ಮಳೆನೀರು ಕೊಯ್ಲು ಕಡ್ಡಾಯ

ಚಿಕ್ಕಬಳ್ಳಾಪುರ: ಹಿಂಗಾರು ಮಳೆ ಪ್ರಾರಂಭವಾಗುವುದರೊಳಗೆ ಎಲ್ಲ ಸರ್ಕಾರಿ ಕಚೇರಿ, ಕಟ್ಟಡಗಳಲ್ಲಿ ಕಡ್ಡಾಯವಾಗಿ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಬೇಕು. ಇಲ್ಲದಿದ್ದಲ್ಲಿ ಇಲಾಖೆಗಳ ಕ್ರಿಯಾಯೋಜನೆಯ ವರದಿಗೆ ಅನುಮೋದನೆ ನೀಡಲ್ಲ ಎಂದು ಜಿಪಂ ಅಧ್ಯಕ್ಷ ಎಚ್.ವಿ.ಮಂಜುನಾಥ್ ಎಚ್ಚರಿಕೆ ನೀಡಿದರು.

ಜಿಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೆಡಿಪಿ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ವರ್ಷ ಮುಂಗಾರು ಕೈಕೊಟ್ಟಿದ್ದರಿಂದ ಎಲ್ಲೆಡೆ ನೀರಿಗೆ ಹಾಹಾಕಾರ ಉಂಟಾಗಿದ್ದು ಜಲಸಂರಕ್ಷಣೆ ಮತ್ತು ನೀರಿನ ಮಿತ ಬಳಕೆಗೆೆ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಗ್ರಾಪಂ ಸೇರಿ ಎಲ್ಲ ಸರ್ಕಾರಿ ಕಚೇರಿ, ಕಟ್ಟಡಗಳಲ್ಲೂ ಕಡ್ಡಾಯವಾಗಿ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಬೇಕು. ಕೂಡಲೇ ತಾಲೂಕುಮಟ್ಟದಲ್ಲಿ ಸಭೆ ನಡೆಸಿ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲೆಯ 72 ಹಾಸ್ಟೆಲ್​ಗಳ ಪೈಕಿ 62ರಲ್ಲಿ ಮಳೆನೀರು ಕೊಯ್ಲು ಅಳವಡಿಸಲಾಗಿದೆ. ಎಲ್ಲ ಹಾಸ್ಟೆಲ್​ಗಳಲ್ಲೂ ದಾಖಲಾತಿ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ವಿದ್ಯಾರ್ಥಿ ವೇತನ ನೀಡಲು ವಿದ್ಯಾರ್ಥಿಗಳ ಪಟ್ಟಿ ತಯಾರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ತೇಜಾನಂದರೆಡ್ಡಿ ಮಾಹಿತಿ ನೀಡಿದರು.

ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಮೊದಲ ಹಂತದ ಪೂರ್ವ ಪರೀಕ್ಷೆ ಪ್ರಾರಂಭವಾಗಿದೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ 100 ಸರ್ಕಾರಿ ಶಾಲೆಗಳಿಗೆ ಪ್ರೊಜೆಕ್ಟರ್​ಗಳನ್ನು ನೀಡಲಾಗಿದೆ ಎಂದು ಡಿಡಿಪಿಐ ಎಸ್.ಜಿ.ನಾಗೇಶ್ ತಿಳಿಸಿದರು.

