ಮಳೆ ಆರ್ಭಟಕ್ಕೆ ಸಿಲಿಕಾನ್ ಸಿಟಿ ತತ್ತರ, ಧಾರಾಕಾರ ಮಳೆಗೆ ಧರೆಗುರುಳಿದ 20ಕ್ಕೂ ಅಧಿಕ ಮರ

ಬೆಂಗಳೂರು: ನಗರದಾದ್ಯಂತ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿದ್ದು, 20ಕ್ಕೂ ಅಧಿಕ ಮರಗಳು ಧರೆಗುರುಳಿವೆ. ಮಳೆಗಿಂತ ಗುಡುಗು, ಗಾಳಿಯ ಆರ್ಭಟ ಜೋರಾಗಿದ್ದರಿಂದ ಮರಗಳು ಉರುಳಿ ಹತ್ತಾರು ವಾಹನ ಜಖಂಗೊಂಡಿವೆ.

ಜಯನಗರ, ಜೆ.ಪಿ.ನಗರ, ವಾಟರ್ ಟ್ಯಾಂಕ್, ಜಯಮಹಲ್, ಉಪ್ಪಾರಪೇಟೆ ಪೊಲೀಸ್ ಠಾಣೆ ಬಳಿ, ಸಂಪಿಗೆ ರಸ್ತೆ, ಆರ್.ಪಿ.ಸಿ. ಲೇಔಟ್, ಅಲಸೂರು, ವಿಲ್ಸನ್ ಗಾರ್ಡನ್, ಬಸವನಗುಡಿ, ಭಾರತಿ ನರ್ಸಿಂಗ್ ಹೋಂ, ಐಟಿಸಿ, ರಾಮ್ಕೋ ಬಡಾವಣೆ, ಡಾಲರ್ಸ್ ಕಾಲನಿ, ನವರಂಗ್, ವಿಜಯನಗರ, ಡಬಲ್ ರಸ್ತೆ, ಸ್ಯಾಂಕಿ ಕೆರೆ ಜಂಕ್ಷನ್, ಮಹದೇವಪುರ, ಕೆ.ಆರ್. ಪುರ ಸೇರಿ ಹಲವು ಕಡೆಗಳಲ್ಲಿ 20ಕ್ಕೂ ಹೆಚ್ಚು ಬೃಹತ್ ಮರಗಳು ಧರೆಗುರುಳಿವೆ. 30ಕ್ಕೂ ಹೆಚ್ಚಿನ ಕಡೆಗಳಲ್ಲಿ ಕೊಂಬೆಗಳು ಉರುಳಿವೆ.

ಕೆಲವೆಡೆ ಅಧಿಕ ಮಳೆಯಿದ್ದ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ಅಧಿಕವಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು. ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಶಿವಾಜಿನಗರ, ಶಿವಾನಂದ ವೃತ್ತ, ಬಸವನಗುಡಿ, ಚಾಮರಾಜಪೇಟೆ, ಮಲ್ಲೇಶ್ವರ, ವಿಜಯನಗರ ಸೇರಿ ಹಲವು ಸ್ಥಳಗಳ ಪ್ರಮುಖ ರಸ್ತೆಗಳು ಕೆರೆಗಳಂತೆ ಆಗಿದ್ದವು. ಓಕಳೀಪುರ ಮೇಲ್ಸೇತುವೆ, ವಿಂಡ್ಸರ್ ಮ್ಯಾನರ್, ಶಿವಾನಂದ ವೃತ್ತದ ರೈಲ್ವೆ ಅಂಡರ್ ಪಾಸ್, ಕೆ.ಆರ್. ವೃತ್ತ, ನಾಯಂಡಹಳ್ಳಿ ಸೇರಿ ಹಲವು ಕಡೆ ವಾಹನ ಸವಾರರು ಸಂಚರಿಸಲಾಗದೆ ಪರದಾಡಿದರು. ದ್ವಿಚಕ್ರವಾಹನ ವಾಹನ ಸವಾರರು ನಿಂತಲ್ಲೆ ತಾಸುಗಟ್ಟಲೆ ನಿಲ್ಲಬೇಕಾಯಿತು. ಸಂಜೆ 5 ಗಂಟೆಗೆ ನಗರದ ಹೊರವಲಯಗಳಲ್ಲಿ ಆರಂಭವಾದ ಮಳೆ 6.30ರ ವೇಳೆಗೆ ಕೇಂದ್ರ ಭಾಗದಲ್ಲಿ ಅಬ್ಬರಿಸಿತು. ಯಾವುದೇ ಪ್ರಾಣಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಆರ್​ಜೆ ಶ್ರುತಿ ತಾಯಿಗೆ ಗಾಯ

