ಮಳೆ ಸಾಕಪ್ಪಾ ಸಾಕು…

ಹೊಳೆಆಲೂರ: ಸತತ ಮೂರು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿದ್ದ ಹೊಳೆಆಲೂರ ಹೋಬಳಿಯ ಗ್ರಾಮಗಳು ಈ ಬಾರಿ ಮುಂಗಾರು ಬೇಗನೆ ಆರಂಭವಾಗಿದ್ದರಿಂದ ಗ್ರಾಮಸ್ಥರಲ್ಲಿ ಖುಷಿ ಆಗಿತ್ತು. ಆದರೆ, ಎರಡು ತಿಂಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ, ಮಲಪ್ರಭಾ ಹಾಗೂ ಬೆಣ್ಣೆ ಹಳ್ಳದ ಪ್ರವಾಹದಿಂದ ನಿರಾಶ್ರಿತರಾದವರು ಮಳೆ ಸಾಕಪ್ಪಾ ಸಾಕು ಎನ್ನುತ್ತಿದ್ದಾರೆ.

ಅಂಥದ್ದರಲ್ಲಿ ಶನಿವಾರ ರಾತ್ರಿ 10ಕ್ಕೆ ಆರಂಭವಾದ ಮಳೆ ಭಾನುವಾರ ಬೆಳಗಿನ 8 ಗಂಟೆಯವರೆಗೆ ಸತತವಾಗಿ ಸುರಿಯಿತು. ಇದರಿಂದಾಗಿ ಉಳ್ಳಾಗಡ್ಡಿ, ಗೋವಿನಜೋಳ, ಸೂರ್ಯಕಾಂತಿ ಮತ್ತಿತರ ಬೆಳೆಗಳು ನೀರಿನಲ್ಲಿ ನಿಂತು ಕೊಳೆತು ಹೋಗುವ ಪರಿಸ್ಥಿತಿ ಎದುರಾಗಿದೆ. ಉಳ್ಳಾಗಡ್ಡಿಗೆ ಹೆಚ್ಚು ಬೆಲೆ ಸಿಗುವ ಆಶಾಭಾವನೆಯಲ್ಲಿದ್ದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ನಿರಾಶರಾಗುವಂತಾಗಿದೆ.

ಹೊಳೆಆಲೂರಿನ ಮಲಪ್ರಭಾ ಸೇತುವೆ ಜಲಾವೃತದಿಂದ ಕುರವಿನಕೊಪ್ಪ, ನೀರಲಗಿ, ಜಕನೂರ, ಬೂದಿಹಾಳ, ತಮಿನಾಳ ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ಬೆನಹಾಳ ಹಾಗೂ ಹುನಗುಂಡಿ ಮಧ್ಯದ ಹಿರೇ ಹಳ್ಳದ ಸೇತುವೆ ಮುಳುಗುವ ಹಂತ ತಲುಪಿದೆ. ರೋಣ ಹಾಗೂ ಹೊಳೆಆಲೂರು ಸಂಪರ್ಕ ಕಡಿತವಾಗುವ ಸಂಭವವಿದೆ. ಮೆಣಸಗಿ ಬಳಿ ಬೆಣ್ಣೆ ಹಳ್ಳದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಭಾನುವಾರ ರಾತ್ರಿ ಮತ್ತೆ ಮಳೆಯಾದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಜನರು ಭಯಭೀತರಾಗಿದ್ದಾರೆ.

