ಬಗ್ಗೆ ನಮಸ್ತೆ ಬೆಂಗಳೂರು ಜತೆ ಮಾತನಾಡಿದ್ದಾರೆ.
  •  ಸದ್ಯ ಯಾವೆಲ್ಲ ಚಿತ್ರಗಳಲ್ಲಿ ನಟಿಸುತ್ತಿದ್ದೀರಿ?

– ಈಗಷ್ಟೇ ‘ಮಾತೃ’ ಎಂಬ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದೇನೆ. ಅಷ್ತಾರ್ ಸಯೆದ್ ನಿರ್ದೇಶಿಸುತ್ತಿರುವ ಚಿತ್ರ. ನಮ್ಮ ದೇಶದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತಾದ ಸಿನಿಮಾ ಇದು. ನಾನು ವಿದ್ಯಾ ಚೌಹಾಣ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ದೌರ್ಜನ್ಯಕ್ಕೆ ಒಳಗಾಗುವ ವಿದ್ಯಾ ಕಾನೂನಿನ ಮೊರೆ ಹೋಗುತ್ತಾಳೆ. ಆದರೆ ದುರಾದೃಷ್ಟವಶಾತ್ ಅವಳಿಗೆ ಅಲ್ಲಿ ನ್ಯಾಯ ಸಿಗುವುದಿಲ್ಲ. ಆಗ ಸಮಾಜದ ಕಡೆಗೆ ಮುಖ ಮಾಡುತ್ತಾಳೆ, ಆದರೆ ಸಮಾಜದಲ್ಲೂ ಆಕೆಗೆ ಸರಿಯಾದ ಸ್ಥಾನಮಾನ ಸಿಗುವುದಿಲ್ಲ. ಆಗ ಆಕೆ ತಾನೇ ಏಕಾಂಗಿಯಾಗಿ ಹೋರಾಟಕ್ಕಿಳಿಯುತ್ತಾಳೆ. ಆಕೆಗೆ ಗೆಲುವು ಸಿಗುತ್ತಾ? ಎಂಬುದೇ ಚಿತ್ರದ ಸ್ಟೋರಿ. ಬೆಂಗಳೂರಿನಲ್ಲೂ ಇಂತಹ ಘಟನೆಗಳು ನಡೆದಿವೆ.

  •  1999ರಲ್ಲಿ ‘ಉಪೇಂದ್ರ’ ಬಳಿಕ ನೀವು ಮತ್ತೆ ಕನ್ನಡದಲ್ಲಿ ಕಾಣಿಸಿಕೊಳ್ಳಲೇ ಇಲ್ಲ?

– ನಾನೇನು ಮಾಡಲಿ, ನನಗೆ ಯಾರೂ ಅವಕಾಶವನ್ನೇ ನೀಡಲಿಲ್ಲ. ಅವಕಾಶ ಸಿಕ್ಕರೆ ಈಗಲೂ ಕನ್ನಡದಲ್ಲಿ ನಟಿಸಲು ನಾನು ರೆಡಿ.

  •  ಬೆಂಗಳೂರಿನಲ್ಲಿ ನಡೆದ ಘಟನೆ ಬಗ್ಗೆ ಹೇಳುತ್ತಿದ್ದೀರಿ…?

