ಮಳೆ ಅನಾಹುತ ತಪ್ಪಿಸಲು ಸಜ್ಜಾಗಿ

ಬೆಂಗಳೂರು: ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ಯಾವುದೇ ಅವಘಡಗಳು ಸಂಭವಿಸದಂತೆ ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಸನ್ನದ್ಧರಾಗಿರುವಂತೆ ಸಿಬ್ಬಂದಿಗೆ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಸೂಚನೆ ನೀಡಿದ್ದಾರೆ. ನಗರದಲ್ಲಿ ಮಳೆ ಸುರಿಯುತ್ತಿರುವುದರ ಜತೆಗೆ ಭಾರಿ ಮಳೆಯ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಶನಿವಾರ ಸಭೆ ನಡೆಸಿದರು. ಹಿಂದೆ ನಗರದಲ್ಲಿ ಸಂಭವಿಸಿದ ಅವಘಡಗಳು ಮರುಕಳಿಸದಂತೆ ಎಚ್ಚರಿಕೆಯನ್ನು ವಹಿಸಿಬೇಕಿದ್ದು, 24ಗಿ7 ದೂರುಗಳು ಬಂದಲ್ಲಿ ಸಿಬ್ಬಂದಿ ಕಾರ್ಯಾಚರಣೆಗೆ ಸಿದ್ಧರಿರಬೇಕೆಂದು ಸೂಚಿಸಿದರು.

ನೀರು ಹರಿವು ಪತ್ತೆಗೆ ಸೆನ್ಸಾರ್: ನಗರದಲ್ಲಿ ಕೆಎಸ್​ಎನ್​ಎಂಡಿಸಿ ಈಗಾಗಲೇ ಮಳೆ ಪ್ರಮಾಣ ಅರಿಯುವ 100 ಯಂತ್ರಗಳನ್ನು ಅಳವಡಿಸಿದ್ದು, ಸಿಡಿಲು ಆಪ್ ಮೂಲಕ ಪ್ರತಿ 15 ನಿಮಿಷಕ್ಕೊಮ್ಮೆ ಮಾಹಿತಿ ಪಡೆಯಲಾಗುತ್ತಿದೆ. ನಗರದ ರಾಜಕಾಲುವೆ, ಮಳೆ ನೀರುಗಾಲುವೆಗಳಲ್ಲಿಯೂ 25 ಮಳೆನೀರಿನ ಮಟ್ಟವನ್ನು ಅರಿಯುವ ಯಂತ್ರಗಳನ್ನು ಅಳವಡಿಸಲಾಗಿದ್ದು, ನೀರಿನ ಹರಿವು ಜಾಸ್ತಿಯಾದರೆ ಈ ಯಂತ್ರಗಳು ಮಾಹಿತಿ ರವಾನಿಸಿಲಿದೆ ಅದರ ಮೂಲಕ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. 2017ರಲ್ಲಿ ಭಾರಿ ಮಳೆ ಆರಂಭಗೊಂಡಿದ್ದರಿಂದ ಹೆಚ್ಚಿನ ಅವಘಡಗಳು ಸಂಭವಿಸಿದ್ದು, ಒಂದೇ ಮಳೆಗೆ 5 ಮಂದಿ ರಾಜಕಾಲುವೆಗಳಲ್ಲಿ ಕೊಚ್ಚಿಹೋಗಿರುವು ದರೊಂದಿಗೆ ಹೆಚ್ಚಿನ ಸಾವು, ನೋವು ಸಂಭವಿಸಿದ್ದವು.

ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಪಾಲಿಕೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರದಂತೆ ಸಿಬ್ಬಂದಿಗೆ ಸೂಚನೆ ನೀಡಿದೆ. ಇದಲ್ಲದೇ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದ್ದು, ಶಾಲಾ, ಕಾಲೇಜು ಹಾಗೂ ಸಾರ್ವಜನಿಕರ ಸ್ಥಳಗಳಲ್ಲಿ ಈ ಬಗ್ಗೆ ಜಾಗೃತಿಮೂಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಗುಂಡಿಮುಕ್ತಕ್ಕೆ ಸೂಚನೆ: ಪ್ರತಿಬಾರಿ ಮಳೆಗಾಲದ ಸಂದರ್ಭದಲ್ಲಿ ರಸ್ತೆಗುಂಡಿಗಳು ಬೆಂಗಳೂರಿನ ಮಾನ ಹರಾಜಾಕುತ್ತಿದ್ದು, ಬಡಾವಣೆಗಳಲ್ಲಿನ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತುರ್ತಾಗಿ ಮುಚ್ಚುವಂತೆ ಆಯುಕ್ತರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

