ಮಳೆ ತಗ್ಗಿದರೂ ಇಳಿಯದ ನೆರೆ

ಕುಂದಾಪುರ: ಮೂರು ದಿನದಿಂದ ಸುರಿಯುತ್ತಿದ್ದ ಆಶ್ಲೇಷಾ ಮಳೆ ತೀವ್ರತೆ ಬುಧವಾರ ಕಡಿಮೆಯಾದರೂ ಕುಂದಾಪುರ ತಾಲೂಕಿನ ಕೆಲ ಪ್ರದೇಶದಲ್ಲಿ ಇನ್ನೂ ನೆರೆ ನೀರು ಇಳಿದಿಲ್ಲ.

ಪಡುಕೋಣೆ ಶಾಲೆಯಲ್ಲಿ ಜಿಲ್ಲಾಡಳಿತ ಪುನರ್ವಸತಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದರೂ ಜಲಾವೃತಗೊಂಡ ಮನೆ ಸದಸ್ಯರು ಸ್ಥಳಾಂತರಕ್ಕೆ ಮನಸ್ಸು ಮಾಡುತ್ತಿಲ್ಲ. ನೆರೆ ನೀರು ನುಗ್ಗಿದ ಹಟ್ಟಿಗಳಿಂದ ಜಾನುವಾರುಗಳನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಲಾಗಿದೆ. ಬಂಟ್ವಾಡಿ ಕಿಂಡಿ ಅಣೆಕಟ್ಟು ನೆರೆಗೆ ನೇರ ಕಾರಣ ಎಂಬುದು ಸ್ಥಳೀಯರ ಆರೋಪ.

ಹಡವು, ಪಡುಕೋಣೆ, ಚಿಕ್ಕಳ್ಳಿ ಪರಿಸರದಲ್ಲಿ ಮಧ್ಯಾಹ್ನದ ಅನಂತರ ಮತ್ತೆ ನೆರೆ ಏರಿಕೆ ಕಂಡಿದೆ. ಮಾರಸ್ವಾಮಿ ನಾಡಾ ಸಂಪರ್ಕ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಸಂಚಾರಕ್ಕೆ ಬದಲಿ ಮಾರ್ಗ ಬಳಸಿಕೊಳ್ಳಲಾಗುತ್ತಿದೆ. ಬಡಾಕೆರೆಯಲ್ಲಿ ಬೆಳಗ್ಗೆ ಸ್ವಲ್ಪ ನೆರೆ ಪ್ರಮಾಣ ತಗ್ಗಿದರೂ ಮಧ್ಯಾಹ್ನದ ನಂತರ ಏರಿಕೆಯಾಗಿ ಆತಂಕ ಉಂಟು ಮಾಡಿತ್ತು. ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣೂರು ನಡುಬೆಟ್ಟು, ಚಿಕ್ಕಿನಕರೆ, ಕಂಬಳಗದ್ದೆ ಮೊದಲಾದೆಡೆ ಮನೆ ಮೇಲೆ ಮರಬಿದ್ದು ಹಾನಿಯಾಗಿದೆ. ನೆರೆ ನೀರು ಕೃಷಿ ಭೂಮಿ ಆವರಿಸಿದ್ದು, ಭತ್ತದ ಸಸಿ ಕೊಳೆತು ಕೃಷಿ ಸಂಪೂರ್ಣ ಹಾಳಾಗುವ ಸಂಭವವಿದೆ.