ಎಲ್ಲ ಗ್ರಾಮಗಳಲ್ಲಿ ಶಿಥಿಲ ಹಂತದಲ್ಲಿದ್ದ ಮಣ್ಣಿನ ಮನೆಗಳು ಕುಸಿಯುತ್ತಿರುವುದರಿಂದ ಜನತೆ ಆತಂಕದಲ್ಲಿದ್ದಾರೆ. ನವ ಗ್ರಾಮದಲ್ಲಿನ ಮನೆಗಳು ಸಹ ಸೋರುತ್ತಿದ್ದು, ವಾಸಕ್ಕೆ ಏನು ಮಾಡಬೇಕು ಎಂಬುದು ಗ್ರಾಮಸ್ಥರಿಗೆ ತಿಳಿಯದಂತಾಗಿದೆ. ಹೊಳೆಆಲೂರ ಗ್ರಾಮದ ಅಮರಗೋಳ ರಸ್ತೆಯ ಮಾಳವಾಡ ಪ್ರಿಂಟಿಂಗ್ ಪ್ರೆಸ್ ಬಳಿ ಹಲವು ಮನೆಗಳಿಗೆ ಹೊಲದ ನೀರು ನುಗ್ಗಿದೆ. ರೈಲ್ವೆ ಸ್ಟೇಷನ್ ರಸ್ತೆಯಲ್ಲಿನ ಹಲವು ಕಟ್ಟಿಗೆ ಅಡ್ಡೆಗಳಲ್ಲಿ ನೀರು ತುಂಬಿಕೊಂಡಿದೆ. ಪರಿಣಾಮ ವ್ಯಾಪಾರಸ್ಥರ ಕಟ್ಟಿಗೆ ಕೆತ್ತನೆಯ ವಸ್ತುಗಳು ಹಾನಿಗೀಡಾಗಿವೆ.

ಹಿಂಗಾರು ಬಿತ್ತನೆಗೆ ಸಜ್ಜಾಗಿದ್ದ ರೈತರಿಗೆ ಈಗ ಮಳೆ ಬಿಡುವು ಕೊಡುತ್ತಿಲ್ಲ. ಎರಡು ತಿಂಗಳ ಹಿಂದೆ ವಕ್ಕರಿಸಿದ್ದ ಪ್ರವಾಹದಿಂದ ಕಂಗಾಲಾಗಿರುವ ನಿರಾಶ್ರಿತರು ನವ ಗ್ರಾಮ ಸೇರಿದ್ದರೂ ಅಲ್ಲಿ ಮನೆ ಹಂಚಿಕೆ ಗೊಂದಲ ಇನ್ನೂ ಇತ್ಯರ್ಥವಾಗುತ್ತಿಲ್ಲ.

ವಿವಿಧೆಡೆ ಮಳೆ: ಲಕ್ಷ್ಮೇಶ್ವರ ತಾಲೂಕಿನಲ್ಲಿ ಭಾನುವಾರ ಬೆಳಗ್ಗೆ 4 ಗಂಟೆಯಿಂದ 10ರವರೆಗೆ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಯಿತು. ಜನರು ಮನೆಗಳ ರಕ್ಷಣೆಗಾಗಿ ತಾಡಪತ್ರಿ ಹಾಕಿದರು. ಜಮೀನುಗಳಲ್ಲಿ ರೈತರು ಕಿತ್ತು ಹಾಕಿದ್ದ ಕೀಳುಶೇಂಗಾ, ಉಳ್ಳಾಗಡ್ಡಿ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡಿದರು. ತಗ್ಗು ಪ್ರದೇಶದಲ್ಲಿನ ಹತ್ತಿ, ಶೇಂಗಾ, ಗೋವಿನಜೋಳ ಇತರ ಬೆಳೆಗಳಲ್ಲಿ ನೀರು ನಿಂತಿತ್ತು. ನರಗುಂದ ತಾಲೂಕಿನಾದ್ಯಂತ ಬೆಳಗ್ಗೆ 4ರಿಂದ 9ರವರೆಗೆ ಉತ್ತಮವಾಗಿ ಮಳೆ ಸುರಿದಿದೆ. ಯಾವುದೇ ಹಾನಿಯಾಗಿಲ್ಲ. ಆದರೆ, ರೋಣದಲ್ಲಿ ಮಳೆರಾಯನ ದರ್ಶನವೇ ಇರಲಿಲ್ಲ.

Leave a Reply

Your email address will not be published. Required fields are marked *