63 ತಾತ್ಕಾಲಿಕ ಕೇಂದ್ರ ಸ್ಥಾಪನೆ

ಪಾಲಿಕೆಯಿಂದ ಈಗಾಗಲೇ ನಗರದಲ್ಲಿ 9 ಶಾಶ್ವತ ನಿಯಂತ್ರಣ ಕೇಂದ್ರಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರ ದೂರುಗಳನ್ನು ಸ್ವೀಕರಿಸುವುದರೊಂದಿಗೆ ಮಳೆಗಾಲದಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳುವಲ್ಲಿ ಈ ಕೇಂದ್ರಗಳು ನೆರವಾಗಲಿವೆ. ಇದಲ್ಲದೆ ಬಿಬಿಎಂಪಿ ಉಪವಿಭಾಗದ ಕಚೇರಿಗಳಲ್ಲಿ ಮಳೆಗಾಲದ ಅವಧಿಯಲ್ಲಿ ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದ್ದು, ಕೇಂದ್ರದಲ್ಲಿ ತುರ್ತು ಸಂದರ್ಭಕ್ಕೆ ಅಗತ್ಯವಾಗುವ ಯಂತ್ರಗಳು, ಸಲಕರಣೆ ಮತ್ತು ಸಿಬ್ಬಂದಿಯನ್ನು ನೇಮಿಸಲು ಟೆಂಡರ್ ಪ್ರಕ್ರಿಯೆ ನಡೆಸುವುದಕ್ಕೆ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಮತ್ತು ಮರಗಳ ನಿರ್ವಹಣೆಗಾಗಿ ನಗರದಲ್ಲಿರುವ 21 ತಂಡಗಳ ಸಂಖ್ಯೆಯನ್ನು 28ಕ್ಕೆ ಹೆಚ್ಚಿಸಲು ಸೂಚಿಸಲಾಗಿದ್ದು, ಯಾವುದೇ ರಸ್ತೆಗಳಲ್ಲಿ ನೀರು ನಿಲ್ಲದಂತೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ.

ಕೆರೆಗಳ ಹೂಳೆತ್ತಲು ಕ್ರಮ

ಮಳೆಗಾಲದ ಸಂದರ್ಭದಲ್ಲಿ ಪ್ರವಾಹ ಉಂಟಾಗದಂತೆ ತಡೆಯಲು 18 ಕೆರೆಗಳ ಹೂಳನ್ನು ತೆಗೆಯಲಾಗಿದ್ದು, ಮಳೆ ನೀರು ಸಂಗ್ರಹಕ್ಕೂ ಕ್ರಮ ಕೈಗೊಳ್ಳಲಾಗಿದೆ. 74 ಕೆರೆಗಳ ನಿರ್ವಹಣೆ ಕಾರ್ಯ ಕೈಗೊಳ್ಳಲಾಗಿದ್ದು, ಇನ್ನೂ 31 ಕೆರೆಗಳ ನಿರ್ವಹಣೆಗಾಗಿ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಇದಲ್ಲದೇ ಮಳೆ ನೀರುಗಾಲುವೆಗಳಲ್ಲಿ ಕಸ ಎಸೆಯುವುದಕ್ಕೆ ಬ್ರೇಕ್ ಹಾಕುವಂತೆ ಸೂಚಿಸಲಾಗಿದೆ. ನಗರದಲ್ಲಿ ಪ್ರವಾಹ ಉಂಟಾಗುವ ಸ್ಥಳಗಳನ್ನು ಕೆಎಸನ್​ಎಂಡಿಸಿ ಮತ್ತು ಪೊಲೀಸ್ ಇಲಾಖೆ ಪಟ್ಟಿ ಮಾಡಿದ್ದು, ಅಂಥ ಸ್ಥಳಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದ್ದಾರೆ.

Leave a Reply

Your email address will not be published. Required fields are marked *