ಖಾಸಗಿ ರೇಡಿಯೋ ಚಾನಲ್​ನ ನಿರೂಪಕಿ ಶ್ರುತಿ ಸ್ಯಾಂಕಿ ಕೆರೆ ಬಳಿಯ ಭಾಷ್ಯಂ ವೃತ್ತದ ಸಿಗ್ನಲ್​ನಲ್ಲಿ ನಿಂತಿದ್ದಾಗ ಮಳೆಗೆ ಉರುಳಿದ ಮರದ ಕೊಂಬೆಯೊಂದು ಕಾರಿನ ಮೇಲೆ ಬಿದ್ದ ಪರಿಣಾಮ ಕಾರಿನೊಳಗಿದ್ದ ಅವರ ತಾಯಿ ಗಾಯಗೊಂಡಿದ್ದಾರೆ. ಮರದ ಕೊಂಬೆಗಳು ಕಾರಿನ ಗಾಜಿಗೆ ಬಡಿದಿದ್ದು, ಗಾಜಿನ ಪುಡಿ ತಗುಲಿ ತಾಯಿ ಕೈಗೆ ಗಾಯವಾಗಿದೆ ಎಂದು ಶ್ರುತಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಮಳೆ ಸಂದರ್ಭಗಳಲ್ಲಿ ಸಿಗ್ನಲ್ ಅವಧಿ ಕಡಿತಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಗಂಟೆಗೆ 40 ಕಿ.ಮೀ. ವೇಗ

ದಕ್ಷಿಣ ಒಳನಾಡಿನಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿರುವುದರಿಂದ ನಗರದಲ್ಲಿ ಭಾರಿ ಮಳೆಯಾಗಿದೆ. ಕೆಲ ದಿನಗಳಿಂದ ಸಂಜೆ ಸುರಿಯುತ್ತಿದ್ದ ಮಳೆ ಶನಿವಾರ ರಾತ್ರಿ ಸುರಿದಿದೆ. ಹಗಲಿನಲ್ಲಿ ತಾಪಮಾನ ಕಡಿಮೆಯಿದ್ದರೂ ಸೆಕೆ ಕಡಿಮೆಯಾಗಿರಲಿಲ್ಲ. ರಾತ್ರಿ ನಗರದ ಕೇಂದ್ರ ಭಾಗಗಳಲ್ಲಿ ಸಾಧಾರಣ ಹಾಗೂ ಹೊರವಲಯಗಳಲ್ಲಿ ಭಾರಿ ಮಳೆ

ಸುರಿದಿದೆ. ಮಳೆ ಬರುವ ವೇಳೆ ಗಂಟೆಗೆ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದೆ. ತಾಪಮಾನದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆಯಾ ಗಿದೆ. ಶುಕ್ರವಾರ ನಗರದ ಕೇಂದ್ರಭಾಗದಲ್ಲಿ 33.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಶನಿವಾರ 32.8 ಡಿಗ್ರಿ ದಾಖಲಾಗಿದೆ. ಕೆಐಎಎಲ್​ನಲ್ಲಿ 33.8 ಡಿಗ್ರಿ ಹಾಗೂ ಎಚ್​ಎಎಲ್​ನಲ್ಲಿ 33.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.

ವಿದ್ಯುತ್ ಕಂಬ ಬಿದ್ದು ವಾಹನಗಳು ಜಖಂ

ಜಯನಗರದ ಸೌತ್ ಎಂಡ್ ಸರ್ಕಲ್ ಬಳಿ ಚಲಿಸುತ್ತಿದ್ದ ಕಾರ್ ಮೇಲೆ ಮರ ಬಿದ್ದು, ರಾಬಿನ್ ಮತ್ತು ವಿಜಯಾ ದಂಪತಿ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಂತಿನಗರದ ಮುಖ್ಯರಸ್ತೆಯಲ್ಲಿ ಬೃಹತ್ ಗಾತ್ರದ ಮರ ಉರುಳಿದ ಪರಿಣಾಮ 2 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ವಿದ್ಯುತ್ ತಂತಿ ತುಂಡಾಗಿ ಫುಟ್​ಪಾತ್ ಮೇಲೆ ಬಿದ್ದು ಜನರು ಆತಂಕಕ್ಕೊಳಗಾದರು. ಅವಘಡವಾಗಿ ಗಂಟೆಯಾದರೂ ಬೆಸ್ಕಾಂ, ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ರಾಜಾಜಿನಗರ, ಚಾಮರಾಜಪೇಟೆಯಲ್ಲಿ ವಾಹನಗಳ ಮೇಲೆ ಮರ ಬಿದ್ದಿವೆ.

ಮಳೆ ಪ್ರಮಾಣ

ಬೆಟ್ಟಹಲಸೂರಿನಲ್ಲಿ 18 ಮಿ.ಮೀ., ಬೇಗೂರಿನಲ್ಲಿ 15 ಮಿ.ಮೀ., ದೊಡ್ಡಬನಹಳ್ಳಿಯಲ್ಲಿ 11ಮಿ.ಮೀ, ಆವಲಹಳ್ಳಿಯಲ್ಲಿ 39 ಮಿ.ಮೀ., ಹುಣಸಮಾರನಹಳ್ಳಿಯಲ್ಲಿ 33 ಮಿ.ಮೀ., ಸೀಗೇಹಳ್ಳಿಯಲ್ಲಿ 28 ಮಿ.ಮೀ., ಗಂಟಿಗಾನಹಳ್ಳಿಯಲ್ಲಿ 25 ಮಿ.ಮೀ. ಮಳೆಯಾಗಿದೆ. ಚಾಮರಾಜಪೇಟೆ, ಹಂಪಿನಗರ, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ, ಅಟ್ಟೂರು, ಕೆಂಗೇರಿ, ಕೆ.ಜಿ.ಹಳ್ಳಿ, ರಾಮೋಹಳ್ಳಿಯಲ್ಲಿ ತುಂತುರು ಮಳೆಯಾಗಿದೆ.

Leave a Reply

Your email address will not be published. Required fields are marked *