ಸಿನಿಮಾ

ಮಳೆಹಾನಿ ತಡೆಗೆ ಮುಂಜಾಗ್ರತೆ ಕೈಗೊಳ್ಳಿ

ಚಿತ್ರದುರ್ಗ: ಮಳೆ ಮತ್ತು ಪ್ರವಾಹದಿಂದ ಜಿಲ್ಲೆಯಲ್ಲಿ ಯಾವುದೇ ಜೀವ ಹಾನಿಗಳಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು, ಹಾನಿಗೆ ಸಂಬಂಧಿಸಿದಂತೆ ಸಂತ್ರಸ್ತರಿಗೆ 48 ಗಂಟೆಯೊಳಗೆ ಪರಿಹಾರ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಡಿಸಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು, ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ವಿಡಿಯೊ ಸಂವಾದದ ಮೂಲಕ ಅಗತ್ಯ ಸೂಚನೆ ನೀಡಿದ್ದಾರೆ. ಮನೆ, ಬೆಳೆ, ಜಾನುವಾರು ಹಾಗೂ ಜನರ ಜೀವಹಾನಿ ಆದಲ್ಲಿ ವರದಿ ಪಡೆದು ತಕ್ಷಣವೇ ಪರಿಹಾರ ನೀಡಬೇಕು ಎಂದು ಸೂಚಿಸಿದರು.
ತಹಸೀಲ್ದಾರ್‌ಗಳು ವಿಳಂಬಕ್ಕೆ ಅವಕಾಶ ಮಾಡಿಕೊಡದೆ ಜನಪ್ರತಿನಿಧಿಗಳ ಗಮನಕ್ಕೆ ತಂದು ಸಂತ್ರಸ್ತರಿಗೆ ಮಾರ್ಗಸೂಚಿ ಅನುಸಾರ ತ್ವರಿತವಾಗಿ ಪರಿಹಾರ ವಿತರಿಸಬೇಕು. ಅತಿವೃಷ್ಟಿ ಹಾಗೂ ಪ್ರವಾಹದಿಂದ ಆಗಬಹುದಾದ ಹಾನಿ ತಡೆಗೆ ಮುಂಜಾಗ್ರತೆ ವಹಿಸಬೇಕು ಎಂದರು.
ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದ್ದರೆ ಜಂಟಿ ಸಮೀಕ್ಷೆ ಮೂಲಕ ಪರಿಶೀಲನೆ ನಡೆಸಿ,ನಿಖರ ವರದಿ ತಯಾರಿಸಬೇಕು. ಮಳೆಗಾಲದಲ್ಲಿ ಡೆಂೆ , ಮಲೇರಿಯಾ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು. ಶಿಥಿಲಗೊಂಡಿರುವ ಅಂಗನವಾಡಿ ಮತ್ತು ಶಾಲಾ ಕೊಠಡಿಗಳನ್ನು ಗುರುತಿಸಿ ಪರ್ಯಾಯ ಕ್ರಮ ತೆಗೆದುಕೊಳ್ಳಬೇಕು ಎಂದರು.
ಪರಿಹಾರ ವಿತರಣೆ:
ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆಯಿಂದಾಗಿ ಮಾ.15ರಿಂದ ಮೇ 23ರವರೆಗೆ ಜಿಲ್ಲೆಯಲ್ಲಿ 510.8 ಹೆಕ್ಟೇರ್ ಕೃಷಿ ಹಾಗೂ 269.07 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಚಿತ್ರದುರ್ಗ ತಾಲೂಕಿನಲ್ಲಿ ಒಬ್ಬರು ಮೃತಪಟ್ಟಿದ್ದು, ನೊಂದ ಕುಟುಂಬ ವರ್ಗಕ್ಕೆ 5 ಲಕ್ಷ ರೂ.ಪರಿಹಾರ ವಿತರಿಸಲಾಗಿದೆ. 18 ಜಾನುವಾರುಗಳು ಮೃತಪಟ್ಟಿವೆ. ಮಾರ್ಗಸೂಚಿಯನುಸಾರ ಪರಿಹಾರ ವಿತರಿಸಲಾಗಿದೆ. 97 ಮನೆಗಳು ಭಾಗಶಃ ಹಾನಿಯಾಗಿದ್ದು, ಇದಕ್ಕಾಗಿ 6.28 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಹೇಳಿದರು.
ಹಾನಿ ವರದಿ ಹಾಗೂ ಪರಿಹಾರದ ಬೇಡಿಕೆಯಲ್ಲಿ ತಪ್ಪಾದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಡಿಸಿ ತಿಳಿಸಿದರು.
ಜಿಲ್ಲೆಯಲ್ಲಿರುವ ಮೇವು 16 ವಾರಗಳಿಗೆ ಸಾಕಾಗಲಿದೆ ಎಂದು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಬಾಬುರತ್ನ ಮಾಹಿತಿ ನೀಡಿದರು. ಗಂಟಲುಬೇನೆ ನಿಯಂತ್ರಣಕ್ಕೆ ಅಗತ್ಯ ಪ್ರಮಾಣದಲ್ಲಿ ಲಸಿಕೆ ಸ್ಟಾಕ್ ಇದೆ ಎಂದರು.
ಜಿಲ್ಲೆಯ ಎಲ್ಲ ಕೆರೆಗಳೆಡೆ ನಿಗಾ ವಹಿಸಬೇಕು. ರಸ್ತೆ, ಸೇತುವೆಗಳ ಹಾನಿ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ವಿದ್ಯುತ್ ಕಂಬಗಳು ಹಾ ನಿಗೀಡಾದಲ್ಲಿ ಕೂಡಲೇ ಸರಿಪಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ಜಿಪಂ ಸಿಇಒ ಎಂ.ಎಸ್.ದಿವಾಕರ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ,ತಹಸೀಲ್ದಾರ್ ಡಾ.ನಾಗವೇಣಿ,ಡಿಎಚ್‌ಒ ಡಾ. ಆರ್.ರಂಗನಾಥ್,ಜಂಟಿ ಕೃಷಿ ನಿರ್ದೇಶಕ ರಮೇಶ್‌ಕುಮಾರ್, ತೋಟಗಾರಿಕೆ ಉಪನಿರ್ದೇಶಕಿ ಸವಿತಾ ಮತ್ತಿತರ ಅಧಿಕಾರಿಗಳಿದ್ದರು.


Latest Posts

ಲೈಫ್‌ಸ್ಟೈಲ್