– ಕಳೆದ ವರ್ಷ ಕಬ್ಬನ್ ಪಾರ್ಕ್ನಲ್ಲಿ ನಡೆದ ಘಟನೆ ನನಗಿನ್ನೂ ನೆನಪಿದೆ. ಮಹಿಳೆಯೊಬ್ಬಳ ಮೇಲೆ ದೌರ್ಜನ್ಯವಾದಾಗ ಸಾರ್ವಜನಿಕರು ಆಕೆಯ ಪರ ನಿಲ್ಲುವ ಬದಲು ಸರ್ಕಾರ ಹಾಗೂ ಕಾನೂನು ಕಠಿಣವಾಗಿಲ್ಲ ಅಂತ ದೂಷಣೆಯಲ್ಲಿ ತೊಡಗಿದ್ದನ್ನು ನೋಡಿ ನನಗೆ ನಿಜಕ್ಕೂ ಬೇಸರವಾಗಿತ್ತು. ನಮ್ಮ ಬೆಂಗಳೂರಿನ ಮಗಳಿಗೆ ಈ ರೀತಿ ಅನ್ಯಾಯವಾಗಿದೆ ಅಂತ ಎಲ್ಲರೂ ಆಕೆಗೆ ಬೆಂಬಲವಾಗಿ ನಿಲ್ಲಬೇಕಿತ್ತು. ಅದರ ಬದಲು ರಾತ್ರಿ 10 ಗಂಟೆಗೆ ಆ ಮಹಿಳೆ ಕಬ್ಬನ್ ಪಾರ್ಕ್ನಲ್ಲಿ ಏನು ಮಾಡುತ್ತಿದ್ದಳು ಅಂತ ಆಕೆಯನ್ನೇ ಪ್ರಶ್ನಿಸಿದ್ದು ನಿಜಕ್ಕೂ ನಾಚಿಕೆಗೇಡು.

  •  ನೋಟ್ ಬ್ಯಾನ್ ಬಗ್ಗೆ ನಿಮ್ಮ ಅಭಿಪ್ರಾಯ?

– ಪ್ರಧಾನಿ ನರೇಂದ್ರ ಮೋದಿ ಅವರು ಹಳೆಯ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿ ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಆದರೆ ಮತ್ತಷ್ಟು ಸಿದ್ಧತೆ ಬೇಕಿತ್ತು ಅಂತನಿಸುತ್ತದೆ. ಯಾಕೆಂದರೆ ಹೊಸ ನೋಟುಗಳು ಸಿಗದ ಕಾರಣ ಜನರಿಗೆ ಸಮಸ್ಯೆ ಆಗುತ್ತಿದೆ. ಆದರೂ ಈ ನೋಟ್ ಬ್ಯಾನ್ ಮುಂದಿನ ದಿನಗಳಲ್ಲಿ ಯಾವ ರೀತಿ ಉತ್ತಮ ಬದಲಾವಣೆಗಳಿಗೆ ಕಾರಣವಾಗುತ್ತೆ ಎಂಬುದನ್ನು ನೋಡಬೇಕಿದೆ. ಸರ್ಕಾರ ತನ್ನ ಆಶ್ವಾಸನೆಗಳನ್ನು ಮರೆತರೆ, ಆಗ ಜನ ಸರ್ಕಾರದ ಕ್ರಮದ ವಿರುದ್ಧ ಧ್ವನಿ ಎತ್ತಬಹುದು, ಪ್ರತಿಭಟಿಸಬಹುದು.

  •  ಬೆಂಗಳೂರು ನಿಮಗೆ ಪ್ರಿಯವಾದ ಸ್ಥಳವಲ್ಲವೇ?

– ಹೌದು, ನನಗೆ ಬೆಂಗಳೂರು ತುಂಬ ಪ್ರಿಯವಾದ ಸ್ಥಳ. ಆಗಾಗ ಇಲ್ಲಿಗೆ ಬರಲು ಇಷ್ಟವಾಗುತ್ತದೆ. ಆದರೆ ಹಿಂದಿನ ಸೊಬಗನ್ನು ಈಗ ಬೆಂಗಳೂರು ಕಳೆದುಕೊಂಡಿದೆ ಅಂತನಿಸುತ್ತದೆ. ಅದನ್ನು ಮಿಸ್ ಮಾಡಿಕೊಳ್ಳುತ್ತೇನೆ. ಈಗ ಗುರುತೇ ಸಿಗದಷ್ಟರ ಮಟ್ಟಿಗೆ ಬದಲಾಗಿಬಿಟ್ಟಿದೆ ಈ ಸಿಟಿ.

Leave a Reply

Your email address will not be published. Required fields are marked *