ಮಳೆಗೆ ತತ್ತರಿಸಿದ ತೋಟಗಾರಿಕೆ ಬೆಳೆ

1 Min Read
ಮಳೆಗೆ ತತ್ತರಿಸಿದ ತೋಟಗಾರಿಕೆ ಬೆಳೆ
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿ ಮಳೆಯಿಂದ ಹಾನಿಯಾಗಿರುವ ಪ್ರದೇಶದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಂದ ಮಾಹಿತಿ ಪಡೆದರು.

ಬೆಳಗಾವಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮತ್ತು ಜಿಟಿಜಿಟಿ ಮಳೆಯಿಂದ ತೋಟಗಾರಿಕೆ ಬೆಳೆಗಾರರು ತತ್ತರಿಸಿದ್ದು, ರೋಗಗಳಿಂದ ಬೆಳೆ ರಕ್ಷಿಸಲು ಹರಸಾಹಸಪಡುತ್ತಿದ್ದಾರೆ. ಮಳೆಯಿಂದಾಗಿ ಈರುಳ್ಳಿ, ಬಾಳೆ, ದಾಳಿಂಬೆ, ಮಾವು, ಅರಿಶಿಣ, ದ್ರಾಕ್ಷಿ ಸೇರಿ ವಿವಿಧ ತರಕಾರಿ ಬೆಳೆಗಳಿಗೆ ಹಾನಿ ಸಂಭವಿಸಿದೆ. ಅಲ್ಲದೆ, ಎರಡು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಬೆಳೆಗಳಿಗೆ ವಿವಿಧ ರೋಗಗಳು ತಗಲುತ್ತಿವೆ. ಮಳೆ ಮತ್ತು ರೋಗದಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಪ್ರಯತ್ನಿಸುತ್ತಿದ್ದಾರೆ. ಕೆಲವೆಡೆ ರೋಗ ತಗುಲದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಔಷಧ ಸಿಂಪಡಣೆ ಮಾಡುತ್ತಿದ್ದಾರೆ.

ನಾಲ್ಕೈದು ವಾರಗಳಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿ, ಖಾನಾಪುರ, ಕಿತ್ತೂರು, ಗೋಕಾಕ ಸೇರಿ ಕೆಲ ಭಾಗಗಳಲ್ಲಿ ತೋಟಗಾರಿಕೆ ಬೆಳೆಗಳು ಜಲಾವೃತಗೊಂಡು ಹಾಳಾಗಿವೆ. ಜೂನ್‌ನಿಂದ ಸೆಪ್ಟೆಂಬರ್ 16ರ ವರೆಗೆ ಸುರಿದ ಮಳೆಯಿಂದ ಬರೋಬ್ಬರಿ 399 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳ ಹಾನಿಯಾಗಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂ.ನಷ್ಟ ಉಂಟಾಗಿದೆ. ಈಗಾಗಲೇ ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಬೆಳೆಗಳ ಹಾನಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಕೆ ಮಾಡಿದ್ದಾರೆ. ಕೆಲ ತಾಲೂಕಿನಲ್ಲಿ ಹೆಚ್ಚಿನ ಹಾನಿಯಾದ ತೋಟಗಾರಿಕೆ ಬೆಳೆಗಳಿಗೆ ಪರಿಹಾರ ವಿತರಣೆ ಕೆಲಸ ಕೂಡ ಆರಂಭಗೊಂಡಿದೆ. ವಿವಿಧ ರೋಗಗಳು ತಗುಲಿ ಹಾನಿಯಾಗಿರುವ ಬೆಳೆಗಳಿಗೂ ವಿಶೇಷ ಪರಿಹಾರ ಘೋಷಣೆ ಮಾಡುವಂತೆ ಬೆಳೆಗಾರರು ಆಗ್ರಹಿಸಿದ್ದಾರೆ.

See also  ಸಹಕಾರಿ ಸಂಘಗಳ ಬಂಡವಾಳ ಸದೃಢವಾಗಿರಲಿ
Share This Article