ತುಮಕೂರು: ಜಿಲ್ಲೆಯಲ್ಲಿ ತುಮಕೂರು ನಗರ ಸೇರಿ ಶುಕ್ರವಾರ ಸಂಜೆ ಮಳೆಯ ಆರ್ಭಟಕ್ಕೆ ಅಪಾರ ಹಾನಿ ಸಂಭವಿಸಿದೆ. ಅದೃಷ್ಟವಶಾತ್ ಪ್ರಾಣಹಾನಿ ಆಗಿಲ್ಲ. ತುಮಕೂರು ನಗರದಲ್ಲಿ ಅತಿಹೆಚ್ಚು 69 ಮಿಮೀ ಮಳೆ ಸುರಿದಿದೆ. ತಾಲೂಕಿನಲ್ಲಿ ಸರಾಸರಿ 14.3 ಮಿಮೀ ಪ್ರಮಾಣದಲ್ಲಿ ಮಳೆ ಆಗಿದೆ.
ಶುಕ್ರವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆ ಕೆಲವು ಅನಾಹುತಕ್ಕೆ ಕಾರಣವಾಯಿತು. ಚಿಕ್ಕಪೇಟೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಕಟ್ಟಡ ಮೇಲಿದ್ದ ಮೊಬೈಲ್ ಟವರ್ ಮುಂಭಾಗದ ಅಮರ ಸಂದೇಶ ಪತ್ರಿಕೆ ಕಟ್ಟಡ ಮೇಲೆ ಬಿದ್ದಿದ್ದು, ಹೆಚ್ಚಿನ ಅನಾಹುತವಾಗಿಲ್ಲ. ಟವರ್ ನಮ್ಮ ಪತ್ರಿಕೆ ಕಟ್ಟಡದ ಮೇಲೆ ಬಿದ್ದಿದ್ದು, ಕಟ್ಟಡ ಭಾರ ತಡೆಯುವಷ್ಟು ಸದೃಢವಾಗಿದ್ದರಿಂದ ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸಂಪಾದಕ ತೊ.ಗ.ಅಡವೀಶಪ್ಪ ವಿಜಯವಾಣಿಗೆ ಮಾಹಿತಿ ನೀಡಿದರು.
ಧರೆಗುರುಳಿದ ಮರಗಳು: ಸಂಜೆ ಮಳೆ ಗಾಳಿ ಆರ್ಭಟಕ್ಕೆ ನಗರದಲ್ಲಿ ಬೃಹತ್ ಮರಗಳು ಧರೆಗುರುಳಿದ್ದು, ಕೆಲವು ಕಡೆ ಮನೆಗಳ ಮೇಲೆ ಬಿದ್ದು ಹಾನಿಯಾಗಿದೆ. ಬೃಹತ್ ಮರದ ಕೊಂಬೆಗಳು ಬಿದ್ದ ಪರಿಣಾಮ ರಾತ್ರಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು. ರಾತ್ರಿ ವಿದ್ಯುತ್ ಇರಲಿಲ್ಲ. ಪಾಲಿಕೆ ಸಿಬ್ಬಂದಿ ಮರಗಳು, ಕೊಂಬೆ ತೆರವುಗೊಳಿಸುವಲ್ಲಿ ಹೈರಾಣಾದರು.
ಉಕ್ಕಿ ಹರಿದ ಮೋರಿಗಳು: ನಗರದಲ್ಲಿ ಮಳೆ ಆರ್ಭಟದಿಂದ ಕೆಲವು ಕಡೆ ಮೋರಿಗಳು ಕಸ ಕಟ್ಟಿಕೊಂಡು ಉಕ್ಕಿಹರಿದಿದ್ದು ರಸ್ತೆಗಳೆಲ್ಲ ಕಸದ ರಾಶಿ ತುಂಬಿತ್ತು. ಶನಿವಾರ ಬೆಳಗ್ಗೆ ಪಾಲಿಕೆ ಪೌರಕಾರ್ವಿುಕರು ಸ್ವಚ್ಛತೆಯಲ್ಲಿ ತೊಡಗಿದ್ದು ಕಂಡುಬಂತು. ಕೆಲವು ಕಡೆ ಸಾರ್ವಜನಿಕರು ಪಾಲಿಕೆ ಬಗ್ಗೆ ಆಕ್ರೋಶ ಹೊರ ಹಾಕಿದರು.
ಮಳೆ: ತುರುವೇಕೆರೆಯಲ್ಲಿ 16 ಮಿಮೀ, ಕೊರಟಗೆರೆಯಲ್ಲಿ 5.3 ಮಿಮೀ, ಶಿರಾದಲ್ಲಿ 0.8 ಮಿಮೀ, ಹಾಗೂ ಗುಬ್ಬಿಯಲ್ಲಿ 0.7 ಮಿಮೀ, ಸರಾಸರಿ ಮಳೆಯಾಗಿದೆ. ಇನ್ನುಳಿದಂತೆ ಕೆಲವು ತಾಲೂಕುಗಳಲ್ಲಿ ಮಳೆ ತಂಪನ್ನೆರೆದಿದೆ.
ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ !: ಮೊದಲ ಮಳೆಯಿಂದಾದ ಅನಾಹುತದಿಂದ ಎಚ್ಚೆತ್ತುಕೊಂಡಿರುವ ಮಹಾನಗರ ಪಾಲಿಕೆ ಮಳೆಯಿಂದ ಆಗುವ ತೊಂದರೆ ನಿರ್ವಹಿಸಲು ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ರಚಿಸಿದೆ. ಈ ತಂಡದಲ್ಲಿ 10 ಪೌರಕಾರ್ವಿುಕರು ಒಂದು ಜೆಸಿಬಿ, ಪೆಟ್ರೋಲ್ ವೆಹಿಕಲ್, ಸಕ್ಕಿಂಗ್, ಜೆಟ್ಟಿಂಗ್ ಯಂತ್ರಗಳಿದ್ದು, ನಿಯಂತ್ರಣ ಕೊಠಡಿಗೆ ಸ್ವೀಕೃತವಾಗುವ ದೂರುಗಳನ್ನು ತುರ್ತಾಗಿ ನಿರ್ವಹಿಸಲು ಕ್ರಮವಹಿಸಲಾಗಿದೆ. ಕಂಟ್ರೋಲ್ ರೂಂನಲ್ಲಿ ದೂರು ದಾಖಲಿಸಲು ದೂ:0816-2272200/ 2271200, 9449872599 ಸಂರ್ಪಸಬಹುದು.