ಮಳೆನೀರು ಸಂಗ್ರಹ ಸಾಮರ್ಥ್ಯ ಹೆಚ್ಚಳಕ್ಕೆ ಬೆಂಗಳೂರು ಜಲಮಂಡಳಿ ಹೊಸ ನಿಯಮ

ಬೆಂಗಳೂರು: ಮಳೆನೀರು ಸಂಗ್ರಹಣೆ ಹಾಗೂ ಅದರ ಬಳಕೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಜಲಮಂಡಳಿ ಇದೀಗ ಸಂಗ್ರಹಣಾ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸಲು ಮುಂದಾಗಿದೆ.

ನಿವೇಶನಗಳು, ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವ ಹಾಗೂ ನೀರನ್ನು ಕಡ್ಡಾಯವಾಗಿ ಬಳಕೆ ಮಾಡಬೇಕೆಂಬ ನಿಯಮವನ್ನು ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ.

ಮಳೆನೀರು ಕೊಯ್ಲು ಸಂಗ್ರಹಣೆಗೆಂದು ನಿರ್ವಿುಸಿರುವ ಟ್ಯಾಂಕ್ ಅಥವಾ ಸಂಪ್ ಸಾಮರ್ಥ್ಯವು ಕಟ್ಟಡದ ಮೇಲ್ಛಾವಣಿ ಆಧಾರಿತ ವಿಧಾನದಲ್ಲಿ ಒಂದು ಮೀಟರ್​ಗೆ 20 ಲೀ. ಹಾಗೂ ನಿವೇಶನ ಆಧಾರಿತ ವಿಧಾನದಲ್ಲಿ ಒಂದು ಮೀಟರ್​ಗೆ 10 ಲೀ. ಕಡ್ಡಾಯವಾಗಿ ಇರಬೇಕು ಎಂಬ ನಿಯಮವಿದೆ.

ಹೊಸ ನಿಯಮದಲ್ಲೇನಿದೆ?: ಮೇಲ್ಛಾವಣಿ ಆಧಾರಿತ ವಿಧಾನದಲ್ಲಿ ಒಂದು ಮೀಟರ್ ವಿಸ್ತೀರ್ಣಕ್ಕೆ 60 ಲೀ.ನಷ್ಟು ಹಾಗೂ ನಿವೇಶನ ಆಧಾರಿತ ವಿಧಾನದಲ್ಲಿ ಒಂದು ಮೀಟರ್ ವಿಸ್ತೀರ್ಣಕ್ಕೆ 30 ಲೀ. ಸಾಮರ್ಥ್ಯದ ಟ್ಯಾಂಕ್ ಅಥವಾ ಸಂಪ್ ಅಳವಡಿಸಬೇಕು ಎಂಬ ನಿಯಮವನ್ನು ಜಾರಿಗೆ ತರುತ್ತಿದೆ.

ನೀರಿನ ಸಮಸ್ಯೆಗೆ ಪರಿಹಾರ: ಮಳೆನೀರು ಕೊಯ್ಲು ಸಂಗ್ರಹವನ್ನು ಹೆಚ್ಚಿಸುವ ಜತೆಗೆ ಅದರ ಬಳಕೆ ಕಡ್ಡಾಯಗೊಳಿಸುವ ನಿಯಮ ತರಬೇಕೆಂಬ ನಿಟ್ಟಿನಲ್ಲಿ ಪ್ರಸ್ತಾವನೆ ಸಿದ್ಧಪಡಿಸಿ ಮಂಡಳಿ ಸಭೆಯಲ್ಲಿ ಅನುಮತಿ ಪಡೆದು ಸರ್ಕಾರಕ್ಕೆ ಸಲ್ಲಿಸಿದ್ದು ಅಂಗೀಕಾರವಾಗಬೇಕಿದೆ. ಮಳೆಗಾಲದ ಸಮಯದಲ್ಲಿ ನಿವೇಶನಗಳ ಮೇಲೆ ಬೀಳುವ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೆಚ್ಚಿಸಿದಲ್ಲಿ 1 ವರ್ಷದಲ್ಲಿ ಕನಿಷ್ಠ 3ರಿಂದ 4 ತಿಂಗಳು ನೀರಿನ ಸಮಸ್ಯೆ ಇರುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ.

ದೈನಂದಿನ ಬಳಕೆಗೂ ಮಳೆ ನೀರು

ಪ್ರಸ್ತುತ ನಗರದಲ್ಲಿ 1.8 ಲಕ್ಷಕ್ಕೂ ಹೆಚ್ಚು ಕಟ್ಟಡಗಳು ಮಳೆನೀರು ಕೊಯ್ಲು ವಿಧಾನ ವ್ಯಾಪ್ತಿಗೆ ಬರಲಿದ್ದು, 1.2 ಲಕ್ಷ ಕಟ್ಟಡಗಳು ಈ ವಿಧಾನ ಅಳವಡಿಸಿಕೊಂಡಿವೆ. ದಂಡದಿಂದ ತಪ್ಪಿಸಿಕೊಳ್ಳಲು ಹೆಸರಿಗಷ್ಟೇ ಕೆಲವರು ಮಳೆನೀರು ಕೊಯ್ಲು ಅಳವಡಿಸಿಕೊಂಡಿದ್ದಾರೆ. ಈ ವಿಧಾನದಲ್ಲಿ ಸಂಗ್ರಹವಾದ ನೀರನ್ನು ಇಂಗುಗುಂಡಿಗೆ ಹರಿಸಬೇಕು ಎಂದು ನಿಯಮ ಇದೆ. ಆಸಕ್ತರು ಮಾತ್ರ ಮಳೆನೀರನ್ನು ದೈನಂದಿನ ಚಟುವಟಿಕೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈಗ 2,400 ಚದರ ಆಡಿ ವಿಸ್ತೀರ್ಣ ಹಾಗೂ ಅದಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ನಿರ್ವಣವಾಗುವ ಎಲ್ಲ ಕಟ್ಟಡಗಳು ಕಡ್ಡಾಯವಾಗಿ ದೈನಂದಿನ ಬಳಕೆಗೂ ಬಳಸಿಕೊಳ್ಳಬೇಕೆಂಬ ನಿಯಮ ಜಾರಿಗೆ ತರಲು ಜಲಮಂಡಳಿ ಮುಂದಾಗಿದೆ.

 

ಬೆಂಗಳೂರಿನಲ್ಲಿ ವಾರ್ಷಿಕ ಕನಿಷ್ಠ 700 ಮಿ.ಮೀ. ಮಳೆ ಯಾಗುತ್ತಿದ್ದು, ಸಾರ್ವಜನಿಕರು ಹೆಚ್ಚು ಅವಲಂಬಿಸಬೇಕೆಂಬ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದ್ದೇವೆ.
| ಬಿ.ಸಿ. ಗಂಗಾಧರ್, ಜಲಮಂಡಳಿ ನಿರ್ವಹಣೆ ವಿಭಾಗದ ಮುಖ್ಯ ಇಂಜಿನಿಯರ್

Leave a Reply

Your email address will not be published. Required fields are marked *