ಮಳೆ-ಗಾಳಿಗೆ ನೆಲಕಚ್ಚಿದ ಬಾಳೆ

ಮುಂಡಗೋಡ: ತಾಲೂಕಿನ ಪಾಳಾ-ಕಲಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಸುರಿದ ಭಾರಿ ಮಳೆ-ಗಾಳಿಗೆ ಬಾಳೆ ತೋಟ ನೆಲಕಚ್ಚಿ ಲಕ್ಷಾಂತರ ರೂ. ಹಾನಿಯಾಗಿದೆ.

ರೈತರು ಕಷ್ಟಪಟ್ಟು ಬೆಳೆದಿದ್ದ ಬಾಳೆ ಗಿಡಗಳು ಹಾಳಾಗಿವೆ. ಕೆಲವೆಡೆ ಮನೆಗಳ ಹೆಂಚು ಹಾಗೂ ಸೀಟ್​ಗಳು ಹಾರಿ ಹೋಗಿವೆ.

ತಾಲೂಕಿನ ಪಾಳಾ ಗ್ರಾಮದ ದ್ಯಾಮನಗೌಡ ಶಿವನಗೌಡ, ಪ್ರದೀಪ ಗೌಡ, ಶಂಕರಗೌಡ ಹೊಸಕೊಪ್ಪ, ಚಂದ್ರಗೌಡ ಶಿವನಗೌಡ, ಬಸವನಗೌಡ ಹಾಳೂರ, ಸತೀಶ ಹಾಳೂರ, ಗಿರೀಶ ಕೋರಿ, ಚನ್ನಬಸಪ್ಪ ಹೇರೂರ ಮತ್ತು ಕಲಕೊಪ್ಪ ಗ್ರಾಮದ ರಮೇಶ ಕಬ್ಬೂರ, ಹಜರೇಸಾಬ್ ಪಾಟೀಲ, ಬಾಷಾಲಾಲ್ ಹುಡೇದ, ಶಾಂತವ್ವ ಹನುಮಣ್ಣನವರ, ರಾಮಣ್ಣ ಅಕ್ಕಸಾಲಿ ಮತ್ತಿತರರ ತೋಟದಲ್ಲಿ ಬಾಳೆ ಹಾಗೂ ಅಡಕೆ ಗಿಡಗಳು ನೆಲಕಚ್ಚಿವೆ. ಹಾನಿ ಸಂಭವಿಸಿದ ತೋಟಗಳಿಗೆ ಪಾಳಾ ಗ್ರಾಮ ಲೆಕ್ಕಾಧಿಕಾರಿ ರಾಘವೇಂದ್ರ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿ ತಹಸೀಲ್ದಾರರಿಗೆ ವರದಿ ಸಲ್ಲಿಸಿದ್ದಾರೆ.

ಮೂರನೇ ದಿನ ಮಾಯವಾದ ಮಳೆ

ಕಾರವಾರ: ಜಿಲ್ಲೆಯ ವಿವಿಧೆಡೆ ಗುರುವಾರ ತಡ ರಾತ್ರಿಯೂ ಮಳೆಯಾಗಿದೆ. ಆದರೆ, ಶುಕ್ರವಾರ ಎಂದಿನಂತೆ ಬಿಸಿಲಿನ ವಾತಾವರಣವಿದ್ದು, ಮುಂಗಾರಿನ ನಿರೀಕ್ಷೆ ಹುಸಿಯಾಗಿದೆ.

ಬುಧವಾರ ರಾತ್ರಿ ಜಿಲ್ಲಾದ್ಯಂತ ಭಾರಿ ಮಳೆಯಾಗಿತ್ತು. ಗುರುವಾರ ಮೋಡ ಕವಿದ ವಾತಾವರಣವಿತ್ತು. ಬಿಸಿಲಿನ ಬೇಗೆ ಹಾಗೂ ನೀರಿನ ಅಭಾವದಿಂದ ಬಳಲಿದ್ದ ಜನರು ಮಳೆ ಪ್ರಾರಂಭವಾಯಿತು ಎಂದು ಖುಷಿಪಟ್ಟಿದ್ದರು. ಎರಡನೇ ದಿನವೂ ಮಳೆಯಾದಾಗ ಮತ್ತಷ್ಟು ಸಂತಸಗೊಂಡಿದ್ದರು. ಆದರೆ, ಶುಕ್ರವಾರ ಪ್ರಖರ ಬಿಸಿಲು ಪ್ರಾರಂಭವಾಗಿದೆ.

ಗುರುವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 3 ಮಿಮೀ ಮಳೆಯಾಗಿದೆ. ಹಳಿಯಾಳದಲ್ಲಿ 16, ಕಾರವಾರ, ಮುಂಡಗೋಡ, ಸಿದ್ದಾಪುರದಲ್ಲಿ ತಲಾ 1 ಮಿಮೀ, ಕಾರವಾರದಲ್ಲಿ ರಾತ್ರಿ 12 ರಿಂದ 3 ಗಂಟೆಯವರೆಗೆ ಸಣ್ಣದಾಗಿ ಮಳೆಯಾಗಿದೆ. ವಿದ್ಯುತ್ ಕಡಿತ ಉಂಟಾಗಿದ್ದು, ಬಿಟ್ಟರೆ ಯಾವುದೇ ಹಾನಿ ಸಂಭವಿಸಿಲ್ಲ. ಯಲ್ಲಾಪುರ ಶಿರಸಿಯಲ್ಲಿ ತಲಾ 3, ಜೊಯಿಡಾದಲ್ಲಿ 5 ಮಿಮೀ ಮಳೆಯಾಗಿದೆ.

Leave a Reply

Your email address will not be published. Required fields are marked *