ಶಿರಸಿ: ತಾಲೂಕಿನ ಬದನಗೋಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮಳೆ ಬಂದರೆ ಕೊಠಡಿಯಿಂದ ಹೊರಗೆ ಬಂದು ಕುಳಿತು ಪಾಠ ಕೇಳಬೇಕು!. ಶಾಲೆಯ ಮೇಲ್ಛಾವಣಿ ಹಾಳಾಗುವ ಜತೆಗೆ ಮೂಲಸೌಲಭ್ಯದಿಂದ ಶಾಲೆ ವಂಚಿತವಾಗಿರುವುದು ಇದಕ್ಕೆ ಕಾರಣವಾಗಿದೆ.
ತಾಲೂಕು ಕೇಂದ್ರದಿಂದ 30 ಕಿ.ಮೀ. ದೂರದ ಈ ಶಾಲೆ ದುಸ್ಥಿತಿಯತ್ತ ಸಾಗಿದೆ. ಮಕ್ಕಳು ಕುಳಿತು ಪಾಠ ಕೇಳಬೇಕಾದ ಜಾಗದಲ್ಲಿ ಮಳೆ ನೀರು ಸೋರುತ್ತದೆ. ಛಾವಣಿ ಮೇಲಿರುವ ಹೆಂಚುಗಳು ನೆಲ ಸೇರಿ ಪುಡಿ ಪುಡಿಯಾಗಿವೆ. ಮಳೆಗೆ ನೆನೆದು ಶಿಥಿಲವಾಗುತ್ತಿರುವ ಗೋಡೆಯ ಸ್ಥಿತಿ ಹೇಳತೀರದಾಗಿದೆ. ಈ ಸಂಕಷ್ಟಗಳ ಮಧ್ಯೆ 21 ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿದ್ದಾರೆ. ಆದರೆ, ಮಳೆಯನ್ನೂ ಲೆಕ್ಕಿಸದೆ ಶಾಲೆಗೆ ಬರುವ ಮಕ್ಕಳನ್ನು ಶಾಲೆ ಕೊಠಡಿಯ ಹೊರಗೆ ಕೂರಿಸಿ ಪಾಠ ಮಾಡುವ ಅನಿವಾರ್ಯತೆ ಶಿಕ್ಷಕರ ಪಾಲಿಗೆ ಒದಗಿದೆ.
1966ರಲ್ಲಿ ಆರಂಭವಾಗಿರುವ ಶಾಲೆ ಮೊದಲಿನಿಂದಲೂ ಉತ್ತಮವಾಗಿ ನಡೆದುಕೊಂಡು ಬಂದಿದೆ. ಹಿಂದುಳಿದ ಗ್ರಾಮವಾದ ಇಲ್ಲಿ ಶಿಕ್ಷಣ ಕಲಿತ ಅನೇಕ ವಿದ್ಯಾರ್ಥಿಗಳು ಈಗ ಉನ್ನತ ಉದ್ಯೋಗದಲ್ಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಶಾಲೆಗೆ ನಿರೀಕ್ಷಿತ ಸೌಕರ್ಯ ಒದಗಿಸುವಲ್ಲಿ ಶಿಕ್ಷಣ ಇಲಾಖೆ ಎಡವಿದೆ ಎಂಬುದು ಸ್ಥಳೀಯರ ಆರೋಪ.
ಶಾಲೆಗೆ ಸರಿಯಾದ ಆವರಣ ಗೋಡೆ ನಿರ್ವಿುಸಿಲ್ಲ. ಈ ಹಿಂದೆ ಕೈಗೊಂಡಿದ್ದ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದರಿಂದ ಅರೆಬರೆ ಆವರಣ ಗೋಡೆ ಮಾತ್ರ ಉಳಿದಿದೆ. ಶಾಲೆಯ ಗೋಡೆಗಳ ಸ್ಥಿತಿಯಂತೂ ಆತಂಕ ಹುಟ್ಟಿಸುವಂತಿದೆ ಎನ್ನುತ್ತಾರೆ ವಿದ್ಯಾರ್ಥಿಗಳ ಪಾಲಕರು.
ಹತ್ತಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಶಾಲೆಯಲ್ಲಿ ಸೌಕರ್ಯ ವೃದ್ಧಿಸುವ ಜತೆಗೆ ಮಳೆಗಾಲದಲ್ಲಿ ಅಪಾಯ ಎದುರಾಗದಂತೆ ತಕ್ಷಣ ಕ್ರಮವಹಿಸುವ ಅಗತ್ಯವಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಪಾಲಕರು ತಿಳಿಸಿದ್ದಾರೆ.