60 ಸಾವಿರ ಮೇವಿನ ಬೀಜದ ಕಿರು ಪೊಟ್ಟಣ ಪೂರೈಕೆಗೆ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಬೀಜ ಪೂರೈಕೆಯಾದರೆ ಮೇವು ಕೊರತೆ ತಪ್ಪಲಿದೆ. 2018-19 ನೇ ಸಾಲಿನಲ್ಲಿ ಇಲ್ಲಿಯವರೆಗೆ 90,824 ಮೇವಿನ ಬೀಜದ ಕಿರು ಪೊಟ್ಟಣಗಳನ್ನು ರೈತರಿಗೆ ವಿತರಿಸಲಾಗಿದೆ ಎಂದು ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ರಾಚಪ್ಪ ಮಾಹಿತಿ ನೀಡಿದರು. ಜಿಪಂ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಮುಖ್ಯ ಯೋಜನಾಧಿಕಾರಿ ಎನ್.ಮಾಧುರಾಮ್ ಜಿಲ್ಲಾಮಟ್ಟದ ಅಧಿಕಾರಿಗಳಿದ್ದರು.

ಪರ್ಯಾಯ ಕ್ರಮವೇ ತಲೆನೋವು:  ಮಳೆ ಕೊರತೆ ಮತ್ತು ಅಂತರ್ಜಲಮಟ್ಟ ಕುಸಿತ ಹಿನ್ನೆಲೆ ಕೊಳವೆಬಾವಿಗಳು ಬತ್ತಿವೆ. ಜಿಲ್ಲೆಯಲ್ಲಿ 353 ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ. ಈ ಪೈಕಿ 137 ಗ್ರಾಮಗಳಿಗೆ ಟ್ಯಾಂಕರ್ ಮತ್ತು 216 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. 316 ಕೊಳವೆ ಬಾವಿ ಕೊರೆಸಲು ಮಂಜೂರಾತಿ ಸಿಕ್ಕಿದೆ. ಈ ಪೈಕಿ 260 ಕೊಳವೆಬಾವಿ ಕೊರೆಸಿದ್ದು 164ರಲ್ಲಿ ನೀರು ಸಿಕ್ಕಿದೆ. ಎಲ್ಲೆಡೆ ಒಟ್ಟಿಗೆ ಸಮಸ್ಯೆಯಾದಾಗ ಪರ್ಯಾಯ ಕ್ರಮ ಕೈಗೊಳ್ಳುವುದೇ ದೊಡ್ಡ ತಲೆನೋವಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಶಿವಕುಮಾರ್ ಅಸಹಾಯಕತೆ ವ್ಯಕ್ತಪಡಿಸಿದರು.

1 ಕೋಟಿ ಸಸಿ ನೆಡುವ ಗುರಿ:  ಜಿಲ್ಲೆಯಲ್ಲಿ ಹಸಿರು ಸಂಪತ್ತು ವೃದ್ಧಿಗಾಗಿ ಗ್ರಾಪಂಗಳ ಮೂಲಕ 1 ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ. ಈ ಪೈಕಿ ಮೊದಲ ಹಂತದಲ್ಲಿ 30 ಲಕ್ಷ ಸಸಿಗಳನ್ನು ವಿತರಿಸಲಾಗಿದ್ದು, ಜನರ ಸಹಕಾರದೊಂದಿಗೆ ತ್ವರಿತವಾಗಿ ಗುರಿ ಮುಟ್ಟಬೇಕು ಎಂದು ಅಧಿಕಾರಿಗಳಿಗೆ ಜಿಪಂ ಸಿಇಒ ಗುರುದತ್ ಹೆಗಡೆ ಸೂಚಿಸಿದರು.

ಗೌರಿಬಿದನೂರು ತಾಲೂಕಿನಲ್ಲಿ ವಾಸವಿರುವ ಹಕ್ಕಿ-ಪಿಕ್ಕಿ ಜನಾಂಗದವರಿಗೆ ವಿವಿಧ ರೀತಿಯ ಕರಕುಶಲ ವಸ್ತುಗಳ ತಯಾರಿ ಕುರಿತು ತರಬೇತಿ ನೀಡಲು ಕೂಡಲೇ ಕ್ರಮಕೈಗೊಳ್ಳಿ.

| ಎಚ್.ವಿ.ಮಂಜುನಾಥ್, ಜಿಪಂ ಅಧ್ಯಕ್ಷ

 

Leave a Reply

Your email address will not be published. Required fields are marked *