ಬಂಟ್ವಾಡಿ ಕಿಂಡಿ ಅಣೆಕಟ್ಟು ಕಾರಣ
ಬಂಟ್ವಾಡಿ ಬಳಿ ನಿರ್ಮಿಸಿದ ಕಿಂಡಿ ಅಣೆಕಟ್ಟು ಚಿಕ್ಕಳ್ಳಿ, ಪಡುಕೋಣೆ, ಹಡವು ಬಡಾಕೆರೆ ಭಾಗದಲ್ಲಿ ನೆರೆ ಸಂಭವಿಸಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಿಂಡಿ ಅಣೆಕಟ್ಟಿನ ಹಲಗೆ ನೆಲ ಮಟ್ಟದವರೆಗೂ ತೆಗೆಯದೆ ಬುಡದಲ್ಲಿ ಉಳಿಸಿದ್ದರಿಂದ ನೀರಿನ ಸರಾಗ ಹರಿವಿಗೆ ಅಡ್ಡಿಯಾಗಿದೆ. ತೇಲಿ ಬರುವ ಕಸಕಡ್ಡಿ, ಮರಮಟ್ಟುಗಳು ಕಿಂಡಿ ಸಂದಲ್ಲಿ ಸಿಕ್ಕಿಕೊಂಡು ನೀರಿನ ಹರಿವಿಗೆ ಅಡ್ಡಿ ಮಾಡಿದೆ. ಹೊಸದಾಗಿ ಅಳವಡಿಸಿದ ಸ್ವಯಂಚಾಲಿತ ಗೇಟ್ ಸಂಪೂರ್ಣ ತೆರೆದುಕೊಂಡಿಲ್ಲ. ಹೀಗಾಗಿ ಬುಧವಾರ ಮಳೆ ಕಡಿಮೆಯಾಗಿ ಬೇರೆ ಕಡೆ ನೆರೆ ಇಳಿದಿದ್ದರೂ ಈ ಪ್ರದೇಶದಲ್ಲಿ ಕಡಿಮೆಯಾಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಹಟ್ಟಿಗೆ ನೀರು ನುಗ್ಗಿದ ಪ್ರದೇಶದಿಂದ ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ. ಜಲಾವೃತಗೊಂಡ ಮನೆಯ ಸದಸ್ಯರು ಮನೆ ತೊರೆಯಲು ಹಿಂದೇಟು ಹಾಕುತ್ತಿದ್ದಾರೆ. ನೆರೆ ಪ್ರದೇಶದ ಜನರ ಜತೆ ನಿರಂತರ ಸಂಪರ್ಕದಲ್ಲಿದ್ದು, ದೋಣಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪಡುಕೋಣೆ ಕೋಟೆ ಬಾಗಿಲು ಶಾಲೆಯಲ್ಲಿ ಪುನರ್ವಸತಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದು, ಅಕ್ಕಿ, ಬೇಳೆ ಸ್ಟಾಕ್ ಮಾಡಲಾಗಿದೆ.
ಅರವಿಂದ ಪೂಜಾರಿ ಉಪಾಧ್ಯಕ್ಷ, ನಾಡಾ ಗ್ರಾಮ ಪಂಚಾಯಿತಿ

ಚಿಕ್ಕಳ್ಳಿ, ಹಡವು ಹಾಗೂ ಪಡುಕೋಣೆಯಲ್ಲಿ ನೆರೆಯಿಂದ ಸಂತ್ರಸ್ತರಾದವರ ಮನವೊಲಿಸಿ ಪುನರ್ವಸತಿ ಕೇಂದ್ರಕ್ಕೆ ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ. ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸ್ಥಳಕ್ಕೆ ಭೇಟಿ ನೀಡಿ ಜನರ ಮನವೊಲಿಸಿದ್ದಾರೆ. ಜಾನುವಾರುಗಳ ರಕ್ಷಣೆಗಾಗಿ ಶಿಬಿರ ತೆರೆದಿದ್ದೇವೆ. ನೀರು ನುಗ್ಗಿದ ಹಟ್ಟಿಗಳ ಜಾನುವಾರು ಶಿಬಿರಕ್ಕೆ ಸ್ಥಳಾಂತರ ಮಾಡಲಾಗಿದೆ. ನೆರೆ ಪರಿಸ್ಥಿತಿ ಎದುರಿಸುಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಡಾ.ಎಸ್.ಎಸ್.ಮಧುಕೇಶ್ವರ್ ಎಸಿ ಕುಂದಾಪುರ

