ಮಳೆ ನೀರಿನಿಂದ ಅಂತರ್ಜಲ ವೃದ್ಧಿ

ಕೋಲಾರ: ಪ್ರತಿ ಹನಿ ಮಳೆ ನೀರನ್ನು ಸಂರಕ್ಷಿಸಿ ಅಂತರ್ಜಲ ವೃದ್ಧಿಸುವ ಜತೆಗೆ ಕೃಷಿ ಚಟುವಟಿಕೆಗೆ ದೊಡ್ಡ ಮಟ್ಟದಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಜಿಲ್ಲಾಡಳಿತ, ಜಿಪಂ, ಕಾನೂನು ಸೇವಾ ಪ್ರಾಧಿಕಾರ, ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಶುಕ್ರವಾರ ನಗರದ ಸರ್ವಜ್ಞ ಉದ್ಯಾನದಲ್ಲಿ ವಿಶ್ವ ಜಲದಿನಾಚರಣೆ ಅಂಗವಾಗಿ ಸಸಿ ನೆಟ್ಟು ಮಾತನಾಡಿದರು.

ಜಿಲ್ಲೆಯ 17 ಲಕ್ಷ ಜನಸಂಖ್ಯೆಯ ಬೇಡಿಕೆಗನುಗುಣವಾಗಿ ನೀರು ಒದಗಿಸಲು ಶಾಶ್ವತ ನೀರಿನ ವ್ಯವಸ್ಥೆಯಿಲ್ಲ. ಕಳೆದ 15 ವರ್ಷಗಳ ಅವಧಿಯಲ್ಲಿ 12 ವರ್ಷ ಬರಗಾಲವಿತ್ತು. ಇಂತಹ ಸಂದರ್ಭದಲ್ಲಿ ವಾರ್ಷಿಕವಾಗಿ ಸುರಿಯುವ 746 ಮಿಮೀ ಮಳೆ ನೀರನ್ನು ಸಂರಕ್ಷಿಸಿ ಅಂತರ್ಜಲ ವೃದ್ಧಿಸಿಕೊಳ್ಳಬೇಕು, ಗಿಡಮರಗಳನ್ನು ಹೆಚ್ಚು ಬೆಳೆಸಿ ಪರಿಸರ ಸಂರಕ್ಷಣೆಗೂ ಒತ್ತು ನೀಡಬೇಕು ಎಂದರು.

ಜಿಪಂ ಸಿಇಒ ಜಿ.ಜಗದೀಶ್ ಮಾತನಾಡಿ, ಹಿಂದೆ ಸಂಪದ್ಬರಿತವಾಗಿದ್ದ ಕೋಲಾರ ಬರಡುಭೂಮಿಯಾಗಿದೆ. ನೀರಿನ ಮಿತಿಮೀರಿದ ಬಳಕೆಯಿಂದ ಅಂತರ್ಜಲದ ಶೋಷಣೆಯಾಗುತ್ತಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ಜನಾಂಗಕ್ಕೆ ಬರಡು ಭೂಮಿ ಬಳುವಳಿ ನೀಡಿದಂತಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಬಿದ್ದ ಮಳೆ ನೀರಿನ ಒಂದು ಹನಿಯೂ ಹೊರಹೋಗದಂತೆ ಸಂರಕ್ಷಿಸಲು ಜಿಪಂನಿಂದ ವರ್ಷಕ್ಕೆ 1,000 ಚೆಕ್​ಡ್ಯಾಂ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಕೋಟಿನಾಟಿ ಕಾರ್ಯಕ್ರಮದಡಿ ಸಸಿ ನೆಡಲು 25 ಲಕ್ಷ ಸಸಿಗಳನ್ನು ಬೆಳೆಸಲಾಗುತ್ತಿದೆ. ಶಾಲಾ ಮಕ್ಕಳನ್ನು ಬಳಸಿಕೊಂಡು ಬೆಟ್ಟಗುಡ್ಡಗಳಲ್ಲಿ 1 ಲಕ್ಷ ಬೀಜಗಳನ್ನು ಬಿತ್ತಲು ಉದ್ದೇಶಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕೆಂದು ಕೋರಿದರು.

ನಗರಸಭೆ ಮಾಜಿ ಸದಸ್ಯ ತ್ಯಾಗರಾಜ್ ಮಾತನಾಡಿ, ಜಿಲ್ಲೆಯ ರಾಜಕಾಲುವೆ, ಪೋಷಕ ಕಾಲುವೆಗಳ ಮರು ಸರ್ವೆ ನಡೆಸಿ ನರೇಗಾದನ್ವಯ ಹೂಳು ತೆಗೆಯಬೇಕು. ಕೋಲಾರಮ್ಮ ಕೆರೆಯಲ್ಲಿ ಶೇ.70 ಹೂಳು ತುಂಬಿರುವುದರಿಂದ ಸಿಎಸ್​ಆರ್ ಅನ್ವಯ ಪುನಶ್ಚೇತನಗೊಳಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದರು.

ವಿಜ್ಞಾನ ಪರಿಷತ್ ಜಿಲ್ಲಾ ಕಾರ್ಯದರ್ಶಿ ಮಂಜುಳಾ ಭೀಮರಾವ್ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ, ಎಸ್ಪಿ ಡಾ.ರೋಹಿಣಿ ಕಟೋಚ್ ಸೆಪಟ್, ಪೌರಾಯುಕ್ತ ಮಹೇಂದ್ರಕುಮಾರ್, ಅಧಿಕಾರಿಗಳಾದ ಎಂ.ಸೌಮ್ಯಾ, ಸಿ.ಆರ್. ಮಂಜುನಾಥ್, ಡಾ.ಜಗದೀಶ್, ಪ್ರಸನ್ನ, ಸುರೇಶ್, ಸಂಘ-ಸಂಸ್ಥೆ ಪ್ರತಿನಿಧಿಗಳಾದ ಕೆ.ಧನರಾಜ್, ಸೋಮಶಂಕರ್, ಅಂಧ್ರಹಳ್ಳಿ ಶಾಂತಮ್ಮ ಇತರರಿದ್ದರು.

ಜಾಥಾ: ಪ್ರವಾಸಿ ಮಂದಿರದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಅಧಿಕಾರಿಗಳೊಂದಿಗೆ ವಿವಿಧ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.