ಕಬ್ಬಿನಾಲೆ ಗ್ರಾಮದಲ್ಲಿ ಹಾನಿ ಪರಿಶೀಲನೆ 

ಹೆಬ್ರಿ: ಹೆಬ್ರಿ ತಾಲೂಕು ಮುದ್ರಾಡಿ ಗ್ರಾಪಂ ವ್ಯಾಪ್ತಿಯ ಕಬ್ಬಿನಾಲೆ ಗ್ರಾಮದ ವಿವಿಧೆಡೆ ಅಪಾರ ಮಳೆಯಿಂದಾದ ಹಾನಿ ಕುರಿತು ಅಧಿಕಾರಿಗಳ ತಂಡದಿಂದ ಸ್ಥಳ ಪರಿಶೀಲನೆ ನಡೆಯಿತು.
ಕೊಂಕಣರಬೆಟ್ಟು ಶಾಲೆ ಬಳಿ ಗುಡ್ಡೆ ಜರಿದು ಹಾನಿಯಾಗಿದ್ದು, ಶಾಲೆ ಮತ್ತು ಅಂಗನವಾಡಿಗೂ ಅಪಾಯವಾಗುವ ಸಂಭವವಿದೆ. ನೀರಾಣಿ ಬಳಿ ಗುಡ್ಡೆ ಜರಿದು ಹಾನಿಯಾಗಿದ್ದು, ಪಿಡಬ್ಲುೃಡಿ ಇಲಾಖೆಯಿಂದ ಮಣ್ಣು ತೆರವುಗೊಳಿಸಲಾಗಿದೆ. ಈ ಎರಡೂ ಪ್ರದೇಶಗಳಿಗೆ ಸಂಬಂಧಿಸಿದ ಇಂಜಿನಿಯರ್‌ಗಳು ಸ್ಥಳ ಪರಿಶೀಲನೆ ಮಾಡಿ ಅಂದಾಜು ಪಟ್ಟಿ ತಯಾರಿಸಿ ಕೂಡಲೇ ಜಿಲ್ಲಾಡಳಿತ ಮೂಲಕ ತುರ್ತು ಕ್ರಮ ಕೈಗೊಳ್ಳಲು ಗ್ರಾಮಸ್ಥರು ಬೇಡಿಕೆ ಸಲ್ಲಿಸಿದರು.
ಹೆಬ್ರಿ ತಹಸೀಲ್ದಾರ್ ಕೆ.ಮಹೇಶ್‌ಚಂದ್ರ, ಗ್ರಾಪಂ ಅಧ್ಯಕ್ಷೆ ಶಶಿಕಲಾ ಡಿ.ಪೂಜಾರಿ, ಗ್ರಾಪಂ ಸದಸ್ಯ ಕೆ.ಚಂದ್ರಶೇಖರ ಬಾಯರಿ, ಸಂತೋಷ ಕುಮಾರ್ ಶೆಟ್ಟಿ, ಶುಭದರ್ ಶೆಟ್ಟಿ, ಕೃಷ್ಣ ಆಚಾರ್ಯ, ಕಾರ್ಯದರ್ಶಿ ಸದಾಶಿವ, ಗ್ರಾಮ ಕರಣಿಕ ನವೀನ್ ಕುಮಾರ್, ಗುಮಾಸ್ತ ಪದ್ಮನಾಭ ಆರ್. ಕುಲಾಲ್, ಗ್ರಾಮ ಸಹಾಯಕಿ ಶಿಲ್ಪಾ, ಗ್ರಾಮಸ್ಥರು ಉಪಸ್ಥಿತರಿದ್ದರು.
ಹೆಜಮಾಡಿಕೋಡಿಯಲ್ಲಿ ಹಾನಿ: ಪಡುಬಿದ್ರಿ: ಗಾಳಿ ಹಾಗೂ ಮಳೆಯಿಂದ ಹೆಜಮಾಡಿ ಗ್ರಾಪಂ ವ್ಯಾಪ್ತಿಯ ಹೆಜಮಾಡಿಕೋಡಿ ಗುಲಾಬಿ ಹಾಗೂ ರುಕ್ಕಯ್ಯ ಬೊರುಗುಡ್ಡೆ ಎಂಬುವರ ಮನೆಗಳಿಗೆ ಹಾನಿಯಾಗಿದೆ.
ಗುಲಾಬಿ ಅವರ ಮನೆ ಛಾವಣಿಗೆ ಹಾನಿಯಾಗಿದೆ. ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ ಟರ್ಪಾಲ್ ಹಾಸಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದ್ದಾರೆ. ರುಕ್ಕಯ್ಯ ಅವರ ಮನೆಗೆ ಮರಬಿದ್ದಿದ್ದು, ಗ್ರಾಪಂ ಮೂಲಕ ಮರ ತೆರವು ಮಾಡಿ ಮಹಡಿಗೆ ಹೆಂಚು ಹಾಕಲಾಗಿದೆ. ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ, ಪಿಡಿಒ ಮಮತಾ ವೈ. ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕೃಷಿ ಭೂಮಿಗೆ ನುಗ್ಗಿದ ನದಿ ನೀರು
ಕೊಕ್ಕರ್ಣೆ: ಕೊಕ್ಕರ್ಣೆ ಸುತ್ತಮುತ್ತ 17ಕ್ಕೂ ಅಧಿಕ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿದ್ದು, ವಿದ್ಯುತ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಪೆಜಮಗೂರು ಗ್ರಾಮದ ಸೂರಾಲು ನಿವಾಸಿ ಪೊಮ್ಮ ಸೇರಿಗಾರ‌್ತಿ ಎಂಬುವರ ಮನೆಯ ಗೋಡೆ ಕುಸಿದಿದ್ದು, ಸ್ಥಳಕ್ಕೆ ಬ್ರಹ್ಮಾವರ ತಹಸೀಲ್ದಾರ್ ಕಿರಣ್ ಗೋರಯ್ಯ, ಕಂದಾಯ ಅಧಿಕಾರಿ ಲಕ್ಷ್ಮೀನಾರಾಯಣ ಭಟ್, ಗ್ರಾಮಲೆಕ್ಕಿಗ ಚಂದ್ರ ನಾಯ್ಕ, ಪಿಡಿಒ, ಗ್ರಾಪಂ ಸದಸ್ಯರು, ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ.
ನಿಂಜೂರುಬೆಟ್ಟುನಲ್ಲಿ 7 ವಿದ್ಯುತ್ ಕಂಬಗಳು, ಮೊಗವೀರಪೇಟೆಯಲ್ಲಿ 2, ಕೆಂಜೂರು ಗ್ರಾಮದ ಅಮುಜೆಯಲ್ಲಿ 2 ಹಾಗೂ ಜೋಮ್ಲುವಿನಲ್ಲಿ 3 ವಿದ್ಯುತ್ ಕಂಬಗಳ ಮೇಲೆ ಮರಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ. ಬೈದೆಬೆಟ್ಟು ಹೊಳೆ ತುಂಬಿದ್ದು, ಸಮೀಪದ ಕೃಷಿ ಭೂಮಿಗಳು ಜಲಾವೃತಗೊಂಡಿದೆ. ಹೊಳೆ ಸಮೀಪದ ಗದ್ದೆಯ ಇಕ್ಕೆಲಗಳಲ್ಲಿ ಪ್ರವಾಹ ಉಂಟಾಗಿದ್ದು, ನೆರೆ ಆತಂಕ ಉಂಟಾಗಿದೆ. ಕೊಕ್ಕರ್ಣೆ ಸಮೀಪದ ಸೀತಾನದಿ, ಸೂರಾಲು ಸಮೀಪದ ಬಾಳ್ಕಟ್ಟು ಹೊಳೆ, ಮೊಗವೀರಪೇಟೆಯ ಸಮೀಪದ ಹೊಳೆ ನೀರಿನಿಂದ ಕೃಷಿ ಭೂಮಿ ಆವೃತ್ತವಾಗಿದೆ.

ಕಡಲ್ಕೊರೆತ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ
 ಗಂಗೊಳ್ಳಿ: ಗುಜ್ಜಾಡಿ ಗ್ರಾಪಂ ವ್ಯಾಪ್ತಿಯ ಕಂಚುಗೋಡು ಸನ್ಯಾಸಿಬಲೆ ಕಡಲ್ಕೊರೆತ ಪ್ರದೇಶ ಮತ್ತು ಕಳಿಹಿತ್ಲು ನೆರೆಪೀಡಿತ ಪ್ರದೇಶಗಳಿಗೆ ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ವಾರದಿಂದ ಸನ್ಯಾಸಿಬಲೆ ಪರಿಸರದಲ್ಲಿ ಕಡಲ್ಕೊರೆತದ ತೀವ್ರತೆ ಹೆಚ್ಚಾಗಿದೆ. ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಗಾಳಿ ಮಳೆಗೆ ಗುಜ್ಜ್ಜಾಡಿ ಗ್ರಾಮದ ಕಳಿಹಿತ್ಲು ಪ್ರದೇಶ ಭಾಗಶಃ ನೆರೆಯ ನೀರಿನಲ್ಲಿ ಮುಳುಗಡೆಯಾಗಿದೆ. ಶೀನ ಪೂಜಾರಿ ಮತ್ತು ಆನಂದ ಮಾಸ್ಟರ್ ಮನೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿ ಅಪಾರ ಹಾನಿ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್, ಕಡಲ್ಕೊರೆತ ಹಾಗೂ ನೆರೆಯಿಂದ ಉಂಟಾದ ಹಾನಿ ಪರಿಶೀಲಿಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಶಾಸಕರ ಗಮನಕ್ಕೆ ತಂದು ಸಂಬಂಧಪಟ್ಟ ಇಲಾಖೆ ಮೂಲಕ ಪರಿಹಾರ ಕಾಮಗಾರಿ ಕೈಗೊಳ್ಳಲು ಒತ್ತಾಯಿಸಲಾಗುವುದು. ಕಡಲ್ಕೊರೆತ ತಡೆಗೆ ತುರ್ತು ಕಾಮಗಾರಿ ನಿರ್ವಹಿಸುವ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
ತಾಪಂ ಸದಸ್ಯ ನಾರಾಯಣ ಕೆ.ಗುಜ್ಜಾಡಿ, ಗ್ರಾಪಂ ಮಾಜಿ ಅಧ್ಯಕ್ಷ ಹರೀಶ ಮೇಸ್ತ, ಸದಸ್ಯ ದೇವದಾಸ ಖಾರ್ವಿ, ಗುಜ್ಜಾಡಿ ಗ್ರಾಮಕರಣಿಕ ಸೋಮಪ್ಪ, ಗ್ರಾಮ ಸಹಾಯಕ ಗೋವಿಂದ ಶೇರುಗಾರ್, ಸ್ಥಳೀಯ ಮುಖಂಡ ಮೋಹನ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ಗಂಗೊಳ್ಳಿ ನೆರೆ ಪರಿಸ್ಥಿತಿ ಮುಂದುವರಿಕೆ: 
ಗಂಗೊಳ್ಳಿ: ಭಾರಿ ಮಳೆಗೆ ಸೌಪರ್ಣಿಕಾ ನದಿ ದಂಡೆಯ ಗ್ರಾಮಗಳಾದ ಹೇರೂರು, ನಾವುಂದ, ಬಡಾಕೆರೆ, ಮರವಂತೆ, ನಾಡಾ, ಹಡವು, ಸೇನಾಪುರ ಮತ್ತು ಹೊಸಾಡು ಗ್ರಾಮಗಳಲ್ಲಿ ನೆರೆ ಹಾವಳಿ ಬುಧವಾರವೂ ಮುಂದುವರಿದಿದೆ.

ಮರವಂತೆಯ ಕಳಿಹಿತ್ಲು, ನಾಡದ ಪಡುಕೋಣೆ, ಹಡವು ಗ್ರಾಮ ಅತ್ತಿಕೋಣು, ಮೊವಾಡಿ ಪ್ರದೇಶಗಳಲ್ಲಿ ಹೆದ್ದಾರಿ ಸಂಪರ್ಕಿಸುವ ರಸ್ತೆಗಳಲ್ಲಿ ನೆರೆ ನೀರು ಹರಿಯುತ್ತಿದ್ದು, ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ. ಮರವಂತೆ ಶ್ರೀ ವರಾಹಸ್ವಾಮಿ ದೇವಸ್ಥಾನದ ಹಿಂಭಾಗ ಮುಳುಗಡೆಯಾಗಿದ್ದು, ದೇವಸ್ಥಾನದ ಒಳ ಹೊಕ್ಕುವ ಭೀತಿ ಎದುರಾಗಿದೆ.

ಬುಧವಾರ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಕ್ಷೇತ್ರದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿದರು. ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ. ರೂಪೇಶ್, ಕುಂದಾಪುರ ಉಪ ವಿಭಾಗಾಧಿಕಾರಿ ಮಧುಕೇಶ್ವರ, ಬೈಂದೂರು ತಹಸೀಲ್ದಾರ್ ಬಿ.ಪಿ. ಪೂಜಾರ್, ಕುಂದಾಪುರದ ಡಿವೈಎಸ್‌ಪಿ ಬಿ.ಪಿ. ದಿನೇಶಕುಮಾರ್ ಮಂಗಳವಾರ ಭೇಟಿ ನೀಡಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದರು.